ಆತ್ಮೀಯತೆ, ಪ್ರೀತಿಗೆ ಇರುವ ಶಕ್ತಿ ಅನನ್ಯ

ಭಕ್ತರು, ಹಿತೈಷಿಗಳು ತೋರುವ ವಿಶ್ವಾಸ, ಆದರ ಖುಷಿ ಕೊಡುತ್ತದೆ. ಇಂಥ ಕ್ಷಣಗಳು ಯಾವಾಗಲೂ ನೆನಪಿನಲ್ಲಿ ಉಳಿಯುತ್ತವೆ. ಇಂಥ ಭೇಟಿಗಳ ನೆಪದಲ್ಲಿ ಒಂದಷ್ಟು ಮಾತು, ಚರ್ಚೆ, ಹೊಸ ವಿಷಯಗಳ ವಿನಿಮಯ ಸಾಧ್ಯವಾಗುತ್ತದೆ. ಇಂಥ ನೂರಾರು ಭೇಟಿಗಳು, ಆತ್ಮೀಯ ಕ್ಷಣಗಳು, ಅದರಿಂದ ದೊರೆತ ಪ್ರೇರಣೆ ನನ್ನ ಮನಸ್ಸಿನಲ್ಲಿನ್ನೂ ಹಚ್ಚ ಹಸಿರಾಗಿಯೇ ಇವೆ.

ಆತ್ಮೀಯರು ತೋರುವ ಪ್ರೀತಿ, ವಿಶ್ವಾಸವೇ ನಮ್ಮ ಶ್ರೇಷ್ಠ ಸಂಪತ್ತು!

ಇದು, ನೊಬೆಲ್ ಪ್ರಶಸ್ತಿ ವಿಜೇತ ಪ್ರಸಿದ್ಧ ವಿಜ್ಞಾನಿಯೊಬ್ಬರ ಮಾತು. ವಿಶ್ವದೆಲ್ಲ ಆಗುಹೋಗುಗಳೂ ನಮ್ಮ ನಂಬಿಕೆ, ಶ್ರದ್ಧೆಗನುಗುಣವಾಗಿಯೇ ನಡೆಯುತ್ತವೆ. ಇಂಥ ನಂಬಿಕೆ, ನಡವಳಿಕೆಗಳ ವಿಷಯದಲ್ಲಿ ನಮ್ಮಂತಹ ಕ್ಷೇತ್ರಗಳಲ್ಲಿ ಮತ್ತು ಮಠ-ಮಂದಿರಗಳಲ್ಲಿ ಅನೇಕ ಜೀವಂತ ನಿದರ್ಶನಗಳು ದೊರಕುತ್ತವೆ. ಅದರಲ್ಲಿಯೂ ವಿಶೇಷವಾಗಿ ಭಕ್ತರು ತೋರುವ ಪ್ರೀತಿ, ಆತ್ಮೀಯತೆ ಮತ್ತು ದೃಢವಾದ ಶ್ರದ್ಧೆ ಈ ಮೂರನ್ನೂ ವಿಶೇಷವಾಗಿ ಗಮನಿಸಬಹುದು.

ಸ್ವಲ್ಪ ಸಕ್ಕರೆ, ಸ್ವಲ್ಪ ಹಾಲು: ಉತ್ತರಕನ್ನಡ ಜಿಲ್ಲೆಯ ಓರ್ವ ಮಹಿಳೆ 30 ವರ್ಷಗಳ ಹಿಂದೆ, ಆಗಾಗ್ಗೆ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಿದ್ದರು ಮತ್ತು ಬಂದಾಗಲೆಲ್ಲ ಕಷ್ಟ-ಸುಖ ಹೇಳಿಕೊಳ್ಳುತ್ತಿದ್ದರು. ಮಗನ ಹಾಗೆ ನನ್ನನ್ನು ಕಾಣುತ್ತಿದ್ದರು. ಪ್ರತೀ ಸಲ ಬಂದಾಗಲೂ, ‘ನೀವು ಒಂದು ಸಲ ನಮ್ಮ ಮನೆಗೆ ಬರಬೇಕು. ಬಂದಾಗ ಒಂದಿಷ್ಟು ಸಕ್ಕರೆ ಮತ್ತು ಹಾಲನ್ನು ಸ್ವೀಕರಿಸಬೇಕು’ ಎಂದು ಹೇಳುತ್ತಿದ್ದರು. ಅಂದರೆ ಅವರ ಉಪಚಾರ ಪಡೆದುಕೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು. ಪ್ರತಿ ಸಲವೂ ಅವರು ಬಳಸುತ್ತಿದ್ದ ಮಾತು ‘ಸ್ವಲ್ಪ ಸಕ್ಕರೆ, ಸ್ವಲ್ಪ ಹಾಲು’. ಈ ಮಾತು ನನಗೆ ಇಷ್ಟವಾಗುತ್ತಿತ್ತು. ಒಮ್ಮೆ ಧಾರವಾಡಕ್ಕೆ ಹೋಗುವಾಗ ಮಾರ್ಗಮಧ್ಯದಲ್ಲಿ ಅವರ ಮನೆಗೆ ಹೋದೆ. ಹಾಗೆ ಹೋದಾಗ ಸಂಭ್ರಮಿಸಿದ ಆ ತಾಯಿ, ಊರವರನ್ನು ಆಹ್ವಾನಿಸಿ ಗೌರವಿಸಿದರು. ಅವರ ಮನೆಯ ಸಮೀಪದಲ್ಲಿದ್ದ ಶಾಲೆಗೆ ನನ್ನನ್ನು ಕರೆದುಕೊಂಡು ಹೋದರು. ‘ಇದು ನಮ್ಮೂರ ಶಾಲೆ, ನನ್ನ ಮಗ ಓದಿದ ಶಾಲೆ. ನಮ್ಮ ಊರಿನ ಪ್ರಸಿದ್ಧ ಶಾಲೆಯಿದು. ಅನೇಕ ಮಕ್ಕಳಿಗೆ ಶಿಕ್ಷಣ ಕೊಟ್ಟು ಭವಿಷ್ಯ ರೂಪಿಸಿಕೊಟ್ಟ ಶಾಲೆಯಿದು’ ಎಂದು ಹೇಳುತ್ತ ಶಾಲೆಯ ಕೊಠಡಿಗೆ ಕರೆದುಕೊಂಡು ಹೋಗಿ ಉದ್ಘಾಟನೆಗೆ ಸಿದ್ಧವಾದ ಪರದೆಯನ್ನು ತಾವು ಎಳೆಯಬೇಕೆಂದರು. ನಾನು ಪರದೆಯನ್ನು ಎಳೆದೆ. ಅದರಲ್ಲಿ ‘ಈ ಶಾಲೆಯ ತರಗತಿಕೋಣೆಗೆ ಹೆಗ್ಗಡೆಯವರು ಒಂದು ಲಕ್ಷ ರೂಪಾಯಿ ದಾನ ಮಾಡಿದ್ದಾರೆ’ ಎಂದು ಬರೆದಿತ್ತು. ನಾನು ಒಂದುಕ್ಷಣ ಯೋಚಿಸಿದೆ. ನಾನ್ಯಾವತ್ತೂ ಇವರಿಗೆ ದಾನ ಮಾಡಿಲ್ಲ ಅಥವಾ ಇವರು ದಾನ ಕೇಳಿಲ್ಲ. ಪ್ರಾಯಃ ಇವರೇ ನನ್ನ ಹೆಸರಲ್ಲಿ/ಕ್ಷೇತ್ರದ ಹೆಸರಿನಲ್ಲಿ ದಾನ ಮಾಡಿ ನನ್ನ ಹೆಸರು ಬರೆದಿರಬಹುದೇ ಎಂದು ಅನುಮಾನ ಬಂದು ಕೇಳಿದೆ. ‘ನಿಮ್ಮ ಆಶೀರ್ವಾದ ಈ ಕಟ್ಟಡಕ್ಕೆ ಇರಬೇಕೆಂಬುದಾಗಿ ನಾವು ಅಪೇಕ್ಷಿಸಿದ್ದೇವೆ’ ಎಂದವರು ಹೇಳಿದರು. ನಾನು ನಕ್ಕು ಸುಮ್ಮನಾದೆ. ಕ್ಷೇತ್ರಕ್ಕೆ ಹಿಂದಿರುಗಿದ ನಂತರ ಒಂದು ಲಕ್ಷ ರೂಪಾಯಿ ಕಳುಹಿಸಿಕೊಟ್ಟೆ. ಆತ್ಮೀಯತೆ ಮತ್ತು ವಿಶ್ವಾಸ ಜತೆಗೆ ಹೇಗೆ ಅವರು ಪ್ರೀತಿಯನ್ನು ಬಳಸಿಕೊಂಡರೆಂಬುದಕ್ಕೆ ಇದೊಂದು ನಿದರ್ಶನ.

ನನಗೆ ಪಟ್ಟವಾದ ಹೊಸತರಲ್ಲಿ ಪ್ರತಿವರ್ಷ ಶಿವಮೊಗ್ಗಕ್ಕೆ ಹೋಗುತ್ತಿದ್ದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಗಣೇಶೋತ್ಸವಗಳು ಅದ್ದೂರಿಯಿಂದ ನಡೆಯುತ್ತಿದ್ದವು. ನಾನು ಅಲ್ಲಿಗೆ ಹೋದಾಗಲೆಲ್ಲ ಅಲ್ಲಿನ ಸಾಮಾಜಿಕ ಕಾರ್ಯಕರ್ತರಾಗಿದ್ದ ರವಳಪ್ಪ ಮತ್ತು ಅವರ ಧರ್ಮಪತ್ನಿ ಲಕ್ಷ್ಮೀದೇವಮ್ಮ ಮನೆಗೆ ಹೋಗುತ್ತಿದ್ದೆ. ಬಹಳ ಪ್ರೀತಿ, ವಿಶ್ವಾಸಗಳಿಂದ ನಮ್ಮನ್ನು ನೋಡಿಕೊಳ್ಳುತ್ತಿದ್ದರು. ಅಲ್ಲಿ ಹೋದಾಗ ಸಾಕ್ಷಾತ್ ಲಕ್ಷ್ಮೀ ಸ್ವರೂಪಿಯೇ ಆಗಿದ್ದ ಲಕ್ಷ್ಮೀದೇವಮ್ಮ ಮನೆಯ ಎದುರಿಗೆ ನಿಂತು ನನಗೆ ಕುಂಕುಮದ ನೀರಿನಿಂದ ದೃಷ್ಟಿ ನಿವಾಳಿಸಿ, ತೆಂಗಿನಕಾಯಿ ಒಡೆದು, ಆರತಿ ಮಾಡಿ ಮನೆಯೊಳಗೆ ಬರಮಾಡಿಕೊಳ್ಳುತ್ತಿದ್ದಳು. ಮನೆಯಲ್ಲಿ ಕುಳಿತು ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳನ್ನೆಲ್ಲ ಕರೆದು ಪರಿಚಯಿಸಿ ಆಶೀರ್ವಾದ ಪಡೆಯುತ್ತಿದ್ದರು. ಇತ್ತೀಚೆಗೆ ಜನಿಸಿದ ಮಕ್ಕಳಿದ್ದರೆ ಅವರಿಗೆ ನಾಮಕರಣವನ್ನು ನಾನೇ ಮಾಡಬೇಕಿತ್ತು ಅಥವಾ ಅವರು ಧರ್ಮಸ್ಥಳಕ್ಕೆ ಬಂದಾಗ ನಮ್ಮ ಅಮ್ಮ ಅದನ್ನು ಮಾಡಬೇಕಾಗಿತ್ತು. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಏನೇ ಧಾರ್ವಿುಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳಿದ್ದರೆ ನಾನು ರವಳಪ್ಪನವರಿಗೆ ಹೇಳುತ್ತಿದ್ದೆ. ಅವರು ಪೂರ್ವಭಾವಿಯಾಗಿ ಕಾರ್ಯಕ್ರಮದ ಸ್ಥಳಕ್ಕೆ ಹೋಗಿ ಬೇಕಾದ ವ್ಯವಸ್ಥೆಗಳನ್ನು ಮಾಡಿ ಬರುತ್ತಿದ್ದರು. ಇಂತಹ ಆತ್ಮೀಯತೆಯನ್ನು ತೋರಿಸುತ್ತಿದ್ದ ಆ ಕುಟುಂಬದ ಹಿರಿಯರು ಇಂದು ನಮ್ಮಜತೆಗಿಲ್ಲ. ಆದರೂ ಅವರು ತೋರಿದ ಪ್ರೀತಿ, ವಿಶ್ವಾಸ ನನ್ನ ಮನಸ್ಸಿನಲ್ಲಿ ಜಾಗೃತವಾಗಿಯೇ ಇದೆ.

ಪ್ರೀತಿಯ ಪೆನ್ನುಗಳು: ಇನ್ನೊಂದು ಘಟನೆ. ಮೂಲತಃ ಬೆಂಗಳೂರಿನವರಾದ ಲಕ್ಷ್ಮೀದೇವಮ್ಮ ಎಂಬುವರು ಅಮೆರಿಕದಲ್ಲಿ ವಾಸವಾಗಿದ್ದರು. ಅವರ ಎಲ್ಲ ಮಕ್ಕಳೂ ಅಲ್ಲೇ ವಾಸವಾಗಿದ್ದಾರೆ. ಅವರು ಭಾರತಕ್ಕೆ ಬಂದಾಗಲೆಲ್ಲ ಧರ್ಮಸ್ಥಳಕ್ಕೆ ಬರುತ್ತಿದ್ದರು. ಅವರ ಎಲ್ಲ ಮಕ್ಕಳ ಉಪನಯನ, ವಿವಾಹ ಧರ್ಮಸ್ಥಳದಲ್ಲೇ ಆದದ್ದು. ಅಮೆರಿಕದಿಂದ ಭಾರತಕ್ಕೆ ಬಂದು, ಧರ್ಮಸ್ಥಳಕ್ಕೆ ಬಂದಾಗಲೆಲ್ಲ ಏನಾದರೊಂದು ಉಡುಗೊರೆ ತರುತ್ತಿದ್ದರು. ವಿಶೇಷವಾಗಿ ವಿಭಿನ್ನ ಮಾದರಿಯ ಪೆನ್ನನ್ನು ತರುತ್ತಿದ್ದರು. ಆ ಮಹಾತಾಯಿ ನನ್ನೆದುರಿಗೆ ಒಂದೊಂದು ಗಂಟನ್ನು ತೆರೆದು ಇವು ಪೆನ್ನುಗಳು, ಇವು ಪ್ಯಾಡುಗಳು, ಇವು ಪುಸ್ತಕಗಳು, ಇವು ಉಡುಗೊರೆಗಳೆಂದು ತೋರಿಸುತ್ತಿದ್ದರು. ಅವರ ಮಕ್ಕಳಿಗೆ ಮುಜುಗರವಾಗುತ್ತಿತ್ತು. ಏಕೆಂದರೆ, ‘ಏನಮ್ಮ ನೀನು, ಹೆಗ್ಗಡೆಯವರಿಗೆ ನಮಗೆ ಬಂದಂತಹ ಉಡುಗೊರೆಯನ್ನು ತೋರಿಸುತ್ತಿದ್ದೀಯಲ್ಲ!’ ಎಂದರೆ ಆಕೆ ‘ಇಲ್ಲ! ಇವೆಲ್ಲ ಹೆಗ್ಗಡೆಯವರ ಉಪಯೋಗಕ್ಕೆ ಆಗುತ್ತವೆ. ಅವನ್ನು ಬಹಳ ಪ್ರೀತಿಯಿಂದ ಸಂಗ್ರಹಿಸಿ ತಂದಿದ್ದೇನೆ’ ಎಂದು ಹೇಳುತ್ತಿದ್ದರು. ಅವು ಸಾಮಾನ್ಯವಾದ ಪೆನ್ನುಗಳಾಗಿದ್ದರೂ ಅವರ ಪ್ರೀತಿ, ಸಂತೋಷ ಅವುಗಳೊಂದಿಗಿದ್ದುದರಿಂದ, ಗೌರವದಿಂದ ಸ್ವೀಕರಿಸಿ, ಸಂತೋಷ ಆಸ್ವಾದಿಸುತ್ತಿದ್ದೆ. ಮುಂದೆ ಅವರ ಮಕ್ಕಳೂ ಹಿರಿಯರು ಹಾಕಿದ ಮಾರ್ಗದಲ್ಲೇ ಅಭಿಮಾನದಿಂದ ನಡೆದುಕೊಂಡರು.

ಭಕ್ತರ ಪ್ರೀತಿಗೆ ಗುರು ಒಲಿಯಲೇ ಬೇಕು: ಅಮೆರಿಕದ ನ್ಯೂಜೆರ್ಸಿ ಸಮೀಪದ ಆಶ್ರಮದ ಶಿಲಾನ್ಯಾಸಕ್ಕೆ ನನ್ನನ್ನು ಆಮಂತ್ರಿಸಿದ್ದರು. ನಾವು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಕುಟುಂಬಪ್ರವಾಸ ಹಮ್ಮಿಕೊಳ್ಳುತ್ತೇವೆ. ಅಮೆರಿಕಕ್ಕೆ ಹೋಗುತ್ತಿದ್ದೇನೆಂದು, ಪ್ರವಾಸವನ್ನು ಅದರೊಂದಿಗೆ ಜೋಡಿಸಿಕೊಂಡೆವು. ಎಂಟುಜನ, ನನ್ನ ಸಹೋದರರ ಕುಟುಂಬವೂ ಸೇರಿ ನಾವು ಹೋಗಿದ್ದೆವು. ಈ ಪ್ರವಾಸದ ವಿಷಯ ಹೇಗೋ ಈ ಲಕ್ಷ್ಮೀದೇವಮ್ಮನ ಕುಟುಂಬದವರಿಗೆ ತಿಳಿಯಿತು. ಅವರು ನನ್ನನ್ನು ಸಂರ್ಪಸಿ, ನಮ್ಮ ಮನೆ ನ್ಯೂಜೆರ್ಸಿಯಲ್ಲಿದೆ. ನಮ್ಮ ಮನೆಗೆ ಬರಲೇಬೇಕೆಂದು ಲಕ್ಷ್ಮೀದೇವಮ್ಮರ ಮಗ, ಸೊಸೆ ಒತ್ತಾಯಿಸಿದರು. ‘ಸ್ವಲ್ಪ ಹೊತ್ತು ಬಂದು ಹೋಗ್ತೇವೆ’ ಎಂದಾಗ ಅವರು ಒಪ್ಪಲಿಲ್ಲ. ‘ಒಂದು ದಿನ ಪೂರ್ತಿ ನಮ್ಮ ಮನೆಯಲ್ಲಿರಬೇಕು’ ಎಂದು ವಿನಂತಿಸಿದರು. ಒಟ್ಟು ಒಂಭತ್ತು ದಿವಸದ ಪ್ರವಾಸ. ಅದರಲ್ಲಿ ಒಂದಿಡೀ ದಿನ ಅವರ ಮನೆಯಲ್ಲಿ ಆತಿಥ್ಯ ಸ್ವೀಕರಿಸಿ ಇರುವುದು ಹೇಗೆಂಬ ಚಿಂತೆ ಕಾಡಿತು. ನಮ್ಮ ಪ್ರತಿನಿಧಿಗೆ ವಿಷಯ ತಿಳಿಸಿದೆ. ಆ ದಂಪತಿ ನಮ್ಮ ಪ್ರತಿನಿಧಿಯನ್ನು ಸಂರ್ಪಸಿ, ಅವರನ್ನೂ ಒತ್ತಾಯ ಮಾಡಲಾರಂಭಿಸಿದರು. ಕೊನೆಗೆ ನಮ್ಮ ಪ್ರತಿನಿಧಿ ಬಂದು ವಿನಂತಿಸಿಕೊಂಡರು. ‘ನಿಮ್ಮಂತಹ ಹಿರಿಯರು ಯಾವಾಗಲೂ ಭಕ್ತರ ಪ್ರೀತಿಗೆ ಒಲಿಯಲೇಬೇಕು. ಅವರು ತುಂಬ ಒತ್ತಡ ಹಾಕುತ್ತಿದ್ದಾರೆ. ದಯವಿಟ್ಟು ಆಹ್ವಾನ ಮನ್ನಿಸಿ, ಅವರ ಮನೆಗೆ ಹೋಗಿ ದಿನಪೂರ್ತಿ ಇದ್ದುಬಿಡಿ. ಕಾರ್ಯಕ್ರಮದ ಪಟ್ಟಿ ಅದೇರೀತಿ ಸಿದ್ಧಪಡಿಸುತ್ತೇನೆ’ ಎಂದು ಹೇಳಿ ಅದರಂತೆಯೇ ಕಾರ್ಯಕ್ರಮ ನಿಶ್ಚಯವಾಯಿತು. ನ್ಯೂಜೆರ್ಸಿಯಲ್ಲಿದ್ದ ಅವರ ಮನೆಗೆ ತೆರಳಿ ಮುಂಜಾನೆಯಿಂದ ಸಂಜೆಯವರೆಗೆ ಅವರ ಜತೆಯಲ್ಲಿದ್ದೆವು. ಅಲ್ಲಿಯೇ ಸಮೀಪದಲ್ಲಿದ್ದ ಮಾಲ್​ಗೆ ಕರೆದುಕೊಂಡು ಹೋದರು. ‘ಈ ಮಾಲ್​ನಲ್ಲಿ ಆಧುನಿಕ ವಸ್ತುಗಳೆಲ್ಲವೂ ಇವೆ. ಅವನ್ನೊಮ್ಮೆ ನೋಡೋಣ’ ಎಂದರು. ಆ ಮಾಲನ್ನು ನೋಡಿ ಸಂತೋಷವಾಯಿತು. ಇಲ್ಲಿ ಬರದಿದ್ದರೆ ನಷ್ಟವೇ ಆಗುತ್ತಿತ್ತೆಂದು ಅನಿಸಿತು. ಇಲ್ಲಿ ಬರದಿದ್ದರೆ ನಮ್ಮ ಗೈಡ್ ಹಾಕಿದ ಪ್ರವಾಸಪಟ್ಟಿಯಂತೆ, ಗಾಣಕ್ಕೆ ಕಟ್ಟಿದ ಎತ್ತಿನಂತೆ ಒಂದೊಂದು ಸ್ಥಳಕ್ಕೂ ಓಡುತ್ತಿದ್ದೆವು. ಅಂದು ಇಡೀ ದಿನದ ವಿಶ್ರಾಂತಿ, ಆ ಮನೆಯವರ ಪ್ರೀತಿ ಖುಷಿ ಕೊಟ್ಟಿತು.

ಅಕ್ಕಿರೊಟ್ಟಿ ಮತ್ತು ಅವರೆಕಾಳಿನ ಉಸುಳಿ: ಮೈಸೂರಿನಲ್ಲಿ ಆತ್ಮೀಯರಾದ ಮಹಾವೀರ ಪ್ರಸಾದ್ ದಂಪತಿ ಇದ್ದರು. ಅವರ ಮನೆಗೆ ಹೋದಾಗಲೆಲ್ಲ ಅಕ್ಕಿರೊಟ್ಟಿ ಮತ್ತು ಅವರೆಕಾಳಿನ ಪದಾರ್ಥ ಮಾಡುತ್ತಿದ್ದರು. ನಾವು ಮನೆಗೆ ಹೋದ ಸಂದರ್ಭದಲ್ಲಿ ಅವರ ಮಿತ್ರರನ್ನು, ಬಂಧುಬಳಗದವರನ್ನೆಲ್ಲ ಕರೆದು ಸಂಭ್ರಮಿಸುತ್ತಿದ್ದರು.

ಅವರ ಸ್ನೇಹಿತರೊಬ್ಬರು, ‘ಮಹಾವೀರ ಪ್ರಸಾದರೇ, ಪ್ರತಿಬಾರಿಯೂ ಹೆಗ್ಗಡೆಯವರಿಗೆ ಅಕ್ಕಿರೊಟ್ಟಿ ಮತ್ತು ಅವರೆಕಾಳಿನ ಉಸುಳಿ ತಯಾರಿಸಿ ಬಡಿಸುತ್ತೀರಿ. ಈ ಬಾರಿ ಅದನ್ನು ಬದಲಾಯಿಸಿ ಮಸಾಲೆದೋಸೆ ಮಾಡಿದರೆ ಹೇಗೆ?’ ಎಂದು ಕೇಳಿದರಂತೆ. ಅದಕ್ಕವರು, ‘ಹಾಗಾಗುವುದಿಲ್ಲ. ನಮಗೆ ಗೊತ್ತು. ಅಣ್ಣಾವ್ರಿಗೆ ಅತಿ ಪ್ರೀತಿಯಾದದ್ದು ಅಕ್ಕಿ ರೊಟ್ಟಿ ಮತ್ತು ಅವರೆಕಾಳಿನ ಉಸುಳಿ’ ಎಂದು ಅದನ್ನೇ ಮಾಡಿದರು.

ಒಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಮೈಸೂರಿಗೆ ಹೋಗಿದ್ದೆ. ಸಂಜೆ ಸೂರ್ಯಾಸ್ತಮಾನದ ಮೊದಲು ತಿಂಡಿತಿನ್ನುವುದು ನಮ್ಮ ಸಂಪ್ರದಾಯ. ಅಪರಾಹ್ನ ಮೂರಗಂಟೆಗೆ ನಮ್ಮ ಸಾಹಿತ್ಯ ಸಮ್ಮೇಳನದ ಗೋಷ್ಠಿ. ಐದು ಗಂಟೆಗೆ ಅದು ಮುಗಿಯಬೇಕಾಗಿತ್ತು. ಅಲ್ಲಿಂದ 5 ನಿಮಿಷದಲ್ಲಿ ಮಹಾವೀರ ಪ್ರಸಾದರ ಮನೆಗೆ ಹೋಗಬಹುದೆಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡಿದ್ದೆವು. ದುರದೃಷ್ಟವಶಾತ್ ಅಂದು ಸಾಹಿತ್ಯ ಸಮ್ಮೇಳನದಲ್ಲಿ ಗಲಾಟೆಯಾಗಿ, ಯಾರೂ ವೇದಿಕೆಯನ್ನು ಏರಬಾರದೆಂದು ಪ್ರತಿಭಟನೆ ಆರಂಭವಾಯಿತು. ನಾವು ಸಮಯಕ್ಕೆ ಸರಿಯಾಗಿ ಸಮ್ಮೇಳನದ ಸ್ಥಳದಲ್ಲಿದ್ದರೂ 4 ಗಂಟೆಯವರೆಗೆ ವೇದಿಕೆ ಏರಲಾಗಲಿಲ್ಲ. ಅಂತೂ 5 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಗಂಟೆ ಆರಾದರೂ ಕಾರ್ಯಕ್ರಮ ಮುಗಿಯಲಿಲ್ಲ. ಸಭಾಸದರ ಅಗ್ರಪಂಕ್ತಿಯಲ್ಲಿ ಕುಳಿತ ಮಹಾವೀರ ಪ್ರಸಾದ್ ದಂಪತಿ ಆಗಾಗ ಕೈಗಡಿಯಾರ ನೋಡುವುದು ಮತ್ತು ಸಮಯವಾಯಿತೆಂಬುದನ್ನು ನನಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದರು. ‘ಅಣ್ಣಾ ಇನ್ನರ್ಧ ಗಂಟೆ ಮಾತ್ರ. ಅಷ್ಟರೊಳಗೆ ನೀವು ಬರದಿದ್ದರೆ ನಮ್ಮ ಆತಿಥ್ಯ ಕೊಡಲಾಗುವುದಿಲ್ಲ. ಬೇಗ ಹೊರಟು ಬನ್ನಿ’ ಎಂದು ಸೂಚನೆ ನೀಡುತ್ತಿದ್ದರು.

ನಾನು ಆ ಕಡೆ ಈ ಕಡೆಯ ಅತಿಥಿಗಳನ್ನು ತೋರಿಸಿ ಇನ್ನೂ ಇವರ ಭಾಷಣವಾಗಲಿಲ್ಲ. ನಂತರ ಅವರನ್ನು ಸನ್ಮಾನ ಮಾಡಬೇಕು. ಆಮೇಲೆ ನನ್ನ ಭಾಷಣ ಎಂಬುದನ್ನು ಸನ್ನೆಯ ಮೂಲಕವೇ ಹೇಳುತ್ತಿದ್ದೆ. ಅಂತೂ ಕಾರ್ಯಕ್ರಮ ಮುಗಿಯುವಾಗ ಏಳು ಗಂಟೆ ಕಳೆಯಿತು. ಆವತ್ತು ಮಹಾವೀರ ಪ್ರಸಾದ್ ದಂಪತಿಗೆ ನಿರಾಸೆಯಾಯಿತು. ಯಾಕೆಂದರೆ ನನಗೆ ಉಪಾಹಾರವನ್ನು ಅವರು ನೀಡಲಾಗಲಿಲ್ಲ. ಹಾಗೆಯೇ ನನಗೂ ಅವರ ಆತಿಥ್ಯ ಸ್ವೀಕರಿಸಲಾಗಲಿಲ್ಲ ಎಂದು ಬೇಸರವಾಯಿತು.

ಹೇಗಾದರೂ ಮಾಡಿ ಹೆಗ್ಗಡೆಯವರಿಗೆ ಸಂಜೆಯ ತಿಂಡಿ ನೀಡಬೇಕೆಂಬ ಅವರ ಚಡಪಡಿಕೆ, ಆ ಪ್ರೀತಿ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ‘ಅಣ್ಣಾ ಮಸಾಲೆದೋಸೆ, ಅಕ್ಕಿರೊಟ್ಟಿ, ಉಸುಳಿ’ ಎಂದು ಅವರು ದೂರದಿಂದಲೇ ತಿಳಿಸುತ್ತಿದ್ದುದನ್ನು ನಾನು ಗ್ರಹಿಸಿದ್ದೆ. ನಮ್ಮೀರ್ವರ ಕೈಸನ್ನೆ, ಮುಖದಭಾವ ಗ್ರಹಿಸಿ ಸಹೋದರ ಸುರೇಂದ್ರ ಮತ್ತು ನಮ್ಮ ಬಂಧುಗಳು ಆನಂದ ಪಡುತ್ತಿದ್ದರು.

ಹೀಗೆ ಅನೇಕ ಬಾರಿ ಭಕ್ತರ ಮತ್ತು ಆತ್ಮೀಯರ ಒತ್ತಡ ಸಂತೋಷ ನೀಡಿದೆ. ಇಂತಹ ನೂರಾರು ಘಟನೆಗಳು ಇಂದಿಗೂ ಮನಸ್ಸಿನಲ್ಲಿ ಹಚ್ಚಹಸುರಾಗಿದೆ. ಇಂದು ಅಂತಹ ಪ್ರೀತಿಯ ಅನೇಕ ಹಿತೈಷಿಗಳು ನಮ್ಮೊಂದಿಗಿಲ್ಲ. ಅಧಿಕಾರವಾಣಿಯಿಂದ ನಮ್ಮ ಮೇಲೆ ಪ್ರೀತಿ ತೋರಿಸುತ್ತಿದ್ದ ಅಂತಹ ಚೇತನಗಳು ಇಂದು ಸ್ಮರಣೆ ಮಾತ್ರ. ಆದರೆ ಅವರ ಪ್ರೀತಿ, ವಿಶ್ವಾಸ, ಸಲುಗೆ ಎಂದಿಗೂ ನಮಗೆ ಪ್ರೇರಣೆಯಾಗಿಯೇ ಇವೆ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)