Friday, 16th November 2018  

Vijayavani

Breaking News

ಟೀಂ ಇಂಡಿಯಾಗೆ ಸಿಹಿ ನೀಡಿದ ಕೊಹ್ಲಿ-ಶಾಸ್ತ್ರಿ

Wednesday, 21.03.2018, 3:04 AM       No Comments

ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ 2019ರ ಏಕದಿನ ವಿಶ್ವಕಪ್​ಗೆ ಇನ್ನು 435 ದಿನಗಳು ಬಾಕಿ ಉಳಿದಿವೆ. ಮುಂದಿನ ವರ್ಷದ ಈ ಹೊತ್ತಿಗೆ 12ನೇ ಆವೃತ್ತಿಯ ಐಪಿಎಲ್ ಸಿದ್ಧತೆಯಲ್ಲಿದ್ದರೂ ವಿಶ್ವಕಪ್ ಕುರಿತಾಗಿ ಚರ್ಚೆ ಹೆಚ್ಚಾಗಿರಲಿದೆ. 2015ರ ವಿಶ್ವಕಪ್ ಮುಕ್ತಾಯಗೊಂಡು 1088 ದಿನಗಳಾಗಿರುವ ಹೊತ್ತಿನಲ್ಲಿ, ಏಕದಿನದ ಪ್ರಕಾರದಲ್ಲಿ ಎಲೈಟ್ ಡಿವಿಷನ್​ನ ಟೀಮ್ಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಿವೆ. ಆತಿಥ್ಯ ರಾಷ್ಟ್ರ ಇಂಗ್ಲೆಂಡ್ ಏಕದಿನದಲ್ಲಿ ಮಹಾಬಲಿಷ್ಠ ತಂಡವಾಗಿ ರೂಪುಗೊಳ್ಳುತ್ತಿರುವ ನಡುವೆಯೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಗರಡಿಯಲ್ಲಿ ಸರಿಯಾದ ಹೆಜ್ಜೆಯನ್ನೇ ಇಟ್ಟಿದೆ. ಅದಕ್ಕೆ ಕಳೆದ ಐಪಿಎಲ್​ನಿಂದ ಹಾಲಿ ಐಪಿಎಲ್​ವರೆಗಿನ ಫಲಿತಾಂಶಗಳೇ ಸಾಕ್ಷಿ. 2017ರ ಚಾಂಪಿಯನ್ಸ್ ಟ್ರೋಫಿ ಹಾಗೂ ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ಕೊಹ್ಲಿ ಟೀಮ್ೆ ಜತೆಯಾದ ರವಿಶಾಸ್ತ್ರಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿದ್ದಾರೆ. ಟೆಸ್ಟ್, ಏಕದಿನದಲ್ಲಿ ನಂ. 1 ಆಗಿರುವ ಟೀಮ್ ಇಂಡಿಯಾ, ದಿಢೀರ್ ಏರಿಳಿತಗಳ ಟಿ20ಯಲ್ಲಿ ಮಾತ್ರ ನಂ. 3 ಸ್ಥಾನದಲ್ಲಿದೆ. ಭಾರತ ತಂಡದ ಕೋಚ್​ಆಗಿ ಯಶಸ್ವಿ ಒಂದು ಋತುವನ್ನು ರವಿಶಾಸ್ತ್ರಿ ಪೂರೈಸಿದ ಬೆನ್ನಲ್ಲಿ ತಂಡದ ಯಶಸ್ಸಿನ ಗ್ರಾಫ್​ಅನ್ನು ಇಲ್ಲಿ ವಿವರಿಸಲಾಗಿದೆ.

ತವರಲ್ಲಿ ಸೂಪರ್ ಪವರ್, ವಿದೇಶದಲ್ಲೂ ಜಯದ ವಿಶ್ವಾಸ

ಕೋಚ್ ಆಗಿ ರವಿಶಾಸ್ತ್ರಿಯ ಮೊದಲ ಋತು 9 ತಿಂಗಳಿಗೆ ಮುಗಿದರೂ, ಫಲಿತಾಂಶದ ದೃಷ್ಟಿಯಲ್ಲಿ ಭಾರತ ತಂಡ ದೊಡ್ಡ ಮಟ್ಟದ ಬದಲಾವಣೆ ಕಂಡಿದೆ. ಈವರೆಗೂ ತವರಲ್ಲಿ ಸೂಪರ್ ಪವರ್ ಎನಿಸಿದ್ದ ಟೀಮ್ ಇಂಡಿಯಾ ವಿದೇಶದಲ್ಲೂ ಜಯ ಕಾಣುವ ವಿಶ್ವಾಸ ದಕ್ಷಿಣ ಆಫ್ರಿಕಾ ಪ್ರವಾಸದ ಮೂಲಕ ಬಂದಿತು. ಟೆಸ್ಟ್ ಸರಣಿಯಲ್ಲಿ ವೀರೋಚಿತ ಸೋಲು ಕಂಡಿದ್ದ ಭಾರತ, ಏಕದಿನ ಹಾಗೂ ಟಿ20 ಸರಣಿಯನ್ನು ಐತಿಹಾಸಿಕವಾಗಿ ಗೆದ್ದುಕೊಂಡಿತು. ಬಹುಶಃ ಇನ್ನಷ್ಟು ಸ್ಮಾರ್ಟ್ ಕ್ರಿಕೆಟ್ ಆಡಿದ್ದರೆ, ಟೆಸ್ಟ್ ಪಂದ್ಯಗಳಲ್ಲೂ ಗೆಲುವು ಸಾಧಿಸುವ ಅವಕಾಶ ಭಾರತಕ್ಕಿತ್ತು. ಏಕದಿನ ಹಾಗೂ ಟಿ20ಯಲ್ಲಿ ತಲಾ 4 ಪಂದ್ಯಗಳಲ್ಲಿ ಮಾತ್ರವೇ ಸೋಲು ಕಂಡಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ವಿರುದ್ಧ ತವರಿನ ಏಕದಿನ ಹಾಗೂ ಟಿ20 ಟೂರ್ನಿ ಎರಡರಲ್ಲೂ ಜಯಿಸಿದ್ದ ಭಾರತ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ಸರಣಿ ಸೋಲು ಹಾಗೂ ಏಕದಿನ, ಟಿ20ಯಲ್ಲಿ ಜಯ ಕಂಡಿತ್ತು. ರವಿಶಾಸ್ತ್ರಿ ಕೋಚ್ ಆದ ಬಳಿಕ ನಡೆದ ಮೊದಲ ಸರಣಿಯಾಗಿದ್ದ ಶ್ರೀಲಂಕಾ ಪ್ರವಾಸವನ್ನು ಭಾರತ ಸೂಪರ್​ಸ್ವೀಪ್ (ಟೆಸ್ಟ್, ಏಕದಿನ, ಟಿ20ಯ ಎಲ್ಲ ಪಂದ್ಯಗಳಲ್ಲಿ ಗೆಲುವು) ಮಾಡಿತ್ತು. ಋತುವಿನ ಕೊನೆಯಲ್ಲಿ ದ್ವಿತೀಯ ದರ್ಜೆ ತಂಡವಿದ್ದರೂ ನಿದಹಾಸ್ ಟ್ರೋಫಿ ತ್ರಿಕೋನ ಸರಣಿಯಲ್ಲಿ ಚಾಂಪಿಯನ್ ಆಗಿತ್ತು.

ಫೈಟಿಂಗ್ ಟೀಮ್ ಎನಿಸಿಕೊಂಡ ಭಾರತ

ಕ್ರಿಕೆಟರ್ ಆಗಿ ಹಾರ್ದಿಕ್ ಪಾಂಡ್ಯ ಬೆಳವಣಿಗೆ, ಭುವನೇಶ್ವರ್ ಕುಮಾರ್ ವೇಗದ ಬೌಲಿಂಗ್ ಆಲ್ರೌಂಡರ್ ಆಗುವ ಲಕ್ಷಣ ತೋರಿದ್ದು ಹಾಗೂ ಜಸ್​ಪ್ರೀತ್ ಬುಮ್ರಾ ಎಲ್ಲ ಮಾದರಿಯ ಕ್ರಿಕೆಟರ್ ಆಗಿ ಪರಿವರ್ತನೆಯಾಗಿದ್ದು ಈ ಋತುವಿನ ಧನಾತ್ಮಕ ಅಂಶಗಳು. ಕುಂಬ್ಳೆ ಕೋಚ್ ಆಗಿದ್ದಾಗ ತಂಡದಲ್ಲಿ ಉತ್ತರದಾಯಿತ್ವದ ಲಕ್ಷಣ ತಂದರೆ, ರವಿಶಾಸ್ತ್ರಿ ಹೋರಾಟದ ಮನೋಭಾವವನ್ನು ತುಂಬಿದರು. ಅದರಲ್ಲೂ ವಿದೇಶ ಪ್ರವಾಸಗಳ ವೇಳೆ ಹೋರಾಟದ ಮನೋಭಾವವಿಲ್ಲದೆ ಭಾರತ ಹಲವು ಪಂದ್ಯಗಳನ್ನು ಸೋತ ಇತಿಹಾಸವಿತ್ತು. ಆಫ್ರಿಕಾ ಸರಣಿಯಲ್ಲಿ ಎರಡು ಟೆಸ್ಟ್ ಸೋತರೂ ಅದರಲ್ಲಿ ತಂಡದ ಆಯ್ಕೆಯಲ್ಲಿ ತಪ್ಪಿತ್ತೇ ಹೊರತು ಆಟಗಾರರ ನಿರ್ವಹಣೆಯಲ್ಲಿರಲಿಲ್ಲ. ಜೊಹಾನ್ಸ್​ಬರ್ಗ್​ನ ಕಠಿಣ ಪಿಚ್​ನಲ್ಲಿ ಭಾರತ ಆಡಿದ ರೀತಿಗೆ ವಿಶ್ವವೇ ಮೆಚ್ಚುಗೆಯ ಮಾತನಾಡಿತ್ತು.

ಬ್ಯಾಟಿಂಗ್ ಬಲಾಢ್ಯ, ವೇಗದ ಬೌಲಿಂಗ್ ತಳಮಳ

ಹಾಲಿ ಋತುವಿನಲ್ಲಿ ಅಂದರೆ, ಶ್ರೀಲಂಕಾ ಪ್ರವಾಸದಿಂದ ಆರಂಭವಾಗಿ ಭಾರತ ಆಡಿದ ಒಟ್ಟಾರೆ ಅಂತಾರಾಷ್ಟ್ರೀಯ ಪಂದ್ಯಗಳ ಸಂಖ್ಯೆ 49. ಇವುಗಳನ್ನು ಆಧರಿಸಿ ಹೇಳುವುದಾದರೆ, ವಿಶ್ವದೆಲ್ಲ ತಂಡಗಳಿಗಿಂತ ಭಾರತ ತಂಡದ ಬ್ಯಾಟಿಂಗ್ ಮಹಾನ್​ಬಲಿಷ್ಠ. ಯಾವ ಎದುರಾಳಿಗಳನ್ನಾದರೂ ಬಗ್ಗುಬಡಿಯಬಲ್ಲ ಬ್ಯಾಟಿಂಗ್ ಹಾಗೂ ಸ್ಪಿನ್ ಬೌಲಿಂಗ್ ಶಕ್ತಿ ಭಾರತ ತಂಡದಲ್ಲಿದೆ. ಆದರೆ, ವೇಗದ ಬೌಲಿಂಗ್ ವಿಭಾಗದ ತಳಮಳ ಈ ಋತುವಿನಲ್ಲಿಯೂ ಮುಂದುವರಿದಿದೆ. ಭುವನೇಶ್ವರ್, ಬುಮ್ರಾ ಹಾಗೂ ಮೊಹಮದ್ ಶಮಿ ಮೇಲೆ ನಿರೀಕ್ಷೆ ಇಡಬಹುದಾದರೂ, ವಿದೇಶ ಪ್ರವಾಸದ ವೇಳೆ ಅತ್ಯುತ್ತಮ ಮೀಸಲು ಬೌಲರ್ ಆಗಿ ವೇಗಿ ಲಭ್ಯವಿಲ್ಲ. ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಹಾರ್ದಿಕ್ ಪಾಂಡ್ಯ ಆಟ ಇನ್ನಷ್ಟೇ ಮಾಗಬೇಕಿದೆ.

ವಿಶ್ವಕಪ್ ಹಾದಿಯ ಸರಣಿಗಳೇನು?

ಮುಂದಿನ ವಿಶ್ವಕಪ್ ಹಾದಿ ಯಲ್ಲಿ ಭಾರತ ತಂಡ 30 ಏಕದಿನ ಪಂದ್ಯ ಆಡಲಿದೆ. ಐಪಿಎಲ್ ಮುಗಿದ ಬಳಿಕ ಇಂಗ್ಲೆಂಡ್ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳನ್ನು ಆಡಿದರೆ, ಸೆಪ್ಟೆಂಬರ್​ನಲ್ಲಿ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿದೆ. ಬಳಿಕ ವೆಸ್ಟ್ ಇಂಡೀಸ್ ವಿರುದ್ಧ ನವೆಂಬರ್​ನಲ್ಲಿ ಐದು ಏಕದಿನ ಪಂದ್ಯವನ್ನು ತವರಿನಲ್ಲಿ ಆಡಿದರೆ, ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳೊಂದಿಗೆ 2018ಕ್ಕೆ ವಿದಾಯ ಹೇಳಲಿದೆ.

ಇನ್ನಿದೆ ಸವಾಲುಗಳ ಹಾದಿ

ಕಾಮನಬಿಲ್ಲಿನ ದೇಶಕ್ಕೆ ಭಾರತ ತಂಡ ಯಶಸ್ವಿ ಪ್ರವಾಸ ಕೈಗೊಂಡಿದ್ದಾಗಿದೆ. ಆದರೆ, ಸುದೀರ್ಘ ವಿದೇಶ ಸರಣಿಯ ಸವಾಲಿನಲ್ಲಿ ಇದು ಆರಂಭ ಮಾತ್ರ. ಐಪಿಎಲ್ ಮುಗಿದ ಬಳಿಕ ಅಫ್ಘಾನಿಸ್ತಾನ ವಿರುದ್ಧ ತವರಿನ ಟೆಸ್ಟ್ ನೊಂದಿಗೆ ಭಾರತದ ಅಂತಾರಾಷ್ಟ್ರೀಯ ಋತು ಆರಂಭವಾಗಲಿದೆ. ಆ ಬಳಿಕ ಜುಲೈನಲ್ಲಿರುವ ಇಂಗ್ಲೆಂಡ್ ಪ್ರವಾಸಕ್ಕೆ ಸಿದ್ಧತೆಯಾಗಬೇಕಿದೆ. ಕೆಲವೊಂದು ಟೆಸ್ಟ್​ಗಳನ್ನು ಮಾತ್ರವಲ್ಲ ವಿದೇಶದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವಂಥ ತಂಡವನ್ನು ರವಿಶಾಸ್ತ್ರಿ ಸಿದ್ಧ ಮಾಡಬೇಕಿದೆ.

 

Leave a Reply

Your email address will not be published. Required fields are marked *

Back To Top