More

    ರಾಮ-ಕೃಷ್ಣರು ಮನೆಗೆ ಬಂದರು…

    ‘ಸೇತುವೆ ಕಟ್ಟಲು ರಾಮ ಯಾವ ಇಂಜಿನಿಯರಿಂಗ್ ಓದಿದ್ದ?’ ಎಂದು ತಮಿಳುನಾಡಿನ ಖ್ಯಾತ ರಾಜಕಾರಣಿಯೊಬ್ಬರು ಪ್ರಶ್ನಿಸಿದ್ದರು. ಆದರೆ ಆಸ್ತಿ್ತರಿಗೆ ರಾಮಸೇತು ನಿಜ ಮಾತ್ರವಲ್ಲ, ಅನೇಕ ಆದರ್ಶಗಳ ಸಂಕೇತ ಕೂಡ. ಶ್ರದ್ಧಾಳುಗಳಿಗೆ ರಾಮನ ಇಡೀ ಜೀವನವೇ ಪರಮಾದರ್ಶ.

    ರಾಮ-ಕೃಷ್ಣರು ಮನೆಗೆ ಬಂದರು...ಒಂದರ್ಥದಲ್ಲಿ ಕಾಯುವಿಕೆಯ ದೀರ್ಘ ‘ವನವಾಸ’ ಮುಗಿದಿದೆ. ಇನ್ನು ಭವ್ಯ ಮಂದಿರ ಯಾವಾಗ ಮೈದಳೆಯುತ್ತದೆಂಬ ನಿರೀಕ್ಷೆ ಮಾತ್ರ. ಇನ್ನು ಮೂರ್ನಾಲ್ಕು ವರ್ಷದೊಳಗೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಸಾಕಾರಗೊಂಡಿರುತ್ತದೆ. ಒಂದು ದೇವಸ್ಥಾನ ಕಟ್ಟುವುದಕ್ಕಾಗಿ ಇಷ್ಟೆಲ್ಲ ವರ್ಷ ಕಾಯಬೇಕಾಯಿತೆ? ಯುದ್ಧಗಳೇ ನಡೆಯಬೇಕಾಯಿತೆ? ಲಕ್ಷಾಂತರ ಜನರು ಪ್ರಾಣತೆರಬೇಕಾಯಿತೆ ಎಂದು ಮುಂದಿನ ಪೀಳಿಗೆಗಳವರು ಅಚ್ಚರಿಪಟ್ಟಾರು. ಆದರೆ ಅಯೋಧ್ಯೆಯ ಜನ್ಮಸ್ಥಾನದಲ್ಲಿನ ರಾಮಮಂದಿರವೆಂಬುದು ಈ ದೇಶದ ಶ್ರದ್ಧಾಳುಗಳಿಗೆ ಬರಿಯ ದೇವಸ್ಥಾನವಲ್ಲ, ಅದು ಪರಂಪರೆಯೊಂದರ ಪ್ರತೀಕ. ಧರ್ಮದ ಸಂಕೇತ. ಏಕೆಂದರೆ, ರಾಮ ಎಂದರೆ ಧರ್ಮಮೂರ್ತಿ. ವ್ಯಕ್ತಿಯೊಬ್ಬ ಜೀವನದಲ್ಲಿ ಯಾವ ರೀತಿಯಲ್ಲಿ ಸಾಗಬೇಕು ಎಂಬುದಕ್ಕೆ ರಾಮ ಪರಮ ಆದರ್ಶ. ‘ರಾಮೋ ವಿಗ್ರಹವಾನ್ ಧರ್ಮಃ ಸಾಧುಃ ಸತ್ಯ ಪರಾಕ್ರಮಃ/ರಾಜಾ ಸರ್ವಸ್ಯ ಲೋಕಸ್ಯ ದೇವಾನಾಂ ಮಘನಾನಿವ’ ಎಂದು ಶ್ರೀಮದ್ರಾಮಾಯಣ ಘೋಷಿಸುತ್ತದೆ. ಭಕ್ತರಿಗೆ ರಾಮ ಬಹುದೊಡ್ಡ ಆಸರೆ. ಜೀವನದಲ್ಲಿ ಕಷ್ಟಗಳು ಎದುರಾಗಿ ಬಸವಳಿದಾಗ, ‘ಅಂಥ ಶ್ರೀರಾಮನಿಗೇ ಕಷ್ಟಗಳ ಪರಂಪರೆ ಬರಲಿಲ್ಲವೆ? ಪಟ್ಟವೇರಬೇಕಾದ ಸಂದರ್ಭದಲ್ಲಿ ಕಾಡಿಗೆ ಹೋಗಬೇಕಾಯಿತು. ಪತ್ನಿ ಸೀತೆಯನ್ನು ರಾವಣ ಅಪಹರಿಸಿದ್ದರಿಂದ ಕಾಡಿನಲ್ಲಿ ಪರಿತಪಿಸಬೇಕಾಯಿತು. ಸೀತೆಯನ್ನು ಮರಳಿ ಪಡೆಯಲು ರಾಮ ಏನು ಕಡಿಮೆ ಕಷ್ಟಪಡಬೇಕಾಯಿತೆ? ನಿಂದ್ಯಾವ ಮಹಾ ಕಷ್ಟ. ಏಳು ಮೇಲೇಳು. ಕೆಲಸ ನೋಡು’ ಎಂದು ಯಾರಾದರೂ ಸಮಾಧಾನ ಹೇಳಿದಾಗ ಹೌದಲ್ಲವೆ ಎನಿಸಿ ಮತ್ತೆ ಬದುಕಿನತ್ತ ಮುಖಮಾಡುತ್ತೇವೆ. ‘ಕಷ್ಟಗಳನ್ನು ಕೊಡು, ಜತೆಗೆ ಕಷ್ಟ ಎದುರಿಸುವ ಶಕ್ತಿಯನ್ನೂ ಕೊಡು’ಎಂದು ದೇವರಲ್ಲಿ ಬೇಡಬೇಕೆಂದು ಜ್ಞಾನಿಗಳು ಹೇಳುತ್ತಾರೆ. ಬದುಕಿನಲ್ಲಿ ಸುಖಕ್ಕಿಂತ ಕಷ್ಟದ ಪಾಲೇ ಚೂರು ಹೆಚ್ಚು ಎಂಬುದು ಅನುಭವವೇದ್ಯವಾದಾಗ ಈ ಪ್ರಾರ್ಥನೆಯ ಮಹತ್ವದ ಅರಿವಾಗುತ್ತದೆ. ಶ್ರದ್ಧಾಳುಗಳಿಗೆ ಕಷ್ಟಕ್ಕೂ ದೇವರೇ ಆಸರೆ, ಸುಖಕ್ಕೂ ದೇವರೇ ಆಸರೆ.

    ಇದಕ್ಕೆಂದೆ, ಅಯೋಧ್ಯೆಯ ಜನ್ಮಸ್ಥಾನದಲ್ಲಿ ರಾಮನಿಗೊಂದು ಮಂದಿರ ಬೇಕು ಎಂಬ ಭಾವನೆಗೆ ಅಪಾರ ಜನರ ಬೆಂಬಲ ಸಿಕ್ಕಿದ್ದು. ಈ ವಿಷಯ ಕೈಗೆತ್ತಿಕೊಂಡ ಬಿಜೆಪಿಗೆ ರಾಜಕೀಯವಾಗಿ ಅನುಕೂಲವಾಯಿತು ಎಂಬುದು ನಿಜ. ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ ಅಖಿಲ ಭಾರತ ಮಟ್ಟಕ್ಕೆ ವಿಸ್ತರಿಸಿತು ಎಂಬುದೂ ಖರೆ. ಹಾಗಂತ, ಮಂದಿರ ಚಳವಳಿಯಲ್ಲಿ ಭಾಗವಹಿಸಿದವರೆಲ್ಲ ಬಿಜೆಪಿಗೆ ಪ್ರಯೋಜನವಾಗಲೆಂಬ ಉದ್ದೇಶದಿಂದ ಬಂದವರೇನಲ್ಲ. ಜನರ ಪ್ರಧಾನ ಲಕ್ಷ್ಯ ಮಂದಿರವೇ ಆಗಿತ್ತು. ಜನ್ಮಸ್ಥಾನದಲ್ಲಿಯೇ ರಾಮನಿಗೆ ಮಂದಿರ ಇಲ್ಲ ಎಂಬ ನೋವು ಆಂದೋಲನವನ್ನು ಬೆಂಬಲಿಸುವಂತೆ ಮಾಡಿತು. ಅಷ್ಟಕ್ಕೂ ಬಿಜೆಪಿ ಅಯೋಧ್ಯೆ ವಿಚಾರವನ್ನು ಮುನ್ನೆಲೆಗೆ ತಂದಿದ್ದು 1980-90ರ ದಶಕದಲ್ಲಿ. ಆದರೆ ರಾಮಮಂದಿರ ಹೋರಾಟಕ್ಕೆ ನಾಲ್ಕೈದು ಶತಮಾನಗಳ ಇತಿಹಾಸವಿದೆ; 70ಕ್ಕೂ ಅಧಿಕ ಯುದ್ಧಗಳು ನಡೆದಿವೆ; ಲಕ್ಷಾಂತರ ಮಂದಿ ಪ್ರಾಣ ತ್ಯಜಿಸಿದ್ದಾರೆ. ಆಗೆಲ್ಲ ಮಂದಿರ ವಿಚಾರವೇ ಮುಂದಿತ್ತು.

    ಹಾಗಂತ ರಾಮನ ಕುರಿತು ಟೀಕಿಸುವವರೂ ಇಲ್ಲದಿಲ್ಲ. ‘ಸೇತುವೆ ಕಟ್ಟಲು ರಾಮ ಯಾವ ಇಂಜಿನಿಯರಿಂಗ್ ಓದಿದ್ದ?’ ಎಂದು ತಮಿಳುನಾಡಿನ ಖ್ಯಾತ ರಾಜಕಾರಣಿಯೊಬ್ಬರು ರಾಮೇಶ್ವರದ ರಾಮಸೇತು ಬಗ್ಗೆ ಪ್ರಶ್ನಿಸಿದ್ದರು. ಆದರೆ ಆಸ್ತಿ್ತರಿಗೆ ರಾಮಸೇತು ನಿಜ ಮಾತ್ರವಲ್ಲ, ಭಕ್ತಿ, ಶ್ರದ್ಧೆ, ಶಕ್ತಿಸಾಮರ್ಥ್ಯ… ಹೀಗೆ ಅನೇಕ ಆದರ್ಶಗಳ ಸಂಕೇತ ಕೂಡ. ಸೀತಾ ಪರಿತ್ಯಾಗದ ವಿಷಯದಲ್ಲೂ ರಾಮನ ನಡೆಯನ್ನು ಆಕ್ಷೇಪಿಸುವವರಿದ್ದಾರೆ. ಆದರೆ ಆಧ್ಯಾತ್ಮಿಕವಾಗಿ ಇದನ್ನು ಬೇರೆಯದೇ ಆಯಾಮದಲ್ಲಿ ನೋಡಲಾಗುತ್ತದೆ; ಸೀತೆ ರಾಮನ ಅಂತರಂಗ ಶಕ್ತಿ ಎಂದೇ ಪರಿಭಾವಿಸಲಾಗುತ್ತದೆ. ಹಾಗೆನೋಡಿದರೆ ನಮ್ಮ ಪುರಾಣಗಳ ಅನೇಕ ದೃಷ್ಟಾಂತಗಳ ವಿಷಯದಲ್ಲಿ ಕೇವಲ ತರ್ಕವೊಂದೇ ಕೆಲಸ ಮಾಡುವುದಿಲ್ಲ. ಅಲ್ಲಿ ತರ್ಕಕ್ಕಿಂತ ಭಾವನೆಗೆ ಮತ್ತು ಸಂದೇಶಕ್ಕೆ ಹೆಚ್ಚು ಮಹತ್ವ. ಹಾಗೆ ಒಳಹೊಕ್ಕು ನೋಡುವ ವ್ಯವಧಾನ ಮತ್ತು ವಿವೇಚನೆ ಬೇಕಷ್ಟೆ. ಅದೇ ಸಂದರ್ಭದಲ್ಲಿ, ರಾಮಾಯಣ, ಮಹಾಭಾರತದ ಬಗ್ಗೆ, ರಾಮ-ಕೃಷ್ಣರ ಜೀವನ-ಕಾರ್ಯಗಳ ಬಗ್ಗೆ ವೈಜ್ಞಾನಿಕವಾಗಿ ಪುರಾವೆ ಸಮೇತ ವಿವರಿಸುವ ಕೆಲಸವೂ ನಡೆದಿದೆ ಎನ್ನಿ.

    ನಮ್ಮ ದೇಶದ ಮೂಲೆಮೂಲೆಗಳಲ್ಲಿ ರಾಮನ ಕುರಿತಾದ ಕತೆಗಳು, ದೃಷ್ಟಾಂತಗಳು ಹೇರಳವಾಗಿ ಸಿಗುತ್ತವೆ. ರಾಮ ತಮ್ಮೂರಿಗೆ ಬಂದಿದ್ದ, ಆ ಗುಡ್ಡದ ಮೇಲೆ ಕುಳಿತಿದ್ದ, ಆ ದಾರಿ ಮೂಲಕ ಸಾಗಿದ್ದ… ಇತ್ಯಾದಿ ಸಂಗತಿಗಳನ್ನು ಜನರು ಹೆಮ್ಮೆ, ಖುಷಿಯಿಂದ ಹೇಳಿಕೊಳ್ಳುತ್ತಾರೆ. ಹಾಗಾದರೆ ಇಲ್ಲೆಲ್ಲ ಕಡೆಯೂ ರಾಮ ಬಂದಿದ್ದನೇ ಎಂದು ಪುರಾವೆಗಳ ಕನ್ನಡಕದಲ್ಲಿ ಹುಡುಕಹೊರಟರೆ? ಇಲ್ಲಿ ಭಾವನೆ ಮುಖ್ಯ. ಅಂದರೆ, ರಾಮ ಬಂದಿದ್ದ ಎಂಬ ಕಲ್ಪನೆಯೇ ಜನರಲ್ಲಿ ಹೊಸ ಉತ್ಸಾಹ, ಪ್ರೇರಣೆ ಒದಗಿಸುತ್ತದೆ. ರಾಮ ಜನರ ಮನಸಿನಲ್ಲಿ ಹೇಗೆ ಮಿಳಿತವಾಗಿಬಿಟ್ಟಿದ್ದಾನೆ ಎಂಬುದಕ್ಕೆ ಇದು ಉದಾಹರಣೆ.

    ರಾಮ ವನವಾಸದ ಅವಧಿಯಲ್ಲಿ ಸಾಗಿದ ಮಾರ್ಗವನ್ನು ಹುಡುಕುವ ಅಪೂರ್ವ ಕೆಲಸವನ್ನು ದೆಹಲಿಯ ಡಾ.ರಾಮ ಅವತಾರ್ ಅವರು ಮಾಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಇವರು, 2002ರಿಂದ ಈ ಕೆಲಸ ಆರಂಭಿಸಿ, ಪಡಿಪಾಟಲುಪಟ್ಟು, ವಿವಿಧ ರಾಜ್ಯಗಳಲ್ಲಿ ಸುತ್ತಾಡಿ, ಕಾಡುಮೇಡು ಅಲೆದು ರಾಮನ ವನವಾಸ ಅವಧಿಯ 246 ಸ್ಥಳಗಳನ್ನು ಗುರುತಿಸಿದ್ದಾರೆ. ಪ್ರತಿ ವರ್ಷ ಆ ಹಾದಿಯಲ್ಲಿ ರಾಮ ವನಗಮನ ಯಾತ್ರೆಯನ್ನೂ ನಡೆಸುತ್ತಾರೆ. ಆ ದಾರಿಯಲ್ಲೆಲ್ಲ ಸ್ಥಳೀಯರು ಅವರ ಜತೆಗೆ ಹೆಜ್ಜೆಹಾಕುತ್ತಾರೆ. ನಮ್ಮ ಕರ್ನಾಟಕದ ಹಂಪಿ ಸನಿಹದ ಅಂಜನಾದ್ರಿ ಗುಡ್ಡ ಹನುಮಂತನ ಜನ್ಮತಾಣ ಎಂಬುದಾಗಿ ಪ್ರಚಲಿತವಿದೆ. ಹಾಗೇ ಬೆಳಗಾವಿ ರಾಮದುರ್ಗದ ಸನಿಹ ಶಬರಿಕೊಳ್ಳವಿದೆ. ರಾಮನು ಸೀತೆಯನ್ನು ಹುಡುಕುತ್ತ ದಕ್ಷಿಣಾಭಿಮುಖವಾಗಿ ಬರುತ್ತಾನೆ. ರಾಮನ ಪರಮಭಕ್ತೆ ಶಬರಿ ಆತನ ದರ್ಶನಕ್ಕಾಗಿ ಕಾಯುತ್ತಿರುತ್ತಾಳೆ. ಆಕೆ ವಾಸವಿದ್ದ ಅರಣ್ಯಪ್ರದೇಶವೇ ಈ ಶಬರಿಕೊಳ್ಳ ಎಂಬುದಾಗಿ ಐತಿಹ್ಯವಿದೆ. ಅಲ್ಲಿ ಶಬರಿ ದೇವಸ್ಥಾನವೂ ಇದೆ.

    ರಾಮನ ವನವಾಸ ಎಂದರೆ ಅದು ಬರೀ ಕಾಡಿನ ವಾಸವಲ್ಲ. ತಂದೆಯ ಮಾತಿಗೆ ಕಟ್ಟುಬಿದ್ದು ಕಾಟಾಚಾರಕ್ಕೆ ಮಾಡಿದ್ದಲ್ಲ. ಆ ಕಾಲದಲ್ಲಿ ಧರ್ಮಸಂಸ್ಥಾಪನೆಯ ಕೆಲಸವೂ ನಡೆದೇ ಇತ್ತು. ಆಗ ರಾಮ ಅಸಂಖ್ಯ ಯುದ್ಧಗಳನ್ನು ನಡೆಸಿ ಅಸುರರು ಮತ್ತು ಅಧರ್ವಿುಗಳನ್ನು ನಿಯಂತ್ರಿಸಿದ. ಆ ಸ್ಥಳಗಳಲ್ಲಿ ಧರ್ಮಭೀರು ರಾಜರನ್ನು ಕುಳ್ಳಿರಿಸಿದ. ಆದರೆ ತನಗೆ ಆ ರಾಜ್ಯಗಳು ಬೇಕೆಂದು ಹಂಬಲಿಸಲಿಲ್ಲ. ಹಾಗೇ ಅಸಂಖ್ಯ ವನವಾಸಿಗಳನ್ನು ಭೇಟಿಮಾಡಿ ಅವರ ಬದುಕಿಗೊಂದು ತಳಹದಿ ನಿರ್ವಿುಸಿಕೊಟ್ಟ. ಕೃಷ್ಣನೂ ಹೀಗೇ ಅಲ್ಲವೆ. ಧರ್ಮಸ್ಥಾಪನೆಗಾಗಿ ಯುದ್ಧಗಳನ್ನು ಮಾಡಿದ, ಮಾಡಿಸಿದ. ಆದರೆ ತಾನು ಮಾತ್ರ ರಾಜ್ಯ, ಅಧಿಕಾರವನ್ನು ಬಯಸಲಿಲ್ಲ.

    ವರದಪುರದ ಶ್ರೀ ಶ್ರೀಧರ ಸ್ವಾಮಿಗಳು ರಾಮನ ಪರಮ ಆರಾಧಕರು. ಮಾರುತಿಯ ಅವತಾರವಾದ ಶ್ರೀ ಸಮರ್ಥ ರಾಮದಾಸರನ್ನು ಮಾನಸಗುರುವಾಗಿ ಸ್ವೀಕರಿಸಿ ಸಾಧನೆಗೈದವರು ಶ್ರೀಧರರು. ಸಮರ್ಥರ ಆದೇಶದಂತೆಯೇ ವಿವಿಧೆಡೆ ಸಂಚರಿಸಿ ಆಧ್ಯಾತ್ಮಿಕ, ಸಾಮಾಜಿಕ ಜಾಗೃತಿ ಮೂಡಿಸಿದರು. ಅವರ ಜೀವನದಲ್ಲಿ ಬರುವ ರಾಮನ ಕುರಿತಾದ ಪ್ರಸಂಗಗಳು ಬಲು ಸ್ವಾರಸ್ಯಕರವಾಗಿವೆ. ಶ್ರೀಧರರು ಒಂದನೇ ಇಯತ್ತೆ ಮುಗಿಸಿ ಎರಡನೆಯ ಇಯತ್ತೆಯಲ್ಲಿರುವ ಸಮಯ. ಒಮ್ಮೆ ವಿಷಮಶೀತಜ್ವರ ಬಂದು ಕೆಲವು ದಿನಗಳ ಕಾಲ ಶಾಲೆಗೆ ಹೋಗಲು ಆಗುವುದಿಲ್ಲ. ಆ ಅವಧಿಯಲ್ಲಿ ಶಾಲೆಯಲ್ಲಿ ಕೆಲ ಪಾಠಪ್ರವಚನಗಳು ನಡೆದಿರುತ್ತವೆ. ಒಂದು ದಿನ ಅವರ ತಾಯಿ, ‘ಈ ಸಲ ನೀನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದರೆ ವಿಜೃಂಭಣೆಯಿಂದ ನಿನ್ನ ಉಪನಯನ ನೆರವೇರಿಸುತ್ತೇನೆ. ಜರಿಟೋಪಿ ಹಾಗೂ ಉತ್ತಮ ಚೆಡ್ಡಿ ಹಾಕಿ ಕುದುರೆ ಮೇಲೆ ಮೆರವಣಿಗೆ ಮಾಡಿಸುತ್ತೇನೆ’ ಎಂದಳು. ಇವರಿಗೋ ಕುದುರೆ ಮೇಲೆ ಕೂಡ್ರುವುದನ್ನು ಕಲ್ಪಿಸಿಕೊಂಡೇ ಖುಷಿ. ಆದರೆ ಕೆಲ ದಿನಗಳ ಕಾಲ ಶಾಲೆಗೆ ಹೋಗದ್ದರಿಂದ ಪ್ರಥಮ ದರ್ಜೆಯಲ್ಲಿ ಪಾಸಾಗುವುದು ಸಾಧ್ಯವೇ ಎಂಬ ಅನುಮಾನ. ತಾಯಿಯ ಬಳಿ ಇದನ್ನು ತೋಡಿಕೊಂಡಾಗ, ಆಕೆ, ‘ಶ್ರೀರಾಮನನ್ನು ಅಚಲವಾಗಿ ನಂಬಿ ಅವನ ನಾಮಸ್ಮರಣೆ ಮಾಡುತ್ತ ಓದು. ಶ್ರೀರಾಮ ನಿನ್ನನ್ನು ಖಂಡಿತವಾಗಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನನ್ನಾಗಿಸುತ್ತಾನೆ’ ಎಂದು ಸಲಹೆ ನೀಡಿದಳು. ಶ್ರೀಧರರು ತಾಯಿಯ ಮಾತಿನಲ್ಲಿ ಅದಮ್ಯ ವಿಶ್ವಾಸವಿಟ್ಟು ರಾಮನಾಮ ಸ್ಮರಣೆಯೊಂದಿಗೆ ಚೆನ್ನಾಗಿ ಅಭ್ಯಾಸವನ್ನೂ ಮಾಡತೊಡಗಿದರು. ಪರೀಕ್ಷೆ ದಿನ ಬಂತು. ಪರೀಕ್ಷಕರು ಒಬ್ಬೊಬ್ಬರೇ ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತ ಬಂದರು. ಶ್ರೀಧರರು ರಾಮನಾಮ ಸ್ಮರಣೆಯಲ್ಲೇ ಇದ್ದರು. ಶಿಕ್ಷಕರಿಗೋ ಚಿಂತೆ- ಅನೇಕ ದಿನ ಶಾಲೆಗೇ ಬರದಿದ್ದ ಈ ಬಾಲಕ ಹೇಗೆ ಉತ್ತೀರ್ಣನಾದಾನು ಎಂದು. ಪರೀಕ್ಷಕರು ಕೇಳಿದ ಪ್ರಶ್ನೆಗಳಿಗೆಲ್ಲ ಶ್ರೀಧರರಿಂದ ಲೀಲಾಜಾಲವಾಗಿ ಉತ್ತರ ಬರುತ್ತಿತ್ತು. ಆದರೆ ಅವರು ಏನು ಕೇಳುತ್ತಿದ್ದಾರೆ, ತಾನು ಏನು ಹೇಳುತ್ತಿದ್ದೇನೆ ಎಂಬ ಪರಿವೆ ಮಾತ್ರ ಇಲ್ಲ. ಗೊತ್ತಾಗುತ್ತಿದ್ದುದು ಒಂದೇ-ಅದು ಅಂತರಂಗದಲ್ಲಿ ನಡೆಯುತ್ತಿದ್ದ ರಾಮಸ್ಮರಣೆ. ಶ್ರೀಧರರು ಪ್ರಥಮ ದರ್ಜೆಯಲ್ಲೇ ಉತ್ತೀರ್ಣರಾದರು. ಅವರಲ್ಲಿ ಮೊದಲೇ ಇದ್ದ ರಾಮಭಕ್ತಿ ಇನ್ನಷ್ಟು ಹೆಚ್ಚಿತು; ದೃಢವಾಯಿತು. ಮಾತುಕೊಟ್ಟಂತೆ ತಾಯಿ ಮಗನ ಉಪನಯನ ನೆರವೇರಿಸಿ, ಕುದುರೆ ಮೇಲೆ ಮೆರವಣಿಗೆಯನ್ನೂ ಮಾಡಿಸಿದಳು.

    ಶ್ರೀಧರರು ಚಿಕ್ಕವರಾಗಿದ್ದಾಗಿನ ಇನ್ನೊಂದು ಘಟನೆ. ಒಮ್ಮೆ ಕೆಲವರು ಇನ್ನೊಂದು ಊರಿನ ಜಾತ್ರೆಗೆ ಹೊರಟಿದ್ದರು. ಆಗ ಶ್ರೀಧರರು ತಮ್ಮ ಅಣ್ಣ ತ್ರ್ಯಂಬಕನೊಡನೆ ಸೇರಿಕೊಂಡು ತಾವೂ ಹೊರಟರು. ದಾರಿಯಲ್ಲಿ ಎಲ್ಲರೂ ಶ್ರೀರಾಮನ ಮಹಿಮೆಯ ಬಗ್ಗೆ ಮಾತಾಡುತ್ತಿದ್ದರು. ಆಗ ಶ್ರೀಧರರು ‘ರಾಮನು ಸದಾ ತನ್ನ ಭಕ್ತರನ್ನು ಕಾಪಾಡುತ್ತ ಅವರ ಹಿಂದೆಯೇ ಇರುವನು’ಎಂದರು. ಆಗ ಅವರಲ್ಲಿ ಒಬ್ಬಾತ ವಿನೋದಕ್ಕಾಗಿ, ‘ನೀನು ದೇವರ ಬಗ್ಗೆ ತುಂಬಾ ಹೇಳುತ್ತೀಯಾ. ಎಂದಾದರೂ ರಾಮನನ್ನು ಕಂಡಿದ್ದೀಯಾ?’ ಎಂದು ಪ್ರಶ್ನಿಸಿದ. ‘ಹೌದು. ರಾಮನು ನಮ್ಮ ಕಣ್ಣಿಗೆ ಪ್ರತ್ಯಕ್ಷವಾಗಿ ಕಾಣುವುದಿಲ್ಲ. ಆದರೆ ಭಕ್ತರ ರಕ್ಷಣೆಗಾಗಿ ಅವರ ಬೆನ್ನಹಿಂದೆಯೇ ಇರುವನು’ಎಂದು ಶ್ರೀಧರರು ಉತ್ತರಿಸುತ್ತಾರೆ. ಆಗ ಆ ವ್ಯಕ್ತಿ, ‘ಹೌದಾ? ರಾಮನೇ ನಿನ್ನನ್ನು ರಕ್ಷಿಸುತ್ತಾನೆ ಎಂದಾದರೆ, ಎದುರಿಗೆ ಕಾಣುವ ಆ ಕೆರೆಗೆ ಹಾರು ನೋಡೋಣ. ನಾವ್ಯಾರೂ ನಿನ್ನ ರಕ್ಷಣೆಗೆ ಬರುವುದಿಲ್ಲ’ ಎಂದು ಸವಾಲಿನ ಧಾಟಿಯಲ್ಲಿ ಹೇಳುತ್ತಾನೆ. ತಕ್ಷಣವೇ ಶ್ರೀಧರರು ಸ್ವಲ್ಪವೂ ಸಂದೇಹಿಸದೆ ಕೆರೆಗೆ ಹಾರಲು ಉದ್ಯುಕ್ತರಾಗಿಬಿಡುತ್ತಾರೆ. ಆಗ ಇತರರು ಅವರನ್ನು ತಡೆದು ನಿಲ್ಲಿಸಬೇಕಾಯಿತು. ದೃಢಭಕ್ತಿಗೆ ಇದೊಂದು ನಿದರ್ಶನ. ಶ್ರೀಧರ ಸ್ವಾಮಿಗಳು ರಾಮನ ಕುರಿತಾಗಿ ಸ್ತೋತ್ರಗಳನ್ನೂ ರಚಿಸಿದ್ದಾರೆ. 1951ರಲ್ಲಿ ಅಯೋಧ್ಯೆಗೆ ತೆರಳಿದ್ದಾಗ 15-20 ದಿನ ಅಲ್ಲಿ ತಂಗುತ್ತಾರೆ. ಆಗ ರಾಮನಾಮ ಮಹಿಮೆ ಪ್ರವಚನ ನೀಡಿದ್ದಲ್ಲದೆ, ಶ್ರೀರಾಮಮಂತ್ರ ರಾಜಸ್ತೋತ್ರವನ್ನೂ ರಚಿಸುತ್ತಾರೆ.

    ಹೀಗೆ ಅನನ್ಯವಾಗಿ ನಂಬಿದವರಿಗೆ ರಾಮನೇ ಎಲ್ಲ, ರಾಮನಿಲ್ಲದೆ ಬದುಕಿಲ್ಲ. ರಾಮ ಎಂದರೆ ಆರಾಮ, ಭರವಸೆಯ ಬೆಳಕು. ‘ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ/ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ’. ಈ ಮಾತು ಭಗವಾನ್ ಕೃಷ್ಣನಿಗೂ ಅನ್ವಯ. ರಾಮ ಮತ್ತು ಕೃಷ್ಣ ಇಬ್ಬರೂ ಭಾರತೀಯ ಪರಂಪರೆ, ಧಾರ್ವಿುಕ, ಆಧ್ಯಾತ್ಮಿಕ, ಸಾಂಸ್ಕೃತಿಕ ಇತಿಹಾಸದ ಅವಿಭಾಜ್ಯ ದೇವರುಗಳು. ಈ ಇಬ್ಬರಿಲ್ಲದ ಭಾರತೀಯ ಪರಂಪರೆಯನ್ನು ಊಹಿಸಲೇ ಆಗದು. ‘ರಾಮನಾಮ ಪಾಯಸಕೆ ಕೃಷ್ಣನಾಮ ಸಕ್ಕರೆ/ವಿಠಲ ನಾಮ ತುಪ್ಪ ಕಲಸಿ ಬಾಯಿ ಚಪ್ಪರಿಸಿರೋ…’

    ಕೊನೇ ಮಾತು: ರಾಮನ ಮಂದಿರದ ಜತೆಗೆ ಎಲ್ಲರ ಹೃದಯಮಂದಿರದಲ್ಲಿ ರಾಮಾದರ್ಶಗಳ ಸ್ಥಾಪನೆಯಾದರೆ ನಿಜಾರ್ಥದಲ್ಲಿ ರಾಮರಾಜ್ಯ ಪ್ರತಿಷ್ಠಾಪನೆಯಾದಂತೆ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts