More

    ಪರಿಪೂರ್ಣಜ್ಞಾನಕ್ಕೆ ಏಳು ದಾರಿಗಳು

    ಆಯುರ್ವೆದದ ಚರಕಸಂಹಿತೆಯ ಕೊನೆಯ ಶ್ಲೋಕ ಬಹಳ ರೋಚಕವೂ, ಮಾರ್ವಿುಕವೂ ಆಗಿದೆ. ಶ್ರೇಷ್ಠ ವೈದ್ಯರಾಗಿ ತಮ್ಮಲ್ಲಿ ಬರುವ ರೋಗಿಗಳು ಹಾಗೂ ಜನರು ಸುಖದಿಂದ ದೀರ್ಘಕಾಲ ಬಾಳುವಂತೆ ಮಾಡುವಲ್ಲಿ ಚರಕಸಂಹಿತೆಯ ಜ್ಞಾನ ಆಧಾರಸ್ತಂಭವಾಗುತ್ತದೆ. ತಂತ್ರಯುಕ್ತಿಯ ಹಿನ್ನಲೆಯಲ್ಲಿ ನಡೆಸುವ ಅಧ್ಯಯನಕ್ಕೆ ಅಂತಹ ಫಲವಿದೆ. ಉಪದೇಶಗಳ ಅನುಷ್ಠಾನದಿಂದ ಧೃತಿ, ಸ್ಮೃತಿ, ಬುದ್ಧಿ ಹಾಗೂ ಧರ್ಮಗಳ ಸಂಪೂರ್ಣ ಪ್ರಾಪ್ತಿಯಾಗುತ್ತದೆ. ಸುಶ್ರುತಸಂಹಿತೆಯೂ ವಿಧಿಪ್ರಕಾರವಾಗಿ ನಡೆಸುವ ಅದರ ಅಧ್ಯಯನವು ಪೂಜಿಸಲ್ಪಡಬೇಕಾದ ವೈದ್ಯಶ್ರೇಷ್ಠರನ್ನಾಗಿ ರೂಪುಗೊಳಿಸುತ್ತದೆ ಎಂದು ತನ್ನ ಕೊನೆಯ ಶ್ಲೋಕದಲ್ಲಿ ಹೇಳಿರುವುದು ಗ್ರಂಥವೊಂದರ ಉತ್ಕೃಷ್ಟ ಅಭಿಲಾಷೆಯ ಚಿಂತನೆಯ ದ್ಯೋತಕ.

    ಪರಿಪೂರ್ಣಜ್ಞಾನಕ್ಕೆ ಏಳು ದಾರಿಗಳುಇದೆಲ್ಲ ಸಾಧ್ಯವಾಗಬೇಕಾದರೆ ಪ್ರತಿ ವಿಚಾರವನ್ನೂ ಸರಿಯಾದ ರೀತಿಯಲ್ಲಿ ಸುಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಏಳು ನಿಯಮಗಳಿವೆ. ಅವುಗಳಿಗೆ ಸಪ್ತವಿಧ ಕಲ್ಪನಾಗಳು ಎನ್ನಲಾಗಿದೆ. ಚರಕಸಂಹಿತೆಯಲ್ಲೊಂದು ಮಾತಿದೆ. ಸೂರ್ಯಕಿರಣಗಳು ಬಿದ್ದೊಡನೆ ಮುದುಡಿರುವ ತಾವರೆ ಹೇಗೆ ಅರಳಿಕೊಳ್ಳುತ್ತದೆಯೋ ಅದೇ ರೀತಿಯಲ್ಲಿ ತಂತ್ರಯುಕ್ತಿ ಸಹಾಯದಿಂದ ಜ್ಞಾನ ಪ್ರಬೋಧನೆ ಅತ್ಯಂತ ಕರಾರುವಕ್ಕಾಗಿ ಆಗುತ್ತದೆ. ಇರುವ ವಿಷಯವೊಂದೇ. ಆದರೆ ಅದರ ಅರ್ಥಗಳು ಹಲವು. ಅವುಗಳಲ್ಲಿ ಸರಿಯಾದುದನ್ನು ಗ್ರಹಿಸಿದರಷ್ಟೇ ಶ್ರೇಷ್ಠ ಫಲಿತಾಂಶದ ಪ್ರಾಪ್ತಿ ಸಾಧ್ಯವಾಗುತ್ತದೆ.

    ಒಂದು ದ್ರವ್ಯಕ್ಕೆ ಹಲವಾರು ಗುಣಗಳಿರುತ್ತವೆ. ಅವುಗಳಲ್ಲಿ ಅತಿ ಪ್ರಮುಖವಾದುದನ್ನು ಮಾತ್ರ ಕೆಲವೊಂದು ಸಂದರ್ಭಗಳಲ್ಲಿ ಗ್ರಹಿಸಬೇಕು. ಘೃತ ಹಾಗೂ ಹಾಲನ್ನು ಜೊತೆಯಾಗಿ ಬಳಸುವುದನ್ನು ವಿವರಿಸುತ್ತಿರುವಾಗ ಶರೀರದ ಪೋಷಣೆಯೇ ಇಲ್ಲಿನ ಗುಣಫಲದ ಪ್ರಮುಖ ಆಶಯ. ಹಾಗೆಂದು ತುಪ್ಪಕ್ಕೂ ಹಾಲಿಗೂ ಅನೇಕ ಗುಣಧರ್ಮಗಳಿವೆ. ಅವೆಲ್ಲವೂ ಗೌಣವಾಗುತ್ತವೆ. ಇದುವೇ ‘ಪ್ರಧಾನಕಲ್ಪನಾ’. ‘ಗುಣಕಲ್ಪನಾ’ ಎಂದರೆ, ವಿಷಯದ ಗುಣಗಳನ್ನು ಹೇಳದಿದ್ದಾಗ ಅವುಗಳನ್ನೂ ಜೊತೆಯಲ್ಲಿ ಪರಿಗಣಿಸಬೇಕಾದ ಸಂದರ್ಭ. ಚಿಕಿತ್ಸೆ ನೀಡುವ ವೈದ್ಯ ಬಂದಾಗ ವೈದ್ಯರೆನ್ನಲು ಇರಲೇಬೇಕಾದ ನಾಲ್ಕು ಗುಣಗಳೂ ಸೇರಿಕೊಂಡಿವೆ ಎಂಬುದಾಗಿ ಗ್ರಹಿಸಿಕೊಳ್ಳಬೇಕು. ಜನಪದೋಧ್ವಂಸವನ್ನು ಚರಕಸಂಹಿತೆಯಲ್ಲಿ ವಿವರಿಸುವ ಸಂದರ್ಭದಲ್ಲಿ ಕಾಲಮೃತ್ಯು, ಅಕಾಲಮೃತ್ಯುಗಳೆಂಬ ಶಬ್ದಪ್ರಯೋಗವಿದ್ದು ಅಲ್ಲಿ ಅವುಗಳ ವಿವರಣೆಯಿಲ್ಲ. ಅವುಗಳ ಪೂರ್ಣವಿವರಣೆ ಇಂದ್ರಿಯಸ್ಥಾನದಲ್ಲಿದೆ! ಸ್ಪಲ್ಪವೇ ಹೇಳಲ್ಪಟ್ಟರೂ ಇನ್ನೊಂದೆಡೆ ಪ್ರಸ್ತಾಪಿಸಲ್ಪಟ್ಟ ವಿಚಾರವನ್ನು ಚಾಣಾಕ್ಷತೆಯಿಂದ ಅಥೈಸಿಕೊಳ್ಳಬೇಕಾಗಿರುತ್ತದೆ. ಇದೇ ‘ಲೇಶಕಲ್ಪನಾ’.

    ಒಂದು ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿವರಣೆಯ ಅಧಿಕೃತ ಪುಸ್ತಕಗಳಿರುತ್ತವೆ. ಇಲ್ಲಿ ಸ್ವಲ್ಪವೇ ಪ್ರಸ್ತಾಪಿಸಿ ಅಂತಹ ಅನ್ಯ ಗ್ರಂಥಗಳ ಮೊರೆಹೋಗಿ ಜ್ಞಾನಸಿದ್ಧಿಯಾಗಬೇಕೆಂದರೆ ಅದು ‘ಇಂಗಿತ ಕಲ್ಪನಾ’ ಎನಿಸಿಕೊಳ್ಳುತ್ತದೆ. ಒಮ್ಮೆ ಹೇಳಲ್ಪಟ್ಟ ವಿಚಾರವೇ ಮತ್ತೊಮ್ಮೆ ಬಂದಾಗ ಅಲ್ಲಿ ಪೂರ್ಣವಿವರಣೆಯನ್ನು ಮತ್ತೊಮ್ಮೆ ನೀಡುವ ಆವಶ್ಯಕತೆಯಿರುವುದಿಲ್ಲ. ಕಷಾಯದ ತಯಾರಿ ವಿಧಾನ ಒಂದೆಡೆ ಹೇಳಿದ ನಂತರ ಅದನ್ನು ಪ್ರತಿಯೊಂದು ದ್ರವ್ಯಕ್ಕೂ ವಿವರಿಸುವ ಅಗತ್ಯವಿಲ್ಲ. ಇದು ‘ವಿಭವಕಲ್ಪನಾ’. ಶ್ರೀರುದ್ರದ ಪ್ರತಿ ಶ್ಲೋಕಕ್ಕೂ ಆಧ್ಯಾತ್ಮಿಕ, ಗಣಿತಶಾಸ್ತ್ರ, ಆಯುರ್ವೆದದ ಅರ್ಥಗಳಿವೆ. ಒಂದೇ ವಿಚಾರದ ವಿಭಿನ್ನ ಆಯಾಮದ ಅರ್ಥಗಳಿದ್ದಾಗ ಅವೆಲ್ಲವನ್ನೂ ಗ್ರಹಿಕೆ ಮಾಡುವುದೇ ‘ಭಕ್ತಿಕಲ್ಪನಾ’. ನೆಲವನ್ನು ಉಗುರುಗಳಿಂದ ಕೆರೆಯಬಾರದು ಎಂದಿದ್ದಾಗ ಅದರ ವಿವರಣೆ ಇಲ್ಲದಿದ್ದರೂ ವಿದ್ವತ್ಪೂರ್ಣ ಗ್ರಂಥಕಾರನ ಅನುಭವ, ಅಪಾರ ಜ್ಞಾನಕ್ಕೆ ಗೌರವ ಕೊಟ್ಟ ಪ್ರಶ್ನಿಸದೆ ಅನುಸರಿಸಬೇಕು. ಇದುವೇ ‘ಆಜ್ಞಾಕಲ್ಪನಾ’. ಹೀಗೆ ಪರಿಪೂರ್ಣ ಜ್ಞಾನಕ್ಕೆ ಏಳು ದಾರಿಗಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts