More

    ಯುದ್ಧದಿಂದ ಮನುಕುಲಕ್ಕೆ ಹಾನಿ

    ಗತ್ತಿನಲ್ಲಿ ಗತಿಸಿದ ಯುದ್ಧಗಳಿಂದ ಸತ್ತವರ ಸಂಖ್ಯೆ ಲೆಕ್ಕಕ್ಕೆ ಸಿಗದು. 13ನೆಯ ಶತಮಾನದಷ್ಟು ಹಿಂದೆ ನಡೆದ ಮಂಗೋಲರ ಆಕ್ರಮಣದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಚೀನಿಯರು ಆತ್ಮಹತ್ಯೆ ಮಾಡಿಕೊಂಡರು. 17ನೆಯ ಶತಮಾನದಲ್ಲಿ ಚೀನಾದಲ್ಲಿ ನಡೆದ ಕಿಂಗ್ ಮತ್ತು ಮಿಂಗ್ ರಾಜಮನೆತನಗಳ 60 ವರ್ಷಗಳ ಘರ್ಷಣೆಯಲ್ಲಿ ಸುಮಾರು ಎರಡೂವರೆ ಕೋಟಿ ಜನರು ಸತ್ತರು. 1812ರಲ್ಲಿ ರಷ್ಯಾ ಫ್ರಾನ್ಸಿನ ಮೇಲೆ ನಡೆಸಿದ ಆಕ್ರಮಣದಲ್ಲಿ 65 ಲಕ್ಷ ಜನ ಅಸುನೀಗಿದರು. ಒಂದನೆಯ ಮಹಾಯುದ್ಧದಲ್ಲಿ ಎರಡೂವರೆ ಕೋಟಿ ಹಾಗೂ ಎರಡನೆಯ ಮಹಾಯುದ್ಧದಲ್ಲಿ 7 ಕೋಟಿಗಿಂತ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡರು. ಇಂಥ ಘಟನೆಗಳಿಂದ ಮನುಕುಲ ಮಾತ್ರ ಪಾಠ ಕಲಿಯದೇ ಅದು ಮತ್ತೆ ಮತ್ತೆ ಯುದ್ಧ ಬಯಸುತ್ತಲೇ ಇದೆ. ಲಕ್ಷಾಂತರ ಜನರ ಸಾವನ್ನು ಕಂಡು ತನ್ನ ಗೆಲುವನ್ನು ಸಂಭ್ರಮಿಸಿಕೊಳ್ಳಲಾಗದ ಆಶೋಕನಂಥ ಆರಸ ಮತ್ತೆ ಈ ಜಗತ್ತಿನಲ್ಲಿ ಎಲ್ಲೂ ಹುಟ್ಟಲೇ ಇಲ್ಲ.

    ಯುದ್ಧದಿಂದ ಮನುಕುಲಕ್ಕೆ ಹಾನಿಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರಾಚ್ಯದ 22 ದೇಶಗಳು ಒಂದಲ್ಲ ಒಂದು ರೀತಿಯಲ್ಲಿ ಯುದ್ಧದ ಕೆನ್ನಾಲೆಗೆ ಬಲಿಯಾಗುತ್ತಲೇ ಬಂದಿವೆ. 80ರ ದಶಕದಲ್ಲಿ ನಡೆದ ಇರಾನ್-ಇರಾಕ್ ಯುದ್ಧವೊಂದರಲ್ಲಿಯೇ 8 ಲಕ್ಷ ಜನ ಸಾವೀಗಿಡಾದರು. 2ನೆಯ ಮಹಾಯುದ್ಧದ ಕಾಲದಲ್ಲಿ ಜಪಾನ ದೇಶದ ಪ್ರಮುಖ ನಗರಗಳಾದ ಹಿರೋಷಿಮಾ, ನಾಗಸಾಕಿ ನಗರಗಳಲ್ಲಿ ಬಿದ್ದ ಪರಮಾಣು ಬಾಂಬಿನ ವಿಕಿರಣಗಳು ಇಂದಿಗೂ ಉಂಟು ಮಾಡುತ್ತಿರುವ ಪರಿಣಾಮಗಳನ್ನು ಸಾಕ್ಷಾತ್ಕರಿಸಿಕೊಂಡಿದ್ದೇವೆ.ಅಮೆರಿಕವಂತೂ 2ನೆಯ ಮಹಾಯುದ್ಧದ ನಂತರ ಉಂಟಾದ ಮಾನಸಿಕ ಅಸಮತೋಲನವನ್ನು ಸರಿಪಡಿಸಿಕೊಳ್ಳಲು ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದೆ. ಈ ಎಲ್ಲ ಘಟನೆಗಳು ನಮ್ಮ ಕಣ್ಣುಮುಂದೆ ರಾರಾಜಿಸುತ್ತಿದ್ದರೂ ಮತ್ತೆ ನಾವು ಯುದ್ಧದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರೆ ಜಗತ್ತಿನ ಆಧುನಿಕ ನಾಗರಿಕತೆಗೆ ಇನ್ನೂ ಬಹುದೂರದಲ್ಲಿದ್ದೇವೆ ಎಂದರ್ಥ. ಇತಿಹಾಸದ ತಿಳಿವಳಿಕೆ ಇದ್ದು, ಇಲ್ಲದವರಂತೆ ನಾಟಕವಾಡುವವರಿಗೆ ಯುದ್ಧದ ಅನಾಹುತಗಳನ್ನು ತಿಳಿಸುವುದಾದರೂ ಹೇಗೆ ಎಂಬುದೇ ಯಕ್ಷಪ್ರಶ್ನೆ.

    ಗತಿಸಿದ ಆಧುನಿಕ ಜಾಗತಿಕ ಯುದ್ಧಗಳು ಅನೇಕ ಸಮುದಾಯಗಳನ್ನು ಇಲ್ಲವಾಗಿಸುವುದರೊಂದಿಗೆ ಅವುಗಳ ಕುಟುಂಬಗಳನ್ನೇ ಸರ್ವನಾಶ ಮಾಡಿದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುವುರೊಂದಿಗೆ ಒಟ್ಟು ರಾಷ್ಟ್ರದ ಅಭಿವೃದ್ಧಿ ಕುಂಠಿತಗೊಳಿಸಿವೆ. ಅವಶ್ಯವಾದ ಮಾನವ ಸಂಪನ್ಮೂಲದ ಪ್ರಾಮಾಣಿಕ ಬಳಕೆಗೂ ತಡೆಯೊಡ್ಡಿದೆ. ಇನ್ನೂ ನಮ್ಮ ಸಾಧನೆ ಸಾರುವ ವಾಸ್ತುಶಿಲ್ಪ, ಕಲಾಸಂಗ್ರಹ ಕೇಂದ್ರಗಳನ್ನು ವಿನಾಶದ ಅಂಚಿಗೆ ತಳ್ಳುತ್ತದೆ. ಯುದ್ಧ ಯೋಧರ ಸಾವೊಂದರಲ್ಲಿಯೇ ಅಂತ್ಯವಾಗುವುದಿಲ್ಲ. ಅದು ಸಮಗ್ರ ದೇಶದ ಸರ್ವಾಂಗೀಣ ಅವನತಿಗೂ ಕಾರಣವಾಗಿ ಬಡತನವನ್ನು ಹೆಚ್ಚಿಸುವುದರ ಮೂಲಕ ಬದುಕುಳಿದವರ ಮನೋಬಲವನ್ನು ಕುಗ್ಗಿಸುತ್ತದೆ. ಉದಾಹರಣೆಗೆ, ಈಗ ಅಫ್ಘಾನಿಸ್ತಾನದ ಶೇಕಡ 67.7ರಷ್ಟು ಯುವಕರು ವಿವಿಧ ಖಿನ್ನತೆಯಿಂದ ಬಳಲುತ್ತಿದ್ದಾರೆ. ಬೋಸ್ನಿಯಾದಲ್ಲಿ ಶೇಕಡ 40ರಷ್ಟು ಜನರು ಬರೀ ದ್ವೇಷದ ಮಾತುಗಳನ್ನು ಆಡುತ್ತಿದ್ದಾರೆ. ಇದೇ ರೀತಿ ರುವಾಂಡಾ, ಲೆಬನಾನ್, ಪ್ಯಾಲಿಸ್ತೀನ್, ಇಸ್ರೇಲ್, ಸೊಮಾಲಿಯಾ, ಉಗಾಂಡ, ಶ್ರೀಲಂಕಾ ಮತ್ತು ಇರಾನ್ ಮೊದಲಾದ ದೇಶಗಳು ಈಗಾಗಲೇ ಜರ್ಜರಿತವಾಗಿವೆ. ಈ ದೇಶಗಳಲ್ಲಿ ಗೆದ್ದವರು ಯಾರು? ಸೋತವರು ಯಾರು? ಇಂದಿಗೂ ಯಾರಿಗೆ ತಿಳಿಯದ ಸಂಗತಿಯಾಗಿದೆ.

    ಯುದ್ಧ ಜನರ ಮನಸ್ಸಿನ ಆರೋಗ್ಯವನ್ನು ಹಾಳು ಮಾಡುವುದಲ್ಲದೆ ಭೌತಿಕವಾಗಿ ದೇಶವನ್ನು ಘಾಸಿಗೊಳಿಸುತ್ತದೆ. ಯುದ್ಧ ಉಂಟು ಮಾಡಿದ ಗಾಯಗಳನ್ನು ಗುಣಪಡಿಸುವುದು ಅಸಾಧ್ಯ. ಯುದ್ಧ ಸಾಮಾನ್ಯ ಜನತೆಯ ತಿಳಿವಳಿಕೆಗೆ ನಿಲುಕದ್ದು, ಭಯಾನಕವಾದದು. ಯುದ್ಧಾನಂತರ ಭಯಾನಕ ಕಾಯಿಲೆಗಳು ಹರಡುವುದರಿಂದ ಆಯಾ ದೇಶದ ಅಭಿವೃದ್ಧಿ 20 ವರ್ಷ ಹಿಂದಕ್ಕೆ ತಳ್ಳಲ್ಪಡುತ್ತದೆ. ಆಕ್ರಂದನವೇ ಯುದ್ಧದ ಸ್ಥಾಯಿಭಾವವಾಗಿರುವುದರಿಂದ ಅಂತಾರಾಷ್ಟ್ರೀಯ ಸಂಬಂಧಗಳನ್ನು ಬಲಹೀನಗೊಳ್ಳುತ್ತವೆ. ಚರಿತ್ರೆಯ ಪುಟಗಳನ್ನು ಯುದ್ಧಕಾಲಕ್ಕೂ ಮುನ್ನ ನಾವು ನೋಡದೆ ಹೋದರೆ ವರ್ತಮಾನ ಅರ್ಥವಾಗುವುದಿಲ್ಲ. ವರ್ತಮಾನ ಅರ್ಥವಾಗದಿದ್ದರೆ ಭವಿಷ್ಯ ಕಗ್ಗತ್ತಿಲಿನ ಕಾರ್ಮೋಡವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts