ಗುರು ಮತ್ತು ಗುರುತತ್ತ್ವ

ಬಸವಣ್ಣನವರ ವಚನದಿಂದ (‘ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು…’) ಹೊರಡುವ ತಾತ್ಪರ್ಯವಿಷ್ಟೇ – ಕಾಯಕದಲ್ಲಿ ಮೇಲು-ಕೀಳುಗಳಿಲ್ಲ, ಕಾಯಕದ ಪ್ರತಿಫಲ ಕೇವಲ ದುಡಿತದಿಂದಲೇ ಸಿಗುವುದಿಲ್ಲ, ಪರಮಾತ್ಮನ ಅನುಗ್ರಹದಿಂದ ಫಲಿಸುತ್ತದೆ. ಆದ್ದರಿಂದ ಅದನ್ನು ಸ್ವಾರ್ಜಿತವೆಂದು ಭಾವಿಸಲು ಆಗುವುದಿಲ್ಲ. ಕಾಯಕದಿಂದ ಬಂದುದರ ಮೇಲೆ ಇಡೀ ಸಮಾಜದ ಹಕ್ಕು ಇರುತ್ತದೆ. ನಮಗೆ ಪ್ರಾಪ್ತಿಯಾದದ್ದನ್ನು ಹಂಚಿಕೊಂಡು ತಿನ್ನುವುದೇ ಕಾಯಕಪೂಜೆ, ಇದೇ ಗುರುಪೂಜೆ.

ಆಧ್ಯಾತ್ಮಿಕ ಮಾರ್ಗವು ಬಹಳ ದುರ್ಗಮ. ಸಾಧಕನು ಇಲ್ಲಿ ಬರುವ ಎಲ್ಲ ತರಹದ ಮಾರ್ಗಗಳನ್ನು ಕ್ರಮಿಸಬೇಕಾಗುತ್ತದೆ. ಬರುವ ಎಲ್ಲಾ ದ್ವಾರಗಳ ಮೂಲಕ ಮುನ್ನಡೆಯಬೇಕಾಗುತ್ತದೆ. ಆದರೆ ಮಾರ್ಗ ಸರಿಯಾದದ್ದು ಯಾವುದು, ಪರಮಾತ್ಮನ ಮುಖ್ಯದ್ವಾರ ಯಾವುದು ಎಂಬುದನ್ನು ಕಂಡುಕೊಳ್ಳುವುದೇ ಸಾಧನೆ. ಕಾರಣ ಎಲ್ಲಾ ಮಾರ್ಗಗಳು ಪರಮಾತ್ಮನ ಕಡೆಗೆ ಕರೆದೊಯ್ಯಲಾರವು. ಸತ್ಯದ ಮಾರ್ಗವು ಇದರಿಂದಾಗಿ ಕಠಿಣವಾಗಿದೆ. ಸರಿಯಾದ ಮಾರ್ಗವನ್ನು ಕ್ರಮಿಸಲು ಒಮ್ಮೊಮ್ಮೆ ಜನ್ಮಗಳೇ ಕಳೆಯಬಹುದು. ಒಮ್ಮೊಮ್ಮೆ ಸಾಧಕನ ನಿಷ್ಠೆಯು ಪರೀಕ್ಷಿಸಲ್ಪಡುತ್ತದೆ. ಎಂತಹ ಧೀರನೂ ಕೂಡ ತನ್ನ ಧೈರ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಒಮ್ಮೊಮ್ಮೆ ಸಾಧನೆಯೇ ಬೇಡ ಎನಿಸಬಹುದು. ಈ ಯಾತ್ರೆಯಿಂದಲೇ ಹಿಂದೆಯೂ ಸರಿಯಬಹುದು.

ಗುರುವಿಲ್ಲದೆಯೇ ಈ ಮಾರ್ಗವನ್ನು ಕ್ರಮಿಸಲು ಸಾಧ್ಯವಿಲ್ಲ ಎಂದೇನಿಲ್ಲ. ಆದರೆ ತೊಂದರೆಗಳು ಹೆಚ್ಚು. ಗುರು ನಮಗೆ ಸತ್ಯತ್ವವನ್ನು ಕೊಡಲಾರ. ಕೇವಲ ತಪ್ಪಾದ ಮಾರ್ಗಗಳಿಂದ ನಮ್ಮನ್ನು ರಕ್ಷಿಸಬಲ್ಲ. ಕಾರಣ ಅವನು ಈ ಮಾರ್ಗದಲ್ಲಿ ನಡೆದಿದ್ದಾನೆ, ಇಲ್ಲಿ ಬರುವ ತಾಪತ್ರಯಗಳ ಪರಿಚಯವಿದೆ. ಆದ್ದರಿಂದ ಅವನ ಮಾರ್ಗದರ್ಶನವು ನಮಗೆ ದಾರಿದೀಪವೇ ಆಗಿದೆ. ಬಾಯಾರಿದವನಿಗೆ ತಂಪಾದ ನೀರಿತ್ತಂತೆ, ಹಸಿವೆಯಿಂದ ಬಳಲಿದವನಿಗೆ ಆಹಾರವಿತ್ತಂತೆ, ಭಯದಿಂದ ತತ್ತರಿಸಿದವನಿಗೆ ಅಭಯವಿತ್ತಂತೆ ಗುರುವಿನ ಮಾರ್ಗದರ್ಶನ.