ಬೆಂಗಳೂರು: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಬ್ಯಾಂಕ್ ನೌಕರನನ್ನು ಅಡ್ಡಗಟ್ಟಿದ ದುಷ್ಕರ್ವಿುಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಸ್ಥಳೀಯ ಕೋ-ಆಪರೇಟಿವ್ ಬ್ಯಾಂಕಿನ ಏಜೆಂಟ್ ಕಮಲಾನಗರದ ನಿವಾಸಿ ಪ್ರಭು ಅಲಿಯಾಸ್ ಅಪ್ಪು (27) ಕೊಲೆಯಾದ ಯುವಕ. ಶನಿವಾರ (ಜ.25) ರಾತ್ರಿ 10 ಗಂಟೆಯಲ್ಲಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದಾಗ ಕುವೆಂಪುನಗರದ ಬಳಿ ದುಷ್ಕರ್ವಿುಗಳು ಬೈಕ್ ಅಡ್ಡಗಟ್ಟಿ ಗಲಾಟೆ ತೆಗೆದಿದ್ದಾರೆ. ಆ ವೇಳೆ ಪ್ರಭು ತನ್ನ ಬಳಿಯಿದ್ದ ಚಾಕು ತೋರಿಸಿ ಬೆದರಿಸಿದ್ದಾನೆ. ಆತನಿಂದ ಚಾಕು ಕಸಿದುಕೊಂಡು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಭು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಸುತ್ತಮುತ್ತಲ ಸ್ಥಳಗಳಲ್ಲಿದ್ದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ಮುಖಚಹರೆಗಳನ್ನು ಆಧರಿಸಿ ರಾಮಚಂದ್ರ ಮತ್ತು ಕರಿಯ ಎಂಬುವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ. ಆರೋಪಿಗಳಿಗೆ ಪ್ರಭು ಜತೆ ವೈಷಮ್ಯವಿದ್ದು ಗಲಾಟೆ ತೆಗೆದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.