ಮತದಾರನ ಮನ ಗೆದ್ದ ಮೋದಿ: ನಮೋ ದಿಗ್ವಿಜಯಕ್ಕೆ ಕಾರಣಗಳು ಹಲವು

ಮೋದಿ ದಿಗ್ವಿಜಯಕ್ಕೆ ಕಾರಣಗಳು ಹಲವು. ವಿಪಕ್ಷಗಳು ಮೋದಿ ಜನಪ್ರಿಯತೆಯನ್ನು ಗ್ರಹಿಸುವಲ್ಲಿ ಸಂಪೂರ್ಣ ವಿಫಲವಾದವು ಮತ್ತು ಪ್ರಧಾನಿ ವಿರುದ್ಧದ ಆರೋಪಗಳನ್ನು ಜನ ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕಿದರು. ಇದಕ್ಕೆ ಚುನಾವಣಾ ಫಲಿತಾಂಶವೇ ಸಾಕ್ಷಿ. ವಿಪಕ್ಷಗಳ ಗ್ರೌಂಡ್ ರಿಯಾಲಿಟಿ ಹೊರತಾದ ಚಿಂತನೆ, ಕಾರ್ಯಗಳೂ ಎನ್​ಡಿಎ ಪ್ರಚಂಡ ಬಹುಮತಕ್ಕೆ ಕಾರಣವಾದವು. ಇವೆಲ್ಲದರ ಬಗ್ಗೆ ವಿವರಣೆ ನೀಡಿದ್ದಾರೆ ವಿಜಯವಾಣಿ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ.

ಮೋದಿ, ಮೋದಿ, ಮೋದಿ… 2019ರ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಕೇಳಿಬಂದ ಏಕೈಕ ಚುನಾವಣಾ ವಿಷಯವೇ ಇದು. ಉತ್ತರ ಪ್ರದೇಶ, ಗುಜರಾತ್, ಬಿಹಾರ, ರಾಜಸನ, ಮಧ್ಯಪ್ರದೇಶ, ಹರ್ಯಾಣ, ಛತ್ತೀಸ್​ಗಢ, ಕರ್ನಾಟಕ ಸೇರಿ ಬಹುತೇಕ ರಾಜ್ಯಗಳ ಮತದಾರರಲ್ಲಿ ‘ನೀವು ಯಾವ ವಿಷಯದ ಆಧಾರದಲ್ಲಿ ಮತ ಹಾಕುತ್ತೀರಿ’ ಎಂದು ಪ್ರಶ್ನಿಸಿದ್ದಾಗ, ಜನರು ನೀಡಿದ್ದ ಉತ್ತರ ‘ಮೋದಿ’. ಕಳೆದೈದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ, ಆಡಳಿತ ಶೈಲಿ ಜನ-ಮನದೊಳಗೆ ಹೇಗೆ ಪರಿಣಾಮಕಾರಿಯಾಗಿ ನುಸುಳಿಕೊಂಡಿದೆಯೆನ್ನುವುದಕ್ಕೆ ಎನ್​ಡಿಎ ಮೈತ್ರಿಕೂಟದ ಅಭೂತಪೂರ್ವ ದಿಗ್ವಿಜಯವೇ ಸಾಕ್ಷಿ. 2014ರ ಚುನಾವಣೆಗಿಂತಲೂ ಹೆಚ್ಚು ಸೀಟುಗಳನ್ನು ಬಾಚಿಕೊಂಡಿರುವ ಎನ್​ಡಿಎ ಎದುರು ತಮಿಳುನಾಡಿನ ಡಿಎಂಕೆ ಹೊರತುಪಡಿಸಿ ಉಳಿದೆಲ್ಲಾ ವಿಪಕ್ಷಗಳು ಮಕಾಡೆ ಮಲಗಿಬಿಟ್ಟಿವೆ. ಎಲ್ಲಿಯವರೆಗೆ ಎಂದರೆ ಮತ್ತೊಮ್ಮೆ ಲೋಕಸಭೆ ಅಧಿಕೃತ ವಿಪಕ್ಷದ ಕೊರತೆ ಎದುರಿಸಲಿದೆ!

5 ವರ್ಷದ ಮೋದಿ ಕಾರ್ಯವೈಖರಿ ನೋಡಿದ ದೇಶದ ಬಹುಪಾಲು ಮಂದಿಗೆ ‘ಈ ಮನುಷ್ಯ ದೇಶಕ್ಕಾಗಿ ಹಗಲು-ರಾತ್ರಿ ದುಡಿಯುತ್ತಾನೆ’ ಎಂದನಿಸಿದ್ದು ನಿಜ. ಇದನ್ನು ಗ್ರಹಿಸುವಲ್ಲಿ ಯಶಸ್ವಿಯಾದ ಬಿಜೆಪಿ ನಾಯಕರೂ, ಈ ಚುನಾವಣೆಯನ್ನೂ ಅಧ್ಯಕ್ಷೀಯ ಮಾದರಿ ಚುನಾವಣೆಯಾಗಿ ಪರಿವರ್ತಿಸುವಲ್ಲಿ ಸಫಲರಾದರು. ಹೀಗಾಗಿಯೇ, 543 ಕ್ಷೇತ್ರಗಳಲ್ಲಿ ಬಿಜೆಪಿಯ 543 ಅಭ್ಯರ್ಥಿಗಳಿದ್ದರೂ ಜನ ಮತ ಹಾಕಿದ್ದು ಮಾತ್ರ ಮೋದಿ ಎಂಬ ಮುಖಕ್ಕೆ. ವಿಪಕ್ಷಗಳು ಬಿಜೆಪಿ ಸಂಸದರ ವೈಫಲ್ಯಗಳನ್ನು ಎತ್ತಿ ತೋರಿಸಿದರೂ ನೋಡುವ ತಾಳ್ಮೆ ಜನರಲ್ಲಿರಲಿಲ್ಲ. ಮೋದಿ ಪ್ರಭಾವದ ಮುಂದೆ ವಿಪಕ್ಷಗಳ ಬೊಬ್ಬೆಗೆ ಜಾಗವಿರಲಿಲ್ಲ. ಕಾಂಗ್ರೆಸ್ ‘ಚೌಕಿದಾರ್ ಚೋರ್ ಹೈ’ ಎಂಬ ಪ್ರಚಾರ ನಿರೂಪಣೆ ಮೂಲಕ ಪ್ರಧಾನಿ ಭ್ರಷ್ಟಾಚಾರಿ ಎಂದು ಬಿಂಬಿಸಲು ಯತ್ನಿಸಿದರೂ ಮತದಾರ ಒಪ್ಪಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ‘ಸುಪ್ರೀಂಕೋರ್ಟ್ ಕೂಡ ಚೌಕಿದಾರ್ ಚೋರ್ ಹೇ ಎಂದು ವ್ಯಾಖ್ಯಾನಿಸಿದೆ’ ಎಂಬ ಬಾಣ ಬಿಟ್ಟರು. ಈ ಪ್ರಮಾದಕ್ಕೆ ಸುಪ್ರೀಂಕೋರ್ಟ್ ಮುಂದೆ ಕ್ಷಮೆ ಯಾಚಿಸಬೇಕಾಯಿತು. ಚೌಕಿದಾರ್ ಚೋರ್ ಹೈ ಎಂಬುದು ಬಿಜೆಪಿಗೆ ಹಾನಿ ಮಾಡುವುದಕ್ಕಿಂತ ಕಾಂಗ್ರೆಸ್ಸಿಗೇ ತಿರುಗುಬಾಣವಾಗಿ ಪರಿಣಮಿಸಿತು. ಒಟ್ಟಿನಲ್ಲಿ, ‘ಕಾಮ್ಾರ್ ಮೋದಿ’ಯಿಂದಾಗಿ ಸರ್ಕಾರದ ಉಳಿದ ನ್ಯೂನತೆಗಳನ್ನು ಜನ ಕ್ಷಮಿಸಿದ್ದರು. ಉತ್ತರ ಭಾರತದ ಗ್ರಾಮೀಣ ಭಾಗದ ಜನರಲ್ಲಿ ‘ಮೋದಿ ಭ್ರಷ್ಟ ಎಂದು ನಿಮಗನಿಸುತ್ತದೆಯೇ’ ಎಂದು ಕೇಳಿದರೆ, ‘ನಹೀ ವೋ ಠೀಕ್ ಆದ್ಮಿ ಹೈ’ ಎಂದೇ ಹೇಳುತ್ತಿದ್ದರು. ‘ವೈಯಕ್ತಿಕವಾಗಿ ಮೋದಿ ಶುದ್ಧ ಹಸ್ತರು. ಸ್ವಜನಪಕ್ಷಪಾತಿಯಲ್ಲ. ಸ್ವಂತ ಲಾಭಕ್ಕಾಗಿ ರಾಜಕೀಯವನ್ನು ಬಳಸಿಕೊಂಡಿಲ್ಲ’ ಎಂದು ಜನ ಬಲವಾಗಿ ನಂಬಿದ್ದರು/ನಂಬಿದ್ದಾರೆ. ಬಿಜೆಪಿ ಪರವಾದ ಜನಾಭಿಪ್ರಾಯದಲ್ಲಿ ಈ ಅಂಶ ಅತ್ಯಂತ ಮಹತ್ವದ ಪಾತ್ರವಹಿಸಿತು.

ಪ್ರಭಾವ ಬೀರಿದ ಪ್ರಮುಖ ಅಂಶ

  • ದೇಶದ ರಕ್ಷಣೆಗೆ ಬಿಜೆಪಿ ನೀಡಿದ ಆದ್ಯತೆ
  • ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹೆಚ್ಚಿದ ಗೌರವ
  • ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ಉಗ್ರ ನಿಗ್ರಹ ತಾಕತ್ತು
  • ಭ್ರಷ್ಟಾಚಾರ ರಹಿತ ಆಡಳಿತ
  • 5 ವರ್ಷದ ಅಭಿವೃದ್ಧಿ ಯೋಜನೆಗಳು
  • ನಾಯಕರ ಗೆಲುವಿನ ಭ್ರಮೆ

ವಿಧಾನಸಭೆಗಳಲ್ಲಿ ಹಿನ್ನಡೆಯಾದರೂ ಬಿಜೆಪಿ ಕಾರ್ಯಕರ್ತ ಪಡೆ ಮಾನಸಿಕವಾಗಿ ಕುಗ್ಗಲಿಲ್ಲ, ಸುಮ್ಮನೆ ಕೂರಲಿಲ್ಲ. ಕೈ ನಾಯಕರು ಗೆಲುವಿನ ಭ್ರಮೆಯಲ್ಲಿ ಬೀಗಿದರು. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 325 ಸೀಟುಗಳನ್ನು ಗೆದ್ದು ಪ್ರಚಂಡ ಬಹುಮತ ಸಾಧಿಸಿದ್ದಾಗ ಬಿಜೆಪಿ ವರಿಷ್ಠರು ರಾಜ್ಯದ ಕಾರ್ಯಕರ್ತರಿಗೆ 1 ವಾರದ ರಜೆ ಮಾತ್ರ ನೀಡಿದ್ದರಂತೆ. ವಾರದ ಬಳಿಕ 2019ಕ್ಕೆ ತಯಾರಿ ನಡೆಸುವುದಿದೆ ಎಂದು ಸೂಚನೆ ಕೊಟ್ಟಿದ್ದ ವರಿಷ್ಠರ ಮಾತಿನಂತೆ ವಾಪಸಾಗಿದ್ದ ಕಾರ್ಯಕರ್ತರು ತಕ್ಷಣವೇ ಲೋಕಸಭೆ ಸಿದ್ಧತಾ ಕಾರ್ಯ ಶುರು ಮಾಡಿದ್ದರು. ‘ವಿಧಾನಸಭೆ ಗೆದ್ದಾಯ್ತು, 2019ನ್ನು ಸುಲಭದಲ್ಲಿ ಗೆಲ್ಲುತ್ತೇವೆ’ ಎಂಬ ಭ್ರಮೆಯಲ್ಲಿ ಬಿಜೆಪಿ ತೇಲಲಿಲ್ಲ. ಬದಲಿಗೆ, ಆರ್​ಎಸ್​ಎಸ್, ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಿದರು. ಗೋರಖನಾಥ್ ಮಂದಿರದ ಸ್ವಾಮೀಜಿ ಯೋಗಿ ಆದಿತ್ಯನಾಥರನ್ನು ಸಿಎಂ ಮಾಡಿದ ಮೇಲಂತೂ ರಾಜ್ಯವ್ಯಾಪಿ ಹಿಂದು ಸಂಘಟನೆಗಳೆಲ್ಲವೂ ಸಕ್ರಿಯಗೊಂಡವು. ಬಿಜೆಪಿಯ ಶಕ್ತಿಶಾಲಿ ಕಾರ್ಯಪಡೆ ಮುಂದೆ ಮಹಾಮೈತ್ರಿಯ ಜಾತಿ ಸಮೀಕರಣ ಕೆಲಸ ಮಾಡಲಿಲ್ಲ. ಬಂಗಾಳದಲ್ಲಿ ಕಳೆದೆರಡು ವರ್ಷಗಳಿಂದ ಬಿಜೆಪಿಯ 300 ವಿಸ್ತಾರಕರು ರಾಜ್ಯದ ಮೂಲೆ ಮೂಲೆಗೆ ಸಂಚರಿಸಿ ಬಿಜೆಪಿ ಪರ ವಾತಾವರಣ ನಿರ್ಮಾಣ ಮಾಡಿದ್ದಾರೆ. ಚುನಾವಣೆ ವೇಳೆ ಮೋದಿ ಕೈಗೊಂಡ 18 ರ್ಯಾಲಿಗಳು ‘ಬಂಗಾಳ ಕದನ’ಕ್ಕೆ ಪುಷ್ಟಿ ನೀಡಿದವು.

ವಿಪಕ್ಷದಲ್ಲಿ ನಾಯಕತ್ವ ಕೊರತೆ

ಮೋದಿ ಸೋಲಿಸಲು ಆಕ್ರಮಣಕಾರಿ, ವರ್ಚಸ್ವಿ ನಾಯಕತ್ವ ಬೇಕೇಬೇಕು ಎಂಬುದು ಈಗ ವಿರೋಧಿ ಕೂಟಕ್ಕೆ ಅರ್ಥವಾಗಿರಬಹುದು. ದೇಶದ ಬಹುತೇಕ ಕ್ಷೇತ್ರಗಳಲ್ಲಿ ‘ಮೋದಿ ಬಿಟ್ಟರೆ ಇನ್ಯಾರು’ ಎಂಬ ಪ್ರಶ್ನೆಯನ್ನು ಜನರೇ ಮುಂದಿಡುತ್ತಿದ್ದರು. ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿ ಸೂಕ್ತ ಅಭ್ಯರ್ಥಿಯೇ ಎಂದು ಕೇಳಿದ್ದಾಗ ಬಹುತೇಕ ಮತದಾರರು ಇಲ್ಲ ಎನ್ನುತ್ತಿದ್ದರು. ವಾಸ್ತವದಲ್ಲಿ ಕಾಂಗ್ರೆಸ್ಸಿಗರು ಕೂಡ ಪೂರ್ಣ ಮನಸ್ಸಿನಿಂದ ‘ಹಮಾರಾ ಪಿಎಂ ರಾಹುಲ್ ಗಾಂಧಿ’ ಎಂಬ ಘೊಷಣೆ ಹಾಕುತ್ತಿದ್ದುದೇನಲ್ಲ. ರಾಹುಲ್ ಧೀಮಂತ ನಾಯಕ ಎಂದು ಬಿಂಬಿಸುವುದು ಅವರಿಗೆ ಅನಿವಾರ್ಯವಾಗಿತ್ತು. ಮಾಯಾವತಿ, ಮಮತಾ ಬ್ಯಾನರ್ಜಿ, ಚಂದ್ರಬಾಬು ನಾಯ್ಡು, ಚಂದ್ರಶೇಖರ ರಾವ್, ಶರದ್ ಪವಾರ್​ಗೆ ಪ್ರಧಾನಿ ಖುರ್ಚಿಯೇರುವ ಮನಸ್ಸಿದ್ದರೂ ತಮ್ಮ ರಾಜ್ಯಗಳಾಚೆಗೆ ಈ ನಾಯಕರು ಜನ ಮನ್ನಣೆ ಗಳಿಸಿಲ್ಲ. ವಿಪಕ್ಷಗಳಲ್ಲಿನ ‘ನಾಯಕತ್ವದ ಕೊರತೆ’ಯೇ ಮೋದಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿತು. ಹೀಗಾಗಿ ವಿಪಕ್ಷಗಳ ಮಹಾಮೈತ್ರಿ ಸಾಧ್ಯವಾಗಲೇ ಇಲ್ಲ. ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ಮಹಾಮೈತ್ರಿಯಿಂದ ಕಾಂಗ್ರೆಸ್​ನ್ನು ದೂರವಿಡಲಾಯಿತು. ಕಾಂಗ್ರೆಸ್ ಪ್ರತ್ಯೇಕ ಸ್ಪರ್ಧೆಯಿಂದ ಹಲವು ಕ್ಷೇತ್ರಗಳಲ್ಲಿ ಮಹಾಮೈತ್ರಿ ಮತಗಳು ಒಡೆದು ಮೋದಿ ಹಾದಿ ಸುಗಮವೆನಿಸಿತು.

ಮೇಲ್ವರ್ಗಕ್ಕೆ ಮೀಸಲಾತಿ

ಮೇಲ್ವರ್ಗದ ಮಂದಿಗೆ ಶೇ.10 ಮೀಸಲಾತಿ ಜಾರಿಗೊಳಿಸಿದ ನಿರ್ಧಾರವೂ ಮೋದಿ ಗೆಲುವಿನಲ್ಲಿ ಶ್ರಮವಹಿಸಿತು. ಮೀಸಲಾತಿ ನೀಡಿ ಎಂದು ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದ ರಾಜಸ್ತಾನದ ಜಾಟ್, ಗುಜರಾತ್​ನ ಪಟೇಲ್, ಮಹಾರಾಷ್ಟ್ರದ ಮರಾಠ ಸೇರಿದಂತೆ ವಿವಿಧ ಮೇಲ್ವರ್ಗಗಳು ಶೇ.10 ಮೀಸಲಾತಿ ಘೊಷಣೆ ಬಳಿಕ ಸುಮ್ಮನಾದವು. ಗುಜರಾತ್​ನಲ್ಲಿ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರಿದ್ದು ಬಿಜೆಪಿ ಮೇಲೆ ಪರಿಣಾಮ ಬೀರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತೆವಳುತ್ತಾ ಸಾಗಿ ಅಧಿಕಾರ ಸ್ಥಾಪಿಸಿದರೂ ಲೋಕಸಭೆ ಚುನಾವಣೆಯಲ್ಲಿ ‘ಮೋದಿ ನಮ್ಮವ ಎಂಬ ಗುಜರಾತಿ ಅಸ್ಮಿತೆ’ 2014ರಂತೆ ಎಲ್ಲ 26 ಸೀಟುಗಳು ಬಿಜೆಪಿ ತೆಕ್ಕೆಗೆ ಬೀಳುವಂತೆ ಮಾಡಿದೆ. ನರ್ಮದಾ ಜಿಲ್ಲೆಯ ಸರ್ದಾರ್ ಸರೋವರ ಡ್ಯಾಮ್ೆ ಎದುರಾಗಿ ವಲ್ಲಭಬಾಯ್ ಪಟೇಲ್ ಪ್ರತಿಮೆ ನಿರ್ವಣದ ಬಳಿಕವಂತೂ ಬಿಜೆಪಿ ಬಗ್ಗೆ ಸಿಟ್ಟಾಗಿದ್ದ ಪಟೇಲರೆಲ್ಲರೂ ಮತ್ತೊಮ್ಮೆ ಮೋದಿ ಎನ್ನತೊಡಗಿದ್ದು ಗಮನಾರ್ಹ.

ಮಹಿಳೆಯರ ಹಕ್ಕು ರಕ್ಷಣೆ

ತ್ರಿವಳಿ ತಲಾಕ್ ಬಗ್ಗೆ ಕೇಂದ್ರದ ಖಡಕ್ ನಿಲುವಿನಿಂದ ಮುಸ್ಲಿಂ ಮಹಿಳೆಯರ ಮನಸ್ಸು ಬದಲಾಗದು ಎಂಬ ಪ್ರಚಾರ ವನ್ನು ವ್ಯವಸ್ಥಿತವಾಗಿ ತೇಲಿಬಿಡಲಾಗಿತ್ತು. ಆದರೆ ಉತ್ತರ ಪ್ರದೇಶ, ಬಿಹಾರ ಸೇರಿ ಬಹುಪಾಲು ರಾಜ್ಯಗಳಲ್ಲಿ ಸುಧಾರಣಾವಾದಿ ಮುಸ್ಲಿಂ ಮಹಿಳೆಯರಲ್ಲಿ ಮೋದಿ ಬಗ್ಗೆ ಅಭಿಮಾನ ಮೂಡಿದೆ. ಇವರಲ್ಲಿ ಅನೇಕ ಮಂದಿ ಪತಿಯ ಮಾತನ್ನು ಮೀರಿ ಮೋದಿಗೆ ಮತ ಹಾಕಿದ್ದಾರೆ ಎಂಬ ಮಾತುಗಳಿವೆ. ತ್ರಿವಳಿ ತಲಾಕ್​ನಿಂದ ಮುಸ್ಲಿಂ ಮಹಿಳೆಯರು ಮಾತ್ರವಲ್ಲ, ಹಿಂದು ಮಹಿಳೆಯರಲ್ಲೂ ಮೋದಿ ಸರ್ಕಾರದ ಬಗೆಗಿನ ಅಭಿಪ್ರಾಯ ಬದಲಾಗಿದೆ. ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲುಶಿಕ್ಷೆ ನೀಡುವ ಕಾಯ್ದೆ ಜಾರಿ ಮಾಡಿದ್ದು ಕೂಡ ಎಲ್ಲಾ ವರ್ಗದ ಮಹಿಳೆಯರ ಪ್ರಶಂಸೆಗೆ ಪಾತ್ರವಾಯಿತು. ಬಿಹಾರದಲ್ಲಿ ನಿತಿಶ್ ಕುಮಾರ್ ಸರ್ಕಾರ ಮದ್ಯ ನಿಷೇಧಿಸಿದ್ದರಿಂದ ಮಹಿಳೆಯರು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆಂಬ ಅಭಿಪ್ರಾಯವಿದೆ.

ಭದ್ರತೆಗೆ ನೀಡಿದ ಆದ್ಯತೆ

ವಿದ್ಯುನ್ಮಾನ ಮಾಧ್ಯಮ, ಸೋಷಿಯಲ್ ಮೀಡಿಯಾಗಳು ಬಂದ ಬಳಿಕ ದೇಶದ ಮೂಲೆ ಮೂಲೆಗೂ ಸುದ್ದಿ/ಮಾಹಿತಿ ತಲುಪುತ್ತಿದೆ. ಹೀಗಾಗಿ, ಮೋದಿ ಕಾರಣದಿಂದಾಗಿ ವಿದೇಶದಲ್ಲಿ ಭಾರತದ ವರ್ಚಸ್ಸು ಹೆಚ್ಚಾಗಿದೆ ಎಂದು ಗ್ರಾಮೀಣಡಿ ಮತದಾರನೂ ಮಾತನಾಡಿಕೊಳ್ಳುತ್ತಿದ್ದಾನೆ. ‘‘ಮೋದಿ ಪ್ರಭಾವದಿಂದಾಗಿಯೇ ಪಾಕಿಸ್ತಾನದ ವಶದಲ್ಲಿದ್ದ ವಾಯುಸೇನೆಯ ಪೈಲಟ್ ಅಭಿನಂದನ್ ವರ್ಧಮಾನ್ ಎರಡೇ ದಿನದಲ್ಲಿ ಭಾರತಕ್ಕೆ ವಾಪಸ್ಸಾದರು. ಹಿಂದೆ ಭಾರತದ ಪರಿಸ್ಥಿತಿ ಹೀಗಿರಲಿಲ್ಲ’ ಎಂಬ ಸಾರ್ವಜನಿಕ ಚರ್ಚೆಗಳು ಈ ಫಲಿತಾಂಶದಲ್ಲಿ ಪ್ರತಿಫಲಿಸಿವೆ. ಪುಲ್ವಾಮಾ ಉಗ್ರರ ದಾಳಿ ಬಳಿಕ ಭಾರತದ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್ ಮೇಲೆ ಪ್ರತಿದಾಳಿ ಮಾಡಿದ ಬಳಿಕವಂತೂ, ಮಹಾಘಟಬಂಧನಕ್ಕೆ ಮತ ನೀಡುವುದೋ ಅಥವಾ ಮೋದಿ ಆಯ್ಕೆ ಮಾಡುವುದೋ ಎಂಬ ಗೊಂದಲದಲ್ಲಿದ್ದ ಮತದಾರರೂ ‘ಮೋದಿ’ ಎಂಬ ಸ್ಪಷ್ಟ ನಿಲುವಿಗೆ ಬಂದಿದ್ದರು.

ಕಮಲ ಹಿಡಿದ ಪ್ರಭಾವಿಗಳು

ಕಾಂಗ್ರೆಸ್​ನಲ್ಲಿ ಆರ್​ಎಸ್​ಎಸ್ ಮಾದರಿ ಪ್ರಾಮಾಣಿಕ ಕಾರ್ಯಪಡೆಯಿಲ್ಲ. ರಾಹುಲ್ ಬಂದ ಮೇಲೆ ಸಂಘಟನೆ ಬಲ ಕಳೆದುಕೊಂಡಿದೆ. ಈಶಾನ್ಯ ಭಾರತದ ಕಾಂಗ್ರೆಸ್ ನಾಯಕ ಹಿಮಾಂತ ಬಿಸ್ವ ಶರ್ಮ ಸೇರಿ ಪ್ರಭಾವಿಗಳು ಬಿಜೆಪಿ ಸೇರಿದ್ದಾರೆ. ಒಡಿಶಾದಲ್ಲಿ ಬಿಜೆಡಿಯ ಬೈಜಯಂತ್ ಪಾಂಡಾ ಬಿಜೆಪಿ ಸೇರಿದ್ದರಿಂದ ಅಲ್ಲಿ ನಿರೀಕ್ಷೆಗೂ ಮೀರಿ ಸೀಟುಗಳನ್ನು ಬಿಜೆಪಿ ಗೆದ್ದಿದೆ. ಇದರಿಂದಲೂ ಪಾಠ ಕಲಿಯದ ರಾಹುಲ್, ಪಂಜಾಬ್​ನಲ್ಲಿ ಬಾಯಿಚಪಲದಿಂದ ಪಕ್ಷಕ್ಕೆ ಹಾನಿ ಮಾಡುತ್ತಿರುವ ನವಜೋತ್ ಸಿಂಗ್ ಸಿಧುರಂತಹವರಿಗೆ ಮಣೆ ಹಾಕುತ್ತಾರೆ. ಬಂಗಾಳದಲ್ಲಿ ಕಾರ್ಯಕರ್ತರು ವಿರೋಧಿಸಿದರೂ ಸುಮನ್ ಮಿತ್ರ ಎಂಬ ವೃದ್ಧನನ್ನು ಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ. ಹಿಮಾಚಲ ಪ್ರದೇಶದಲ್ಲಿ ಮಾಜಿ ಸಿಎಂ ವೀರಭದ್ರ ಸಿಂಗ್ ಕಬಂಧಬಾಹುಗಳಲ್ಲಿ ಸ್ಥಳೀಯ ನಾಯಕರು ಸಿಲುಕಿ ಒದ್ದಾಡಿದರೂ ವರಿಷ್ಠರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.

ರಾಜಸ್ಥಾನ, ಮಧ್ಯಪ್ರದೇಶ ಮತ್ತೆ ತೆಕ್ಕೆಗೆ

ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​ಗಢ ರಾಜ್ಯ ಚುನಾವಣೆ ಗೆದ್ದ ಕಾಂಗ್ರೆಸ್, ಇದು ಮೋದಿ ವಿರುದ್ಧದ ಜನಾಭಿಪ್ರಾಯ ಎಂದು ಬಿಂಬಿಸುವಲ್ಲಿ ಕಾಲ ಕಳೆಯಿತೇ ವಿನಃ 2019ರ ಲೋಕಸಭೆ ಚುನಾವಣೆಯಲ್ಲಿ ಇದನ್ನು ಪುನರಾವರ್ತಿಸುವ ಬಗ್ಗೆ ಗಂಭೀರ ಚಿಂತನೆ ಮಾಡಲಿಲ್ಲ. ವಾಸ್ತವದಲ್ಲಿ ಇದು ಮೋದಿ ವಿರೋಧಿ ಜನಾಭಿಪ್ರಾಯವೇನೂ ಆಗಿರಲಿಲ್ಲ. ರಾಜಸ್ಥಾನದಲ್ಲಿ ವಸುಂಧರಾ ರಾಜೆ ಆಡಳಿತದಿಂದ ಖುದ್ದು ಬಿಜೆಪಿ ಕಾರ್ಯಕರ್ತರೇ ಅಸಮಾಧಾನಗೊಂಡಿದ್ದರು. ಕೊನೇ ಕ್ಷಣದಲ್ಲಿ ಮೋದಿಯವರ ಪರಿಣಾಮಕಾರಿ ರ್ಯಾಲಿಗಳಿಂದಾಗಿ 35 ಸೀಟುಗಳಿಗೆ ಸೀಮಿತಗೊಳ್ಳಬೇಕಿದ್ದ ಬಿಜೆಪಿ 72ಕ್ಕೆ ತಲುಪಿತ್ತು. ಅಲ್ಲಿ ಅಧಿಕಾರ ಕಳೆದುಕೊಂಡರೂ 25 ಲೋಕಸಭೆ ಕ್ಷೇತ್ರಗಳುಳ್ಳ ರಾಜಸ್ಥಾನದಲ್ಲಿ 24ನ್ನು ಗೆದ್ದಿರುವುದಕ್ಕೆ ಮೋದಿ ವರ್ಚಸ್ಸೇ ಮುಖ್ಯ ಕಾರಣ. ಮಧ್ಯಪ್ರದೇಶ ಮತ್ತು ಛತ್ತೀಸ್​ಗಢದಲ್ಲಿ ಬಿಜೆಪಿಯ 3 ಅವಧಿಗಳ ಸತತ ಆಡಳಿತದ ಬಳಿಕ ಜನ ಬದಲಾವಣೆ ಬಯಸಿದ್ದರು. ಹಾಗಿದ್ದರೂ, ಮಧ್ಯಪ್ರದೇಶದಲ್ಲಿ ಬಿಜೆಪಿ ಮೂರ್ನಾಲ್ಕು ಸೀಟುಗಳ ಅಂತರದಲ್ಲಷ್ಟೇ ವಿಧಾನಸಭೆ ಚುನಾವಣೆ ಸೋತಿತ್ತು. ಈ ಲೋಕಸಭೆ ಫಲಿತಾಂಶ ನೋಡಿದರೆ 3 ರಾಜ್ಯಗಳಲ್ಲಿ ‘ಮೋದಿ ಜನಪ್ರಿಯತೆ’ಯ ವ್ಯಾಪಕತೆ ಗ್ರಹಿಸಬಹುದು. ಕಾಂಗ್ರೆಸ್ ಇದನ್ನು ಅರ್ಥಮಾಡಿಕೊಳ್ಳಲಿಲ್ಲ. ಕರ್ನಾಟಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ, ಸುಮಲತಾ ಅಲೆಯಲ್ಲಿ ಕೊಚ್ಚಿ ಹೋದಂತೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಜೋಧಪುರ ಕ್ಷೇತ್ರದಲ್ಲಿ ಮೋದಿ ಅಲೆಯಲ್ಲಿ ಕಳೆದು ಹೋಗಿರುವುದು ರಾಜಸ್ಥಾನ ರಾಜಕೀಯದ ಮಟ್ಟಿಗೆ ಬಹುದೊಡ್ಡ ಬೆಳವಣಿಗೆ.

ಮೋದಿ-ನಿತೀಶ್ ದೋಸ್ತಿ

ಗ್ರಾಮೀಣ ಭಾಗದ ಕಾರ್ವಿುಕರು, ರೈತರಲ್ಲಿ ಮದ್ಯದ ಚಟ ಗಣನೀಯ ಪ್ರಮಾಣ ಕಡಿಮೆಯಾಗಿದ್ದು, ಹಣ ಉಳಿತಾಯವಾಗುತ್ತಿದೆ. ಇದಕ್ಕೆ ಪೂರಕವಾಗಿ ಮಹಿಳಾಪರ ಕ್ರಮಗಳಿಂದಾಗಿ ಈ ಚುನಾವಣೆಯಲ್ಲಿ ಮೋದಿ-ನಿತೀಶ್ ಬಿಹಾರದ ಜೋಡೆತ್ತುಗಳಾಗಿ ಹೊರಹೊಮ್ಮಿದ್ದರು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ 4.5 ಕೋಟಿ ಹೆಚ್ಚು ಮಹಿಳಾ ಮತಗಳ ಸಂಖ್ಯೆ ಹೆಚ್ಚಿದೆ. ಇವರಲ್ಲಿ ಬಹುಪಾಲು ಮಂದಿ ಎನ್​ಡಿಎಗೆ ಮತ ಹಾಕಿದ್ದಾರೆ ಎಂದೇ ವಿಶ್ಲೇಷಿಸಲಾಗಿದೆ.

ವಾರಾಣಸಿ ಅಭಿವೃದ್ಧಿ

ಕಳೆದ 2-3 ವರ್ಷಗಳಿಂದ ಕಾಂಗ್ರೆಸ್ ಮೃದು ಹಿಂದುತ್ವದ ಮೂಲಕ ಮತ ಸೆಳೆವ ತಂತ್ರ ಹೂಡಿದೆ. ಆದರೆ ಮೋದಿ ಜನಪ್ರಿಯತೆ ಮುಂದೆ ಕಾಂಗ್ರೆಸ್ ತಂತ್ರಗಳು ಫಲಿಸಲಿಲ್ಲ. ರಾಮ ಮಂದಿರ ವಿಷಯದಲ್ಲಿ ಮೋದಿ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿಲ್ಲ ಎಂಬ ಅಸಮಾಧಾನಗಳಿದ್ದರೂ, ‘ಮೋದಿ ಆಡಳಿತದಲ್ಲಿ ಹಿಂದು ಧರ್ಮ, ಸಂಸ್ಕೃತಿ, ಪರಂಪರೆಗಳ ಪುನರುತ್ಥಾನವಾಗಿದೆ’ ಎಂಬ ಅಭಿಪ್ರಾಯಗಳು ಎನ್​ಡಿಎ ಗೆಲುವಿಗೆ ನೆರವಾಗಿವೆ. ವಾರಾಣಸಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಬೇರೆ ಕ್ಷೇತ್ರದ ಮತದಾರಲ್ಲೂ ಗಾಢ ಪರಿಣಾಮ ಬೀರಿದವು. ಕಾಶಿಗೆ ಭೇಟಿ ನೀಡುವ ಹಿಂದು ಯಾತ್ರಾರ್ಥಿಗಳಲ್ಲಿ ಬಹುತೇಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿರುವುದು ಇದಕ್ಕೆ ನಿದರ್ಶನ.

ಷೇರುಪೇಟೆ ಭಾರಿ ಏರಿಳಿತ

ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಸೂಚನೆ ಬೆಳಗ್ಗೆಯೇ ದೊರೆತಿದ್ದರೂ, ಷೇರು ಮರುಕಟ್ಟೆಯಲ್ಲಿ ಗುರುವಾರ ಭಾರಿ ಏರಿಳಿತ ಕಂಡುಬಂತು. ಆರಂಭದ ಒಂದೆರಡು ಗಂಟೆ ಷೇರುಪೇಟೆಯಲ್ಲಿ ಭಾರಿ ಸಂಚಲನ ಕಂಡುಬಂತು. ಸೆನ್ಸೆಕ್ಸ್ ಮೊದಲ ಬಾರಿಗೆ 40 ಸಾವಿರ ಅಂಕಗಳನ್ನು ದಾಟಿದರೆ, ನಿಫ್ಟಿ ಕೂಡ 12 ಸಾವಿರ ಅಂಕ ದಾಟಿ ದಾಖಲೆ ಬರೆಯಿತು. ಮಧ್ಯಾಹ್ನವಾದಂತೆ ಫಲಿತಾಂಶದ ಚಿತ್ರಣ ಸ್ಪಷ್ಟವಾಗುತ್ತ ಬಂತು. ಆದರೆ ಷೇರುಮಾರುಕಟ್ಟೆಯಲ್ಲಿ ತುಸು ಇಳಿಕೆಯಾಯಿತು. ಸೆನ್ಸೆಕ್ಸ್ 900 ಅಂಕ ದಿನದ ಗರಿಷ್ಠ ಏರಿಕೆ ದಾಖಲಿಸಿತು. ನಿಫ್ಟಿ ಕೂಡ 265 ಅಂಕ ಏರಿಕೆ ದಾಖಲಿಸಿತು. ಬ್ಯಾಂಕಿಂಗ್ ಷೇರುಗಳ ಮೌಲ್ಯದಲ್ಲಿ ಹೆಚ್ಚಿನ ಏರಿಕೆ ಕಂಡುಬಂತು.

ಯಾವ ಸಮೀಕ್ಷೆ ನಿಜವಾಯ್ತು?

ಸುಮಾರು 8-10 ಸಂಸ್ಥೆಗಳು ಮತದಾನೊತ್ತರ ಸಮೀಕ್ಷೆ ಪ್ರಕಟಿಸಿದ್ದವು. ಚಾಣಕ್ಯ, ಮೈ ಆಕ್ಸಿಸ್ ಸಮೀಕ್ಷೆ ಬಹುತೇಕ ನಿಜವಾಗಿದೆ. ಎನ್​ಡಿಎಗೆ 350, ಯುಪಿಎಗೆ 70 ಸೀಟುಗಳು ಬರಲಿವೆ ಎಂದು ಚಾಣಕ್ಯ ಸಮೀಕ್ಷೆ ಹೇಳಿತ್ತು. ಎನ್​ಡಿಎ 339-365 ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಿಳಿಸಿತ್ತು.

ವಿಜೇತರಿಗೆ ಶುಭಾಶಯ. ಆದರೆ ಸೋತವರೆಲ್ಲರೂ ಕಳೆದುಕೊಂಡವರಲ್ಲ. ಫಲಿತಾಂಶದ ಬಗ್ಗೆ ಅವಲೋಕನ ಮಾಡಬೇಕು. ನಂತರ ನಮ್ಮ ವಿಮರ್ಶೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

| ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ.

ಮೋದಿಗೆ ವಿದೇಶಿ ಗಣ್ಯರ ಹಾರೈಕೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿಧ ದೇಶದ ಗಣ್ಯರು ನರೇಂದ್ರ ಮೋದಿಗೆ ಅಭಿನಂದನೆೆ ಹೇಳಿದ್ದಾರೆ. ಹಿಂದಿಯಲ್ಲೇ ಟ್ವೀಟ್ ಮಾಡಿ ಶುಭ ಕೋರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಮಿತ್ರ ನರೇಂದ್ರ ಮೋದಿ, ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ನೇತೃತ್ವವನ್ನು ಮತ್ತೊಮ್ಮೆ ವಹಿಸುತ್ತಿದ್ದೀರಿ. ನಾವು ಜತೆಗೂಡಿ ಭಾರತ-ಇಸ್ರೇಲ್ ಸಂಬಂಧ ಗಟ್ಟಿಗೊಳಿಸೋಣ’ ಎಂದಿದ್ದಾರೆ. ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘ ಕೂಡ ಕೋರಿದ್ದು, ನಿಮ್ಮ ಜತೆ ಮತ್ತಷ್ಟು ಆತ್ಮೀಯರಾಗಿ ಕೆಲಸ ಮಾಡಲು ಬಯಸುತ್ತೇನೆ ಎಂದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಪತ್ರದ ಮೂಲಕ ಮೋದಿಗೆ ಹೃತ್ಪೂರ್ವಕ ಅಭಿನಂದನೆ ಹೇಳಿದ್ದು, ಭಾರತ ಮತ್ತು ಚೀನಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು. ಹೀಗಾಗಿ ಉಭಯ ದೇಶಗಳನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ನಿಮ್ಮ ಜತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಕೂಡ ಟ್ವೀಟ್ ಮಾಡಿದ್ದು, ಬಿಜೆಪಿ ಹಾಗೂ ಎನ್​ಡಿಎ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಅಭಿನಂದಿಸಿದ್ದಾರೆ. ಮೋದಿ ಜತೆ ಶಾಂತಿ ಹಾಗೂ ಅಭಿವೃದ್ಧಿಗಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಪ್ರಜಾಪ್ರಭುತ್ವ ತತ್ವಾದರ್ಶಗಳನ್ನು ಅನುಸರಿಸಿ ನರೇಂದ್ರ ಮೋದಿ ಉತ್ತಮ ಸೇವೆ ಸಲ್ಲಿಸುತ್ತಾರೆಂಬ ಆಶಯವಿದೆ. ಡಿಎಂಕೆ ಮೈತ್ರಿ ಪಕ್ಷಕ್ಕೆ ಗೆಲುವು ನೀಡಿದ ತಮಿಳುನಾಡು ಜನತೆಗೆ ತಲೆಬಾಗುತ್ತೇವೆ. ಮುಂದಿನ 5 ವರ್ಷ ರಾಜ್ಯದ ಭರವಸೆಗಳನ್ನು ಈಡೇರಿಸುವ ಕಾರ್ಯ ಮಾಡಲಿದ್ದೇವೆ.

| ಎಂಕೆ ಸ್ಟಾಲಿನ್ ಡಿಎಂಕೆ, ವಿಪಕ್ಷ ನಾಯಕ.

One Reply to “ಮತದಾರನ ಮನ ಗೆದ್ದ ಮೋದಿ: ನಮೋ ದಿಗ್ವಿಜಯಕ್ಕೆ ಕಾರಣಗಳು ಹಲವು”

Leave a Reply

Your email address will not be published. Required fields are marked *