ವಿಜಯವಾಣಿ, ದಿಗ್ವಿಜಯ ನ್ಯೂಸ್‌ನಿಂದ ಮಹಿಳಾ ಸಮಾನತೆಗೆ ವಾಕಥಾನ್, ಸಾಧಕಿಯರಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯವಾಣಿ ಮತ್ತು ದಿಗ್ವಿಜಯ 2X7 ನ್ಯೂಸ್‌ನಿಂದ ಉದ್ಯಾನನಗರಿಯಲ್ಲಿ ‘ಮಹಿಳೆಯರ ಸಮಾನತೆಗಾಗಿ ವಾಕಥಾನ್’ ಆಯೋಜಿಸಿದ್ದು, ಇದೇ ಸಂದರ್ಭದಲ್ಲಿ ನಾಡಿನ ಸಾಧಕಿಯರನ್ನು ಗುರುತಿಸಿ ‘ಸಾಧಕಿ- 2019’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

‘ಲಿಂಗ ಸಮಾನತೆ ಸಮಾಜ ಸ್ವಾಸ್ಥ್ಯದ ಮೂಲ ಬೇರು. ಇದನ್ನು ವಿಶ್ವಾದ್ಯಂತ ಸಾಧಿಸುವುದು ಎಲ್ಲರ ಆಶಯ’ ಎಂಬುದು ಈ ಬಾರಿಯ ವಿಶ್ವ ಮಹಿಳಾ ದಿನದ ಘೋಷವಾಕ್ಯವಾಗಿದ್ದು, ‘ಬ್ಯಾಲೆನ್ಸ್ ಫಾರ್ ಬೆಟರ್’ ಘೋಷ ವಾಕ್ಯದಡಿ ನಡೆಯುವ ವಾಕಥಾನ್​ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ. ಜಯಮಾಲಾ, ಹೋಂಗಾರ್ಡ್‌ ಸಿವಿಲ್ ಡಿಫೆನ್ಸ್ ಐಜಿಪಿ ರೂಪಾ ಡಿ, ಬಿಬಿಎಂಪಿ ಮಹಾಪೌರಾದ ಗಂಗಾಂಬಿಕೆ ಮಲ್ಲಿಕಾರ್ಜುನ ಮತ್ತು ನಟಿ ಹರಿಪ್ರಿಯ ಭಾಗವಹಿಸಲಿದ್ದಾರೆ.

ವಿಧಾನಸೌಧದಿಂದ ಆರಂಭ

ಶುಕ್ರವಾರ (ಮಾ.8) ಬೆಳಗ್ಗೆ 7 ಗಂಟೆಗೆ ವಿಧಾನಸೌಧದ ಮುಂಭಾಗದಿಂದ ಆರಂಭವಾಗುವ ಮಹಿಳಾ ವಾಕಥಾನ್ ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸಮಾಪ್ತಿಗೊಳ್ಳಲಿದೆ. ಬಳಿಕ ಅದೇ ರಸ್ತೆಯಲ್ಲಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್​ಕೆಸಿಸಿಐ) ಸಭಾಂಗಣದಲ್ಲಿ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಮಿಸ್ಡ್ ಕಾಲ್ ಕೊಡಿ…

ಮಹಿಳೆಯರ ವಾಕಥಾನ್​ದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸಲಿಚ್ಛಿಸುವವರು ಆಸಕ್ತರು, ದೂ.ಸಂ: 90290 59273ಗೆ ಮಿಸ್ಡ್ ಕಾಲ್ ನೀಡಬಹುದು.

ವಾಕಥಾನ್ ಆರಂಭ: ಮಾ. 8ರ ಬೆಳಗ್ಗೆ 7ಕ್ಕೆ

ಎಲ್ಲಿಂದ: ವಿಧಾನಸೌಧದ ಮುಂಭಾಗ

ಎಲ್ಲಿವರೆಗೆ: ಕೆ.ಜಿ. ರಸ್ತೆಯ ಮೈಸೂರು ಬ್ಯಾಂಕ್ ವೃತ್ತ

ಸಭಾ ಕಾರ್ಯಕ್ರಮ: ಕೆ.ಜಿ. ರಸ್ತೆಯ ಎಫ್​ಕೆಸಿಸಿಐ ಸಭಾಂಗಣ

ವಿಶೇಷತೆ: ಮಹಿಳಾ ಸಾಧಕಿಯರಿಗೆ ಪ್ರಶಸ್ತಿ ಪ್ರದಾನ