Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಹಿಂದೂ-ವೀರಶೈವ-ಲಿಂಗಾಯತ ವೈಚಾರಿಕ ವಿಶ್ಲೇಷಣೆ

Tuesday, 27.03.2018, 3:05 AM       No Comments

ಶಿವನಲ್ಲದೆ ಬೇರೆ ದೈವವಿಲ್ಲ, ಶಿವಲಿಂಗಾರ್ಚನೆಯಿಲ್ಲದೆ ಬೇರೆ ಪೂಜೆಯಿಲ್ಲ ಎಂದು ನಂಬುವ ಎಲ್ಲ ವೀರಶೈವ ಲಿಂಗಾಯತರು ಶಿವನೊಡನೆ ಅವನ ಗಣಂಗಳನ್ನು ಶಿವಸತಿಯನು, ಶಿವಸುತರನು, ವಿದ್ಯಾಧಿದೇವಿ ಸರಸ್ವತಿಯನ್ನು, ಐಶ್ವರ್ಯಾಧಿದೇವಿಯಾದ ಲಕ್ಷ್ಮಿಯನ್ನು ಪೂಜಿಸುವ ಕ್ರಮವನ್ನಿಟ್ಟುಕೊಂಡಿದ್ದಾರೆ.

 |ಡಾ. ವೈ. ಎಂ. ಕುಮುದಿನಿ 

ಯಾವುದೇ ಒಂದು ರಾಷ್ಟ್ರ, ರಾಜ್ಯ ಅಥವಾ ಭೌಗೋಳಿಕ ಪ್ರದೇಶವನ್ನು ಅಲ್ಲಿಯ ಪರಿಸರ ನೆಲೆಗಟ್ಟು, ಪ್ರಾಕೃತಿಕ ವೈಶಿಷ್ಟ್ಯಗಳು ಇವುಗಳನ್ನು ಗಮನದಲ್ಲಿಟ್ಟುಕೊಂಡು ಹೆಸರಿಸುವುದು ವಾಡಿಕೆ. ಅದೇ ರೀತಿ, ಆಸೇತು ಹಿಮಾಚಲದ ನಡುವಿನ ಭೂಭಾಗವನ್ನು ‘ಹಿಂದೂಸ್ಥಾನ’ ಎಂದು ಕರೆಯಲಾಗಿದೆ. ಈ ‘ಹಿಂದೂ’ ಎಂಬ ಪದ ಭಾರತದ ಪವಿತ್ರ ಮತ್ತು ಪ್ರಮುಖ ನದಿಗಳಲ್ಲೊಂದಾದ ಸಿಂಧೂ ನದಿಯ ರೂಪಾಂತರ. ‘ಸಿಂಧೂ’ ಪದದ ಅರ್ಥ- ಅಪಾರವಾದ ಜಲರಾಶಿ. ಸಿಂಧೂ ಮತ್ತು ಅದರ ಶಾಖಾನದಿಗಳು ಹರಿಯುವ ಪ್ರದೇಶವನ್ನು ಹಿಂದೆ ‘ಸಪ್ತಸಿಂಧವ’ ಎಂದು ಕರೆಯಲಾಗಿತ್ತು. ವಾಯವ್ಯ ಭಾರತದ ಗಡಿದೇಶವಾದ ಪರ್ಷಿಯಾ (ಇಂದಿನ ಇರಾನ್) ದೇಶದ ಆಡುಭಾಷೆಯಲ್ಲಿ ‘ಸ’ ಎಂಬ ಅಕ್ಷರವಿಲ್ಲ. ಅವರು ‘ಸ’ ಅನ್ನು ‘ಹ’ ಎಂದು ಉಚ್ಚರಿಸುತ್ತಾರೆ. ಹೀಗೆ ಈ ನದಿ ಹರಿಯುವ ಭೂಭಾಗವೆಲ್ಲ ‘ಹಿಂದೂ’ ಆಯಿತು. ಈ ಪದ ಪ್ರದೇಶಕ್ಕಷ್ಟೆ ಸೀಮಿತವಾಗಿರದೆ, ಅಲ್ಲಿಯ ಜನ, ಅವರ ಜೀವನ ಆಚರಣೆಗಳು, ಸಂಪ್ರದಾಯ ಎಲ್ಲವನ್ನೂ ಒಳಗೊಂಡು ಒಂದು ಸಂಕೀರ್ಣಪದವಾಗಿ ಬೆಳೆಯಿತು. ಮುಂದೆ ಗ್ರೀಕ್ ದೇಶೀಯರೂ ಈ ಪದವನ್ನೇ ಬಳಸಿದರು. ನಂತರದ ಕಾಲಮಾನದಲ್ಲಿ ಗಂಗಾ-ಯಮುನಾ ಬಯಲು, ದಕ್ಷಿಣ ಪ್ರಸ್ಥಭೂಮಿಗಳಿಗೂ ಈ ಪದ ಅನ್ವಯವಾಯ್ತು. ಮೊಘಲರ ಕಾಲಕ್ಕೆ ಇದು ‘ಹಿಂದೂಸ್ಥಾನ’ವಾಯಿತು.

ಹಿಂದೂ ಭೂಭಾಗದ ಜನರೆಲ್ಲ ಹಿಂದೂಗಳು. ಇವರ ಸಂಪ್ರದಾಯ, ಸಂಸ್ಕಾರ, ನಂಬಿಕೆ, ಆಚರಣೆಗಳು ವೈವಿಧ್ಯಮಯವಾಗಿ ಒಂದು ಸಂಕೀರ್ಣ ಜೀವನವ್ಯವಸ್ಥೆಯಾಗಿದೆ.

ಹಿಂದೂ ಸಂಪ್ರದಾಯದಲ್ಲಿ ಬಹುದೇವತಾರಾಧನೆಯ ಆಚರಣೆ ಪ್ರಮುಖವಾದದ್ದು. ಶೈವ, ವೈಷ್ಣವ ಮತ್ತು ಶಾಕ್ತ ಸಂಪ್ರದಾಯಗಳು ಬಹು ಹಿಂದಿನಿಂದಲೂ ಈ ಭೂಮಿಯಲ್ಲಿ ಬೇರುಬಿಟ್ಟು ಜನರ ಜೀವನವಿಧಾನದಲ್ಲಿ ಹಾಸುಹೊಕ್ಕಾಗಿವೆ. ಶೈವ ಸಂಪ್ರದಾಯದಲ್ಲಿ ಶಿವನ ಆರಾಧನೆ ಅತ್ಯಂತ ಪ್ರಾಚೀನವಾದ ಮತ್ತು ಇಂದಿಗೂ ಪ್ರಚಲಿತವಿರುವ ಆಚರಣೆ. ಭಾರತದ ಅತ್ಯಂತ ಪ್ರಾಚೀನ ನಾಗರಿಕತೆಯಾದ ಸಿಂಧೂ ಕೊಳ್ಳದ ಜನರಲ್ಲಿಯೂ ಶಿವನ ಆರಾಧನೆ ರೂಢಿಯಲ್ಲಿತ್ತು. ಬ್ರಹ್ಮಾಂಡದ ಕಲ್ಪನೆಯನ್ನು ಲಿಂಗರೂಪದಲ್ಲಿ ಸಾಕ್ಷಾತ್ಕರಿಸಿ ಆರಾಧಿಸುವ ಮತ್ತು ಆ ಪರಮಶಕ್ತಿಯನ್ನು ಮಹಾಯೋಗಿಯ ರೂಪದಲ್ಲಿ ಸಕಲ ಜೀವಜಂತುಗಳಿಗೂ ಒಡೆಯ ಭಾವನೆಯನ್ನು ಬಿಂಬಿಸುವ ಚಿತ್ರಫಲಕಗಳು ಅಲ್ಲಿ ದೊರೆತಿವೆ. ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರು ಈಗ್ಗೆ 5 ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಲಿಂಗಪೂಜೆ ಮತ್ತು ಮಹಾಯೋಗಿ ಶಿವನ ಆರಾಧನೆ ಪ್ರಚಲಿತವಾಗಿತ್ತು ಎಂದಿದ್ದಾರೆ.

ಲಿಂಗ ಎಂಬ ಪದಕ್ಕೆ ಅನೇಕ ನಿಷ್ಪತ್ತಿಗಳಿವೆ. ಒಂದು ವಿವರಣೆ ಹೀಗಿದೆ-

ಲೀನಂ ಪ್ರಪಂಚ ರೂಪಂ ಹಿ ಸರ್ವಮೇತಚ್ಚರಾಚರಂ

ಸರ್ಗಾದೌ ಗಮ್ಯತೆ ಭೂಯಸ್ತಸ್ಮಾಲಿಂಗಮುದೀರುತಂ…

ನಿರಾಮಯಂ ನಿರಾಕಾರಣ ನಿರ್ಗಣಂ ನಿರ್ಮಲಂ ಶಿವಂ…

ತಸ್ಮಾಲಿಂಗಂ ಪರಬ್ರಹ್ಮ ಸಚ್ಚಿದಾನಂದ ಲಕ್ಷಣಂ.

 

12ನೆಯ ಶತಮಾನದ ವೀರಶೈವ ವಚನಕಾರರಲ್ಲೊಬ್ಬರಾದ ಉರಿಲಿಂಗಪೆದ್ದಿ ಎಂಬ ಶರಣರು ಲಿಂಗಸ್ವರೂಪವನ್ನು ಕೆಳಕಂಡಂತೆ ವಿವರಿಸುತ್ತಾರೆ-

ಲಿಂಗವೆಂಬುದು ಪರಶಕ್ತಿಯುತ ಪರಶಿವನ ನಿಜದೇಹ

ಲಿಂಗವೆಂಬುದು ಪರಶಿವನ ಘನತೇಜ

ಲಿಂಗವೆಂಬುದು ಪರಶಿವನ ನಿರತಿಶಯಾನಂದ ಸುಖ

ಲಿಂಗವೆಂಬುದು ಪರಶಿವನ ಪರಮಜ್ಞಾನ

ಲಿಂಗವೆಂಬುದು ಷಡದ್ವಮಯ ಜಗಜ್ಜನ್ಮಭೂಮಿ.

ಶೈವ ಸಂಪ್ರದಾಯದಲ್ಲಿ ಪಾಶುಪತ, ಕಾಳಾಮುಖ, ಲಾಕುಲ ಮತ್ತು ಮಾಹೇಶ್ವರ ಎಂಬ ನಾಲ್ಕು ಪ್ರಮುಖ ಪಂಥಗಳು ಕ್ರಿ.ಶ. 1ನೆಯ ಶತಮಾನದಲ್ಲಿಯೇ ಇದ್ದವು ಎಂಬುದಕ್ಕೆ ಅನೇಕ ಉಲ್ಲೇಖಗಳಿವೆ. ಮಹಾಭಾರತದ ಶಾಂತಿಪರ್ವದಲ್ಲಿ ಪಾಶುಪತ ಸಂಪ್ರದಾಯದ ಪ್ರಸ್ತಾಪವಿದೆ. ವಾಯು, ಕೂರ್ಮ ಮತ್ತು ಲಿಂಗ ಪುರಾಣಗಳಲ್ಲಿಯೂ ಪಾಶುಪತದ ಉಲ್ಲೇಖವಿದೆ. ಪಾಶುಪತ ಸಂಪ್ರದಾಯದ ಸ್ಥಾಪಕನು ಲಕುಲೀಶ. ಕನ್ನಡದ ಅನೇಕ ಶಾಸನಗಳಲ್ಲಿ ಅವನ ಪಂಥವನ್ನು ‘ಲಕುಲಾಗಮ’, ‘ಲಕುಲಾಮ್ನಾಯ’, ‘ಲಕುಲ ಸಮಯ’ ಎಂದು ಕರೆಯಲಾಗಿದೆ.

ಕಾಳಾಮುಖ ಸಂಪ್ರದಾಯದ ಅಧ್ವರ್ಯುಗಳು ಪ್ರಕಾಂಡ ಪಂಡಿತರೂ, ಮಹಾಯೋಗಿಗಳೂ, ಪರಮತಪಸ್ವಿಗಳೂ ಮತ್ತು ಸಾಮಾಜಿಕ ಕಳಕಳಿಯನ್ನು ಹೊಂದಿದವರೂ ಆಗಿದ್ದರು. ಆತ್ಮಕಲ್ಯಾಣದೊಂದಿಗೆ ಸಮಾಜ ಕಲ್ಯಾಣವು ಅವರ ಬದುಕಿನ ಭಾಗವಾಗಿತ್ತು. ಕಾಳಾಮುಖರು ತಾವು ಸಂಚರಿಸಿದೆಡೆಗಳಲ್ಲೆಲ್ಲ ಮಠಗಳನ್ನು ಸ್ಥಾಪಿಸಿದರು.

ಪ್ರಾಚೀನ ಶೈವ ಸಿದ್ಧಾಂತದ ತತ್ತ್ವಗಳು ಐದು- ಕಾರ್ಯ, ಕಾರಣ, ಯೋಗ, ವಿಧಿ ಮತ್ತು ದುಃಖಾಂತ ಅಥವಾ ಮೋಕ್ಷಸಿದ್ಧಿ. ಇವುಗಳನ್ನು ‘ಪಂಚಪದಾರ್ಥ’ಗಳೆಂದು ಕರೆಯುತ್ತಾರೆ. ಸುಮಾರು 6ನೆಯ ಶತಮಾನದ ಹೊತ್ತಿಗೆ ಶೈವ ಸಂಪ್ರದಾಯ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ದೃಢವಾಗಿ ಬೇರೂರಿದ್ದಿತು. ದಕ್ಷಿಣ ಭಾರತದ ಶೈವ ಸಂಪ್ರದಾಯದಲ್ಲಿ ‘ಅರವತ್ತಮೂರು ಪುರಾತನರು’ ಶೈವಪಂಥದ ಪುನರುದ್ಧಾರಕ್ಕಾಗಿ ಶ್ರಮಿಸಿದವರೆಂದು ಪ್ರಸಿದ್ಧರಾಗಿದ್ದಾರೆ. ಇವರು ‘ತ್ರಿಷಷ್ಟಿ’ ಎಂದು ಹೆಸರಾಗಿ ಶೈವಪಂಥದ ಪ್ರಾಧ್ಯಾಪಕರಾಗಿ, ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಹಾಡುಗಬ್ಬಗಳನ್ನು ರಚಿಸಿದ್ದಾರೆ.

ಶೈವ ಸಂಪ್ರದಾಯವು ವೀರಶೈವ ಸಂಪ್ರದಾಯವಾಗಿ ಹೊರಹೊಮ್ಮಿದ್ದು ಬಹುಶಃ ಕ್ರಿ.ಶ. 8-9ನೆಯ ಶತಮಾನಗಳಲ್ಲಿ. ಜನಸಾಮಾನ್ಯರಿಗೆ ಅರ್ಥವಾಗುವಂತೆ ಅವರ ಆಡುನುಡಿಯಲ್ಲಿ ಸರಳ ಸುಲಭ ಆಚರಣೆಗಳನ್ನು ವಿವರಿಸಿ, ಶೈವಪಂಥಕ್ಕೊಂದು ಹೊಸಚೇತನವನ್ನು ಕೆಲವರು ಯತಿಗಳು ಕೊಟ್ಟರು. ಕೇರಳದ ವೈದಿಕ ಸಂಪ್ರದಾಯದ ಶ್ರೀ ಶಂಕರಾಚಾರ್ಯರು ಹಿಂದೂ ತತ್ತ್ವಗಳ ಪುನರುಜ್ಜೀವನಕ್ಕೆ ಕಾರಣರಾದಂತೆಯೇ, ಶೈವ ಸಂಪ್ರದಾಯವನ್ನು ವೀರಶೈವ ಸಂಪ್ರದಾಯವನ್ನಾಗಿಸಿದವರು ಪಂಚಾಚಾರ್ಯರೆಂದು ಹೆಸರಾದ ಬಾಳೆಹೊನ್ನೂರು ಪೀಠ ಸ್ಥಾಪಕರಾದ ಶ್ರೀ ರೇಣುಕ ಭಗವತ್ಪಾದರು, ಉಜ್ಜಿನಿಯ ಮರುಳಾರಾಧ್ಯರು, ಶ್ರೀಶೈಲದ ಪಂಡಿತಾರಾಧ್ಯರು, ಕಾಶಿಯ ವಿಶ್ವಾರಾಧ್ಯರು ಮತ್ತು ಕೇದಾರದ ಏಕೋರಾಮಾರಾಧ್ಯರು. ಈ ಐವರು ಮಹಾಪುರುಷರು ಆ ಕ್ಷೇತ್ರಗಳಲ್ಲಿ ಮಹಾಮಠಗಳನ್ನು ಸ್ಥಾಪಿಸಿ ಅವುಗಳನ್ನು ಕೇಂದ್ರಬಿಂದುಗಳನ್ನಾಗಿಸಿ ಅವುಗಳ ನೂರಾರು ಶಾಖಾಮಠಗಳನ್ನು ದೇಶದೆಲ್ಲೆಡೆ ಸ್ಥಾಪಿಸಲು ಕಾರಣಕರ್ತರಾದರು. ಪ್ರತಿಯೊಬ್ಬ ಶೈವನಿಗೂ ಸ್ತ್ರೀಪುರುಷರೆನ್ನದೆ ಲಿಂಗದೀಕ್ಷೆ ಮೂಲಕ ಅವರು ಸದಾಕಾಲ ಅವರ ಆತ್ಮಲಿಂಗವನ್ನು ವಕ್ಷಸ್ಥಳದಲ್ಲಿ ಧರಿಸುವಂತೆ ಮಾಡಿ, ತ್ರಿಕಾಲಗಳಲ್ಲಿ ಅಂಗೈಯಲ್ಲಿ ಲಿಂಗವನ್ನಿರಿಸಿ ಅಭಿಷೇಕ, ಭಸ್ಮಧಾರಣೆ, ಅರ್ಚನೆ, ಆರತಿಗಳೊಡನೆ ಪೂಜಿಸಿ ಪ್ರಣವ ಪಂಚಾಕ್ಷರಿ ಮಂತ್ರವನ್ನು ಜಪಿಸಲು ಅನುವುಮಾಡಿಕೊಟ್ಟರು. ಈ ವೀರಶೈವ ಸಂಪ್ರದಾಯ ಬಹುಶೀಘ್ರವಾಗಿ ಜನಪ್ರಿಯವಾಯಿತು. ವೀರಶೈವ ಮಠಗಳು ತತ್ತೊ್ವೕಪದೇಶವಲ್ಲದೆ ಗ್ರಾಮಸ್ಥರ ಸುಖ-ದುಃಖಗಳಲ್ಲಿ ಭಾಗಿಯಾಗಿ, ಕ್ಷಾಮ ಡಾಮರಗಳಲ್ಲಿ, ರೋಗ ರುಜಿನಗಳಲ್ಲಿ ಜನರ ಸೇವೆ ಮಾಡಿರುವ ದಾಖಲೆಗಳಿವೆ.

12ನೆಯ ಶತಮಾನದಲ್ಲಿ ಈ ವೀರಶೈವ ಪರಂಪರೆಗೆ ಹೊಸತೊಂದು ಅಧ್ಯಾಯವನ್ನು ಸೇರಿಸಿದವರು ಬಸವೇಶ್ವರಾದಿ ಪ್ರಮಥರು. ಬಸವೇಶ್ವರರು ಸಮಾಜದ ಓರೆಕೋರೆಗಳನ್ನು ತಿದ್ದುವ ವಿಶ್ಲೇಷಣೆಗೆಂದು ‘ಅನುಭವ ಮಂಟಪ’ವೆಂಬ ಜ್ಞಾನಗಂಗೋತ್ರಿಯನ್ನು ಸ್ಥಾಪಿಸಿದರು. ಈ ಅನುಭವ ಮಂಟಪದ ವಿಚಾರ ವೇದಿಕೆಯ ಅಗ್ರಸ್ಥಾನವನ್ನು ಅಲಂಕರಿಸಿದವನು ಪರಮಜ್ಞಾನಿ, ಷಡುಸ್ಥಲ ಜ್ಞಾನಿ ಎಂದೆಲ್ಲ ಪ್ರಸಿದ್ಧನಾಗಿದ್ದ ಚನ್ನಬಸವಣ್ಣ. ಮಡಿವಾಳ ಮಾಚಿದೇವರು, ಅಕ್ಕಮಹಾದೇವಿ, ಮುಕ್ತಾಯಕ್ಕ, ಅಂಬಿಗರ ಚೌಡಯ್ಯ, ಆಯ್ದಕ್ಕಿ ಮಾರಯ್ಯ ಮುಂತಾಗಿ ಹಲವು ಮಹಾಶರಣರು, ಚಿಂತಕರು, ಅನುಭಾವಿಗಳು ನೆರೆದಿದ್ದ ಈ ‘ವೀರಶೈವ ಮಹಾಸಭೆ’ ವೀರಶೈವ ತತ್ತೊ್ವೕದ್ಧಾರಕ ಸಭೆಯಾಗಿತ್ತು. ಈ ಮಹಾನುಭಾವರು ವೀರಶೈವ ತತ್ತ್ವಸಿದ್ಧಾಂತಗಳನ್ನು ಸರಳ ಸುಂದರ ಪದಸಮುಚ್ಚಯಗಳಲ್ಲಿ ವಿವರಿಸಿದರು. ಅವುಗಳನ್ನು ‘ವಚನಗಳು’ ಎಂದು ಕರೆಯಲಾಗಿದೆ. ಈ ವಚನಗಳು ಹೊಸತೊಂದು ಸಾಹಿತ್ಯ ಪ್ರಕಾರವಾಗಿ ಬೆಳೆದವು. ಈ ಕಾರ್ಯದ ಪ್ರಧಾನ ಕಾರ್ಯದರ್ಶಿ ಭಕ್ತಿಭಂಡಾರಿ ಬಸವೇಶ್ವರರು. ಈ ವಚನಕಾರರು ವೀರಶೈವ ತತ್ತೊ್ವೕಪಾಸನೆಯೊಡನೆ ನೀತಿನಿಯಮಗಳ ಮಾರ್ಗವನ್ನು ಸಹ ಈ ವಚನವಾಙ್ಮಯದಲ್ಲಿ ಅಂತರ್ಗತಗೊಳಿಸಿದರು. ‘ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ, ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ, ಇದೇ ಕೂಡಲಸಂಗಮನ ಒಲಿಸುವ ಪರಿ’ ಎಂಬುದು ಅವರ ನಿಲುವು.

ಈ ಅನುಭವ ಮಂಟಪವು ವರ್ಗಭೇದ, ವರ್ಣಭೇದ ಮತ್ತು ಲಿಂಗಭೇದವಿಲ್ಲದೆ ಎಲ್ಲ ಶಿವಶರಣರಿಗೂ ಮುಕ್ತವಾಗಿತ್ತು. ಮಹಾಪೂರದಂತೆ ಎಲ್ಲೆಡೆಗಳಿಂದ ಕಲ್ಯಾಣಕ್ಕೆ ಹರಿದುಬಂದ ಈ ಶರಣ ಸಂಗಮದಲ್ಲಿ ಅನೇಕ ವೀರಶೈವ ಶರಣರು ತಮ್ಮ ಅನುಭಾವಗಳನ್ನು ಸರಳ ರೀತಿಯಲ್ಲಿ ಎಲ್ಲರ ಮನಮುಟ್ಟುವಂತೆ ಬರೆದ ವಚನ ವಾಙ್ಮಯ ಆತ್ಮಕಲ್ಯಾಣದ ನಿವೇದನೆಯೊಡನೆ ಸಮಾಜಕಲ್ಯಾಣವನ್ನೂ ಮಾಡಿತು.

ಆದಯ್ಯ ಶರಣರು ವೀರಶೈವ ಧರ್ಮದ ಬಗ್ಗೆ ವಿವರಣೆ ನೀಡಿದ ರೀತಿ ಇಂತಿದೆ-

‘ರೇವಣ ಸಿದ್ದಯ್ಯನವರ ನಿಷ್ಠೆ

ಮರುಳುಸಿದ್ಧಯ್ಯ ದೇವರ ಅದೃಷ್ಟ ಪ್ರಸಾದನಿಷ್ಠೆ

ಏಕೋರಾಮಯ್ಯಗಳ ಆಚಾರನಿಷ್ಠೆ

ಪಂಡಿತಾರಾಧ್ಯರ ಸ್ವಯಂಪಾಕ’

-ಎಂದು ವೀರಶೈವ ಪಂಚಾಚಾರ್ಯರಲ್ಲಿ ನಾಲ್ವರನ್ನು ಶ್ರೀ ರೇಣುಕ ಭಗವತ್ಪಾದರನ್ನು, ಮರುಳುಸಿದ್ಧೇಶ್ವರರನ್ನು, ಏಕೋರಾಮ ಮತ್ತು ಪಂಡಿತಾರಾಧ್ಯರನ್ನು, ಕ್ರಮವಾಗಿ ಬಾಳೆಹೊನ್ನೂರು ಮಠ, ಉಜ್ಜಿನಿ ಮಠ, ಕೇದಾರ ಮಠ ಮತ್ತು ಶ್ರೀಶೈಲ ಮಠ ಸಂಸ್ಥಾಪಕರನ್ನು ನೆನೆದಿದ್ದಾರೆ.

‘ರೇವಣ ಸಿದ್ದಯ್ಯರೆನ್ನ ನೇತ್ರ

ಮರುಳುಸಿದ್ದಯ್ಯರೆನ್ನ ಶ್ರೋತೃ

ಪಂಡಿತಾರಾಧ್ಯರೆನ್ನ ಜಿಹ್ವೆ

ಏಕೋರಾಮಯ್ಯಗಳೆನ್ನ ನಾಸಿಕ’

-ಎಂದು ಆದಯ್ಯ ಶರಣರು, ಬಸವೇಶ್ವರರಿಗೂ ಮೊದಲು ವೀರಶೈವ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಪಂಚ ಪೀಠಾಧಿಪತಿಗಳನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಬಸವಾದಿ ಪ್ರಮಥರ ಕಾಲದಲ್ಲಿ ವೀರಶೈವರನ್ನು ಲಿಂಗಧಾರಿಗಳು ಎಂದು ಕರೆಯುವ ಪರಿಪಾಠವಿತ್ತು. ವೀರಶೈವರಿಗೆ ಲಿಂಗಾಯತ ಎಂಬ ಪದದ ಅನ್ವಯವಾಗಿದ್ದು ವೀರಶೈವ ಸಿದ್ಧಾಂತಗಳು ಸರಳ ರೀತಿಯಲ್ಲಿ ಜನಸಾಮಾನ್ಯರನ್ನು ಮುಟ್ಟಿ, ಅವರು ಲಿಂಗದೀಕ್ಷೆ ಪಡೆದು ವೀರಶೈವರಾದ ನಂತರದಲ್ಲಿ. ಅದುವರೆವಿಗೂ ವಿದ್ಯಾವಂತರ, ವೈದಿಕ ಧರ್ಮವನ್ನು ಅಧ್ಯಯನ ಮಾಡಿ ಅದರ ಲೋಪದೋಷಗಳನ್ನು ಪರಿಷ್ಕರಿಸಿದವರ ಪದವಾಗಿದ್ದ ‘ವೀರಶೈವ’, ಜನಸಾಮಾನ್ಯರ ಆಡುನುಡಿಯಲ್ಲಿ, ಲಿಂಗಧಾರಣೆ ಮಾಡಿದವರು, ಲಿಂಗವಂತರು/ಲಿಂಗಾಯತರು ಎಂದಾಯಿತು. ಶರಣರ ವಚನಗಳಲ್ಲಿ ಲಿಂಗವಂತ ಎಂಬ ಪದವು ಅತಿ ಕ್ವಚಿತ್ತಾಗಿ ಕಾಣಸಿಗುತ್ತದೆ. ‘ಲಿಂಗವಂತ’ ಎಂಬ ಪದದ ಬಳಕೆ ಲಿಂಗಧಾರಿಗಳು ಎಂಬ ಅರ್ಥಕೊಡುವ ನಿಟ್ಟಿನಲ್ಲಿ ಉಪಯೋಗವಾಗಿದೆಯೇ ವಿನಾ, ವೀರಶೈವದಿಂದ ಹೊರತಾದದ್ದು ಎಂಬರ್ಥದಲ್ಲಿ ಅಲ್ಲ. ಈ ಎರಡೂ ಪದಗಳು- ವೀರಶೈವ ಮತ್ತು ಲಿಂಗಾಯತ- ಒಂದೇ ಅರ್ಥ ಕೊಡುವ ಪದಗಳು.

ಅರ್ಥ ಮಾತ್ರವಲ್ಲ, ವೀರಶೈವ ಲಿಂಗಾಯತರ ಆಚಾರಗಳೆಲ್ಲ ಒಂದೇ ಮೂಲದಿಂದ ಬಂದಂಥವು. ಪಂಚಾಚಾರ, ಅಷ್ಟಾವರಣ, ಷಟ್​ಸ್ಥಲಗಳು ವೀರಶೈವ ಲಿಂಗಾಯತರ ಪ್ರಮುಖ ಆಚರಣೆಗಳು. ಜನನ-ಮರಣಗಳ ಸೂತಕ, ಮುಟ್ಟಿನ ಸೂತಕದಿಂದ ಇವರು ಹೊರತು. ಆತ್ಮಲಿಂಗವನ್ನು ಸದಾಕಾಲ ವಕ್ಷಸ್ಥಲದಲ್ಲಿ ಧರಿಸಿರುವ ಪದ್ಧತಿ, ತ್ರಿಕಾಲ ಲಿಂಗ ಪೂಜಾವಿಧಿ, ಪ್ರಣವ ಪಂಚಾಕ್ಷರಿ ಮಂತ್ರೋಚ್ಚಾರಣೆ, ತ್ರಿಪುಂಡ್ರ ಭಸ್ಮಧಾರಣೆ, ರುದ್ರಾಕ್ಷಿ ಮಾಲಾಧಾರಣೆ ವೀರಶೈವ ಲಿಂಗಾಯತರೆಲ್ಲರಿಗೂ ಕಡ್ಡಾಯ. ‘ಭವಹರನಾದ ನಿಜವೀರಶೈವ, ತನ್ನ ತಾತಿಳಿದ ವೀರಶೈವ, ವೀರಶೈವ ಗುರುವು ಇಹಲೋಕ ಪೂಜ್ಯನು, ಜ್ಞಾನಿ, ಪ್ರಮಥ, ಐಕ್ಯ’ ಎಂದೆಲ್ಲ ವಚನಗಳಲ್ಲಿ ವೀರಶೈವವನ್ನು ವಿದಿತಗೊಳಿಸಿರುವರೇ ವಿನಾ, ಲಿಂಗಾಯತವನ್ನಲ್ಲ. ಶಿವಯೋಗಿ ಶಿವಾಚಾರ್ಯರ ‘ಸಿದ್ಧಾಂತ ಶಿಖಾಮಣಿ’ ಗ್ರಂಥವು ವೀರಶೈವ ತತ್ತ್ವಸಿದ್ಧಾಂತವನ್ನು ವಿವರಿಸುತ್ತದೆ. ವೀರಶೈವ ತತ್ತ್ವಜ್ಞಾನವನ್ನು ‘ಶಕ್ತಿ ವಿಶಿಷ್ಟಾದ್ವೈತ’ ಎಂದು ಕರೆಯುತ್ತಾರೆ.

ವೀರಶೈವ ಲಿಂಗಾಯತ ಹೇಗೆ ಏಕಾಗ್ರರೋ ಹಾಗೆಯೇ ಅವರು ಹಿಂದೂ ಸಂಪ್ರದಾಯದಿಂದ ಹೊರಗುಳಿಯಲು ಸಾಧ್ಯವಿಲ್ಲ. ಹಿಂದೆಯೇ ಹೇಳಿರುವಂತೆ ‘ಹಿಂದೂ’ ಎಂಬ ಪದ ಒಂದು ಪ್ರದೇಶವನ್ನು ಸೂಚಿಸುತ್ತದೆ. ಹಿಂದೂ ಭೂಭಾಗದವರೆಲ್ಲ ಹಿಂದೂಗಳು ಎಂಬುದು ಸರ್ವವೇದ್ಯ. ಅದೊಂದು ಭೌಗೋಳಿಕ ಪದ. ಹಿಂದೂಗಳಲ್ಲಿ ಹಲವಾರು ಮತ ಮತ್ತು ಪಂಥಗಳಿವೆ. ಪ್ರತಿಯೊಂದು ಮತ ಮತ್ತು ಪ್ರತಿಯೊಂದು ಪಂಥ ಅಸಂಖ್ಯಾತ ಜಾತಿ, ಪಂಗಡಗಳನ್ನೊಳಗೊಂಡಿವೆ. ಅವುಗಳದೇ ಆದ ಸಂಪ್ರದಾಯ ಆಚರಣೆ, ನಂಬಿಕೆಗಳಿವೆ. ಅವುಗಳದೇ ಆದ ತತ್ತ್ವಗಳಿವೆ, ಸಿದ್ಧಾಂತಗಳಿವೆ, ಶಾಸ್ತ್ರಗಳಿವೆ. ಅವುಗಳದೇ ಆದ ಉಪದೇಶಗಳು, ರೀತಿನೀತಿಗಳಿವೆ. ಇವುಗಳೆಲ್ಲವನ್ನೂ ತನ್ನಲ್ಲಿ ಅಂತರ್ಗತವಾಗಿಸಿಕೊಂಡು ಒಂದು ಸರ್ವ ಸಮನ್ವಯ ಜೀವನಶೈಲಿಯನ್ನು ರೂಢಿಸಿಕೊಂಡು ಬಂದಿರುವ ಸಂಕೀರ್ಣ ವ್ಯವಸ್ಥೆಯೇ ಹಿಂದೂಧರ್ಮ. ಅದು ಒಂದು ಮಾನವತಾಧರ್ಮ.

(ಲೇಖಕಿ ನಿವೃತ್ತ ಇತಿಹಾಸ ಪ್ರಾಧ್ಯಾಪಕಿ)

Leave a Reply

Your email address will not be published. Required fields are marked *

Back To Top