21 C
Bengaluru
Wednesday, January 22, 2020

ಸಾಧನೆಯ ಮೇರು, ತ್ಯಾಗ ವೈರಾಗ್ಯದ ಭವ್ಯಮೂರ್ತಿ

Latest News

ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ಆರೋಪ ತನಿಖೆ ನಡೆಸಿ ವಾರದೊಳಗೆ ವರದಿ‌ ಸಲ್ಲಿಸಿ ಎಂದು ಸೂಚಿಸಿದ ಸಚಿವ ಕೆ.ಎಸ್.ಈಶ್ವರಪ್ಪ

ಹಾಸನ: ಅರಸೀಕೆರೆ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಅವ್ಯವಹಾರ ನಡೆದ ಆರೋಪವಿದ್ದು ತನಿಖೆ ನಡೆಸಿ ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವ...

ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಹೊತ್ತು 6 ಕಿ.ಮೀ ಸಾಗಿ ಆಸ್ಪತ್ರೆಗೆ ದಾಖಲಿಸಿದ ಯೋಧರ ತಂಡ

ಬಿಜಾಪುರ್​: ಸಿಆರ್​ಪಿಎಫ್​ ಯೋಧರ ತಂಡವೊಂದು ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಮಂಚದ ಮೇಲೆ ಹಾಕಿಕೊಂಡು ಸುಮಾರು 6 ಕಿ.ಮೀ ದೂರದ ಆಸ್ಪ್ರತೆಗೆ ನೆಡದುಕೊಂಡೇ...

ನೇಪಾಳ ದುರಂತ| ಮೂವರು ಮಕ್ಕಳ ಹುಟ್ಟುಹಬ್ಬಕ್ಕೆ ತೆರಳಿದ್ದ ಕೇರಳ ಕುಟುಂಬ ಮರಳಿದ್ದು ಶವವಾಗಿ

ಕೊಚ್ಚಿ: ನೇಪಾಳ ಪ್ರವಾಸಕ್ಕೆಂದು ತೆರಳಿ ಹೋಟೆಲ್​ವೊಂದರಲ್ಲಿ ದುರಂತ ಸಾವಿಗೀಡಾದ ಕೇರಳ ಮೂಲ ಕುಟುಂಬದ ಕರುಣಾಜನಕ ಕತೆಯಿದು. ಮೃತ ತಿರುವನಂತಪುರ ನಿವಾಸಿ ಪ್ರವೀಣ್​ ಮತ್ತು ಸರಣ್ಯ...

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು...

ಕುಮಾರಸ್ವಾಮಿ ದುಷ್ಕರ್ಮಿಗಳಿಗೆ ಬೆಂಬಲ ಕೊಡುತ್ತಿದ್ದಾರೆ ಎನ್ನುವ ಭಾವನೆ ಮೂಡುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ

ಹಾಸನ: ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅನುಮಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ...

ಶೃಂಗೇರಿ ಶಾರದಾಪೀಠದ ಪಂಚರತ್ನರಲ್ಲಿ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀಸ್ವಾಮಿಗಳು ಸದಾ ಸ್ಮರಣೀಯರು. ಶಾರದಾಪೀಠದ ಮಾಣಿಕ್ಯರೆಂದು ಪ್ರಥಿತರಾದ ಶ್ರೀಚಂದ್ರಶೇಖರ ಭಾರತೀಸ್ವಾಮಿಗಳನ್ನು ಪೀಠದ ಉತ್ತರಾಧಿಕಾರಿ ಮಾಡಿದ್ದಲ್ಲದೆ; ಕಾಲಟಿಯಲ್ಲಿ ಶಂಕರಭಗವತ್ಪಾದರ ಪುಣ್ಯಕ್ಷೇತ್ರವನ್ನು ಲೋಕದ ಬೆಳಕಿಗೆ ತಂದ ಕೀರ್ತಿ ಇವರದು. ಆಧುನಿಕ ಭಾರತವು ಪಲ್ಲಟಗೊಳ್ಳುತ್ತಿರುವ ಸಂದರ್ಭದಲ್ಲಿ ಸನಾತನ ಭಾರತಸಂಸ್ಕೃತಿಯ ಹಿರಿಮೆಯನ್ನು ಎತ್ತಿ ಹಿಡಿದ ಯಶಸ್ಸು ನೃಸಿಂಹಭಾರತೀ ಸ್ವಾಮಿಗಳಿಗೆ ಸಲ್ಲುತ್ತದೆ.

ವಿದ್ಯಾಭ್ಯಾಸ-ಸಂನ್ಯಾಸ: ಬೆಂಗಳೂರು ಗ್ರಾಮಾಂತರಕ್ಕೆ ಸೇರಿದ ಕುಣಿಗಲಿಗೆ ಬೇರೆಬೇರೆ ಕಡೆಯಿಂದ ಅನೇಕ ಬ್ರಾಹ್ಮಣ ಕುಟುಂಬಗಳು ಬಂದವು. ಅವುಗಳಲ್ಲಿ ಮುಲಕನಾಡು ಬ್ರಾಹ್ಮಣ ಕುಟುಂಬವೂ ಒಂದು. ಆ ಕುಟುಂಬದ ಘನಪಾಠಿಗಳು, ವೇದಾಧ್ಯಯನ ಸಂಪನ್ನರು ನರಸಿಂಹಶಾಸ್ತ್ರೀ. ಇವರ ತಮ್ಮನೇ ಪ್ರಖ್ಯಾತ ವಿದ್ವಾಂಸರೂ ಸಾಕ್ಷಾತ್ ದಕ್ಷಿಣಾಮೂರ್ತಿ ಸ್ವರೂಪರೆಂದು ಹೆಸರಾದ ಶ್ರೀರಾಮ ಶಾಸ್ತ್ರಿಗಳು. ಇವರ ಸುಪುತ್ರರೇ ಮುಂದೆ ಶೃಂಗೇರಿ ಪೀಠಕ್ಕೇರಿದ ಶ್ರೀಶಿವಾಭಿನವ ಮಹಾಸ್ವಾಮಿಗಳು. ಶ್ರೀರಾಮ ಶಾಸ್ತ್ರಿಗಳ ಧರ್ಮಪತ್ನಿ ಲಕ್ಷ್ಮಮ್ಮ. ಈಕೆ ಪೈಂಗಳ ಸಂವತ್ಸರ ಫಾಲ್ಗುಣಮಾಸದ ಬಹುಳ ಏಕಾದಶೀ ದಿವಸ (24.02.1858) ಪುತ್ರರತ್ನಕ್ಕೆ ಜನ್ಮ ಕೊಟ್ಟರು. ಜನ್ಮನಾಮ ಶಿವಸ್ವಾಮಿ. ಶ್ರೀರಾಮ ಶಾಸ್ತ್ರಿಗಳು ಮಗುವಿನ ಜಾತಕವನ್ನು ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರಿಗೆ ಒಪ್ಪಿಸಿದರು. ಜ್ಯೋತಿಷ್ಯಶಾಸ್ತ್ರದ ಜಾತಕಫಲವನ್ನು ತಿಳಿದಿದ್ದ ಮಹಾರಾಜರು ಜಾತಕವನ್ನು ನೋಡಿ ‘ಶಾಸ್ತ್ರೀಗಳೇ, ಈ ಶಿಶುವು ಸಾಧಾರಣನಲ್ಲ, ಮುಂದೆ ನಮಗೂ ನಿಮಗೂ ಸ್ವಾಮಿಯಾಗುತ್ತಾನೆ, ಗುರುವಾಗುತ್ತಾನೆ’ ಎಂದರು! ಮಗು ಶಿವಸ್ವಾಮಿಯ ಸ್ವಭಾವ ನಡೆನುಡಿ ವಿಸ್ಮಯಕಾರಿಯಾಗಿದ್ದುವು. ಆಟ-ಪಾಠಗಳಲ್ಲಿ ಬೇರೆಯ ಮಕ್ಕಳೊಡನೆ ಸೇರುತ್ತಿರಲಿಲ್ಲ. ಮಗುವಿಗೆ ಮನೆಯೇ ಮೊದಲ ಪಾಠಶಾಲೆಯಾಯಿತು. ಆಗಾಗ್ಗೆ ತಂದೆಯ ಜತೆ ಸ್ತೋತ್ರಗಳನ್ನು ಹೇಳಿಕೊಳ್ಳುತ್ತ ನರ್ತನ ಮಾಡುತ್ತಿತ್ತು. ಆಗ ಶಿವಸ್ವಾಮಿಗೆ ಇನ್ನೂ ಎರಡು ವರ್ಷ ತುಂಬಿರಲಿಲ್ಲ. ತಂದೆ ರಾಮ ಶಾಸ್ತ್ರಿಗಳು ವಿಧಿವಶರಾದರು; ಹೆಂಡತಿ ಲಕ್ಷ್ಮಮ್ಮ ದಗ್ಧರಾದರು. ಹಿರಿಯಮಗ ಲಕ್ಷ್ಮೀನರಸಿಂಹಶಾಸ್ತ್ರಿಗಳ ಮೇಲೆ ಸಂಸಾರದ ಹೊರೆ ಬಿತ್ತು. ಆದರೆ, ದುರ್ದೈವ ಎಂಬಂತೆ ಶಿವಸ್ವಾಮಿ ತಾಯಿಯನ್ನೂ ಕಳೆದುಕೊಂಡರು. ಆಗ ಶಿವಸ್ವಾಮಿ ಐದುವರ್ಷದ ಬಾಲಕ.

ಲಕ್ಷ್ಮೀನರಸಿಂಹಶಾಸ್ತ್ರಿಗಳು ತಮ್ಮನ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಅನಂತರ ಉಪನಯನ ಮಾಡಿ, ವೇದಾರಂಭಣ ಮಾಡಿಸಿದರು. ಶೃಂಗೇರಿಯ ಜಗದ್ಗುರುಗಳಾಗಿದ್ದ ಶ್ರೀವೃದ್ಧನೃಸಿಂಹಭಾರತೀ ಸ್ವಾಮಿಗಳು ಪೀಠಕ್ಕೆ ಉತ್ತರಾಧಿಕಾರಿಯನ್ನು ಹುಡುಕುತ್ತಿದ್ದರು. ಒಮ್ಮೆ ಮೈಸೂರಿಗೆ ಬಂದಾಗ, ಶಿವಸ್ವಾಮಿಯೇ ಉತ್ತರಾಧಿಕಾರಿಯೆಂದು ಅವರು ತೀರ್ವನಿಸಿಕೊಂಡರು. ಈ ಅಭಿಪ್ರಾಯವನ್ನು ಮೈಸೂರಿನ ಮಹಾರಾಜರ ಗಮನಕ್ಕೂ ತಂದರು. ಆಮೇಲೆ ಲಕ್ಷ್ಮೀನರಸಿಂಹ ಶಾಸ್ತ್ರಿಗಳನ್ನು ಸ್ವಾಮಿಗಳು ತಮ್ಮಲ್ಲಿಗೆ ಕರೆಸಿಕೊಂಡು ಶಿವಸ್ವಾಮಿಯನ್ನು ಮಠಕ್ಕೆ ನೀಡಬೇಕೆಂದು ಕೇಳಿಕೊಂಡಾಗ ಶಾಸ್ತ್ರಿಗಳು ಇದಕ್ಕೆ ಸಮ್ಮತಿಸಲಿಲ್ಲ. ಆಗ ಶ್ರೀವೃದ್ಧನೃಸಿಂಹಭಾರತೀ ಸ್ವಾಮಿಗಳು ಮಹಾರಾಜರ ಗಮನಕ್ಕೆ ಈ ವಿಷಯವನ್ನು ತಂದಾಗ ಪೀಠಾಧಿಕಾರದ ಅವರೋಹಣಕ್ಕೆ ಅನುಕೂಲವಾಗಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಶಿಷ್ಯ ಪರಿಗ್ರಹಣ ಸಮಾರಂಭವು 1868ರಲ್ಲಿ ನೆರವೇರಿತು. ಲಕ್ಷ್ಮೀವೆಂಕಟರಮಣ ದೇವಸ್ಥಾನಕ್ಕೆ ಕರೆದೊಯ್ದು ಮಹಾವಾಕ್ಯಗಳನ್ನು ಉಪದೇಶಮಾಡಿ ‘ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ’ ಎಂದು ಯೋಗಪಟ್ಟವನ್ನು ಅನುಗ್ರಹಿಸಿದರು. ಅನಂತರ ಬಾಲಯತಿಗೆ ತಮ್ಮ ಬಳಿಯೇ ಕೃಷ್ಣಾಜಿನವನ್ನು ಹಾಕಿಸಿ ಮಲಗಿಸಿದರು. ಆಗ ನಿದ್ರೆಯಲ್ಲಿ ‘ಸರ್ವೇಹಂ ಸರ್ವೇಹಂ ಸರ್ವೇಹಂ’ ಎಂದು ಮೂರು ಬಾರಿ ಉಚ್ಚರಿಸಿದ್ದನ್ನು ಕೇಳಿ ಆನಂದಿತರಾದರು. ಕಣಗಾಲ್ ರಾಮಶಾಸ್ತ್ರಿಗಳು ಬಾಲಯತಿಗಳಿಗೆ ಬಾಲಪಾಠಗಳನ್ನು ಆರಂಭಿಸಿದರು. ಶ್ರೀವೃದ್ಧನೃಸಿಂಹ ಭಾರತೀಸ್ವಾಮಿಗಳು ಶೃಂಗೇರಿಗೆ ಹಿಂತಿರುಗಿದ ನಂತರ ಪರಂಪರೆಯಿಂದ ಬಂದ ಶ್ರೀವಿದ್ಯಾ, ನಾರಸಿಂಹ, ದಕ್ಷಿಣಾಮೂರ್ತಿ ಮಂತ್ರಗಳನ್ನು ಉಪದೇಶ ಮಾಡಿ ಅವುಗಳ ಉಪಾಸನಾಕ್ರಮವನ್ನು ಬೋಧಿಸಿದರು. ಪತಂಜಲಿ ಋಷಿ ಪ್ರಣೀತವಾದ ಯೋಗಮಾರ್ಗದ ಅನುಷ್ಠಾನಕ್ರಮ ಹಾಗೂ ಜ್ಞಾನಮಾರ್ಗದ ನಿರ್ಗಣೋಪಾಸನೆಯ ಕ್ರಮಗಳನ್ನು ಉಪದೇಶ ಮಾಡಿ, ಸಾಧನೆಯ ಮಾರ್ಗವನ್ನು ತೋರಿಸಿಕೊಟ್ಟರು.

ಈ ನಡುವೆ ಶ್ರೀವೃದ್ಧನೃಸಿಂಹ ಭಾರತೀ ಸ್ವಾಮಿಗಳಿಗೆ ಎಂಬತ್ತು ವರ್ಷ ದಾಟಿತ್ತು. ಅವರ ಶರೀರ ಸೊರಗಿತ್ತು. ಅರಮನೆಯ ಕೋರಿಕೆ ಮೇರೆಗೆ ರಾಜಕುಮಾರ ಚಾಮರಾಜ ಒಡೆಯರಿಗೆ ಶಿವಪಂಚಾಕ್ಷರಿ ಮಂತ್ರೋಪದೇಶವನ್ನು ಅವರು ನೀಡಿದರು. ಶೃಂಗೇರಿಗೆ ಹಿಂತಿರುಗಿದ ನಂತರ ಮಠದ ಎಲ್ಲಾ ಆಡಳಿತವನ್ನು ಶಿಷ್ಯರಿಗೆ ವಹಿಸಿದರು. ಸ್ವಾಮಿಗಳ ಶರೀರ ಗಳಿತವಾಗಿತ್ತು. 1879ರಲ್ಲಿ ಸ್ವಾಮಿಗಳು ಪಾಂಚಭೌತಿಕ ಶರೀರವನ್ನು ಬಿಟ್ಟು ಸರ್ವವ್ಯಾಪಿಯಾದರು. ಆಗ ಶ್ರೀಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತಿ ಸ್ವಾಮಿಗಳಿಗೆ ಇಪ್ಪತ್ತೆರಡರ ಪ್ರಾಯ! ಶೃಂಗೇರಿ ಪೀಠದ ಸಂಪ್ರದಾಯದಂತೆ ಶ್ರೀಗಳವರಿಗೆ ವ್ಯಾಖ್ಯಾನ ಪೀಠದಲ್ಲಿ ಪಟ್ಟಾಭಿಷೇಕ ಮಾಡಲಾಯಿತು. ಗುರುಗಳ ನಿರ್ಯಾಣದ ನಂತರ ಯೋಗಮಾರ್ಗದ ಸಾಧನೆಯನ್ನು ತೀವ್ರಗೊಳಿಸಿದರು. ಹಠಯೋಗ, ರಾಜಯೋಗ, ಅಷ್ಟಾಂಗಯೋಗದ ವಿಶೇಷ ಅನುಭವವನ್ನು ಸಾಧಿಸಿದರು. ಹಠಯೋಗದ ಖೇಚರೀ ಸಿದ್ಧಿಗೆ ಸಾಧನೆಯನ್ನು ಮುಂದುವರೆಸಿದರು. ಕಷ್ಟಸಾಧ್ಯವಾದ ಲಂಬಿಕಾಯೋಗದಲ್ಲಿ ಸಾಧನೆ ಮಾಡುತ್ತಿರುವಾಗ ಉತ್ತರದೇಶದ ವಿರಕ್ತರಾದ ಶ್ರೀಗಂಗಾದಾಸರು ಶೃಂಗೇರಿಗೆ ಬಂದಿದ್ದರು. ಅವರ ಮೂಲಕ ಖೇಚರೀಸಿದ್ಧಿಯನ್ನು ಕುರಿತು ರ್ಚಚಿಸಿದರು. ಶ್ರೀಗಳು ಯೋಗಾಭ್ಯಾಸದ ಎಲ್ಲಾ ಪ್ರಭೇದಗಳಲ್ಲಿಯೂ ಸಾಧನೆ ನಡೆಸಿದ್ದುಂಟು.

ದೇಶಸಂಚಾರ: ಶ್ರೀಗಳು ಶೃಂಗೇರಿಯಲ್ಲಿ ಸಾಧನೆ ಮುಗಿಸಿದ ವೇಳೆಗೆ ದೇಶಾದ್ಯಂತ ಧರ್ಮಪ್ರಸಾರಾರ್ಥವಾಗಿ ಸಂಚಾರ ಕೈಗೊಳ್ಳಬೇಕೆಂಬ ಕರೆಗಳು ಎಲ್ಲೆಡೆಯಿಂದ ಬರಲಾರಂಭಿಸಿದುವು. ಉತ್ತರ ದೇಶದ ಶಿಷ್ಯರಾದ ಅಣ್ಣಾಸಾಹೇಬ ವಿಂಚೂರ್​ಕರ್ ಉತ್ತರಭಾರತದ ಸಂಚಾರಕ್ಕೆ ಅವಸರಿಸಿದರು. ಫೆಬ್ರವರಿ 1886ರ ಒಂದು ದಿನ ಪುಣ್ಯಮುಹೂರ್ತದಲ್ಲಿ ಕ್ಷೇತ್ರಯಾತ್ರೆಗೆ ಹೊರಟರು. ಅವರು ಚಿಕ್ಕಮಗಳೂರು-ಶಿವಮೊಗ್ಗ ಜಿಲ್ಲೆಗಳಲ್ಲಿ ಹನ್ನೊಂದು ತಿಂಗಳು ಸಂಚರಿಸಿ ಗೋಕರ್ಣಕ್ಕೆ ಬಂದರು. ಅಲ್ಲಿಂದ ಉತ್ತರಕನ್ನಡ ಮುಗಿಸಿ ಧಾರವಾಡಕ್ಕೆ ದಯಮಾಡಿಸಿದರು. ಅಲ್ಲಿ ಶಂಕರಾಚಾರ್ಯ ಪಾಠಶಾಲೆಯನ್ನು ಪ್ರಾರಂಭಿಸಿದರು. ಅನಂತರ ಜಮಖಂಡಿಗೆ ಬಂದರು. ಅಲ್ಲಿಯ ರಾಜ ಅಪ್ಪಾಸಾಹೇಬನು ಸ್ವಾಮಿಗಳ ದರ್ಶನ ಮಾತ್ರದಿಂದಲೇ ಪರವಶನಾಗಿಬಿಟ್ಟ. ಅನಂತರ ಮೀರಜ್, ಸಾಂಗ್ಲಿ, ಕುರಂದವಾಡಗಳಲ್ಲಿ ಸಂಚರಿಸಿ ಕೊಲ್ಹಾಪುರದ ಮಹಾಲಕ್ಷ್ಮಿಯನ್ನು ಅರ್ಚಿಸಿದರು. ಬಳ್ಳಾರಿಗೆ ದಯಮಾಡಿಸಿ ಅಲ್ಲಿ ವ್ಯಾಸಪೂಜೆ ಮಾಡಿ ಚಾತುರ್ವಸ್ಯ ಕೈಗೊಂಡರು. ಆಮೇಲೆ ರಾಯದುರ್ಗಕ್ಕೆ ಬಂದು ಬೆಳಗುಪ್ಪೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು. ಅವರು ಉಳಿದುಕೊಂಡಿದ್ದ ಮನೆಗೆ ಒಂದು ರಾತ್ರಿ ಕಳ್ಳರು ಬಂದು ದೇವರ ಸಂಪುಟವನ್ನು ಹೊತ್ತೊಯ್ದರು. ಸ್ವಾಮಿಗಳು ಬೆಳಿಗ್ಗೆ ಪೂಜೆಗೆ ಕುಳಿತಾಗ ಕಳ್ಳತನವಾದ ವಿಷಯ ತಿಳಿಯಿತು. ಅವರ ಮುಖ ಉಗ್ರತರವಾಯಿತು. ಸ್ವಾಮಿಗಳು ಶ್ರೀನಾರಸಿಂಹ ಮಂತ್ರೋಪಾಸನೆಗೆ ತೊಡಗಿದರು. ಕಠಿನ ವ್ರತಕ್ಕೆ ಇಳಿದ ಸ್ವಾಮಿಗಳು ಉಗ್ರನರಸಿಂಹನ ಉಪಾಸಕರಾದರು. ಇದಾದ ಐದನೆಯ ದಿನಕ್ಕೆ ದೇವರ ಸಂಪುಟ ರೈತನೊಬ್ಬನ ಹೊಲದಲ್ಲಿ ಸಿಕ್ಕಿತು. ಈ ಪ್ರಸಂಗದಿಂದ ಚೇತರಿಸಿಕೊಂಡ ಶ್ರೀಗಳು 1889ನೆಯ ಫೆಬ್ರವರಿ 13 ರಂದು ಶ್ರೀಶಾರದಾ ಸನ್ನಿಧಿಗೆ ಬಂದು ಸೇರಿದರು!

ಸ್ವಾಮಿಗಳು ಶೃಂಗೇರಿಯಲ್ಲಿ ಎರಡು ವರ್ಷವಿದ್ದು ತಪೋನುಷ್ಠಾನ ಮತ್ತು ಗ್ರಂಥ ಪರಿಶೀಲನೆಗಳಲ್ಲಿಯೇ ಬಹುಕಾಲ ಕಳೆದರು. ಅನಂತರ ಎರಡನೆಯ ಸಂಚಾರವನ್ನು ಪ್ರಾರಂಭಿಸಿದರು. ಕಿಗ್ಗ, ಚಿಕ್ಕಮಗಳೂರು, ಬೇಲೂರು ಹಾಸನದ ಮೂಲಕ ಮೈಸೂರಿಗೆ ದಯಮಾಡಿಸಿದರು. ಮಹಾರಾಜರು ಶ್ರದ್ಧಾ-ಭಕ್ತಿಪೂರ್ವಕ ಸ್ವಾಗತಿಸಿದರು. ಮೈಸೂರಲ್ಲಿ ವ್ಯಾಸಪೂಜೆ, ಚಾತುರ್ವಸ್ಯ ವ್ರತ, ಸಭಾಗಣಪತಿ ಸದಸ್ಸು ಹಾಗೂ ಶರನ್ನವರಾತ್ರಿ ಉತ್ಸವಗಳನ್ನು ನೆರವೇರಿಸಿದರು. ಅದೇಕಾಲಕ್ಕೆ ಊರಿನ ಗಣ್ಯರು ಎತ್ತಿದ ವಿಗ್ರಹಾರಾಧನೆ, ಬಾಲ್ಯವಿವಾಹ, ಸಮುದ್ರಪರ್ಯಟನ ಕುರಿತ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿದರು. ಮೈಸೂರಿನ ಸಂಸ್ಕೃತ ಮಹಾಪಾಠಶಾಲೆಯಲ್ಲಿ ಶ್ರೀವಿದ್ಯಾಗಣಪತಿಯನ್ನು ಸ್ಥಾಪಿಸಿದರು. ಅನಂತರ ಮದರಾಸಿನ ಹಲವೆಡೆ ಸಂಚರಿಸಿದರು. ಆಗ ಅಲ್ಲಿದ್ದ ಆಸ್ತಿಕರು ಶ್ರೀಶಂಕರಸಭಾ ಸಂಘ-ಸಂಸ್ಥೆಗಳನ್ನು ಜಿಲ್ಲೆಜಿಲ್ಲೆಗಳಲ್ಲಿ ಪ್ರಾರಂಭಿಸಿದರು. ಅನೇಕ ದೇವಾಲಯಗಳು ಜೀಣೋದ್ಧಾರಗೊಂಡವು. ಮಧುರೈಗೆ ಬಂದು ಮೀನಾಕ್ಷಿಯನ್ನು ಅರ್ಚಿಸಿದರು. ಗುರುವರ್ಯರು ನರಸಿಂಹವನದಲ್ಲಿ ತಪೋನುಷ್ಠಾನದಲ್ಲಿ ಮಗ್ನರಾದರು. ಅವರು ವೈದಿಕವಿದ್ಯೆಯ ಮಹತ್ತ್ವವನ್ನು ಪ್ರಸಾರ ಮಾಡುವ ಅಗತ್ಯವಿತ್ತು. ಸಂಸ್ಕೃತಪಾಠ ಮತ್ತು ವೇದವೇದಾಂತ ಶಾಸ್ತ್ರಗಳನ್ನು ಪ್ರಾಚೀನ ಪಾಠಪದ್ಧತಿಯಲ್ಲಿ ಉಜ್ಜೀವಿಸಲು ಶೃಂಗೇರಿಯಲ್ಲಿ ಪ್ರಪ್ರಥಮವಾಗಿ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿದರು. ಇಲ್ಲಿ ಆರುವರ್ಷಗಳ ಅವಧಿಯಲ್ಲಿ ಹಲವು ಶಾಸ್ತ್ರಗಳ ಅಧ್ಯಯನಕ್ಕೆ ವ್ಯವಸ್ಥೆಗಳಾದುವು. ಶ್ರೀಗಳು ಸ್ವತಃ ಪ್ರಸ್ಥಾನತ್ರಯ ಭಾಷ್ಯಗಳನ್ನು ಮೂರುವರ್ಷಗಳ ಕಾಲ ಪಾಠ ಮಾಡಿದರು. ಸಂಚಾರ ಮುಗಿಸಿಕೊಂಡು ಬಂದ ನಂತರ 12 ವರ್ಷಗಳ ಕಾಲ ಶೃಂಗೇರಿಯಲ್ಲಿ ಇದ್ದರೂ ನರಸಿಂಹವನದಲ್ಲಿ ಇರುತ್ತಿದ್ದುದೇ ಹೆಚ್ಚು.

ಸ್ವಾಮಿಗಳು 1895ರಲ್ಲಿ ಮೊದಲಬಾರಿಗೆ ಭಗವತ್ಪಾದ ಶಂಕರಜಯಂತಿಯನ್ನು ಆಚರಣೆಗೆ ತಂದರು. ಅದು ದೇಶಾದ್ಯಂತ ನಡೆಯುವಂತೆ ವ್ಯವಸ್ಥೆ ಮಾಡಿದರು. ಅವರು ಸಂಚರಿಸಿದ ಕಡೆ ಆದಿಶಂಕರ ಜಯಂತ್ಯುತ್ಸವವನ್ನು ನೆರವೇರಿಸಿ, ವಿದ್ವತ್ಸಭೆಗಳನ್ನು ಏರ್ಪಾಡು ಮಾಡಿದರು. ಕಾಲಟಿಯಲ್ಲಿ ಶಂಕರಾಚಾರ್ಯರಿಗೆ ದೇವಾಲಯವೊಂದನ್ನು ನಿರ್ವಿುಸಿ ಸಮಸ್ತ ಭಾರತೀಯರಿಗೆ ಯಾತ್ರಾಸ್ಥಳವಾಗುವಂತೆ ವ್ಯವಸ್ಥೆ ಮಾಡಿದರು. ಇದು ಆಗಿನ ಮೈಸೂರು ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್ ಮತ್ತು ಸ್ಥಳೀಯ ವಿದ್ವಾಂಸರುಗಳಿಂದ ಸಾಧ್ಯವಾಯಿತು. ಶ್ರೀಗಳು 1907ರಲ್ಲಿ ಮೂರನೆಯ ಚೈತ್ರಯಾತ್ರೆಯನ್ನು ಕೈಗೊಂಡರು. ಬೆಂಗಳೂರಿನ ನಾಗರಿಕರು ಧಾರ್ವಿುಕಕಾರ್ಯಗಳಿಗಾಗಿ ಕೇಂದ್ರವೊಂದನ್ನು ಸ್ಥಾಪಿಸಬೇಕೆಂಬ ಬಯಕೆಯನ್ನು ಬಿನ್ನವಿಸಿಕೊಂಡರು. ಈಗಿನ ಶಂಕರಪುರಂ ಸ್ಥಳದಲ್ಲಿ ಶ್ರೀಶಂಕರರ ದೇವಾಲಯ ನಿರ್ವಣವಾಯಿತು. ಅನಂತರ ಶ್ರೀಗಳು ಶ್ರೀರಂಗ, ಅಲ್ಲಿಂದ ತಿನ್ನವೆಲ್ಲಿ ಜಿಲ್ಲೆಗೆ ಬಂದರು. ಶ್ರೀಗಳ ಯಾತ್ರಾಕಾಲದಲ್ಲಿ ಅವರ ಪೋ›ತ್ಸಾಹದಿಂದ ತಮಿಳು ಪ್ರದೇಶಗಳಲ್ಲಿ ಅನೇಕ ಧಾರ್ಮಿಕ ಸಂಸ್ಥೆಗಳು ಪ್ರಾರಂಭಗೊಂಡವು.

ಕಾಲಟಿ ಶ್ರೀಕ್ಷೇತ್ರ-ನಿರ್ಯಾಣ: ಶ್ರೀಗಳು 1910ರಲ್ಲಿ ಕಾಲಟಿಗೆ ಆಗಮಿಸಿದರು. ದೇಶದ ನಾನಾಕಡೆಯಿಂದ ಐವತ್ತುಸಹಸ್ರಜನ ಬಂದಿದ್ದರು. ಮಾಘ ಶುದ್ಧ ದ್ವಾದಶೀ ಸೋಮವಾರ ಅಭಿಜನ್​ವುಹೂರ್ತದಲ್ಲಿ ಶಾರದಾ, ಶಂಕರಾಚಾರ್ಯರ ಶಿಲಾಮೂರ್ತಿಗಳ ಪ್ರತಿಷ್ಠೆ ನೆರವೇರಿತು. ಪೂಜ್ಯರು ಕಾಲಟಿಯಲ್ಲಿ ಮೂರುತಿಂಗಳು ಇದ್ದರು. ನಂತರ ಬೆಂಗಳೂರಿಗೆ ಬಂದರು. 1911ರಲ್ಲಿ ವಿರೋಧಿಸಂವತ್ಸರದ ವೈಶಾಖ ಶುದ್ಧ ಪಂಚಮಿಯ ದಿನ ‘ಭಾರತೀಯ ಗೀರ್ವಾಣ ಪ್ರೌಢವಿದ್ಯಾಭಿವರ್ಧಿನೀ ಪಾಠಶಾಲೆ’ಯನ್ನು ಪ್ರಾರಂಭಗೊಳಿಸಿದರು.

ಶ್ರೀಗಳು ದಕ್ಷಿಣಭಾರತದ ಸಂಚಾರದಿಂದ ಹಿಂದಿರುಗಿದ ನಂತರ ಅವರ ಶರೀರ ಸ್ಥಿತಿ ಸಮರ್ಪಕವಾಗಿರಲಿಲ್ಲ. ಶೀತಬಾಧೆ ಕಾಡಲಾರಂಭಿಸಿತು. ಆದರೆ, ಶರೀರಕ್ಕಾಗುವ ಬಾಧೆಯ ಪರಿಹಾರದ ಕಡೆ ಎಂದೂ ಗಮನಕೊಡುತ್ತಿರಲಿಲ್ಲ. ಬಂದ ಪ್ರಾರಬ್ಧವನ್ನು ಅನುಭವಿಸುವುದೇ ಯುಕ್ತವೆಂದು ಅವರು ತಿಳಿದಿದ್ದರು. ಇಷ್ಟಾದರೂ ನಿತ್ಯಾನುಷ್ಠಾನಗಳನ್ನು ಬಿಡಲಿಲ್ಲ. 1912ರ ವೇಳೆಗೆ ವ್ಯಾಧಿ ಉಲ್ಬಣಿಸಿತು. ಅವರು ಹೆಚ್ಚು ಹೆಚ್ಚು ಅಂತರ್ಮುಖಿಗಳಾದರು. ಶರೀರಕ್ಕೆ ತೀರ ಬಾಧೆಯಾದಾಗ ಶ್ರೀ ಸದಾಶಿವ ಬ್ರಹ್ಮೇಂದ್ರರ ‘ಆತ್ಮವಿದ್ಯಾ ವಿಲಾಸ’ ಕಾವ್ಯವನ್ನು ಓದುತ್ತ ಆತ್ಮರತರಾಗುತ್ತಿದ್ದರು. ಶಾರದಾಪೀಠಕ್ಕೆ ಉತ್ತರಾಧಿಕಾರಿಯ ನೇಮಕ ಇನ್ನೂ ಆಗಿರಲಿಲ್ಲ. ಆಗ ಶ್ರೀಕಂಠಶಾಸ್ತ್ರಿಗಳು ಇಬ್ಬರು ಮೂವರ ಹೆಸರನ್ನು ಸ್ವಾಮಿಗಳಿಗೆ ಸೂಚಿಸಿದರು. ಬೆಂಗಳೂರಿನ ಶಂಕರಮಠದಲ್ಲಿ ಅಧ್ಯಯನ ಮಾಡುತ್ತಿದ್ದ ಶ್ರೀನರಸಿಂಹ ಶಾಸ್ತ್ರಿ ಉತ್ತರಾಧಿಕಾರಿ ಆಗಬಹುದೆಂದು ಸಮ್ಮತಿ ಸೂಚಿಸಿದರು. ಚೈತ್ರಶುದ್ಧ ಬಿದಿಗೆಯಂದು ಸ್ನಾನಾಹ್ನಿಕಗಳನ್ನು ಮುಗಿಸಿ ಹಾಲು ಕುಡಿದು ಪದ್ಮಾಸನದಲ್ಲಿ ಕುಳಿತರು. ಶಿರವನ್ನು ಬಗ್ಗಿಸಿ, ನಿಶ್ಚಲರಾಗಿ ಕುಳಿತು, ಸ್ವಭಾವ ಸಿದ್ಧವಾದ ಮಂದಹಾಸ ಸೂಸುತ್ತ ಪ್ರಾಣವನ್ನು ಹೊರದೂಡಿ ವಿಶ್ವೈಕ್ಯರಾದರು. ಅವರ ಶರೀರ ಹಿಂದಕ್ಕೆ ಬಾಗಿತು. ಶ್ರೀಗಳ ನಿರ್ಯಾಣದ ಸುದ್ದಿ ಎಲ್ಲೆಡೆ ಹಬ್ಬಿತು. ಜನ ತಂಡೋಪತಂಡವಾಗಿ ಶೃಂಗೇರಿಗೆ ಬಂದರು. ಅವರ ಶರೀರವನ್ನು ವಿಧಿಪೂರ್ವಕವಾಗಿ ಸಮಾಧಿಯನ್ನು ಮಾಡಲಾಯಿತು.

ಶೃಂಗೇರಿ ಶಾರದಾಪೀಠಕ್ಕೆ ವಿಶ್ವಮಾನ್ಯತೆಯನ್ನು ಒದಗಿಸಿ, ಶಂಕರರ ಜಯಂತಿಯನ್ನು ಪ್ರಾರಂಭಿಸಿ, ಕಾಲಟಿ ಕ್ಷೇತ್ರವನ್ನು ಸರ್ವಮಾನ್ಯತೆಗೊಳಿಸಿ, ಶ್ರೀಚಂದ್ರಶೇಖರ ಭಾರತೀ ಸ್ವಾಮಿಗಳನ್ನು ಉತ್ತರಾಧಿಕಾರಿಯಾಗಿ ಸೂಚಿಸಿ-ಮಹಾಪ್ರಸ್ಥಾನ ಮಾಡಿದ ತ್ಯಾಗ-ವೈರಾಗ್ಯದ ಭವ್ಯಮೂರ್ತಿ ಶ್ರೀಸಚ್ಚಿದಾನಂದ ನೃಸಿಂಹ ಭಾರತೀಸ್ವಾಮಿಗಳು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...