More

    ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿರಿ…

    ಮನುಷ್ಯಪ್ರಜ್ಞೆಯನ್ನು ಕೇವಲ ತಿಂದುಂಡು ಮಲಗಿ ತಣಿಸಲು ಸಾಧ್ಯವಿಲ್ಲ. ಸಹಜವಾಗಿಯೇ ಅದಕ್ಕೆ ಅರಿಯಬೇಕೆಂಬ ಹಂಬಲ ಇರುತ್ತದೆ. ಜನರು ಇದೊಂದು ಸಮಸ್ಯೆ ಎಂದು ತಿಳಿಯುತ್ತಾರೆ, ಆದರೆ ಇದೊಂದು ಸಾಧ್ಯತೆ ಕೂಡ ಎಂಬುದನ್ನು ಮರೆತುಬಿಡುತ್ತಾರೆ. ಆಧ್ಯಾತ್ಮಿಕ ಪ್ರಗತಿ ಬಯಸಿದಲ್ಲಿ, ಜೀವನದಲ್ಲಿ ಕೊನೆಪಕ್ಷ ಒಂದು ತೀರ್ಮಾನ ಮಾಡಬೇಕು, ಆತ್ಮಾವಲೋಕನಕ್ಕೆ ಮುಂದಾಗಬೇಕು.

    ನಿಮ್ಮೊಂದಿಗೆ ನೀವು ಪ್ರಾಮಾಣಿಕವಾಗಿರಿ...ಆಧ್ಯಾತ್ಮಿಕ ಪ್ರಕ್ರಿಯೆ ಕುರಿತು ಮಾತಾಡುವಾಗ, ತಿಳಿಯದ ವಿಷಯದ ಬಗ್ಗೆ ಯಾವುದೋ ಒಂದು ತೀರ್ವನಕ್ಕೆ ಬಂದುಬಿಡಬಾರದು. ‘ನನಗೆ ಗೊತ್ತಿರುವುದು ಗೊತ್ತಿದೆ, ನನಗೆ ಗೊತ್ತಿಲ್ಲದ್ದು ನನಗೆ ಗೊತ್ತಿಲ್ಲ’ ಎಂದು ಒಪ್ಪಿಕೊಳ್ಳುವಷ್ಟು ಪ್ರಾಮಾಣಿಕತೆ ಇದ್ದರೆ, ಈಗಾಗಲೇ ಅಧ್ಯಾತ್ಮದ ಹಂಬಲದಲ್ಲಿ ಇದ್ದೀರಿ ಎಂದೇ ಅರ್ಥ. ಅಧ್ಯಾತ್ಮದ ಮೂಲಭೂತ ಅಂಶವೆಂದರೆ, ‘ತಲೆಯಲ್ಲೇ ವಿಷಯಗಳನ್ನು ಸೃಷ್ಟಿಸುವಷ್ಟು ನನ್ನ ತಲೆ ಹಾಳಾಗಿಲ್ಲ, ನನಗೆ ಗೊತ್ತಿರುವುದು ಮತ್ತು ಗೊತ್ತಿಲ್ಲದಿರುವುದನ್ನು ಯಥಾಸ್ಥಿತಿ ಒಪ್ಪಿಕೊಳ್ಳುತ್ತೇನೆ’ ಎಂಬುದು. ಮನುಷ್ಯಪ್ರಜ್ಞೆಯ ಸಹಜ ಸ್ವಭಾವ ಹೇಗೆಂದರೆ ಅದಕ್ಕೆ ‘ನನಗೆ ಗೊತ್ತಿಲ್ಲ’ ಎನ್ನುವ ಸ್ಥಿತಿಯಲ್ಲಿ ಇರಲು ಸಾಧ್ಯವಿಲ್ಲ. ಅದಕ್ಕೆ ತಿಳಿಯಬೇಕೆಂಬ ಹಂಬಲ. ಒಮ್ಮೆ ಈ ಹಂಬಲ ಬಂತೆಂದರೆ ಅನ್ವೇಷಣೆ ಶುರುವಾಗುತ್ತದೆ, ಆಗ ಒಂದು ದಾರಿ ಸಿಗಬಹುದು. ಹಾಗಾಗಿ, ಯಾವಾಗ ಆಧ್ಯಾತ್ಮಿಕ ಪಥದಲ್ಲಿದ್ದೀರೋ ಆಗ ನಿಮ್ಮನ್ನು ಅನ್ವೇಷಕ ಎಂದು ಹೇಳುತ್ತೇವೆ.

