ಅಪರೂಪದ ಸಾಧಕಿಯರಿಗೆ ಆತ್ಮೀಯ ಸಮ್ಮಾನ

ಬೆಂಗಳೂರು: ಅಲ್ಲಿ ಒಂದೆಡೆ ಸುಂದರಿಯರು, ಮತ್ತೊಂದೆಡೆ ಸಾಧಕಿಯರು. ಇಬ್ಬರಲ್ಲೂ ಸಂಭ್ರಮ. ಹೀಗೆ ಸೌಂದರ್ಯ- ಸಾಧನೆಗಳೆರಡರ ಸಮಾಗಮಕ್ಕೆ ಕಾರಣವಾಗಿದ್ದು ವಿಜಯವಾಣಿ ಮತ್ತು ದಿಗ್ವಿಜಯ 24×7 ಚಾನೆಲ್ ವತಿಯಿಂದ ಪ್ರದಾನ ಮಾಡಿದ ವರ್ಷದ ಸಾಧಕಿ ಪ್ರಶಸ್ತಿ ಹಾಗೂ ಇದಕ್ಕೆ ವೇದಿಕೆಯಾದ ಮಿಸೆಸ್ ಇಂಡಿಯಾ ಕರ್ನಾಟಕ ಸಮಾರಂಭ. ಸಮಾಜ ಸೇವಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿ ಮಾದರಿಯಾಗಿರುವ ಐವರು ಅಪರೂಪದ ಸಾಧಕರಿಗೆ ಶನಿವಾರ ಯಶವಂತಪುರದ ಆರ್​ಜಿ ರಾಯಲ್ ಕನ್ವೆನ್ಷನ್ ಸೆಂಟರ್​ನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ ಸಮಾರಂಭದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 24×7 ಚಾನೆಲ್​ನಿಂದ ವರ್ಷದ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಆರ್​ಎಲ್

ಸಮೂಹ ಸಂಸ್ಥೆಗಳ ಎಂಡಿ ಆನಂದ ಸಂಕೇಶ್ವರ ಅವರು ಸಾಧಕರನ್ನು ಸನ್ಮಾನಿಸಿದರು. ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಸ್ಪರ್ಶ ಆಸ್ಪತ್ರೆಯ ಡಾ. ಜಯಂತಿ ಥುಮ್ಸಿ, ನೊಂದವರ ಬಾಳಿಗೆ ಆಶಾಕಿರಣವಾಗಿರುವ ಮಂಗಳೂರಿನ ಪ್ರೊ. ಹಿಲ್ಡಾ ರಾಯಪ್ಪನ್, ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿರುವ ಅಪ್ಪಟ ಕನ್ನಡತಿ ವೇದಾ ಕೃಷ್ಣಮೂರ್ತಿ, ಸಮಾಜ ಸೇವೆಗಾಗಿ ಜೀವನವನ್ನು ಮುಡುಪಿಟ್ಟಿರುವ ನಿವೃತ್ತ ಶುಶ್ರೂಷಕಿ ಜನ್ನಿಬಾಯಿ ಆಗುಂಬೆ ಹಾಗೂ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೊಪ್ಪಳದ ಕೋಮಲಾ ಕುದರಿಮೋತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಲೆಮರೆಯ ಕಾಯಿಗಳಂತಿದ್ದು, ಸಮಾಜದ ಸುಧಾರಣೆಗಾಗಿ ಶ್ರಮಿಸುತ್ತಿರುವ ಸಾಧಕರನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ಈ ಪ್ರಶಸ್ತಿ ನೀಡಲು ಮುಂದಾಗಿದ್ದು, ಸಂಸ್ಥೆಯ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಗಮನಸೆಳೆದ ಕಾರ್ಯಕ್ರಮ

ಮಿಸೆಸ್ ಇಂಡಿಯಾ ಕರ್ನಾಟಕ ಕಾರ್ಯಕ್ರಮ ಕೇವಲ ಸ್ಪರ್ಧೆಗೆ ಸೀಮಿತಗೊಳ್ಳದೆ ಸಾಮಾಜಿಕ ಸಂದೇಶ ಸಾರುವಲ್ಲಿಯೂ ಯಶಸ್ವಿಯಾಯಿತು. ಕಾರ್ಯಕ್ರಮದಲ್ಲಿ ಬಾಲಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳ ನೃತ್ಯ ನೆರೆದವರನ್ನು ರೋಮಾಂಚನಗೊಳಿಸಿದರೆ, ಮತ್ತೊಂದು ಕಡೆ ಸ್ತನ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸಲಾಯಿತು. ಯುಎಸ್​ಎ, ಯುಕೆಗಳಲ್ಲಿ ಪೂರ್ಣ ಜಾಗೃತಿ ಮೂಡಿಸಿದ ಪರಿಣಾಮ ಇಂದು ಆ ರಾಷ್ಟ್ರಗಳು ಸ್ತನಕ್ಯಾನ್ಸರ್ ಮುಕ್ತಗೊಳ್ಳುತ್ತಿವೆ. ಭಾರತದಲ್ಲಿ ಸ್ತನಕ್ಯಾನ್ಸರ್​ಗೆ ತುತ್ತಾಗಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಅದನ್ನು ತಡೆಗಟ್ಟುವ ಕಾರ್ಯವಾಗಬೇಕಿದೆ ಎಂದು ಬಿಜಿಎಸ್ ಆಸ್ಪತ್ರೆಯ ರೇಡಿಯೇಷನ್ ಆಂಕಲಾಜಿಸ್ಟ್ ಡಾ.ಜೆ. ಮಾತಂಗಿ ತಿಳಿಸಿದರು. ರ‍್ಯಾಂಪ್ ವಾಕ್ ಮೂಲಕವೂ ಜಲಸಂರಕ್ಷಣೆ, ಪ್ರಾಣಿ, ಕಾಡುಗಳ ರಕ್ಷಣೆ, ಸಂಸ್ಕೃತಿ ಬಿಂಬಿಸುವ ಸಂದೇಶಗಳನ್ನು ಸ್ಪರ್ಧಿಗಳು ನೀಡಿದರು. ವಿಜಯವಾಣಿ ಸಂಪಾದಕ ಕೆ.ಎನ್. ಚನ್ನೇಗೌಡ, ವಿಆರ್​ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕರಡಿ, ಮಿಸೆಸ್ ಇಂಡಿಯಾ ನಿರ್ದೇಶಕಿ ದೀಪಾಲಿ ಪಡ್ನಿಸ್, ಮಿಸೆಸ್ ಇಂಡಿಯಾ ಕರ್ನಾಟಕದ ಮುಖ್ಯಸ್ಥೆ ಪ್ರತಿಭಾ ಸಂಶಿಮಠ್ ಮತ್ತಿತರರಿದ್ದರು.

ಸರ್ವಕ್ಷೇತ್ರಗಳಿಗೂ ಸ್ತ್ರೀಶಕ್ತಿ ಪ್ರೇರಣೆ

ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಆನಂದ ಸಂಕೇಶ್ವರ ಅವರು, ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿದ್ದಾರೆ. ಈ ಬಾರಿ ಕೇಂದ್ರದ ಹಣಕಾಸು ಖಾತೆಯ ಚುಕ್ಕಾಣಿಯನ್ನು ನಿರ್ಮಲಾ ಸೀತಾರಾಮನ್ ಹಿಡಿದಿದ್ದಾರೆ. ಮೆಕ್​ಡೊನಾಲ್ಡ್ ್ಸಲ್ಲಿ ಕೆಲಸ ಮಾಡುತ್ತಿದ್ದ ಸ್ಮೃತಿ ಇರಾನಿ ಅವರು ನಂತರ ‘ಕ್ಯೂಂ ಕಿ ಸಾಸ್ ಭೀ ಕಭೀ ಬಹು ಥಿ’ ಧಾರಾವಾಹಿಯಲ್ಲಿ ನಟಿಸಿ, ಇಂದು ಪ್ರಧಾನಿ ಜತೆಗೆ ಸರಿಸಮಾನವಾಗಿ ಕುಳಿತು ಅಧಿಕಾರ ಚಲಾಯಿಸುವ ಕೇಂದ್ರದ ಮಂತ್ರಿ ಸ್ಥಾನದಲ್ಲಿದ್ದಾರೆ. ಮಹಿಳೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದು ಹೇಳಿದರು. ಇನ್ಪೋಸಿಸ್​ನ ಸುಧಾಮೂರ್ತಿ, ಬಯೋಕಾನ್​ನ ಕಿರಣ್ ಮಜುಂದಾರ್, ಪೊಲೀಸ್ ಅಧಿಕಾರಿ ಆಗಿ ಹೆಸರು ಮಾಡಿ ರಾಜ್ಯಪಾಲರಾಗಿರುವ ಕಿರಣ್ ಬೇಡಿ, ಕ್ರೀಡಾ ಕ್ಷೇತ್ರದಲ್ಲಿ ಪಿ.ವಿ.ಸಿಂಧು, ಮೇರಿಕೋಮ್ ಸೇರಿ ಅನೇಕರು ಅಪ್ರತಿಮ ಸಾಧನೆ ಮಾಡಿದ್ದಾರೆ. ಈ ಎಲ್ಲ ಮಹನೀಯರು ಇಡೀ ಸಮಾಜಕ್ಕೆ ಪ್ರೇರಣೆ ಆಗಿದ್ದು, ಪ್ರತಿಯೊಬ್ಬರೂ ತಮ್ಮಲ್ಲಿರುವ ಸಾಮರ್ಥ್ಯವನ್ನು ಹೊರಹಾಕಿ ಮುಂದೆ ಬರಬೇಕೆಂದು ಕರೆ ನೀಡಿದರು. ವಿಆರ್​ಎಲ್ ಸಮೂಹವನ್ನು ಡಾ. ವಿಜಯ ಸಂಕೇಶ್ವರ ಅವರು ಕೇವಲ ಒಂದು ಲಾರಿಯಿಂದ ಆರಂಭಿಸಿ ಇಂದು 4800 ಸ್ವಂತ ಲಾರಿ ಹಾಗೂ ಬಸ್​ಗಳನ್ನು ಹೊಂದಿದ ಸಂಸ್ಥೆಯಾಗಿ ಬೆಳೆಸಿದ್ದಾರೆ. 22 ಸಾವಿರ ಜನ ಉದ್ಯೋಗಿಗಳಿದ್ದು, ಮಹಿಳೆಯರಿಗೂ ಅತ್ಯುನ್ನತ ಸ್ಥಾನಗಳನ್ನು ನೀಡಿರುವ ಹೆಮ್ಮೆ ಸಂಸ್ಥೆಯದ್ದಾಗಿದೆ ಎಂದರು. ಹಿಂದೆ ಟೇಬಲ್ ಟೆನ್ನಿಸ್ ಆಟಗಾರ್ತಿಯೊಬ್ಬರು ತಮಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಲು ನೆರವು ಕೋರಿ ಫೇಸ್​ಬುಕ್​ನಲ್ಲಿ ಸಂದೇಶ ಕಳುಹಿಸಿದ್ದರು. ಅವರನ್ನು ಕಚೇರಿಗೆ ಕರೆಸಿ ನೆರವು ಘೋಷಿಸಿದಾಗ ಮಲೇಷ್ಯಾದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಟವಾಡಲು ಅವರಿಗೆ ಅವಕಾಶ ಸಿಕ್ಕಿತು. ನಂತರ 8 ದೇಶಗಳನ್ನು ಮಣಿಸಿ ಅವರು ಗೆಲುವು ಸಾಧಿಸಿದ್ದರು. ಸಾಧನೆ ಮಾಡುವ ಛಲ ಹೊಂದಿದ ಸಾಕಷ್ಟು ಮಹಿಳೆಯರಿದ್ದು, ಅಂಥವರಿಗೆ ನೆರವಾಗುವ ಕಾರ್ಯಗಳು ನಡೆಯಬೇಕಿದೆ ಎಂದು ಕರೆ ನೀಡಿದರು. ಮಿಸೆಸ್ ಇಂಡಿಯಾ ಕರ್ನಾಟಕ ವಿಭಿನ್ನ ಕಾರ್ಯಕ್ರಮವಾಗಿದ್ದು, ಮಹಿಳೆಯರಿಗೆ ಇದರಿಂದ ಉತ್ತೇಜನ ಸಿಗುತ್ತಿದೆ. ಇದೇ ಕಾರಣಕ್ಕಾಗಿ ವಿಜಯವಾಣಿ, ದಿಗ್ವಿಜಯ ಚಾನೆಲ್ ಈ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಸಾಕಷ್ಟು ಗೃಹಿಣಿಯರು ಹುಮ್ಮಸ್ಸಿನಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಈ ರೀತಿಯ ಕಾರ್ಯಕ್ರಮಗಳು ಮುಂದುವರಿಯಲಿ ಎಂದು ಆನಂದ ಸಂಕೇಶ್ವರ ಆಶಿಸಿದರು.

ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಸಾಧಕಿಯರನ್ನು ಗುರುತಿಸುವ ಅಪೂರ್ವ ಕಾರ್ಯಕ್ಕೆ ಮುಂದಾಗಿರುವುದು ಖುಷಿಯ ವಿಚಾರ.

| ಪ್ರತಿಭಾ ಸಂಶಿಮಠ್, ನಿರ್ದೇಶಕಿ, ಮಿಸೆಸ್ ಇಂಡಿಯಾ ಕರ್ನಾಟಕ

ಪ್ರಜ್ಞಾ ಸಲಹಾ ಕೇಂದ್ರದ ಮೂಲಕ ಮಹಿಳೆಯರಿಗೆ ಚೇತನ ತುಂಬುವ ಕಾರ್ಯ ಮಾಡಲಾಗುತ್ತಿದೆ. ಸಂಸ್ಥೆಯ ಕಾರ್ಯವನ್ನು ವಿಜಯವಾಣಿ ಮತ್ತು ದಿಗ್ವಿಜಯ 24×7 ಚಾನೆಲ್ ಗುರುತಿಸಿರುವುದು ಖುಷಿ ನೀಡಿದೆ. ನಾವು ಮಾಡುತ್ತಿರುವ ಕಾರ್ಯ ಸಮಾಜವನ್ನು ತಲುಪಿದೆ ಎಂಬುದಕ್ಕೆ ಈ ಸಂಸ್ಥೆಗಳು ನಮ್ಮನ್ನು ಗುರುತಿಸಿರುವುದೇ ಸಾಕ್ಷಿ.

| ಡಾ. ಹಿಲ್ಡಾ ರಾಯಪ್ಪನ್, ಮಂಗಳೂರು

ಪ್ರಿಯಾಂಕಾ ಅಭಿಷೇಕ್ ಮಿಸೆಸ್ ಇಂಡಿಯಾ ಕರ್ನಾಟಕ

ಮಿಸೆಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ದಂತ ವೈದ್ಯೆ ಡಾ. ಪ್ರಿಯಾಂಕಾ ಅಭಿಷೇಕ್ ವಿಜೇತರಾಗಿದ್ದಾರೆ. ಈ ಬಾರಿಯ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಗ್ರಾ್ಯಂಡ್ ಫಿನಾಲೆಗೆ 46 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು. ಶನಿವಾರ ಮೂರು ಸುತ್ತುಗಳಲ್ಲಿ ಸ್ಪರ್ಧೆ ನಡೆದು ಕೊನೆಗೆ ಡಾ.ಪ್ರಿಯಾಂಕ ಅಭಿಷೇಕ್ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು. ವಿಆರ್​ಎಲ್ ಸಮೂಹದ ಎಂಡಿ ಆನಂದ ಸಂಕೇಶ್ವರ ಅವರು ಪ್ರಿಯಾಂಕಾ ಅವರಿಗೆ ಕಿರೀಟ ತೊಡಿಸಿ ಗೌರವಿಸಿದರು. 22-40 ವಯೋಮಾನದವರಿಗಾಗಿ ಮಿಸೆಸ್ ಇಂಡಿಯಾ ಕರ್ನಾಟಕ, 40-60 ವಯೋಮಾನದವರಿಗಾಗಿ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಹಾಗೂ 60 ಮೇಲ್ಪಟ್ಟವರಿಗಾಗಿ ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಸ್ಪರ್ಧೆ ಸಂಘಟಿಸಲಾಯಿತು. ಇಲ್ಲಿ ಆಯ್ಕೆ ಆದವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶವಿರುತ್ತದೆ ಎಂದು ಕಾರ್ಯಕ್ರಮದ ಸಂಘಟಕಿ ಪ್ರತಿಭಾ ಸಂಶಿಮಠ ತಿಳಿಸಿದ್ದಾರೆ. ಪರಿಸರ ಸ್ನೇಹಿಯಾಗಿರುವ ಯುಲು ಬೈಕ್ಸ್ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *