ಫಾರ್ಚುನರ್​ನಿಂದ ಒಲಿದ ಅದೃಷ್ಟ

ಚಿತ್ರದ ಶೀರ್ಷಿಕೆಗೂ ಕಥೆಗೂ ಸಂಬಂಧ ಇದೆಯೋ ಇಲ್ಲವೋ ಎಂಬುದನ್ನು ಪ್ರೇಕ್ಷಕರೇ ನೋಡಿ ಹೇಳಬೇಕು. ಆದರೆ ‘ಫಾರ್ಚುನರ್’ ಹೆಸರಿನಲ್ಲಿ ಸಿನಿಮಾ ಶುರುಮಾಡಿದ ನಿರ್ದೇಶಕ ಮಂಜುನಾಥ್ ಜೆ. ಅನಿವಾರ್ಯ ಅವರಿಗೆ ಶೀರ್ಷಿಕೆಗೆ ತಕ್ಕಂತೆಯೇ ಫಾರ್ಚುನ್ (ಅದೃಷ್ಟ) ಒಲಿದಿದೆಯಂತೆ. ‘ಸಣ್ಣದಾಗಿ ಮಾಡೋಣ ಎಂದುಕೊಂಡಿದ್ದ ಚಿತ್ರಕ್ಕೆ ನಾಯಕರಾಗಿ ದಿಗಂತ್ ಸೇರಿಕೊಂಡರು. ನಾಯಕಿ ಸ್ಥಾನಕ್ಕೆ ಸೋನು ಗೌಡ ಬಂದರು. ಹೀಗೆ ಚಿತ್ರತಂಡದ ಸ್ಟಾರ್ ಮೆರುಗು ಹೆಚ್ಚುತ್ತ ಹೋಯಿತು. ನಿರ್ಮಾಪಕರು ಕೂಡ ಅದಕ್ಕೆ ತಕ್ಕಂತೆ ಬೆಂಬಲ ನೀಡಿದರು’ ಎಂದು ತಮಗೊಲಿದ ಅದೃಷ್ಟದ ಬಗ್ಗೆ ಹೇಳಿಕೊಳ್ಳುತ್ತಾರೆ ನಿರ್ದೇಶಕರು. ಈ ಸಿನಿಮಾ ಒಪ್ಪಿಕೊಂಡ ಬಳಿಕ ಹಲವು ಚಿತ್ರದ ಆಫರ್​ಗಳು ಸಿಕ್ಕಿದ್ದರಿಂದ ಸೋನುಗೂ ‘ಫಾರ್ಚುನರ್’ನಿಂದ ಅದೃಷ್ಟ ಕುಲಾಯಿಸಿದೆಯಂತೆ.

ಇತ್ತೀಚೆಗಷ್ಟೇ ‘ಫಾರ್ಚುನರ್’ ಹಾಡುಗಳು ಬಿಡುಗಡೆಗೊಂಡವು. ‘ಲೂಸಿಯಾ’ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆಯಲ್ಲಿ ಒಟ್ಟು ಆರು ಹಾಡುಗಳು ಮೂಡಿಬಂದಿವೆ. ಈ ಆಲ್ಬಂನಲ್ಲಿ ಹಳೇ ಬೇರು ಮತ್ತು ಹೊಸ ಚಿಗುರಿನ ಸಂಗಮ ಆಗಿರುವುದು ವಿಶೇಷ. ಕೆ.ಎಸ್. ನರಸಿಂಹಸ್ವಾಮಿ ಮತ್ತು ಸಂತ ಶಿಶುನಾಳ ಶರೀಫರ ಹಾಡುಗಳನ್ನು ಬಳಸಿಕೊಂಡಿರುವುದರ ಜತೆಗೆ ಇನ್ನುಳಿದ ಗೀತೆಗಳಿಗೆ ಹೊಸ ಪ್ರತಿಭೆಗಳು ಸಾಹಿತ್ಯ ಬರೆದಿದ್ದಾರೆ. ಇಂದಿನ ಜನತೆಗೆ ಇಷ್ಟವಾಗುವ ರೀತಿಯಲ್ಲಿ ಕೆ.ಎಸ್.ನ. ಮತ್ತು ಶರೀಫರ ಹಾಡುಗಳು ಮೂಡಿಬಂದಿವೆ ಎಂಬುದು ಸಂಗೀತ ನಿರ್ದೇಶಕರ ಅಂಬೋಣ.

‘ಫಾರ್ಚುನರ್ ಎಂದರೆ ಎಲ್ಲರಿಗೂ ಐಷಾರಾಮಿ ಕಾರು ನೆನಪಾಗುತ್ತದೆ. ಆದರೆ ಸಿನಿಮಾದಲ್ಲಿ ಅದನ್ನು ಹೊರತುಪಡಿಸಿ ಬೇರೆಯದೇ ಕಥೆ ಹೇಳಿದ್ದೇವೆ. ಅದೃಷ್ಟದ ಬೆನ್ನು ಹತ್ತಿ ಹೊರಡುವ ನಾಯಕನಿಗೆ ಏನೆಲ್ಲ ಘಟನೆಗಳು ಎದುರಾಗುತ್ತವೆ ಎಂಬುದೇ ಚಿತ್ರದ ತಿರುಳು’ ಎಂದು ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಡುತ್ತಾರೆ ನಿರ್ದೇಶಕ ಮಂಜುನಾಥ್. ‘ಸಾಹಿತ್ಯದ ಅಭಿರುಚಿ ಇರುವ ನಿರ್ದೇಶಕರ ಜತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಪ್ರತಿಯೊಂದು ಡೈಲಾಗ್​ಗೂ ಅವರು ಸಾಕಷ್ಟು ಕಾಳಜಿ ವಹಿಸಿದ್ದಾರೆ’ ಎಂಬುದು ನಿರ್ದೇಶಕರ ಬಗ್ಗೆ ದಿಗಂತ್ ಹೇಳುವ ಮೆಚ್ಚುಗೆ ಮಾತುಗಳು. ಗೊಲೇಚ ಕುಟುಂಬದ ಆನಂದ್, ರಾಜೇಶ್, ಸುರೇಂದ್ರ, ವಿಮಲ್ ಜತೆಯಾಗಿ ‘ಫಾರ್ಚುನರ್’ಗೆ ಬಂಡವಾಳ ಹೂಡಿದ್ದಾರೆ. ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ತೆರೆಕಾಣಿಸಬೇಕೆಂಬುದು ನಿರ್ವಪಕರ ಆಲೋಚನೆ. ದಿಗಂತ್ ಮತ್ತು ಸೋನು ಗೌಡ ಜತೆ ಸ್ವಾತಿ ಶರ್ಮಾ ಕೂಡ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಉತ್ತರ ಕರ್ನಾಟಕದ ಹುಡುಗಿಯಾಗಿ ಕಾಣಿಸಿಕೊಂಡಿರುವ ಅವರು ಆ ಪ್ರಾಂತ್ಯದ ಭಾಷೆ ಕಲಿಯಲು ತುಂಬ ಕಷ್ಟಪಟ್ಟಿದ್ದಾಗಿ ಹೇಳಿಕೊಳ್ಳುತ್ತಾರೆ. ಮಧುಸೂದನ್ ಛಾಯಾಗ್ರಹಣ, ಗುರುಸ್ವಾಮಿ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.