    ಆದರೆ ಪ್ರಸ್ತುತ, ಎಲ್ಲರೂ ಈ ಸರಳವಾದ ‘ನನಗೆ ಗೊತ್ತಿಲ್ಲ’ ಎನ್ನುವುದರ ವಿರುದ್ಧವಾಗಿ ಇರುವಂತೆ ತೋರುತ್ತಿದೆ. ನಮಗೆ ಯಾವುದೆಲ್ಲ ಗೊತ್ತಿಲ್ಲವೋ ಅವೆಲ್ಲ ನಂಬಿಕೆ ಅಗಿ ಬಿಡುತ್ತವೆ. ಜಗತ್ತಿನ ಪ್ರತಿಯೊಬ್ಬ ವ್ಯಕ್ತಿ ಸಹಜವಾಗಿಯೇ ಒಬ್ಬ ಯೋಗಿ ಯಾಕೆ ಆಗಿಲ್ಲ ಎಂದರೆ ಎಲ್ಲರೂ ತುಂಬ ಬೇಗನೇ ಆಧ್ಯಾತ್ಮಿಕತೆಯ ಶಾಪಿಂಗ್ ಮಾಡಲು ಹೊರಡುತ್ತಾರೆ.

    ಒಮ್ಮೆ ಹೀಗಾಯಿತು, ಶಂಕರನ್ ಪಿಳ್ಳೈಯನ್ನು ಬಂಧಿಸಿ ಕೋರ್ಟ್​ಗೆ ಕರೆತರಲಾಯಿತು. ನ್ಯಾಯಾಧೀಶರು ಕೇಳಿದರು, ‘ಏನಾಯಿತು? ನಿಮ್ಮನ್ನು ಏಕೆ ಇಲ್ಲಿ ಕರೆ ತಂದಿದ್ದಾರೆ? ನಿಮ್ಮ ಮೇಲಿನ ಆರೋಪವೇನು?’ ಶಂಕರನ್ ಪಿಳ್ಳೈ ಹೇಳಿದ-‘ನಾನು ದೀಪಾವಳಿಗೆ ಕೊಳ್ಳಲು(ಶಾಪಿಂಗ್​ಗೆ) ತುಂಬ ಬೇಗನೆ ಹೋಗಿಬಿಟ್ಟೆ.’ ನ್ಯಾಯಾಧೀಶರು ಹೇಳಿದರು, ‘ಅದೇನು ಅಪರಾಧ ಅಲ್ಲವಲ್ಲ, ಅದು ಸೂಕ್ತವಾಗಿಯೇ ಇದೆ. ತುಂಬ ಬೇಗನೆ ಅಂದರೆ ಏನು ಅರ್ಥ? ನೀವು ಯಾವಾಗ ಹೋದಿರಿ?’ ಶಂಕರನ್ ಪಿಳ್ಳೈ ಹೇಳಿದ, ‘ಅವರು ಬಾಗಿಲು ತೆಗೆಯುವ ಮುಂಚೆಯೇ ನಾನು ಅಂಗಡಿ ಒಳಕ್ಕೆ ಹೋಗಿದ್ದೆ’.

    ಸಿದ್ಧ ಉತ್ತರಗಳಿಲ್ಲ: ನಿಮ್ಮ ಹೆಸರನ್ನು ಈಗಷ್ಟೇ ಉಚ್ಚರಿಸಲು ಕಲಿತಿದ್ದೀರಿ, ಆದರೆ ಆಗಲೇ ದೇವರು ಯಾರು ಎಂದು ನಿಮಗೆ ಗೊತ್ತು, ಅವನ ಪತ್ನಿ ಯಾರು, ಅವನಿಗೆಷ್ಟು ಮಕ್ಕಳು, ಅವನ ವಿಳಾಸ, ಹುಟ್ಟಿದದಿನ, ಅವನ ಇಷ್ಟ ಅನಿಷ್ಟಗಳು-ಎಲ್ಲವೂ ಗೊತ್ತು. ನಿಮ್ಮ ಪಾಲಕರು ಮತ್ತು ಸಮಾಜ ಈ ರೀತಿಯ ಸಲ್ಲದ ಸಲಹೆ ಹಾಗೂ ಪರಿಹಾರಗಳನ್ನು ಕೊಡುವುದರ ಬದಲು ‘ನನಗೆ ಗೊತ್ತಿಲ್ಲ’ ಎನ್ನುವುದನ್ನು ಪೋಷಿಸಿದ್ದಿದ್ದರೆ- ವಾಸ್ತವವಾಗಿ ‘ಏನೂ ಗೊತ್ತಿಲ್ಲ’ ಎಂಬುದರ ಅರಿವಾಗುತ್ತಿತ್ತು. ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುವಿರಿ, ಎರಡೂ ಗೊತ್ತಿಲ್ಲ? ಆಗ ಈ ಜಗತ್ತಿನ ಪ್ರತಿಯೊಬ್ಬರೂ ಯೋಗಿಗಳಾಗುತ್ತಿದ್ದರು. ಏಕೆಂದರೆ ಮನುಷ್ಯಪ್ರಜ್ಞೆಯನ್ನು ಕೇವಲ ತಿಂದುಂಡು ಮಲಗಿ ತಣಿಸಲು ಸಾಧ್ಯವಿಲ್ಲ. ಸಹಜವಾಗಿಯೇ ಅದಕ್ಕೆ ಅರಿಯಬೇಕೆಂಬ ಹಂಬಲ ಇರುತ್ತದೆ. ಜನರು ಇದೊಂದು ಸಮಸ್ಯೆ ಎಂದು ತಿಳಿಯುತ್ತಾರೆ, ಆದರೆ ಇದೊಂದು ಸಾಧ್ಯತೆ ಕೂಡ.

    ಜೀವನದ ಎಲ್ಲ ಮೂಲಭೂತ ಅಂಶಗಳಿಗೆ ನಿಮ್ಮಲ್ಲಿರುವ ಸಿದ್ಧ ಉತ್ತರಗಳನ್ನು ನಂಬುವಿರಿ. ಕೇವಲ ಪುಸ್ತಕದಲ್ಲಿದೆ ಅಥವಾ ಯಾರೋ ಹೇಳಿದ್ದಾರೆ ಎಂಬ ಕಾರಣಕ್ಕೆ ನಿಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ನಂಬಿಕೆ ಇರಿಸಿಕೊಳ್ಳುತ್ತೀರಿ… ಎಲ್ಲ ಪುಸ್ತಕಗಳು ಮತ್ತು ಆಗಿ ಹೋದ ಎಲ್ಲ ಮಹಾಪುರುಷರ ಬಗ್ಗೆ ಗೌರವವಿಟ್ಟೆ ಈ ಮಾತು ಹೇಳುತ್ತೇನೆ- ನೀವು ತಿಳಿದುಕೊಳ್ಳಬಹುದಾದ ಎಲ್ಲ ಸಾಧ್ಯತೆಗಳನ್ನು ದೂರ ಮಾಡುವಿರಿ. ಒಮ್ಮೆ ನಾನು ನಿಮ್ಮ ಅನುಭವದಲ್ಲಿ ಇಲ್ಲದ, ನಿಮಗೆ ತಿಳಿದಿರದ ವಿಷಯ ಹೇಳಿದೆ ಎಂದುಕೊಳ್ಳೋಣ. ಆಗ ನಿಮಗಿರುವ ಏಕೈಕ ಆಯ್ಕೆ, ಒಂದೋ ನೀವದನ್ನು ನಂಬುವುದು ಇಲ್ಲ ನಂಬದಿರುವುದು. ನನ್ನ ನಂಬಿದಿರಾದರೆ ವಾಸ್ತವಕ್ಕೆ ಹತ್ತಿರವೇನೂ ಆಗುವುದಿಲ್ಲ. ನನ್ನ ನಂಬಲಿಲ್ಲ ಎಂದಾದರೆ ಆಗಲೂ ವಾಸ್ತವಕ್ಕೆ ಹತ್ತಿರ ಆಗುವುದಿಲ್ಲ. ನೀವು ಪ್ರಗತಿ ಹೊಂದಬೇಕಾದರೆ ವಾಸ್ತವದ ಅರಿವು ಇರಬೇಕು. ಇಲ್ಲವಾದಲ್ಲಿ ಎಲ್ಲೂ ಹೋಗಲಾರಿರಿ, ‘ನನಗೆ ಗೊತ್ತು’ ಎನ್ನುವ ಭ್ರಮಾಲೋಕದಲ್ಲಿ ