More

    ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ಅಂಕಣ: ಮತ್ತೆ ಬದುಕು ಕಟ್ಟಿಕೊಳ್ಳುವ ಛಲ, ಸಾಧನೆಯೇ ಮುಖ್ಯ

    ಹಲವು ನೆರೆಸಂತ್ರಸ್ತರು ಧರ್ಮಸ್ಥಳಕ್ಕೆ ಬಂದಾಗ ದುರಂತದ ಕಥೆಯನ್ನೇ ಹೇಳಿದರು. ಅವರು ಈ ಸಮಸ್ಯೆಗಳನ್ನು ಹೇಗೆ ಎದುರಿಸಿದರೆಂದು ಊಹಿಸಲೂ ಸಾಧ್ಯವಿಲ್ಲ. ಅವರಿಗೂ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಆದರೂ, ನೆರೆಸಂತ್ರಸ್ತರು ಬದುಕಿನಲ್ಲಿ ಬಂದ ನಿರಾಶೆಯನ್ನು ಮೀರಿ ನಿಂತು, ಸಂಕಷ್ಟದ ಪರಿಸ್ಥಿತಿಯನ್ನು ಸವಾಲಾಗಿಯೇ ಸ್ವೀಕರಿಸಿದ್ದಾರೆ.

    ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳ ಅಂಕಣ: ಮತ್ತೆ ಬದುಕು ಕಟ್ಟಿಕೊಳ್ಳುವ ಛಲ, ಸಾಧನೆಯೇ ಮುಖ್ಯಧರ್ಮಸ್ಥಳದ ಬೀಡಿನಲ್ಲಿ ಎಂದಿನಂತೆ ನನ್ನನ್ನು ಭೇಟಿಯಾಗಲು ಭಕ್ತರು ಬಂದಿದ್ದರು. ಒಬ್ಬ ಮಹಿಳೆ ನೋವು ತೋಡಿಕೊಂಡು, ‘ಮನೆಯಲ್ಲಿ ಯಜಮಾನರಿಗೆ ಗೊತ್ತಿಲ್ಲದಂತೆ ಚೀಟಿವ್ಯವಹಾರ ಮಾಡಿದ್ದೇನೆ. ಆ ಚೀಟಿ ವ್ಯವಹಾರದಲ್ಲಿ ಹಣ ಪಡೆದುಕೊಂಡವರು ಸಕಾಲಕ್ಕೆ ಹಿಂತಿರುಗಿಸದೆ ಇದ್ದುದರಿಂದ ಮೋಸ ಹೋಗಿದ್ದೇನೆ ಮತ್ತು ಸಾಲದ ಹೊರೆಯಲ್ಲಿದ್ದೇನೆ’ ಎಂದಳು. ಆಕೆ ಮನಸ್ಸಿನಲ್ಲಿ ದುಗುಡ ಮತ್ತು ಮೋಸ ಹೋದ ವಿಚಾರದಲ್ಲಿ ಅವಮಾನವಾಯಿತೆಂಬ ಭಾವ ಗಟ್ಟಿಯಾಗಿ ಬೇರೂರಿದ್ದನ್ನು ಗ್ರಹಿಸಿದೆ. ಹೀಗೆ ಆತಂಕ, ಭಯ ಜೊತೆಗೆ ಅವಮಾನ ಈ ಮೂರೂ ಸೇರಿಕೊಂಡು ಸಂಕಟಪಡುತ್ತಿದ್ದಳು. ಆಕೆಗೆ ಒಟ್ಟು ಬರಬೇಕಾಗಿದ್ದ ಹಣ ಇಪ್ಪತೆôದು ಸಾವಿರ ರೂಪಾಯಿ. ಈಕೆಗೆ ಏನು ಪರಿಹಾರ ಹೇಳುವುದೆಂದು ಆಲೋಚಿಸಿದೆ. ಎಲ್ಲರಿಗೂ ಹೇಳುವಂತೆ, ‘ಶ್ರೀ ಸ್ವಾಮಿಗೆ ನ್ಯಾಯವನ್ನು ಒಪ್ಪಿಸಿಕೊಂಡು ಹೋಗು. ಶ್ರೀ ಮಂಜುನಾಥ ಸ್ವಾಮಿಗೆ ಪ್ರಾರ್ಥನೆ ಮಾಡಿ, ಅದರ ಫಲ ದೊರಕಲೆಂದು ಸ್ವಾಮಿಯಲ್ಲಿ ಕೇಳಿಕೋ’ ಎಂದು ಪ್ರಾರ್ಥನೆ ಮಾಡಿಸಿದೆ.

    ಇದೇ ರೀತಿ ಇನ್ನೊಬ್ಬ ವ್ಯಕ್ತಿ ಬಂದಿದ್ದ. ಆತ ಒಂದು ಮನೆಯ ವ್ಯವಹಾರಕ್ಕಾಗಿ ಐದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದ. ‘ಆ ಐದು ಲಕ್ಷವನ್ನು ಪಡೆದುಕೊಂಡ ವ್ಯಕ್ತಿ ಭೂಮಿಯನ್ನು ನೋಂದಣಿ ಮಾಡಿಕೊಡುತ್ತೇನೆ ಎಂದು ವಾಗ್ದಾನ ಮಾಡಿದ್ದ. ಹಾಗೆ ಹೇಳಿದವನು ಈಗ ಭೂಮಿಯನ್ನು ಕೊಡದೇ ಸತಾಯಿಸುತ್ತಿದ್ದಾನೆ. ನನಗೀಗ ಇತ್ತ ಹಣವೂ ಇಲ್ಲ. ಅತ್ತ ಭೂಮಿಯೂ ಇಲ್ಲ ಎಂಬ ದುಸ್ಥಿತಿ ಉಂಟಾಗಿದೆ. ನನ್ನ ಉಳಿತಾಯ, ಆಯುಷ್ಯದ ಸಂಪಾದನೆಯನ್ನೆಲ್ಲ ಸೇರಿಸಿ ಆತನಿಗೆ ಹಣ ಕೊಟ್ಟಿದ್ದೆ. ಇದೇ ಚಿಂತೆಯಲ್ಲಿ ಹೆಂಡತಿ ಆರೋಗ್ಯ ಹದಗೆಟ್ಟು ನಿಧನಳಾದಳು. ನನ್ನ ಮುಂದಿನ ಗತಿಯೇನು?’ ಎಂದು ದುಃಖ ಪಡುತ್ತಿದ್ದ. ಹೀಗೆಯೇ ಬಂದ ಇನ್ನೊಬ್ಬ ವ್ಯಕ್ತಿ-‘ನಾನು ಸಿನಿಮಾ ತಯಾರಿಕೆಗಾಗಿ ಹಣವನ್ನು ಖರ್ಚು ಮಾಡಿದೆ. ಸಿನಿಮಾದಲ್ಲಿ ಐದು ಕೋಟಿ ರೂಪಾಯಿ ನಷ್ಟವಾಯಿತು. ಈ ನಷ್ಟವನ್ನು ಸರಿದೂಗಿಸಿಕೊಳ್ಳುವ ಶಕ್ತಿ ನನಗಿಲ್ಲ’ ಎಂದ.

    ಈ ಮೂರೂ ಜನರು ಕೂಡ ಒತ್ತಡಕ್ಕೊಳಗಾದವರೇ. ಕಳೆದುಕೊಂಡ ಮೊತ್ತ ಇಪ್ಪತೆôದು ಸಾವಿರ, ಐದು ಲಕ್ಷ ಮತ್ತು ಐದುಕೋಟಿ. ಹೀಗೆ ವ್ಯವಹಾರದಲ್ಲಿ ಸಮಸ್ಯೆ ಬಂದವರು ನಿತ್ಯವೂ ಕ್ಷೇತ್ರಕ್ಕೆ ಬರುತ್ತಾರೆ. ಅಂತಹವರಿಗೆ ಸಾಂತ್ವನ ಹೇಳಬೇಕಾದ ಜವಾಬ್ದಾರಿ ನನ್ನದಾಗಿದೆ. ಸಾಂತ್ವನ ಹೇಳುವಾಗ, ‘ಕಾನೂನು ಪ್ರಕಾರವಾಗಿ ನೀವು ವ್ಯವಹಾರ ಮಾಡಿದ್ದಿದ್ದರೆ, ನಿಮ್ಮಲ್ಲಿ ಅದಕ್ಕೆ ಬೇಕಾದಂತಹ ಕಾಗದ ಪತ್ರಗಳಿರುತ್ತವೆ. ಆ ಮೂಲಭೂತ ಕಾಗದಪತ್ರಗಳ ಉಪಯೋಗದಿಂದ ನೀವು ಕಳೆದುಕೊಂಡ ಹಣಕ್ಕಾಗಿ ಮತ್ತೆ ಪ್ರಯತ್ನಿಸಬಹುದು. ಆದರೆ ಕಾಗದಪತ್ರಗಳಿಲ್ಲದೆ, ನಂಬಿಕೆಯ ವ್ಯವಹಾರವನ್ನು ಮಾಡಿದ್ದೇ ಹೌದಾದರೆ, ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಹೊಯ್ಲು ಕೊಡುವ ಪದ್ಧತಿಯಿದೆ. ಒಮ್ಮೆ ಪ್ರಾರ್ಥಿಸಿಕೊಂಡು ಕಳೆದುಕೊಂಡ ಹಣವನ್ನು ಪಡೆಯಲು ಪ್ರಯತ್ನಿಸಬೇಕು’ ಎಂದು ಹೇಳುತ್ತೇನೆ. ಸಾಮಾನ್ಯವಾಗಿ ಯಾವ ವ್ಯಕ್ತಿ ನಿಮಗೆ ಹಣ ಕೊಡಬೇಕಾಗಿದೆಯೋ ಅವರಲ್ಲಿ ನೀವು ಹೀಗೆ ಹೇಳಬೇಕು. ‘ನಾವು ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿ ಬಂದಿದ್ದೇವೆ. ನಮಗೆ ಕೊಡುವಂತಹ ಹಣವನ್ನು ನೀವು ಕೊಡಲೇಬೇಕು, ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಮತ್ತು ನನ್ನ ಸಮಸ್ಯೆಯನ್ನು ಪರಿಹಾರ ಮಾಡಬೇಕು’ ಎಂದು ಎಚ್ಚರಿಸಬೇಕು.

    ಇಷ್ಟು ಹೇಳಿಯೂ ಹಣವನ್ನು ಕೊಡದಿದ್ದರೆ ಏನು ಮಾಡಬೇಕೆಂಬ ಪ್ರಶ್ನೆ ಬಂದೇ ಬರುತ್ತದೆ. ಅದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ಯಾಕೆಂದರೆ ನಾವು ಲೌಕಿಕವಾಗಿ ಮಾತನಾಡುವುದಿಲ್ಲ. ಬದಲಾಗಿ ಈ ಎರಡೂ ರೀತಿಯ ಸಾಂತ್ವನವನ್ನು ಹೇಳಬಹುದು. ಮೊದಲನೆಯದಾಗಿ, ನ್ಯಾಯದಾನಕ್ಕಾಗಿ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿಕೊಳ್ಳುವುದು. ಹೀಗೆ ಪ್ರಾರ್ಥಿಸಿಕೊಳ್ಳುವುದರಿಂದ ಆ ಮಂಜುನಾಥ ಸ್ವಾಮಿ ನಿಮ್ಮ ಪ್ರಾರ್ಥನೆಯನ್ನು ಮನ್ನಿಸಬಹುದು. ‘ಆ ಸ್ವಾಮಿ ನನಗೆ ಸರಿಯಾದ ತೀರ್ವನವನ್ನು ಕೊಡುತ್ತಾನೆ’ ಎಂಬಂತಹ ವಿಶ್ವಾಸ ನಿಮ್ಮಲ್ಲಿ ಬರಬೇಕು. ಮತ್ತೆ ಎರಡನೆಯದಾಗಿ ನೀವು ಇಲ್ಲಿ ಮಾಡಿದ ಪ್ರತಿಜ್ಞೆ ಎಂಬುದು ನಿಮಗೆ ಮೋಸ ಮಾಡಿದವರ ಗಮನಕ್ಕೂ ಬರಬೇಕು. ‘ನನ್ನ ವ್ಯವಹಾರವನ್ನು ಸ್ವಾಮಿಗೆ ಒಪ್ಪಿಸಿದ್ದಾರೆ. ಹಾಗಾಗಿ ನಾನು ಸ್ವಾಮಿಗೆ ಧರ್ಮ, ಸತ್ಯ, ನ್ಯಾಯದಂತೆ ನಡೆದುಕೊಳ್ಳದಿದ್ದರೆ ತಪ್ಪು’ ಎನ್ನುವ ಪಾಪಪ್ರಜ್ಞೆ ಅವರಿಗೆ ಬಂದರೆ ನ್ಯಾಯ ಸಿಗಬಹುದು.

    ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಇನ್ನೊಮ್ಮೆ ಯೋಚನೆ ಮಾಡಲು ಅವರಿಗೆ ತಿಳಿಸುತ್ತೇನೆ. ಯಾಕೆಂದರೆ ಎಷ್ಟೋ ಬಾರಿ ಹಣ ಪಡೆದುಕೊಂಡವರು ವಿಭಿನ್ನ ರೀತಿಯ ಮನುಷ್ಯರಿರುತ್ತಾರೆ. ಕೆಲವರು ಹಣವನ್ನು ಮೋಸಕ್ಕಾಗಿಯೇ ಬಳಸುತ್ತಾರೆ. ಯಾಕೆಂದರೆ ಅವರ ಉದ್ದೇಶವೇ ಹಣವನ್ನು ಲಪಟಾಯಿಸುವುದು ಆಗಿರುತ್ತದೆ. ಇನ್ನೊಂದು ವರ್ಗವಿರುತ್ತದೆ. ಅನಿವಾರ್ಯವಾಗಿ ಹಣವನ್ನು ಹಿಂದಿರುಗಿಸಲಾಗದವರು. ವ್ಯವಹಾರಕ್ಕಾಗಿ ಪಡೆದ ಹಣವನ್ನು ಇನ್ನೆಲ್ಲೋ ತೊಡಗಿಸಿರುತ್ತಾರೆ ಅಥವಾ ಇವರ ಹಾಗೆ ಅವರಿಗೂ ಇನ್ಯಾರೋ ಹಣವನ್ನು ಕೊಡಬೇಕಾಗಿರುತ್ತದೆ. ಇನ್ನು ಮೂರನೆಯವರು ಈ ಹಣವನ್ನು ಕೊಡಬೇಕೆಂದು ಇಚ್ಛೆ ಪಟ್ಟಾಗ ಬಹಳ ದೊಡ್ಡಮೊತ್ತವನ್ನು ಒಮ್ಮೆಗೇ ಕೊಡಬೇಕಾಗುತ್ತದೆ. ಇಲ್ಲದಿದ್ದರೆ ತನ್ನ ವ್ಯವಹಾರ ಹಾಳಾಗಿ ಬಿಡುತ್ತದೆ ಎಂದು ಮುಂದೂಡುತ್ತ ಹೋಗಬಹುದು. ಈ ಮೂರಕ್ಕೂ ಪರಿಹಾರ ಏನೆಂದರೆ ಯಾರು ಹಣವನ್ನು ಪಡೆದಿದ್ದಾರೋ ಅವರು ನ್ಯಾಯವಾದ ಮಾರ್ಗದಲ್ಲೇ ವ್ಯವಹರಿಸಬೇಕು. ನಂಬಿಕೆಯಿಂದಲೇ ಸಮಾಜದಲ್ಲಿ ತುಂಬ ವ್ಯವಹಾರಗಳು ನಡೆಯುತ್ತವೆ. ಆದರೆ ಎಷ್ಟೋ ಬಾರಿ ಈ ನಂಬಿಕೆಯನ್ನು ಮೀರಿದಾಗ ಅದಕ್ಕೆ ತೀವ್ರವಾದ ಪರಿಣಾಮ ಕಂಡುಬರುತ್ತದೆ.

    ಆದ್ದರಿಂದ ಹಣವನ್ನು ಪಡೆದ ಎರಡನೇ ಬಗೆಯ ವ್ಯಕ್ತಿಗಳು ಹಣವನ್ನು ಹಿಂತಿರುಗಿಸುವುದು ಎಷ್ಟು ಮುಖ್ಯವೋ ಹಾಗೆಯೇ ಹಣವನ್ನು ಕಳೆದುಕೊಂಡವರು ಈ ದೇವತಾಸಾನ್ನಿಧ್ಯಕ್ಕೆ ಬಂದಾಗ ತಮ್ಮ ಹೊರೆಯನ್ನು ಭಗವಂತನ ಮೇಲೆ ಹೊರಿಸಿಬಿಟ್ಟು ನಿಶ್ಚಿಂತೆಯಿಂದ ಇರುವುದೂ ಅಷ್ಟೇ ಮುಖ್ಯ.

    ಇಪ್ಪತೆôದು ಸಾವಿರ ಹಣವನ್ನು ಕಳೆದುಕೊಂಡ ಮಹಿಳೆಗೆ ನಾನು ಹೀಗೆ ಹೇಳಿದೆ-‘ಕೇವಲ ಇಪ್ಪತೆôದು ಸಾವಿರ ರೂಪಾಯಿಗಾಗಿ ನೀನು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತೀ. ನಿನಗೆ ಮಾನಸಿಕ ಒತ್ತಡ ಪ್ರಾರಂಭವಾಗುತ್ತದೆ. ದಿನನಿತ್ಯವೂ ಕೊರಗುವುದಕ್ಕಿಂತ ಆ ವೇದನೆಯನ್ನು ಮಂಜುನಾಥ ಸ್ವಾಮಿಗೋ ಅಥವಾ ಮನೆಯ ಇಷ್ಟ ದೇವರುಗಳಿಗೋ ಸಮರ್ಪಿಸಿ, ನಮಗೆ ನ್ಯಾಯ ಬೇಕು ಎಂದು ಕೇಳಿ, ಭಗವಂತನ ಮೇಲೆ ಭಾರಹಾಕಿಬಿಡು’. ಏಕೆಂದರೆ ಒಂದು ಮನೆಯಲ್ಲಿ ಅಮೂಲ್ಯವಾದ ವಸ್ತು ಅಕಸ್ಮಾತ್ತಾಗಿ ಕೈಯಿಂದ ಜಾರಿ ಬಿದ್ದಾಗ ಅದು ಒಡೆದು ಹೋಗುತ್ತದೆ. ಯಾವುದೋ ಸಮಾರಂಭಕ್ಕೆ ಹೋದಾಗ ಅಕಸ್ಮಾತ್ತಾಗಿ ಚಿನ್ನ ಕಳೆದುಹೋಗಿರುತ್ತದೆ ಅಥವಾ ಇತ್ತೀಚಿಗೆ ಎರುಗಿದ ಪ್ರವಾಹದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮನೆಮಠಗಳೆಲ್ಲ ಕೊಚ್ಚಿ ಹೋದವು. ಮನೆಯಲ್ಲಿದ್ದ ವಸ್ತುಗಳೆಲ್ಲ ನಷ್ಟವಾದವು. 2019 ವಿಕಾರಿ ನಾಮ ಸಂವತ್ಸರ. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ದೇಶದ ಬಹುತೇಕ ಎಲ್ಲ ರಾಜ್ಯಗಳು ನಲುಗಿದವು. ಕರ್ನಾಟಕದ ಬಹುತೇಕ ಭಾಗಗಳು ಜೂನ್​ವರೆಗೂ ಮಳೆ ಬರದೆ ನೀರಿನ ಕೊರತೆಯಿಂದ ಬಳಲಿದವು. ನಂತರ ಮಳೆ ಇಳೆಗೆ ಸುರಿದದ್ದೋ ಅಥವಾ ರಭಸದಿಂದ ಧೊತ್ತೆಂದು ಬಿದ್ದಿದ್ದೋ ತಿಳಿಯಲಿಲ್ಲ. ಎಲ್ಲೆಲ್ಲೂ ಪ್ರವಾಹ ಮತ್ತು ನಷ್ಟಕಷ್ಟಗಳುಂಟಾದವು. ಅಥಣಿಯಿಂದ ಹಿಡಿದು, ದಕ್ಷಿಣಕನ್ನಡ ಜಿಲ್ಲೆ, ಕೊಡಗುವರೆಗೆ ಸಹಸ್ರಾರು ಎಕರೆ ಭೂಮಿ ಮುಳುಗಡೆಯಾಯಿತು. ಹೀಗೆ ಮುಳುಗಡೆ ಮತ್ತು ಕೊಚ್ಚಿ ಹೋದ ಮನೆಗಳಲ್ಲಿದ್ದ ಎಲ್ಲ ವಸ್ತುಗಳೂ ನಾಶವಾದವು. ಅವರು ತಮ್ಮ ಸರ್ವಸ್ವವನ್ನೂ ಕಳೆದುಕೊಂಡುಬಿಟ್ಟರು.

    ಅವರಲ್ಲಿ ಹಲವರು ಧರ್ಮಸ್ಥಳಕ್ಕೆ ಬಂದಾಗ ದುರಂತದ ಕಥೆಯನ್ನೇ ಹೇಳಿದರು. ಆದರೆ ಎಲ್ಲೂ ಈ ನಷ್ಟಕ್ಕೆ ನಲುಗಿ ಆತ್ಮಹತ್ಯೆ ಮಾಡಿಕೊಂಡವರ ಮಾಹಿತಿ ಇಲ್ಲ. ಅವರು ಈ ಸಮಸ್ಯೆಗಳನ್ನು ಹೇಗೆ ಎದುರಿಸಿದರೆಂದು ಊಹಿಸಲೂ ಸಾಧ್ಯವಿಲ್ಲ. ‘ಬದುಕನ್ನು ಮತ್ತೆ ಕಟ್ಟುವೆವು’ ಎಂಬುದೇ ಅವರ ತೀರ್ವನವಾಗಿತ್ತು. ಅವರಿಗೂ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಸರ್ಕಾರದಿಂದಲೂ ಸೂಕ್ತ ಪರಿಹಾರ ದೊರಕಲಿಲ್ಲ. ಆದರೂ, ನೆರೆಸಂತ್ರಸ್ತರು ಬದುಕಿನಲ್ಲಿ ಬಂದ ನಿರಾಶೆಯನ್ನು ಮೀರಿ ನಿಂತು, ಸಂಕಷ್ಟದ ಪರಿಸ್ಥಿತಿಯನ್ನು ಸವಾಲಾಗಿಯೇ ಸ್ವೀಕರಿಸಿದ್ದಾರೆ.

    ನಮ್ಮ ಗ್ರಾಮೀಣಾಭಿವೃದ್ಧಿ ಅಧಿಕಾರಿಗೆ ಕರೆ ಮಾಡಿ ವರದಿ ಕೇಳಿದೆ. ಅವರು-‘ಬೆಳೆ ನಾಶವಾಗಿರುವುದೇನೋ ನಿಜ. ಆದರೆ ಫಲವತ್ತಾದ ಮಣ್ಣು ನಮ್ಮ ಭೂಮಿಗೆ ಬಿದ್ದಿದೆ. ಇನ್ನೆರಡು ವರ್ಷ ಕೃತಕ ಗೊಬ್ಬರದ ಅವಶ್ಯಕತೆ ಇಲ್ಲ. ಬಾವಿ, ಕೆರೆಯಲ್ಲಿ, ಬೋರ್​ಗಳಲ್ಲಿ ನೀರುತುಂಬಿದ್ದು ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿದೆ-ಇತ್ಯಾದಿ ಸಕಾರಾತ್ಮಕ ಚಿಂತನೆಯಲ್ಲಿ ರೈತರಿದ್ದಾರೆ’ ಎಂದರು. ಪ್ರವಾಹದಿಂದ ಇಷ್ಟೆಲ್ಲ ಅನಾಹುತವಾದರೂ ರೈತರು ಭಗವಂತನ ಮೇಲೆ ಭಾರಹಾಕಿ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಹೀಗೆ ಸಮಸ್ಯೆಗಳು ಬಂದಾಗ ಸಕಾರಾತ್ಮಕವಾಗಿ ಯೋಚಿಸಬೇಕು. ಸವಾಲಾಗಿ ತೆಗೆದುಕೊಳ್ಳಬೇಕು. ತಾಳ್ಮೆಯಿಂದ ಸಾಧನೆಗೆ ತೊಡಗಬೇಕು. ಆಗಲೇ, ಆರೋಗ್ಯ, ಆಯುಷ್ಯ ಮತ್ತು ಭವಿಷ್ಯದ ಬದುಕಿಗೆ ಉತ್ತಮ ನಾಂದಿ. ನಾವೂ ಹಾಗೇ ಮಾಡಬೇಕಷ್ಟೆ! ಮುಂದೆ ಇಂತಹ ತಪ್ಪು ಆಗದಂತೆ ಜಾಗ್ರತೆ ವಹಿಸಬೇಕಷ್ಟೆ. ಆಗಿ ಹೋದದ್ದನ್ನು ಭಗವಂತ ನೋಡಿಕೊಳ್ಳುತ್ತಾನೆ ಎಂಬ ಭಾವನೆಯೇ ಪರಿಹಾರ ಮಾರ್ಗ.

    ಐದು ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ವ್ಯಕ್ತಿಗೆ-‘ನೀವು ಈ ಬಗ್ಗೆ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ. ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ. ಯಾಕೆಂದರೆ ಚಿಂತೆ ನಮ್ಮನ್ನು ಮಾತ್ರ ಕೊಲ್ಲುವುದಲ್ಲ. ನಮ್ಮ ಜೊತೆಯಲ್ಲಿದ್ದವರನ್ನೂ ಬದುಕಲು ಬಿಡುವುದಿಲ್ಲ. ಈ ವಿಷಯದಲ್ಲಿ ನಿಮ್ಮ ಹೋರಾಟ ಏನಿದೆಯೋ ಕಾನೂನು ಪ್ರಕಾರವಾಗಿ ಅದನ್ನು ಮಾಡಿ. ಆದರೆ ಚಿಂತೆಯಲ್ಲೇ ಮುಳುಗಿ ಸರ್ವಸ್ವವನ್ನೂ ನಾಶ ಮಾಡಿಕೊಳ್ಳಬೇಡಿ’ ಎಂದೆ. ಮೂರನೆಯ ವ್ಯಕ್ತಿಯ ಮೊತ್ತ ತುಂಬ ದೊಡ್ಡದು. ಅವರಿಗೆ ಆ ಮೊತ್ತವು ಶಕ್ತಿ ಮೀರಿದ್ದೇ ಆಗಿದೆ. ಈ ಮೂರೂ ಜನಕ್ಕೂ ಕೂಡ ಅವರವರ ಹಂತದಲ್ಲಿ ಅವರವರ ಯೋಗ್ಯತೆಗೆ ಅನುಗುಣವಾಗಿ ಮೊತ್ತ ದೊಡ್ಡದಾಗಿಯೇ ಕಾಣುತ್ತದೆ. ಕಳೆದುಕೊಂಡ ಹಣದ ಮೊತ್ತ ಭಿನ್ನವಾದರೂ ಅದು ನೀಡಿದ ಪರಿಣಾಮ ಒಂದೇ.

    ಇಂತಹ ಸಂದರ್ಭದಲ್ಲಿ ಎಲ್ಲರೂ ಅಂತರಂಗದ ದರ್ಶನ ಮಾಡಿಕೊಳ್ಳಬೇಕು. ವ್ಯವಹಾರದಲ್ಲೆಲ್ಲೋ ಏರುಪೇರಾಗಿದೆ. ನಮ್ಮ ಅಜಾಗರೂಕತೆಯಿಂದಲೇ ಹೀಗಾಗಿದೆಯೆಂದು ಅರಿತುಕೊಳ್ಳಬೇಕು. ಬಂಗಾರದ ಜಿಂಕೆ ಇರಲು ಸಾಧ್ಯವಿಲ್ಲವೆಂದು ರಾಮನಿಗೆ ಗೊತ್ತಿದ್ದೂ ಆತ ಮೋಸಹೋದನಲ್ಲ. ‘ಪ್ರಾಯಃ ಸಮಾಪನ್ನವಿಪತ್ತಿಕಾಲೇ ಧಿಯೋ ಪಿ ಪುಂಸಾಂ ಮಲಿನೀ ಭವಂತಿ|’ ವಿಪತ್ತಿನ ಸಮಯ ಬಂದಾಗ ಎಂತಹವನ ಬುದ್ಧಿಯೂ ತಪ್ಪು ಮಾಡಿಬಿಡುತ್ತದೆ. ಈಗ ಕೊರಗಿ ನೋವು ಮಾಡಿಕೊಂಡು ದುಃಖಿಸುವುದಕ್ಕಿಂತ ಸಾಧ್ಯವಾದ ಸಾಧನೆ, ಪ್ರಯತ್ನ ಮೊದಲಾದ್ದನ್ನು ಮಾಡಿಕೊಳ್ಳಬೇಕು. ಭಗವಂತನು ನ್ಯಾಯವನ್ನು ಕೊಡುತ್ತಾನೆಂಬ ಪೂರ್ಣ ವಿಶ್ವಾಸ ನಮಗಿದ್ದರೆ ನಂಬಿದ ದೇವರು ಎಂದೂ ನಮ್ಮನ್ನು ಬಿಡುವುದಿಲ್ಲ. ‘ಯೇ ಯಥಾ ಮಾಂ ಪ್ರಪದ್ಯಂತೆ ತಾನ್ ತಥೈವ ಭಜಾಮ್ಯಹಮ್ ಎಂಬ ಭಗವಂತನ ನಲ್ನುಡಿ ಯಥಾರ್ಥವಾದುದು. ಈ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಿದ್ದರೆ ತಾಪತ್ರಯಗಳನ್ನು ಸಮರ್ಥವಾಗಿ ದಾಟಿ ನೆಮ್ಮದಿಯನ್ನು ಅನುಭವಿಸಲು ಸಾಧ್ಯ.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts