20 C
Bengaluru
Saturday, January 18, 2020

ಮೌನತಪಸ್ವಿ ಶ್ರೀ ಶಿವಬಾಲಯೋಗಿ ಮಹಾರಾಜ್

Latest News

ತಲೆಯಲ್ಲಿ ಮೂರು, ಮುಖಕ್ಕೆ ಒಂದು ಬುಲೆಟ್​ ಹೊಕ್ಕಿ ಗಾಯಗೊಂಡರೂ 7 ಕಿ.ಮೀ. ಚಲಿಸಿ ದೂರು ದಾಖಲಿಸಿದ ಮಹಿಳೆ!

ಚಂಡೀಗಢ: ತಲೆಯಲ್ಲಿ ಮೂರು ಹಾಗೂ ಮುಖಕ್ಕೆ ಒಂದು ಬುಲೆಟ್​ ಹೊಕ್ಕು ಗಾಯಗೊಂಡರೂ ಸುಮಾರು 7 ಕಿ.ಮೀ. ಚಲಿಸಿ ಮಹಿಳೆಯೊಬ್ಬಳು ಜಮೀನು ಕಸಿದ ಪ್ರಕರಣದಡಿಯಲ್ಲಿ...

ಮನೆಗೆ ಮರಳುವಾಗ ನಾಪತ್ತೆಯಾಗಿದ್ದ ಭಾರತೀಯ ಮೂಲದ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲೇ ಶವವಾಗಿ ಪತ್ತೆ

ವಾಷಿಂಗ್ಟನ್​: ಕಳೆದ ತಿಂಗಳು ಮನೆಗೆ ಮರಳುತ್ತಿದ್ದವಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬದವರು ದೂರು ದಾಖಲಿಸಿದ್ದ ಭಾರತೀಯ ಮೂಲದ ಅಮೆರಿಕ ಮಹಿಳೆ ತನ್ನ ಕಾರಿನ ಟ್ರಂಕ್​ನಲ್ಲಿ...

ಡಿ.14ರಿಂದ ತಲಕಾಡು ಪಂಚಲಿಂಗ ದರ್ಶನ

ತಲಕಾಡು: ಡಿಸೆಂಬರ್ 14ರಿಂದ ಹತ್ತು ದಿನಗಳ ಕಾಲ ತಲಕಾಡಿನಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಪಂಚಲಿಂಗ ದರ್ಶನ ಮಹೋತ್ಸವವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಜಿಲ್ಲಾಡಳಿತ ವತಿಯಿಂದ ಅಗತ್ಯ...

ಕಿಡ್ನಿ ಕಸಿಗೆ ನೆರವು ನೀಡಲು ಯುವಕನ ಮನವಿ

ವಿಜಯವಾಣಿ ಸುದ್ದಿಜಾಲ ಮಂಡ್ಯ ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಯುವಕ ನೆರವಿಗೆ ಮನವಿ ಮಾಡಿದ್ದಾನೆ.ತಾಲೂಕಿನ ಕೊತ್ತತ್ತಿ ಗ್ರಾಮದ ವಿನೋದ್‌ಕುಮಾರ್(28) ಎರಡೂ ಕಿಡ್ನಿ ವೈಫಲ್ಯದಿಂದ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ ಮಿಸ್​ ಮಾಡಿಕೊಂಡ್ರೆ ನಿಮಗೆ ನಷ್ಟ!

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ...

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್​

ಆಂಧ್ರಪ್ರದೇಶದಲ್ಲಿ ಜನಿಸಿ, ಕರ್ನಾಟಕ ರಾಜ್ಯದಲ್ಲಿ ನೆಲೆನಿಂತು, ಆಧ್ಯಾತ್ಮಿಕ ಪರಿವೇಶಕ್ಕೆ ಹೊಸಬೆಳಕನ್ನು ನೀಡಿದವರು ಶ್ರೀ ಶಿವಬಾಲಯೋಗಿ ಮಹಾರಾಜ್. ಇವರು ಅಖಂಡ ಮೌನತಪಸ್ವಿಗಳಾಗಿ ಪ್ರಸಿದ್ಧಿ ಪಡೆದವರು. ಉತ್ತರಭಾರತದ ತಪಸ್ವೀಜಿ ಮಹಾರಾಜ್ ಅವರಂತೆ, ತಪಸ್ಸಿನ ಮೂಲಕ ಆಧ್ಯಾತ್ಮಿಕ ಶೃಂಗಸ್ಥಿತಿಗೆ ಏರಿದ ಇವರು 60 ಸಂವತ್ಸರಗಳ ಕಾಲ ಇಹದಲ್ಲಿದ್ದು ಆಧ್ಯಾತ್ಮಿಕ ಬೆಳಕನ್ನು ಜನತೆಗೆ ತೋರಿಸಿಕೊಟ್ಟರು.

ಬಾಲ್ಯಜೀವನ: ಆಂಧ್ರಪ್ರದೇಶದ ಪೂರ್ವಗೋದಾವರಿ ಜಿಲ್ಲೆಯ ಒಂದು ಗ್ರಾಮ ದ್ರಾಕ್ಷಾರಾಮ. ಇಲ್ಲಿಂದ ಒಂದು ಕಿ.ಮೀ. ದೂರದಲ್ಲಿ ಇರುವುದೇ ಆದಿವಾರಪು ಪೇಟೆ. ಈ ಗ್ರಾಮದ ಹೊರಗೆ ಗೋದಾವರಿ ನದಿಯ ನಾಲೆಯೊಂದು ಹರಿಯುತ್ತದೆ. ಈ ಗ್ರಾಮದ ಜನ ದೇವಾಂಗ ಸಮುದಾಯದವರು. ಈ ಊರಿನ ಅಕ್ಕಾ ಭೀಮನ್ನ ಮತ್ತು ಶ್ರವಣಮ್ಮ ದಂಪತಿಗೆ ಮಕ್ಕಳಿರಲಿಲ್ಲ. ಆಗ ಹೆಂಡತಿಯ ಒಪ್ಪಿಗೆ ಪಡೆದು ಗೋಲಿಸತ್ಯಂ ಅವರ ಮಗಳು ಪಾರ್ವತಮ್ಮನನ್ನು ಅಕ್ಕಾ ಭೀಮನ್ನ ಎರಡನೇ ಮದುವೆಯಾದರು. ಇವರಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡುಮಕ್ಕಳಾದರು. 1935ರ ಜನವರಿ 24ರಂದು ಹುಟ್ಟಿದ ಗಂಡುಮಗುವಿಗೆ ‘ಸತ್ಯರಾಜು’ ಎಂದು ನಾಮಕರಣವಾಯಿತು. ಸತ್ಯರಾಜುವಿಗೆ 2 ವರ್ಷವಾಗಿದ್ದಾಗ ತಂದೆ ತೀರಿಕೊಂಡರು.

ಪಾರ್ವತಮ್ಮನ ತಂದೆ ಗೋಲಿಸತ್ಯಂ ಕಡುಬಡವ. ಮಗಳು ಮತ್ತು ಮೊಮ್ಮಗನನ್ನು ಸಾಕುವಷ್ಟು ಚೈತನ್ಯ ಆತನಿಗಿರಲಿಲ್ಲ. ಸತ್ಯರಾಜು ಚಿಕ್ಕಂದಿನಲ್ಲಿಯೇ ಮಗ್ಗ ನಡೆಸಿ ಶಾಲೆಗೆ ಹೋಗುತ್ತಿದ್ದ. ತಾತನ ಎದುರು ಕುಳಿತು ಆಧ್ಯಾತ್ಮಿಕ ವಿಷಯಗಳನ್ನು ಕೇಳುತ್ತಿದ್ದ. ಸಂಜೆ ನಡೆಯುವ ಭಜನೆಯಲ್ಲಿ ಭಾಗವಹಿಸುತ್ತಿದ್ದ. ಆಗಾಗ್ಗೆ ಹುಡುಗರ ಜತೆ ಸೇರಿಕೊಂಡು ದೊಣ್ಣೆವರಸೆ ಅಭ್ಯಾಸ ಮಾಡುತ್ತ ಕೌಶಲ ಸಂಪಾದಿಸಿದ. ಗೋಲಿಸತ್ಯಂ ಬಡವನಾಗಿದ್ದರೂ ಆತ್ಮಗೌರವಕ್ಕೇನೂ ಕೊರತೆಯಿರಲಿಲ್ಲ. ಪ್ರಾಮಾಣಿಕವಾಗಿ ಬಾಳಬೇಕು, ನಿಯತ್ತು ತಪ್ಪಬಾರದು ಎಂದು ಮೊಮ್ಮಗನಿಗೆ ಹೇಳುತ್ತಿದ್ದ. ತಾತನ ವ್ಯಕ್ತಿತ್ವ ಸತ್ಯರಾಜುವಿನ ಮೇಲೆ ಪರಿಣಾಮವನ್ನುಂಟುಮಾಡಿತು. ಕಿತ್ತುತಿನ್ನುವ ಬಡತನದಿಂದ ತಾಯಿಯನ್ನು ಪಾರುಮಾಡಬೇಕೆಂದು ನಿಶ್ಚಯಿಸಿದ ಸತ್ಯರಾಜು 5 ರೂ. ಬಂಡವಾಳದೊಡನೆ ವ್ಯಾಪಾರ ಆರಂಭಿಸಿದ. ಅದು ದಿನೇದಿನೆ ಚೆನ್ನಾಗಿ ಕುದುರಿತು. ಬಡತನ ಸ್ವಲ್ಪಮಟ್ಟಿಗೆ ಬಗೆಹರಿಯಿತು.

ಆತ್ಮಬೋಧೆ: 14ನೇ ವಯಸ್ಸಿಗೆ ಕಾಲಿಡುವವರೆಗೆ ಸತ್ಯರಾಜುವಿನ ಜೀವನ ಎಲ್ಲ ಹುಡುಗರಂತೆಯೇ ಇತ್ತು. 1949ರ ಆಗಸ್ಟ್ 7ರಂದು ಅಘಟಿತ ಘಟನೆಯೊಂದು ಜರುಗಿತು. ಅವನು ಸ್ನೇಹಿತ ಗಂಗರಾಜು ಜತೆ ಗೋದಾವರಿ ನಾಲೆಯ ಬಳಿ ಸ್ನಾನಕ್ಕೆಂದು ಹೊರಟ. ಸಮೀಪದ ತಾಳೆ ಮರಗಳ ತೋಪಿನ ನಡುವೆ ಹೋಗುವಾಗ ಮೂರು ತಾಳೆಹಣ್ಣುಗಳು ಅಲ್ಲಿ ಉದುರಿದ್ದವು. ಅವನ್ನು ಬಿಡಿಸಿ ಎಲ್ಲರಿಗೂ ಹಂಚಿ ತಾನೊಂದು ಹಣ್ಣನ್ನು ಹಿಡಿದು ನೋಡುತ್ತಿರುವಾಗ ಸತ್ಯರಾಜುವಿಗೆ ಒಂದು ಬಗೆಯ ಕಂಪನವಾಯಿತು. ಕೈಯಲ್ಲಿದ್ದ ಹಣ್ಣು ಇಲ್ಲವಾಗಿ ಶಿವಲಿಂಗ ಕಾಣಿಸಿತು. ನಂತರ ಅವನೆದುರು 7 ಅಡಿಗಿಂತಲೂ ಎತ್ತರವಿದ್ದ ಜಟಾಧಾರಿ ಋಷಿಯೊಬ್ಬ ಕಾಣಿಸಿಕೊಂಡ. ಆತನ ಕೊರಳಲ್ಲಿ ರುದ್ರಾಕ್ಷಿಮಾಲೆಯಿತ್ತು. ಪ್ರಕಾಶಮಾನ ಬೆಳಕನ್ನು ಚೆಲ್ಲುತ್ತಿದ್ದ ಆ ಜಂಗಮನ ಸೂಚನೆಯಂತೆ ಸತ್ಯರಾಜು ಪದ್ಮಾಸನ ಹಾಕಿ ಕುಳಿತ. ಆ ಜಂಗಮ ಸತ್ಯರಾಜುವಿನ ಭ್ರುಕುಟಿಯನ್ನು ಮುಟ್ಟುತ್ತಿದ್ದಂತೆ ಸತ್ಯರಾಜುವಿಗೆ ಹೊರಪ್ರಪಂಚದ ಅರಿವು ಕಳೆದುಹೋಗಿ ಸಮಾಧಿಸ್ಥಿತಿಗೆ ಇಳಿದ. ಆಧ್ಯಾತ್ಮಿಕ ಅನುಭೂತಿಗೆ ಒಳಗಾದ. ಕಿವಿಗೆ ಓಂಕಾರದ ನಾದವೇ ಕೇಳತೊಡಗಿತು. ಮುಚ್ಚಿದ ಕಣ್ಣುಗಳಲ್ಲಿ ಶಿವಲಿಂಗವೇ ಕಾಂತಿಯುತವಾಗಿ ಕಾಣಿಸತೊಡಗಿತು. ಜತೆಗೆ ಬಂದ ಹುಡುಗರು, ‘ಸಾಧುವಿನಂತೆ ಸತ್ಯರಾಜು ಆಟ ಕಟ್ಟಿದ್ದಾನೆ’ ಎಂದು ತಿಳಿದುಕೊಂಡರು. ನಂತರ ಅವನನ್ನು ಎಬ್ಬಿಸಲು ಹಲವು ಉಪಾಯ ಹೂಡಿದರು. ಆದರೆ, ಪ್ರಜ್ಞೆಯಿಲ್ಲದವನಂತೆ ನಿರ್ಜೀವವಾಗಿ ಕಾಣುವ ಆತನ ಸ್ಥಿತಿಯಿಂದ ಎಲ್ಲರೂ ಗಾಬರಿಗೊಂಡು ಈ ವಿಚಾರ ತಿಳಿಸಲು ಗ್ರಾಮಕ್ಕೆ ಓಡಿದರು. ಸೋದರಮಾವ ಮತ್ತು ನಾಲ್ಕೆ ೖದು ಮಂದಿ ಬಂದರು. ಸತ್ಯರಾಜುವಿಗೆ ಗಾಳಿ ಬಡಿದಿರಬಹುದೆಂದು ಅವರು ಭಾವಿಸಿ ಅದನ್ನು ಓಡಿಸಲು ಬಡಿಗೆಯಿಂದ ಬಡಿಯತೊಡಗಿದರು. ಸಮಾಧಿಸ್ಥಿತಿಗೆ ಭಂಗಬಂತು. ಹೊರಜಗತ್ತಿನ ಬಗೆಗೆ ಸ್ವಲ್ಪ ಪ್ರಜ್ಞೆಮೂಡಿತು. ನಂತರ ಮನೆಗೆ ಕರೆದುಕೊಂಡು ಹೋದರು. ಈ ಸುದ್ದಿ ಕೇಳಿದ ಜನ ಬಂದು ಮುತ್ತತೊಡಗಿದರು. 60ರ ಹರೆಯದ ಪೆದ್ದ ಕಾಮರಾಜನು ಸತ್ಯರಾಜುವಿಗೆ ದಿವ್ಯಶಕ್ತಿಯ ವರದಾನವಾಗಿದೆಯೆಂದೂ ಯೋಗಿಯಾಗಿ ಮಾರ್ಪಟ್ಟಿರುವನೆಂದೂ ಎಲ್ಲರಿಗೂ ತಿಳಿಹೇಳಿದ.

ಜನರ ಕುತೂಹಲ ತಣ್ಣಗಾಗಿತ್ತು. ರಾತ್ರಿ ಹನ್ನೊಂದರ ಸಮಯ. ಶಿವಲಿಂಗದ ದಿವ್ಯದೃಷ್ಟಿ, ದಿವ್ಯಪ್ರಭೆ, ಓಂಕಾರನಿನಾದ ಆತನ ಅನುಭವಕ್ಕೆ ಬರುತ್ತಲೇ ಇತ್ತು, ಆತನನ್ನು ಸೆಳೆಯುತ್ತಲೇ ಇತ್ತು. ಸತ್ಯರಾಜು ಎದ್ದು ದಿವ್ಯದರ್ಶನದ ತಾಣಕ್ಕೆ ಹೇಗೋ ತಲುಪಿದ. ಅಲ್ಲಿ ಮೊದಲಿನಂತೆಯೇ ಕುಳಿತ. ಮಳೆ ಪ್ರಾರಂಭವಾಗಿ ರಾತ್ರಿಯೆಲ್ಲ ಸುರಿಯಿತು. ದಿವ್ಯದೃಷ್ಟಿ ಪಡೆದ ಎರಡನೆಯ ದಿನ ಪಟ್ಟಂಪಟ್ಟಿ ವೀರರಾಜು ಎಂಬ ದಲಿತ ಹುಡುಗ ಹಸಿಹಾಲನ್ನು ತಂದುಕೊಟ್ಟ. ಸತ್ಯರಾಜು ಅದನ್ನು ಸ್ವೀಕರಿಸಿದ. ಗ್ರಾಮದ ಜನರು ಬಂದರು. ಮಳೆ ಇನ್ನೂ ಹನಿಯುತ್ತಿತ್ತು. ತಾಳೆಯೆಲೆಯ ಛತ್ರಿಯನ್ನು ಆತನ ತಲೆಯ ಮೇಲೆ ಜನ ಹಿಡಿದರು. ಗ್ರಾಮಸ್ಥರು ಸತ್ಯರಾಜುವನ್ನು ಹೊತ್ತುಕೊಂಡು ಆತನ ಮನೆಗೊಯ್ದರು. ನಿದ್ದೆ ಕವಿಯಿತು. ಮರುದಿನ ಬೆಳಗ್ಗೆ ಆರೂವರೆಗೆ ಎದ್ದು ಉಪಾಹಾರ ಸೇವಿಸಿದ. ಸ್ವಲ್ಪ ಹೊತ್ತಿಗೆ ಓಂಕಾರದ ಧ್ವನಿ ಆತನ ಮನಸ್ಸನ್ನು ಪುನಃ ಆವರಿಸಿತು. ಆಗ ದಿವ್ಯಸಾಕ್ಷಾತ್ಕಾರ ಪಡೆದ ಜಾಗಕ್ಕೆ ಧಾವಿಸಿ ದಿವ್ಯಶಕ್ತಿಯ ಧ್ಯಾನದಲ್ಲಿ ಸತ್ಯರಾಜು ಮುಳುಗಿಹೋದ. ಅಂದು ಸಂಜೆ ಕಾಕಿನಾಡದಿಂದ ವಾಪಸಾದ ತಾಯಿ ಮತ್ತು ತಾತ ವಿಷಯ ತಿಳಿದು ಗಾಬರಿಗೊಂಡರು. ಸತ್ಯರಾಜು ಹೊರಜಗತ್ತಿನ ಸಂಪರ್ಕವಿಲ್ಲದೆ ಸಮಾಧಿಸ್ಥಿತಿಯಲ್ಲಿದ್ದ. ಅವನ ಮನಸ್ಸು ಐಹಿಕ ಬಂಧನಗಳಿಂದ ಸಂಪೂರ್ಣ ಕಳಚಿಕೊಂಡಿತ್ತು. ಅವನಿಗೆ ದಿವ್ಯರಕ್ಷೆಯಿದೆಯೆಂಬುದು ತಾಯಿಯ ಅನುಭವಕ್ಕೆ ಬಂದಿತು.

ಊರಿನ ಜನ ಸತ್ಯರಾಜುವನ್ನು ‘ಬಾಲಯೋಗಿ’ ಎಂದು ಕರೆಯತೊಡಗಿದರು. ಈ ನಡುವೆ ಗೋರಾ ಮಲ್ಲಣ್ಣ ಎಂಬುವನು ಬಾಲಯೋಗಿಯ ಕ್ಷೇಮವನ್ನು ನೋಡಿಕೊಳ್ಳತೊಡಗಿದ. ಬಾಲಯೋಗಿಯ ತಪಸ್ಸು ಕುರಿತು ಕೆಲವರು ಶಂಕಿಸುತ್ತಲೇ ಇದ್ದರು. ಅಂಥವರಲ್ಲಿ ಆದಿವಾರಪು ಪೇಟೆಯ ದೊರೆ ವೀರರಾಜು ಒಬ್ಬ. ಆತ ತನ್ನ ಗೆಳೆಯ ಸೂರನ್ನನ ಜತೆ ಬಂದು ಪರೀಕ್ಷೆ ಮಾಡಿಸಿದ. ಆಗ ಸೂರನ್ನನಿಗೆ ಬಾಲಯೋಗಿಯ ಸಮಾಧಿಸ್ಥಿತಿ ನಿಜವೆಂದು ಮನವರಿಕೆ ಆಯಿತು. ಈ ವಿಷಯವನ್ನು ಪಾರ್ವತಮ್ಮನಿಗೆ ತಿಳಿಸಿದ. ಆಗ ಆಕೆಗೆ ತನ್ನ ಮಗ ‘ಯೋಗಿ’ ಎಂದು ಮನವರಿಕೆಯಾಯಿತು. ಅವನು ದೊಡ್ಡಪ್ಪನ ಜಮೀನಿನಲ್ಲಿದ್ದ ಆಲದಮರದಡಿ ಕುಳಿತು ಧ್ಯಾನಮಗ್ನನಾದ. 1949ರ ನವೆಂಬರ್​ನಲ್ಲಿ ಚಂಡಮಾರುತ ಬೀಸಿ ಇಡೀ ಪ್ರದೇಶ ನೀರಿನಲ್ಲಿ ಮುಳುಗಿತು. ಆದರೆ, ಬಾಲಯೋಗಿ ಧ್ಯಾನಮಗ್ನನಾಗಿದ್ದ ಪರಿಸರ ಪ್ರಶಾಂತವಾಗೇ ಇತ್ತು. ಅಲ್ಲಿಗೆ ಜನ ಬಂದುಹೋಗಲು ಪ್ರಾರಂಭಿಸಿದರು. ಆಗಾಗ್ಗೆ ಅವರಿಂದ ತಪೋಭಂಗವಾಗುತ್ತಿತ್ತು. ಆಗ ಬಾಲಯೋಗಿ ತಪೋಭೂಮಿಯನ್ನು ಊರಿನ ಸ್ಮಶಾನಕ್ಕೆ ವರ್ಗಾಯಿಸಿಕೊಂಡ. ಜನ ಬಂದುಹೋಗುವುದು ಕಡಿಮೆಯಾಯಿತು. ಆದರೆ, ಕ್ರಿಮಿಕೀಟ, ಹೆಗ್ಗಣಗಳ ಕಾಟ ಹೆಚ್ಚಾಯಿತು. ಒಂದು ರಾತ್ರಿ ಸ್ನಾನಕ್ಕೆ ಹೋಗುವಾಗ ಹಾವೊಂದು ಕಚ್ಚಿ ಮೈಯೆಲ್ಲ ಉರಿಯತೊಡಗಿತು. ಆದರೆ, ಅದರ ಪರಿವೇ ಇಲ್ಲದೆ ಪಂಚಾಕ್ಷರಿ ಮಂತ್ರವನ್ನು ಜಪಿಸತೊಡಗಿದ. ದೇಹದಲ್ಲಿದ್ದ ವಿಷದ ಪ್ರಭಾವ ಮಾಯವಾಯಿತು. ಬಾಲಯೋಗಿಯ ಆರೋಗ್ಯ ಸುಧಾರಿಸಿತು. ಈ ವಿಷಯ ಎಲ್ಲೆಡೆ ಹಬ್ಬಿತು. ಗೋದಾವರಿ ಜಿಲ್ಲೆಯ ಜಿಲ್ಲಾಧಿಕಾರಿ ಬಾಲಸುಂದರಂ ಪಿಳ್ಳೆಗೂ ತಲುಪಿತು. ಧಾರ್ವಿುಕ ಸ್ವಭಾವದ ಆತ ಆಪ್ತಕಾರ್ಯದರ್ಶಿ ಜತೆ ಮಧ್ಯರಾತ್ರಿ ಸ್ಮಶಾನಕ್ಕೆ ಬಂದ. ತನ್ನಿಂದ ಏನಾದರೂ ಆಗಬೇಕೇ? ಎಂದು ಜಿಲ್ಲಾಧಿಕಾರಿ ಕೇಳಿದಾಗ, ಹುಲಿಯ ಚರ್ಮ ಕಳುಹಿಸುವಂತೆ ಸೂಚಿಸಿದ. ಬಾಲಯೋಗಿ ಧ್ಯಾನಮಾಡುತ್ತಿದ್ದ ಸ್ಥಳದಲ್ಲಿ ಗುಡಿಸಿಲೊಂದು ನಿರ್ವಣವಾಯಿತು. ನಂತರ ಸ್ಮಶಾನದ ಪಕ್ಕದಲ್ಲಿದ್ದ ಜಮೀನಿನಲ್ಲಿ ಧ್ಯಾನಮಂದಿರ ನಿರ್ವಣವಾಯಿತು. 1950 ಅಕ್ಟೋಬರ್​ನಲ್ಲಿ ಬಾಲಯೋಗಿ ಅಲ್ಲಿ ನೆಲೆಸಲಾರಂಭಿಸಿದರು. ಅಖಂಡ ತಪಸ್ಸಿನಲ್ಲಿದ್ದುದರಿಂದ ಕೈಕಾಲು ಮರಗಟ್ಟಿದ್ದವು. ಆದರೆ, ಸಮಾಧಿಸ್ಥಿತಿಯಿಂದ ಹೊರಬರಲು ಅವರಿಗೆ ಆಗುತ್ತಿರಲಿಲ್ಲ. ಪಾರ್ವತಮ್ಮ ಮಗನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ತಪಸ್ಸಿದ್ಧಿ: ತಪಸ್ವೀಜಿ ಮಹಾರಾಜ್ 1951ರ ಜನವರಿಯಲ್ಲಿ ಕಾಕಿನಾಡಕ್ಕೆ ಬಂದಿದ್ದಾಗ ಬಲುಸು ಸಾಂಬಮೂರ್ತಿ ಎಂಬುವರೊಡನೆ ಬಾಲಯೋಗಿಯ ವಿಶೇಷ ದರ್ಶನ ಪಡೆದರು. ಈತ ಒಬ್ಬ ಸಿದ್ಧಪುರುಷ; ಮನುಕುಲದ ಆಧ್ಯಾತ್ಮಿಕ ಪುನರುದ್ಧಾರಕ್ಕಾಗಿ ಪುನರ್ಜನ್ಮ ತಾಳಿದ್ದಾನೆಂದು ತಿಳಿಸಿದರು. 1951ರಲ್ಲಿ ಒಮ್ಮೆ ಬಾಲಯೋಗಿಯ ಮೈಯೆಲ್ಲ ಉರಿಯತೊಡಗಿತು. ಮೈ ಸುಡುತ್ತಿದ್ದುದರ ಜತೆಗೆ ದುರ್ವಾಸನೆ ಬರತೊಡಗಿತು. ಆಗ ತಪಸ್ವೀಜಿ ಮಹಾರಾಜ್ ಬೆಂಗಳೂರಿನ ಆಶ್ರಮದಲ್ಲಿದ್ದರು. ಬಾಲಯೋಗಿಗೆ ತಟ್ಟಿದ ಬಾಧೆ ಅವರಿಗೆ ಧ್ಯಾನದಲ್ಲಿ ಅರಿವಾಗಿ ತಾವೇ ತಯಾರಿಸಿದ ತೈಲವೊಂದನ್ನು ಹಿಡಿದು ಕಾಕಿನಾಡಕ್ಕೆ ರೈಲುಹತ್ತಿದರು. ಆಶ್ರಮಕ್ಕೆ ಬಂದು ತೈಲವನ್ನು ಬಾಲಯೋಗಿಯ ಮೈಗೆ ಬಳಿದರು. ಉರಿ ಮತ್ತು ದುರ್ವಾಸನೆ ನಿಂತಿತು. 1952ರ ಅಕ್ಟೋಬರ್​ನಲ್ಲಿ ಮತ್ತೊಮ್ಮೆ ತಪಸ್ವೀಜಿ ಬಂದು ಸೂರ್ಯೋಪಾಸನೆ ಮಂತ್ರವನ್ನು ಉಪದೇಶಿಸಿದರು.

ಬಾಲಯೋಗಿ ತಪಸ್ಸನ್ನು ಮುಂದುವರಿಸಿದರು. 1953ರ ಸೆಪ್ಟೆಂಬರ್ ಕೊನೆಯ ಹೊತ್ತಿಗೆ ದೀರ್ಘ ನಿರ್ವಿಕಲ್ಪ ಸಮಾಧಿಸ್ಥಿತಿಗೆ ತಲುಪಿದರು. ಅಕ್ಟೋಬರ್ 28ರಂದು ಶಿವರೂಪದ ಇಷ್ಟದೈವವೊಂದು ಕಾಣಿಸಿಕೊಂಡಿತು. ಇಷ್ಟದೈವ ಸಾಕ್ಷಾತ್ಕಾರದಿಂದ ಬಾಲಯೋಗಿ ‘ಸಿದ್ಧಪುರುಷ’ ಎನಿಸಿಕೊಂಡರು. ಅವರು ತಪಸ್ಸಿನ ಮೊದಲ ಘಟ್ಟವನ್ನು ದಾಟಿದ್ದರು. ನಂತರ ದಿಕ್​ಸಿದ್ಧಿಗಾಗಿ 12 ವರ್ಷ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ತಪಸ್ಸನ್ನು ಆಚರಿಸಿ ನಾಲ್ಕು ದಿಕ್ಕಿನ ಸಿದ್ಧಿಯನ್ನು ಪಡೆದರು. ಈ ನಡುವೆ ಶಿವಬಾಲಯೋಗಿಯ ದರ್ಶನಕ್ಕೆ ಬಹಳಷ್ಟು ಜನ ಬರಲಾರಂಭಿಸಿದರು. ದಿವ್ಯಗುರುವಿನ ಆದೇಶದಂತೆ ಜನರಲ್ಲಿ ಆಧ್ಯಾತ್ಮಿಕ ಪ್ರವೃತ್ತಿ ಬೆಳೆಸುವುದು, ಸಾಧಕರಿಗೆ ಆಧ್ಯಾತ್ಮಿಕ ಮಾರ್ಗ ತೋರಿಸುವುದು ಮೊದಲಾಯಿತು. ಸಂಚಾರಕ್ಕೆ ತೊಡಗಿಕೊಂಡ ಶಿವಬಾಲಯೋಗಿ ಮಹಾರಾಜ್, ದುಃಖಿತರಿಗೆ ಮತ್ತು ದೇಹಬಾಧೆಗೆ ಒಳಗಾದವರಿಗೆ ಸಾಂತ್ವನ ನೀಡತೊಡಗಿದರು. 1957ರಲ್ಲಿ ಆದಿವಾರಪು ಪೇಟೆಯಲ್ಲಿ ಆಶ್ರಮವೊಂದು ಅಸ್ತಿತ್ವಕ್ಕೆ ಬಂದಿತು. ಅಲ್ಲಿ ನಿತ್ಯದರ್ಶನ, ಕೀರ್ತನ, ಧ್ಯಾನ, ದೀಕ್ಷೆ ಮತ್ತಿತರ ಚಟುವಟಿಕೆಗಳು ಆರಂಭಗೊಂಡವು.

ಅಧ್ಯಾತ್ಮಪ್ರಚಾರ: 1963ರ ಮಾರ್ಚ್ 21ರಂದು ಮೊದಲ ಪ್ರವಾಸ ಪ್ರಾರಂಭಿಸಿದ ಶಿವಬಾಲಯೋಗಿಯವರು, ಕಾಕಿನಾಡದ ತಪಸ್ವೀಜೀ ಮಹಾರಾಜರ ಆಶ್ರಮದಲ್ಲಿ ತಂಗಿದ್ದು ಮದರಾಸಿಗೆ ಹೊರಟರು. ನಂತರ ಬೆಂಗಳೂರಿಗೆ ಬಂದು ದೊಡ್ಡಬಳ್ಳಾಪುರದಲ್ಲಿ ಸಣ್ಣ ಶಾಖಾ ಆಶ್ರಮವನ್ನು ಆರಂಭಿಸಿದರು. ಕಾಸೆಟ್ಟಿ ಶ್ರೀನಿವಾಸಲು ಎಂಬುವವರು ಬೆಂಗಳೂರಿನಲ್ಲಿ ಆಶ್ರಮ ಸ್ಥಾಪಿಸಬೇಕೆಂದು ಕೋರಿದರು. ಬನ್ನೇರುಘಟ್ಟ ರಸ್ತೆಯಲ್ಲಿ 1963ರ ಆಗಸ್ಟ್ 7ರಂದು ಆಶ್ರಮ ಸ್ಥಾಪಿತವಾಯಿತು. 1965ರಲ್ಲಿ ಡೆಹ್ರಾಡೂನ್​ಗೆ ಹೊರಟ ಅವರು, ಹರಿದ್ವಾರ ರಸ್ತೆಯಲ್ಲಿರುವ ಮೊಕಾಂಪುರದ ಉದ್ಯಾನಕುಟೀರದಲ್ಲಿ ಬಿಡಾರ ಹೂಡಿದ್ದರು. ಮಾತಾ ಆನಂದಮಯಿ ಆಶ್ರಮಕ್ಕೂ ಭೇಟಿಕೊಟ್ಟರು. ಮಹಾರಾಣಿ ಕೈಲಾಸಕುಮಾರಿದೇವಿ ಇವರ ಕುಟೀರಕ್ಕೆ ದರ್ಶನಾರ್ಥವಾಗಿ ಬಂದು ಧ್ಯಾನದೀಕ್ಷೆ ಪಡೆದರು. ಅವರ ಕುಟುಂಬವರ್ಗದವರೂ ಭಕ್ತರಾದರು. ಚಿಕ್ಕದಾಗಿ ಶುರುವಾದ ಆಧ್ಯಾತ್ಮಿಕ ಚಟುವಟಿಕೆಗಳು ದೊಡ್ಡದಾಗಿ ಬೆಳೆಯತೊಡಗಿದವು. 30 ಲಕ್ಷಕ್ಕೂ ಹೆಚ್ಚು ಮಂದಿಗೆ ಸ್ವಾಮೀಜಿ ಧ್ಯಾನದೀಕ್ಷೆ ನೀಡಿದರು. ಅಸಂಖ್ಯಾತ ಜನ ತಮ್ಮ ದೈಹಿಕ ಮತ್ತು ಮಾನಸಿಕ ತೊಂದರೆಗಳನ್ನು ಅವರಿಂದ ನಿವಾರಿಸಿಕೊಂಡರು. 1968 ಆಗಸ್ಟ್ 7ರಿಂದ ಒಂದು ವರ್ಷಕಾಲ ಅವರು ತಪಸ್ಸನ್ನು ಆಚರಿಸಿದರು. ಇದು ದೈವದ ಆಣತಿಯಾಗಿತ್ತು.

ಶಿವಬಾಲಯೋಗಿಗಳಿಂದ ಧ್ಯಾನದೀಕ್ಷೆ ಸ್ವೀಕರಿಸಿದವರಲ್ಲಿ ಆಂಧ್ರದ ಬಿಕಿನಿ ಸರಸ್ವತಿಯಮ್ಮ, ಹುಚ್ಚಯ್ಯ, ಪಾಟಿಯಾಲ ಸಂಸ್ಥಾನದ ರಾಜಮಾತೆ ರೇವತಿದೇವಿ, ಸತ್ಯಶಿವಬಾಲಯೋಗಿ, ವೆಂಕಟರಾಮಶೆಟ್ಟಿ ಪ್ರಮುಖರು. ಸ್ವಾಮೀಜಿ ಅನೇಕ ಆಧ್ಯಾತ್ಮಿಕ ಕಲಾಪಗಳನ್ನು ನಡೆಸಿದರು. ಅವುಗಳಲ್ಲಿ ಧ್ಯಾನವೇ ಪ್ರಮುಖವಾದುದು. ಅವರು ಪ್ರವಚನ ನೀಡುತ್ತಿರಲಿಲ್ಲ, ಆದರೆ ಭಾವಸಮಾಧಿಗೆ ಪ್ರಾಮುಖ್ಯ ನೀಡುತ್ತಿದ್ದರು. 1977ರ ಆಗಸ್ಟ್ 7ರಂದು ಬೆಂಗಳೂರಿನ ಜೆ.ಪಿ.ನಗರದಲ್ಲಿ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರ ಪ್ರಾರಂಭವಾಯಿತು. ಈ ನಡುವೆ 3 ಬಾರಿ ವಿದೇಶಪ್ರವಾಸ ಕೈಗೊಂಡರು. ಬೆಂಗಳೂರಿನ ಆಶ್ರಮದಲ್ಲಿದ್ದಾಗ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಸುತ್ತೂರುಮಠದ ಹಿರಿಯ ಶ್ರೀಗಳಾದ ಶ್ರೀರಾಜೇಂದ್ರಸ್ವಾಮಿಗಳು, ಹಿಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್, ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್, ಹಿಂದಿನ ರಾಜ್ಯಪಾಲ ಟಿ.ಎನ್.ಚತುರ್ವೆದಿ ಮುಂತಾದ ಗಣ್ಯರು ಅನುಗ್ರಹಕ್ಕೆ ಪಾತ್ರರಾದರು. ಶಿವಬಾಲಯೋಗಿಗಳು 1994ರ ಮಾರ್ಚ್ 28ರಂದು ಆದಿವಾರಪು ಪೇಟೆಯ ಆಶ್ರಮದಲ್ಲಿ ಯೋಗನಿದ್ರೆಗೆ ಸಂದರು. ಏಪ್ರಿಲ್ 2ರಂದು ಮಹಾಸಮಾಧಿ ಹೊಂದಿದರು.

60 ವರ್ಷ ಕಾಲ ಧ್ಯಾನ ಮತ್ತು ತಪಸ್ಸಿನ ಮೂಲಕ ಆಧ್ಯಾತ್ಮಿಕ ಅನುಭೂತಿಯನ್ನು ಜನತೆಗೆ ಸಾರಿದ ಶ್ರೀಶಿವಬಾಲಯೋಗಿಗಳು, ‘ಭಾವಧ್ಯಾನದ ಮೂಲಕವೇ ಮನಃಪರಿವರ್ತನೆ ಸಾಧ್ಯ’ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಉಪನಿಷತ್ತು ಸಾರಿದ ‘ಜೀವ-ಬ್ರಹ್ಮೈಕ್ಯತತ್ತ್ವ’ವನ್ನು ತಪಸ್ಸಿನ ಮೂಲಕವೇ ಸಾಕ್ಷಾತ್ಕರಿಸಿ ತೋರಿಸಿಕೊಟ್ಟರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...