ಹೊಸ ಸಂಪ್ರದಾಯಕ್ಕೆ ವಾಸು ನಾಂದಿ!

ಬೆಂಗಳೂರಿನ ಡಾ. ಅಂಬೇಡ್ಕರ್ ಭವನದ ಹೊರಗೆ ಜಿಟಿ-ಜಿಟಿ ಮಳೆ ಆರಂಭಗೊಳ್ಳುತ್ತಿದ್ದಂತೆ, ಭವನದ ಒಳಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಡಾನ್ಸ್ ಆರಂಭಗೊಂಡಿತ್ತು! ನಂತರ ಕಾರ್ಯಕ್ರಮಕ್ಕೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರ ಎಂಟ್ರಿ ಕೂಡ ಆಯಿತು. ಅದಕ್ಕೆ ಕಾರಣ, ‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ.

ಟಾಲಿವುಡ್ ಹಾಗೂ ಕಾಲಿವುಡ್​ನಲ್ಲಿ ಸಿನಿಮಾ ಸಿದ್ಧಗೊಂಡ ನಂತರ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಸ್ಟಾರ್ ನಟರನ್ನು ಕರೆಸಿ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗುತ್ತದೆ. ಈಗ ‘ವಾಸು…’ ಆ ಸಂಪ್ರದಾಯವನ್ನು ಚಂದನವನಕ್ಕೂ ತಂದಿದ್ದಾನೆ. ಅಂದಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದವರು ದರ್ಶನ್. ‘ವಾಸು…’ ಆ.3ರಂದು ತೆರೆಕಾಣುತ್ತಿರುವ ವಿಚಾರ ಬಹಿರಂಗಗೊಳಿಸಿ ಮಾತನಾಡಿದ ಅವರು, ‘ನಟ ಅನೀಶ್ ತೇಜೇಶ್ವರ್ ಪ್ರಿ-ರಿಲೀಸ್ ಇವೆಂಟ್ ಮಾಡುತ್ತಿದ್ದೇವೆ ಎಂದಾಗ ನನಗೆ ಅದೇನು ಎಂಬುದೇ ಅರ್ಥವಾಗಿರಲಿಲ್ಲ. ಆಮೇಲೆ ಅವರು ಸಂಪೂರ್ಣ ಮಾಹಿತಿ ನೀಡಿದರು. ಚಿತ್ರ ಎಂದಮೇಲೆ ಪ್ರಚಾರ ಬಹುಮುಖ್ಯವಾಗುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಕ್ರಮವನ್ನು ನಾವೂ ಅನುಸರಿಸುತ್ತೇವೆ’ ಎಂದು ನಕ್ಕರು.

ಅನೀಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ತಮ್ಮದೇ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ. ಈ ಬಗ್ಗೆ ದರ್ಶನ್ ಮೆಚ್ಚುಗೆ ವ್ಯಕ್ತಪಡಿಸಿದರು. ‘ಒಂದು ಪ್ರೊಡಕ್ಷನ್ ಹೌಸ್ ಆರಂಭಗೊಂಡರೆ ನೇರವಾಗಿ ಹಾಗೂ ಪರೋಕ್ಷವಾಗಿ ಅನೇಕರಿಗೆ ಸಹಾಯವಾಗುತ್ತದೆ. ಒಂದು ಚಿತ್ರ ಸೋತರೆ ಅನೇಕರಿಗೆ ನಷ್ಟವಾಗುತ್ತದೆ. ಇದೊಂದು ರೀತಿ ಆಹಾರ ಸರಪಳಿ ಇದ್ದಹಾಗೆ. ಆದರೆ, ಈ ವಿಚಾರ ಎಲ್ಲರಿಗೂ ತಿಳಿಯುವುದಿಲ್ಲ. ನಿರ್ಮಾಣ ಸಂಸ್ಥೆ ಸ್ಥಾಪಿಸಿದಾಗ ಎಲ್ಲರೂ ಅದಕ್ಕೆ ಬೆಂಬಲ ನೀಡಬೇಕು. ಅನೀಶ್ ಇನ್ನಷ್ಟು ಸಿನಿಮಾ ನಿರ್ಮಾಣ ಮಾಡುವಂತಾಗಲಿ. ‘ವಾಸು…’ಗೆ ಒಳ್ಳೆಯದಾಗಲಿ. ಚಿತ್ರ ಗೆಲ್ಲಲಿ’ ಎಂದು ಹಾರೈಸಿದರು ದರ್ಶನ್.

ವೇದಿಕೆ ಮೇಲಿದ್ದ ನಾಯಕಿ ನಿಶ್ವಿಕಾ ‘ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ಈ ಚಿತ್ರದ ಒಂದು ಭಾಗವಾಗಿ ನಾನಿರುವುದಕ್ಕೆ ಸಂತಸವಾಗುತ್ತಿದೆ. ಈ ಚಿತ್ರವನ್ನು ಜನ ಒಪ್ಪಿಕೊಳ್ಳಲಿದ್ದಾರೆ ಎಂಬ ನಂಬಿಕೆ ಇದೆ’ ಎಂದು ಹೇಳಿಕೊಂಡರು. ಕಾರ್ಯಕ್ರಮದಲ್ಲಿ ಹಾಜರಿದ್ದ ನಿರ್ದೇಶಕ, ನಟ ರಿಷಭ್ ಶೆಟ್ಟಿ ಕೂಡ ಚಿತ್ರತಂಡಕ್ಕೆ ‘ಆಲ್ ದಿ ಬೆಸ್ಟ್’ ಹೇಳಿದರು. ‘ನಾನು ಅನೀಶ್​ನನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಅವರು ಹೆಚ್ಚು ಶ್ರಮಹಾಕಿ ಕೆಲಸ ಮಾಡುತ್ತಾರೆ. ಅವರು ಚಿತ್ರದಿಂದ ಚಿತ್ರಕ್ಕೆ ಎತ್ತರಕ್ಕೆ ಬೆಳೆಯುತ್ತಿದ್ದಾರೆ. ಈ ಬಾರಿ ಬಾಕ್ಸ್ ಆಫೀಸ್ ಸುಲ್ತಾನ್ ಹಾರೈಕೆ ಇರುವುದರಿಂದ ಚಿತ್ರ ಹಿಟ್ ಆಗುವುದು ಗ್ಯಾರಂಟಿ’ ಎಂದು ನಕ್ಕರು.

ಇನ್ನು, ವೇದಿಕೆ ಮೇಲೆ ಮನರಂಜನೆಗೆ ಬರ ಇರಲಿಲ್ಲ. ಅನುಷಾ ರಂಗನಾಥ್, ಅನಿತಾ ಭಟ್, ಕೃಷಿ ತಾಪಂಡ ಸೇರಿ ಅನೇಕರು ವೇದಿಕೆ ಮೇಲೆ ಡಾನ್ಸ್ ಮಾಡಿದರು. ಯುವ ಪ್ರತಿಭೆ ಯಶವಂತ್ ಯೋಗಾಸನದ ಮೂಲಕ ಎಲ್ಲರ ಗಮನ ಸೆಳೆದರು. ಅಜಿತ್ ಉಗ್ಗಿನ್ ವಾಸನ್ ನಿರ್ದೇಶನ, ಅಜನೀಶ್ ಲೋಕನಾಥ್ ಸಂಗೀತ, ದಿಲೀಪ್ ಚಕ್ರವರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.