ವಿಜಯ್‌ಗೆ ಪುರಿ ಆ್ಯಕ್ಷನ್-ಕಟ್?

ನಟ ವಿಜಯ್ ದೇವರಕೊಂಡ ‘ಗೀತ ಗೋವಿಂದಂ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ 100 ಕೋಟಿ ರೂ. ಕ್ಲಬ್ ಸೇರುವ ಮೂಲಕ ವಿಜಯ್ ಖ್ಯಾತಿ ದ್ವಿಗುಣಗೊಂಡಿದೆ. ಹಾಗಾಗಿ ಹಲವು ನಿರ್ದೇಶಕರು ವಿಜಯ್ ಕಾಲ್​ಶೀಟ್ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಸಾಲಿನಲ್ಲಿ ಪುರಿ ಜಗನ್ನಾಥ್ ಕೂಡ ಇದ್ದಾರಂತೆ! ‘ಮೆಹಬೂಬಾ’ ಚಿತ್ರದ ಮೂಲಕ ಪುತ್ರ ಆಕಾಶ್​ಗೆ ಸೂಕ್ತ ವೇದಿಕೆ ಕಲ್ಪಿಸಿಕೊಡಲು ಮುಂದಾಗಿದ್ದರು ಪುರಿ. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ನೆಲಕಚ್ಚಿತ್ತು. ಹೀಗಾಗಿ ಪುತ್ರನಿಗೋಸ್ಕರ ಮತ್ತೊಂದು ಸಿನಿಮಾ ಮಾಡಲು ಸಿದ್ಧರಾಗಿದ್ದರು. ಆದರೆ ಈಗ ಮಗನ ಚಿತ್ರದ ಕೆಲಸಗಳನ್ನು ಬದಿಗಿಟ್ಟು, ವಿಜಯ್ಗೋಸ್ಕರ ಹೊಸ ಕಥೆ ಸಿದ್ಧಪಡಿಸಿದ್ದಾರಂತೆ. ‘ಅರ್ಜುನ್ ರೆಡ್ಡಿ’ ಹಾಗೂ ‘ಗೀತ ಗೋವಿಂದಂ’ ಚಿತ್ರಗಳಲ್ಲಿ ಭಿನ್ನ ಪಾತ್ರ ನಿರ್ವಹಿಸಿದ್ದ ವಿಜಯ್ ನಟನೆಯನ್ನು ಪುರಿ ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಅವರು ವಿಜಯ್ ಜತೆ ಕೆಲಸ ಮಾಡಲು ಹೆಚ್ಚು ಉತ್ಸುಕರಾಗಿದ್ದಾರೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಪುರಿ ಇತ್ತೀಚೆಗೆ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಒಂದೊಮ್ಮೆ ಈ ಚಿತ್ರವೂ ಸೋತರೆ ಎನ್ನುವ ಭಯ ಅಭಿಮಾನಿಗಳದ್ದು. ಹಾಗಾಗಿ ವಿಜಯ್ ಈ ಕಥೆ ಒಪ್ಪಿಕೊಳ್ಳುತ್ತಾರೋ, ಇಲ್ಲವೋ ಎನ್ನುವುದು ಸದ್ಯದ ಕುತೂಹಲ. ವಿಜಯ್ ಪ್ರಸ್ತುತ, ‘ಡಿಯರ್ ಕಾಮ್ರೇಡ್’ ಹಾಗೂ ‘ನೋಟ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.