ಪೂರ್ಣಾವಧೂತ ಚೇಳಗುರಿಕೆ ಎರ್ರಿತಾತ

ಬಳ್ಳಾರಿ ಜಿಲ್ಲೆ ಹಲವು ಅವಧೂತರನ್ನೂ ಸಂತರನ್ನೂ ಕಂಡಿದೆ. ಇಲ್ಲಿ ಎಮ್ಮಿಗನೂರು ಜಡೆಪ್ಪತಾತಾ, ದಮ್ಮೂರು ವೆಂಕಪ್ಪ ತಾತ, ಹಂಪಿ ಶಿವರಾಮಾವಧೂತ, ಕೊಳಗಲ್ಲು ಎರ್ರಿಬಸವ ತಾತ, ಸಿಂಧಿಗೇರಿ ಮಲ್ಲಪ್ಪ ತಾತ, ಹೇರೂರು ವಿರೂಪಾವಧೂತ, ಹೊಸಪೇಟೆ ಕೆಂಚಾವಧೂತ ಮುಂತಾದ ಹಲವು ಅವಧೂತರು ಆಗಿಹೋಗಿದ್ದಾರೆ. ಇವರಲ್ಲಿ ಈ ಚೇಳಗುರಿಕೆ ಎರ್ರಿತಾತ ಪ್ರಮುಖ ಅವಧೂತರು. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಚಿಕ್ಕಗ್ರಾಮವೇ ಚೇಳಗುರಿಕೆ. ಈ ಗ್ರಾಮಕ್ಕೆ ಎಲ್ಲಿಂದಲೋ ಬಂದು ನೆಲೆನಿಂತ ಎರ್ರಿತಾತನಿಂದ ಇದು ಪ್ರಸಿದ್ಧಿಗೆ ಬಂದಿದೆ. ಇದು ಪುಣ್ಯಕ್ಷೇತ್ರವಾಗಿ ವಿರಾಜಮಾನವಾಗಿದೆ. ಧರ್ಮ ಮತ್ತು ಸಂಸ್ಕೃತಿಗಳ ಸಮನ್ವಯವು ಇಲ್ಲಿ ನೆಲೆಯೂರಿ ನಿಂತಿದೆ. ಇದು ಭಾಷಾಬಾಂಧವ್ಯದಿಂದ, ಜಾತ್ಯತೀತ ನಿಲುವಿನಿಂದ, ಸರ್ವಧರ್ವಿುೕಯರಿಗೂ ಆದರ್ಶನೀಯವಾಗಿದೆ.

ಪೂರ್ವಾಶ್ರಮ: ಚೇಳಗುರಿಕೆಯಲ್ಲಿ ನೆಲೆನಿಂತಿರುವ ಎರ್ರಿತಾತನ ಪೂರ್ವಾಶ್ರಮದ ವಿವರಗಳು ನಮಗೆ ಖಚಿತವಾಗಿ ತಿಳಿದಿಲ್ಲ. ಆದರೆ, ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರಿದ ಲಿಂಗನಹಳ್ಳಿ ತಾತನ ಜನ್ಮಸ್ಥಳ. ಈ ಹಳ್ಳಿಯ ಶಿವಭಕ್ತರಾದ ನೀಲಕಂಠಾರಾಧ್ಯ ಮತ್ತು ನಿರ್ಮಲಾಂಬಿಕೆ ದಂಪತಿ ಇವರ ತಂದೆ-ತಾಯಿ. ತಾತನವರ ಜನ್ಮನಾಮ ನಂಜುಂಡ. ಇದಲ್ಲದೆ, ಎರ್ರಿತಾತ ಚಿಕ್ಕನಾಯಕನಹಳ್ಳಿಯವರೆಂದೂ ಇವರ ಮೊದಲ ಹೆಸರು ನಂಜುಂಡಶಾಸ್ತ್ರಿ ಎಂಬ ಪ್ರತೀತಿಯೂ ಉಂಟು! ಇದರ ಜತೆಗೆ ತಾತ ತುಮಕೂರು ಜಿಲ್ಲೆಗೆ ಸೇರಿದವರೆಂದೂ, ಮ್ಯಾಜಿಸ್ಟ್ರೇಟ್ ಆಗಿ ಕೆಲಸ ಮಾಡುತ್ತಿದ್ದರೆಂದೂ, ಶಿವಯೋಗದಲ್ಲಿ ಸದಾ ಧ್ಯಾನಾಸಕ್ತರಾಗುತ್ತಿದ್ದರೆಂದೂ, ಲಿಂಗಾಂಗ ಸಾಮರಸ್ಯ ತಿಳಿದ ಯೋಗವಿದರೆಂದೂ ವಿದ್ವಾಂಸರು ಕಲೆಹಾಕಿರುವ ಹಲವು ಮಾಹಿತಿಗಳಿಂದ ತಿಳಿದು ಬರುತ್ತದೆ!

ಆದರೆ, ಉಪಲಬ್ಧ ಆಧಾರಗಳಿಂದ ಸಮಗ್ರವಾಗಿ ತೂಗಿ ನೋಡಿದರೆ ದೊಡ್ಡಬಳ್ಳಾಪುರದ ಲಿಂಗನಹಳ್ಳಿ ಇವರ ಜನ್ಮಸ್ಥಳ. ಅಲ್ಲಿಯೇ ತತ್ತ್ವವಿಚಾರಗಳನ್ನೂ ಗುರೂಪದೇಶವನ್ನೂ ಅರಿತವರೆಂಬುದಕ್ಕೆ ಹಲವು ಆಧಾರಗಳಿವೆ. ಲಿಂಗನಹಳ್ಳಿಯ ನಾಗಯ್ಯ ಇವರ ಪ್ರಾರಂಭದ ಗುರುಗಳು. ಚಿಕ್ಕಂದಿನಲ್ಲೇ ಸತ್ಯ-ಧರ್ಮ ನ್ಯಾಯ ವಿಚಾರಗಳ ಬಗೆಗೆ ಶಾಸ್ತ್ರಪಾರಂಗತರಾಗುವುದು ಒಂದು ವಿಶೇಷ. ತಂದೆ-ತಾಯಿಗಳ ಆಸೆಯಂತೆ ಆಗಿನ ಕಾಲಕ್ಕೆ ಕಂದಾಯ ಇಲಾಖೆಗೆ ಸೇರಿಕೊಳ್ಳುತ್ತಾರೆ. ಇವರು ಹುಟ್ಟಿದ ವರ್ಷ ಖಚಿತವಾಗಿ ತಿಳಿದಿಲ್ಲ. ಚೇಳಗುರಿಕೆಗೆ ಬಂದಾಗ 70 ವಯಸ್ಸಾಗಿತ್ತೆಂಬ ಖಚಿತ ಮಾಹಿತಿಯೇನೋ ಉಂಟು. ಆಗ 1897ನೆಯ ವರ್ಷ. ಇದರ ಆಧಾರದ ಮೇಲೆ 1830 ಎರ್ರಿತಾತನ ಜನ್ಮವಾಗಿರಬೇಕೆಂದು ಅಂದಾಜಿಸಬಹುದು.

ಗುರುಸೇವೆ: ಎರ್ರಿತಾತ ಚಿಕ್ಕಂದಿನಿಂದಲೂ ಒಂದು ಬಗೆಯ ವೈರಾಗ್ಯದಲ್ಲಿ ಇದ್ದವರೇ. ಲಿಂಗನಹಳ್ಳಿಯ ವೇದಾಂತಿ ನಾಗಯ್ಯನವರಲ್ಲಿ ಶಿಷ್ಯಭಾವದಿಂದ ಇದ್ದು ತತ್ತ್ವವಿಚಾರಗಳಲ್ಲಿ ಸದಾ ಮಗ್ನರಾದದ್ದುಂಟು. ಆಗಾಗ್ಗೆ ಉದ್ಯೋಗದಲ್ಲಿ ಬಿಡುವು ಮಾಡಿಕೊಂಡು ‘ಶಿವಯೋಗ’ದ ಸಮಾಧಿಗೆ ಹೋಗುತ್ತಿದ್ದರು.ತಂದೆ-ತಾಯಿ ಮಗನ ವಿಚಿತ್ರವರ್ತನೆ ಕಂಡು ಮದುವೆ ಇದಕ್ಕೆ ಸರಿಯಾದ ಮದ್ದೆಂದು ಆಲೋಚಿಸಿದರು. ಮಂಜುಳಾ ಎಂಬ ಕನ್ಯೆಯೊಡನೆ ವಿವಾಹ ನೆರವೇರಿಸಿದರು. ಕೆಲವು ವರ್ಷಗಳಿಗೆ ಗಂಡು ಮಗು ಹುಟ್ಟಿ, ಶಿವಮೂರ್ತಿ ಎಂದು ನಾಮಕರಣ ಮಾಡಿದರು. ಇಷ್ಟೆಲ್ಲ ಸುಖ-ಸಂಪದಗಳು ಇದ್ದರೂ ಅವರ ಮನಸ್ಸು ಮಾತ್ರ ಸದಾ ‘ಸುಜ್ಞಾನ’ದ ಕಡೆಗೆ ಸೆಳೆಯುತ್ತಿತ್ತು! ಈ ನಡುವೆ ವೇದಾಂತಿ ನಾಗಯ್ಯನವರು ‘ನೀನು ತಿಳಿಯಬೇಕಾದ್ದನ್ನು ನನ್ನಿಂದ ತಿಳಿದಿದ್ದೀಯೆ. ಇನ್ನು ಬೇರೊಬ್ಬ ಗುರುವನ್ನು ಆಶ್ರಯಿಸು’ ಎಂದು ಹೇಳಿ ದೊಡ್ಡಬಳ್ಳಾಪುರದ ಗಗನಾರ್ಯರ ಬಳಿಗೆ ಕಳುಹಿಸಿಕೊಟ್ಟರು.

ಗಗನಾರ್ಯರು ಮಹಾವೇದಾಂತಿ. ಅನುಭಾವಸಾಹಿತ್ಯವನ್ನು ಚೆನ್ನಾಗಿ ಬಲ್ಲವರು. ಅವರು ಎರ್ರಿತಾತನನ್ನು ಹಲವು ರೀತಿಗಳಲ್ಲಿ ಪರೀಕ್ಷಿಸುತ್ತಾರೆ. ಕೊನೆಗೆ ಬೆತ್ತಲೆಯಾಗಿ ಊರನ್ನು ಮೂರುಸಾರಿ ಸುತ್ತಿ ಬಾ ಎಂದು ಆಜ್ಞಾಪಿಸುತ್ತಾರೆ. ತಾತನವರು ತಾವು ನಿರ್ಗ್ರಂಥಿಮುನಿಸತ್ತಮನೆಂದು ಅವರಿಗೆ ನಿರೂಪಿಸುತ್ತಾರೆ. ಶಿಷ್ಯನ ಮನೋಬಲ, ಆತ್ಮಶಕ್ತಿ, ವಿವೇಕ ಸಾಮರ್ಥ್ಯಗಳಿಗೆ ಗಗನಾರ್ಯರು ಸಂತೋಷಿಸುತ್ತಾರೆ. ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ ದರ್ಶನಗಳ ಮೂಲಸ್ವರೂಪವನ್ನು ತಾತನಿಗೆ ತೋರಿಸಿಕೊಡುತ್ತಾರೆ. ಅದ್ವೈತಸಾಧನೆಯಿಂದ ಮಾತ್ರ ತತ್ತ್ವವಿಚಾರ ತಿಳಿಯಲು ಸಾಧ್ಯವೆಂದು ಗುರೂಪದೇಶ ನೀಡುತ್ತಾರೆ. ತಾತ ಲಿಂಗನಹಳ್ಳಿ, ತಂದೆ-ತಾಯಿ, ಹೆಂಡತಿ-ಮಗ ಎಲ್ಲವನ್ನೂ ಮರೆತು ಬಿಡುತ್ತಾರೆ. ಗಗನಾರ್ಯರು ತಾತನಿಗೆ ‘ನಿರಂಜನ’ನೆಂದು ಕರೆದು ತಾತ್ತಿ್ವಕ ಅಭಿಧಾನ ನೀಡುತ್ತಾರೆ!

ಸಾಧನೆಯ ಹಾದಿ: ಆಗ ಮೈಸೂರಿನಲ್ಲಿ ಶ್ರೀಕೃಷ್ಣರಾಜೇಂದ್ರರು ಆಳ್ವಿಕೆ ನಡೆಸುತ್ತಿದ್ದ ಕಾಲ. ಅವರು ಪ್ರತಿವರ್ಷ ಕರೆಯುತ್ತಿದ್ದ ‘ಅನುಭಾವಗೋಷ್ಠಿ’ಗೆ ಗುರುಗಳು ನಿಜಶಿಷ್ಯ ನಿರಂಜನರನ್ನು ಕಳುಹಿಸುತ್ತಾರೆ. ಗುರುಗಳು ಸಮಾಧಿ ಹೊಂದಿದ ಅನಂತರ ಚನ್ನರಾಯಪಟ್ಟಣದ ಗವಿಯೊಳಗೆ ಸಾಧನೆ ಮಾಡಿ ಬರುತ್ತಾರೆ. ಆಗ ಅವರ ಕೈತುಂಬ ನೀಳವಾದ ಉಗುರು ಬೆಳೆದು, ಕಂಬಳಿ-ಕೌಪೀನಗಳಿಂದ ಇದ್ದರೆಂಬ ಜನಾಭಿಪ್ರಾಯವುಂಟು! ಕೆಲವು ತಿಂಗಳುಗಳು ಕಳೆದುವು. ತಾತ ಪುನಃ ಲಿಂಗನಹಳ್ಳಿಗೆ ಬಂದರು. ಅವರಿಗೆ ತುಮಕೂರಿಗೆ ವರ್ಗವಾಗಿತ್ತು. ಆದರೆ, ಬಿಡುವಿನ ವೇಳೆಯಲ್ಲಿ ನಿರ್ವಿಕಲ್ಪ ಸಮಾಧಿಯಲ್ಲಿ ಇರುತ್ತಿದ್ದರು. ಲೋಕದ ಹಂಗನ್ನು ತೊರೆಯಬೇಕೆಂಬ ಇಚ್ಛೆ ಅವರಲ್ಲಿ ಬಲವಾಗತೊಡಗಿತು. ಆಗ ಒಂದು ವರ್ಷ ದೀರ್ಘಾವಧಿ ರಜೆ ಹಾಕಿ-ಹೆಂಡತಿ ಮಗನಿಗೆ ಸಂಸಾರವನ್ನು ಒಪ್ಪಿಸಿ ಬಂಧಮುಕ್ತರಾಗುತ್ತಾರೆ! ಅವರು ಚಿಕ್ಕನಾಯಕನಹಳ್ಳಿ ಕೂವೂರು ಗ್ರಾಮವನ್ನು ದಾಟಿ ಮಹದೇಶ್ವರ ಬೆಟ್ಟದಲ್ಲಿ ಕೆಲಕಾಲ ಉಳಿದು ಸಾಧನೆ ಮಾಡುತ್ತಾರೆ. ಈ ನಡುವೆ ರಂಗಾಪುರದ ರಂಗನಾಥಸ್ವಾಮಿ ಬೆಟ್ಟದ ಗವಿಯಲ್ಲಿ ಸಾಧನೆ ಮಾಡುತ್ತಿದ್ದಾಗ ಅಲ್ಲಿದ್ದ ಜನ ‘ನಾಗೇಶಯೋಗಿ’ ಎಂದು ಇವರನ್ನು ಕರೆದದ್ದುಂಟು. ಪರಿವ್ರಾಜಕರಾಗಿ ಬೆಟ್ಟ-ಗುಹೆಗಳಲ್ಲಿ ಸಾಧನೆ ಮಾಡುತ್ತ ಅಲೆಯುತ್ತಾರೆ. ಹೀಗೆ ಅಲೆಯುವಾಗ ಕಲ್ಯಾಣದುರ್ಗಕ್ಕೆ ಬರುತ್ತಾರೆ. ಹೆಂಡತಿ ಮಂಜುಳಾಗೆ ಕಲ್ಯಾಣದುರ್ಗದಲ್ಲಿ ತಾತನವರು ಇರುವ ವಿಷಯ ತಿಳಿದು ಅಲ್ಲಿಗೆ ಬರುತ್ತಾರೆ. ಅವರ ‘ಪೂರ್ಣಾವಧೂತ’ ಸ್ಥಿತಿಯನ್ನು ನೋಡಿ ಮರಳಿ ಊರಿಗೆ ಹೊರಟುಹೋಗುತ್ತಾರೆ. ಇದ್ದ ಒಂದು ಲೌಕಿಕ ಸಂಬಂಧ ಕಳಚಿ ಬೀಳುತ್ತದೆ. ತಾತ ಕಲ್ಯಾಣದುರ್ಗದಿಂದ ಬೆಳಗುಪ್ಪೆಗೆ ಬಂದಾಗ ದಿಗಂಬರ ಸ್ಥಿತಿಯಲ್ಲಿಯೇ ಇದ್ದರು. ಬೆಳಗುಪ್ಪೆಯಲ್ಲಿ ಇದ್ದಾಗ ಅನೇಕ ಪವಾಡಗಳನ್ನು ಮಾಡಿದ್ದುಂಟು. ಜನ ಅವರ ಸ್ವಭಾವ ನೋಡಿ ‘ಎರ್ರಿ’ (ಹುಚ್ಚ)ತಾತ ಎಂದು ಕರೆಯತೊಡಗಿದರು. ಮುಂದೆ ‘ಎರ್ರಿತಾತ’ ಎಂಬ ಹೆಸರಿನಿಂದಲೇ ಪ್ರಖ್ಯಾತರಾದರು.

ಎರ್ರಿತಾತ, ಬೆಳಗುಪ್ಪೆಯಿಂದ ಮುಷ್ಟೂರಿಗೆ, ಅಲ್ಲಿಂದ ಉರವಕೊಂಡಕ್ಕೆ ಬಂದು, ಅನಂತರ ನೆಲಗೊಂಡ, ಚೇಕಲಗುರಿಕೆಗೆ ಬರುತ್ತಾರೆ. ಅಲ್ಲಿ ದಾಸಯ್ಯ ಎಂಬುವನ ಹೊಲದಲ್ಲಿದ್ದಾಗ ಮನೆ, ಬೆಳೆ ವೃದ್ಧಿ ಕಾಣುತ್ತದೆ. ಈ ವಿಷಯ ತಿಳಿದ ಜನ ಬಂದು ಕಷ್ಟ-ನಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಊರಜನ ತಾತನನ್ನು ಆರಾಧಿಸುತ್ತಾರೆ. ಅಲ್ಲಿಂದ ಹೊರಟು ಚೇಳಗುರಿಕೆಗೆ ಎರಡುಮೈಲಿ ದೂರದಲ್ಲಿದ್ದ ‘ಮಲ್ಲಪ್ಪನ ತೆಪ್ಪ’ ಎಂಬ ಮಟ್ಟಿಯ ಬಳಿ ಕುಳಿತಿದ್ದಾಗ, ಊರಜನರಿಗೆ ತಾತನ ವಿಷಯ ತಿಳಿಯುತ್ತದೆ. ಎರ್ರಿತಾತ ಚೇಳಗುರಿಕೆಗೆ ಬಂದಾಗ ಖಚಿತವಾದ ದಾಖಲೆಯ ಪ್ರಕಾರ 1897ನೆಯ ಇಸವಿ. ಆಗ ತಾತನವರಿಗೆ ಎಪ್ಪತ್ತುವರ್ಷ ವಯಸ್ಸು. ಊರಿನಲ್ಲಿದ್ದ ಹಿರಿಯರು ಎರ್ರಿತಾತನ ವಿಶೇಷ ಶಕ್ತಿಯನ್ನು ತಿಳಿದಿದ್ದರು. ಅವರ ಸೇವೆಯನ್ನು ಮಾಡತೊಡಗಿದರು. ಅವರ ಕನ್ನಡ ಶೈಲಿ-ಮಾತುಕತೆಯಿಂದ ಮೈಸೂರು ಪ್ರಾಂತ್ಯಕ್ಕೆ ಸೇರಿದವರೆಂಬುದು ಖಚಿತವಾಗಿತ್ತು. ಊರೊಳಗೆ ಬಂದ ತಾತ ಕೆಲದಿನ ಈಶ್ವರಗುಡಿಯಲ್ಲಿದ್ದರು. ಅವರು ಎಲ್ಲಿದ್ದರೂ ಯಾರೊಡನೆಯೂ ಮಾತುಕತೆಗಳು ಇರುತ್ತಿರಲಿಲ್ಲ. ಅವರ ಸುತ್ತಲಿದ್ದವರು ಉಡಿಸಿದರೆ ಉಡುಗೆ; ಇಲ್ಲದಿದ್ದರೆ ದಿಗಂಬರಸ್ಥಿತಿಯೇ. ಸ್ನಾನ ಇಲ್ಲದಿದ್ದರೂ ತೇಜೋಮೂರ್ತಿಯಂಥ ಕಳೆ. ತಾತ ಎದ್ದರೂ ನಿಂತರೂ ನಡೆದರೂ ಮಲಗಿದರೂ ಆಯಾಯ ಭಂಗಿಗಳಲ್ಲೆ ಧ್ಯಾನಾಸಕ್ತರಾಗುತ್ತಿದ್ದರು! ಯಾರಾದರೂ ‘ನಿಮ್ಮ ಊರು ಯಾವುದು? ಹೆಸರೇನು?’ ಎಂದು ಕೇಳಿದರೆ ‘ಮಹಾರಾಜೇ ಶ್ರೀ ಹಿರಿಯೂರು ತಾಲ್ಲೂಕು ತಹಶೀಲ್ದಾರರಿಗೆ’ ಎಂದು ಬರೆದು ನಿಲ್ಲಿಸಿ ಬಿಡುತ್ತಿದ್ದರು! ಇಲ್ಲಿ ಉಲ್ಲೇಖಗೊಂಡಿರುವ ‘ಹಿರಿಯೂರು’ ಸ್ಥಳನಾಮವೊ ವಿಶೇಷಣವೊ ಸಾಂಕೇತಿಕ ಅರ್ಥವನ್ನು ಹೊಂದಿರುವಂಥದೊ ಇಂದಿಗೂ ಸ್ಪಷ್ಟವಿಲ್ಲ.

ಪವಾಡಗಳು: ಎರ್ರಿತಾತ ತಮ್ಮ ಸಿದ್ಧಿಗಳಿಂದ ಮಹಿಮೆಗಳನ್ನು ತೋರಿಸುತ್ತ ಬಂದರಷ್ಟೆ. ಅವರು ಯಾರ ಮನೆಯಲ್ಲೂ ಇರುತ್ತಿರಲಿಲ್ಲ. ಇಷ್ಟಬಂದ ಕಡೆ ಅಲೆದಾಡುತ್ತಿದ್ದರು. ಅವರು ಆಡಿದ ಮಾತು ನಡೆಯುತ್ತಿತ್ತು. ನೋಡಿದ ನೋಟಕ್ಕೆ ಪ್ರಾಣ ಬರುತ್ತಿತ್ತು. ಒಂದು ದಿನ ಮೇಗಳ ಮನೆಯ ದೊಡ್ಡಪ್ಪಗೌಡನ ಮನೆಯಲ್ಲಿ ಎಮ್ಮೆಕರು ಸತ್ತಿರುತ್ತದೆ. ಎರ್ರಿತಾತ ರೊಟ್ಟಿತಿನ್ನುತ್ತ ಬಂದವರು ಮೊಸರು ಬೇಡಿದರಂತೆ. ಆಗ ಯಜಮಾನಿ ಕರು ಸತ್ತುಬಿದ್ದಿರುವುದನ್ನು ತಿಳಿಸುತ್ತಾಳೆ. ಕಣ್ಣಿ ಕಳಚಲು ಹೇಳಿ ಸತ್ತ ಕರುವಿಗೆ ಮೆತ್ತಗೆ ಒದ್ದಾಗ ಅದು ಎದ್ದು ತಾಯಿ ಎಮ್ಮೆಯ ಬಳಿ ಹೋಯಿತಂತೆ. ಒಮ್ಮೆ ಮಳೆಯಿಲ್ಲದೆ ಬೆಳೆಗಳೆಲ್ಲ ಒಣಗಿಹೋಗಿರುತ್ತವೆ. ಆಗ ತಾತ ಮಲ್ಲಪ್ಪನ ಮಟ್ಟಿಯಲ್ಲಿಗೆ ಬಂದು ಧ್ಯಾನಾಸಕ್ತರಾಗಿ ಕುಳಿತರು. ಇದ್ದಕ್ಕಿದ್ದಂತೆ ಜೋರಾದ ಮಳೆ ಸುರಿಯಿತು. ಆದರೆ, ಎರ್ರಿತಾತ ಕುಳಿತಿದ್ದ ಜಾಗದಲ್ಲಿ ಮಾತ್ರ ಮಳೆ ಇರಲಿಲ್ಲ. ಎಲ್ಲಿಂದೆಲ್ಲಿಂದಲೋ ಜನ ತಾತನನ್ನು ನೋಡಲು ಬರುತ್ತಿದ್ದರು. ಸಂತರು, ಯೋಗಿಗಳು, ಅವಧೂತರು, ಜ್ಞಾನಾಕಾಂಕ್ಷಿಗಳೂ ಬರುತ್ತಿದ್ದರು. ಹೀಗೆ ದರ್ಶನಾರ್ಥವಾಗಿ ಬಂದ ಪರುಶಪ್ಪನೆಂಬ ಅವಧೂತ ಆ ಕಾಲದಲ್ಲಿ ತೆಗೆದ ಫೋಟೋದಲ್ಲಿ ಇವರನ್ನು ಕೂಡಿಸಿದ್ದು ಕಂಡುಬರುತ್ತದೆ.

ಎರ್ರಿತಾತನ ಬಳಿ ಬಂದ ಜ್ಞಾನಾಕಾಂಕ್ಷಿಗಳಲ್ಲಿ ತಿಕ್ಕಾವಧೂತರೂ ಒಬ್ಬರು. ಇವರ ಊರು, ಹೆಸರು, ಕುಲ-ಗೋತ್ರ ಯಾರಿಗೂ ತಿಳಿಯದು! ತಾತನಂತೆ ಇವರೂ ಮೌನಿ. ಇವರು ತಾತನ ಸೇವೆಗೆ ನಿಂತರು. ಅವರಿಗೆ ಮಠಕಟ್ಟಬೇಕೆಂದು ಆಸೆ. ಊರ ಹಿರಿಯರ ಮುಂದೆ ಇದನ್ನು ಪ್ರಸ್ತಾವಿಸಿದರು. ಒಂದು ಶಿಲಾಮಂಟಪ ನಿರ್ವಣವಾಯಿತು. ತಾತನವರು ಚೇಳಗುರಿಕೆಗೆ ಬರುವ ಮುನ್ನ ಬಳಗಾನೂರು ಮರಿಸ್ವಾಮಿಗಳು ಇಲ್ಲಿಗೆ ಬಂದಿದ್ದಾಗ ಮೂರು ಕಲ್ಲುಗಳನ್ನು ಮಂಟಪದ ಆಕಾರದಲ್ಲಿ ಇಟ್ಟು ‘ಇಲ್ಲೊಂದು ದೊಡ್ಡ ಮಠವಾಗುತ್ತದೆ. ಮಹಾಪುರುಷರೊಬ್ಬರು ಬಂದು ಇಲ್ಲಿ ನೆಲೆಸುತ್ತಾರೆ’ ಎಂದು ಭವಿಷ್ಯ ನುಡಿದಿದ್ದರಂತೆ. ಮುಂದೆ ಊರಲ್ಲಿ ಎರಡು ಗುಂಪುಗಳಾಗಿ ಹಳೆಮನೆ ಮತ್ತು ಹೊಸಮಠ ಇವುಗಳಲ್ಲಿ ತಾತ ಎಲ್ಲಿರಬೇಕೆಂದಾಗ ಬಳ್ಳಾರಿ ಕೋರ್ಟ್ ಮತ್ತು ಸ್ಟೇಷನ್ನಿಗೆ ವ್ಯಾಜ್ಯ ಹೋಯಿತು. ಕೊನೆಗೆ ತಾತ ಎರಡು ಗುಂಪುಗಳಿಗೂ ಬುದ್ಧಿಹೇಳಿ ತಿಕ್ಕಯ್ಯ ಕಟ್ಟಿದ ಶಿಲಾಮಂಟಪದಲ್ಲಿ ಉಳಿದುಕೊಂಡರು. ಇದೇ ಮುಂದೆ ಬೆಳೆದು ಅಭಿವೃದ್ಧಿಕಂಡಿತು! ಆದರೆ, ಊರಿನ ಕೆಲವರ ಕಿತಾಪತಿ ಕಾರಣದಿಂದ ತಿಕ್ಕಯ್ಯ ಊರುಬಿಡಬೇಕಾಯಿತು.

ಎರ್ರಿತಾತ ಸಮಾಜಮುಖಿಯಾಗಿ ಹಲವಾರು ಸೇವೆಗಳನ್ನು ಮಾಡುತ್ತಿದ್ದರು. ಜನರ ದುಃಖದುಮ್ಮಾನಗಳಿಗೆ ಸ್ಪಂದಿಸುತ್ತಿದ್ದರು. ಅತ್ತ ಆಂಧ್ರಪ್ರದೇಶ ಇತ್ತ ಮಹಾ ರಾಷ್ಟ್ರದವರೆಗೂ ಇವರ ಪ್ರಭೆ ಬೆಳೆಯಿತು. ಹುಬ್ಬಳ್ಳಿಯ ಸಿದ್ಧಾರೂಢರು, ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮುಂತಾದವರು ಎರ್ರಿತಾತನನ್ನು ನೋಡಲು ಬಂದಿದ್ದರಂತೆ. ಅವಧೂತಸ್ಥಿತಿಯಲ್ಲಿರುವ ಶಿವಯೋಗಿ ತಾತನನ್ನು ಕಂಡು ಅವರು ಚಕಿತರಾದರಂತೆ!

ಸಮಾಧಿ: ತಾತನವರ ಬಳಿ ಬಂದು ವೈಯಕ್ತಿಕ ಸಮಸ್ಯೆಗಳನ್ನು ನೀಗಿಸಿಕೊಂಡವರು ಸಹಸ್ರಾರು ಜನ. ಮಾನಸಿಕ ಮತ್ತು ದೈಹಿಕ ನೋವುಗಳನ್ನು ನಿವಾರಣೆ ಮಾಡಿಕೊಂಡವರಂತೂ ಅಸಂಖ್ಯಾತಜನ. ತಾತ ಚೇಳಗುರಿಕೆಗೆ ಬಂದು 25 ವರ್ಷಗಳು ಕಳೆಯಿತು. ಈಗ ತಾತನಿಗೆ ನೂರರ ಸಮೀಪ. ದೇಹಕ್ಕೆ ಮುಪ್ಪಿದ್ದರೂ ಶಿವಧ್ಯಾನಕ್ಕೆ ಮುಪ್ಪಿಲ್ಲ. 1922ನೆಯ ವರ್ಷ ದುಂಧುಭಿನಾಮ ಸಂವತ್ಸರದ ಜ್ಯೇಷ್ಠ ಶುದ್ಧ 4ರಂದು ದೇಹವನ್ನು ತೊರೆದರು. ತಾತನವರ ಸಮಾಧಿಕ್ರಿಯೆಯಂದು ಸಹಸ್ರಾರು ಭಕ್ತರು ನೆರೆದಿದ್ದರು. ತಿಕ್ಕಯ್ಯ ಕಟ್ಟಿದ ‘ಯೋಗಮಂಟಪ’ದಲ್ಲಿ ವಿಧ್ಯುಕ್ತವಾಗಿ ಸಮಾಧಿ ಮಾಡಲಾಯಿತು. ಎರ್ರಿತಾತ ದೇಹತ್ಯಾಗ ಮಾಡುವ ಹೊತ್ತಿನಲ್ಲಿ ದಫೇದಾರನನ್ನು ಕರೆದು ಅವನಿಂದ ನೀರು ತರಿಸಿಕೊಂಡು ಕುಡಿದು ಶಿವೈಕ್ಯರಾದದ್ದು ವಿಶೇಷ.

ಬಳ್ಳಾರಿಜಿಲ್ಲೆಯ ಚೇಳಗುರಿಕೆ ತಾತನ ಕಾರಣದಿಂದ ಭವ್ಯಕ್ಷೇತ್ರವಾಗಿದೆ. ಪ್ರತಿವರ್ಷ ಎರ್ರಿತಾತ ಸಮಾಧಿ ಹೊಂದಿದ ದಿನ ಇಲ್ಲಿ ಮಹಾರಥೋತ್ಸವ ನಡೆಯುತ್ತದೆ. ಆಂಧ್ರ-ಮಹಾರಾಷ್ಟ್ರ-ಕರ್ನಾಟಕದ ಸಮಸ್ತ ಜನವರ್ಗದ ಆರಾಧದೈವ ಎರ್ರಿತಾತ ಮಹಿಮೆ-ಪವಾಡಗಳಿಂದ ಪ್ರಸಿದ್ಧರಾದ ಪೂರ್ಣಾವಧೂತ!

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)

Leave a Reply

Your email address will not be published. Required fields are marked *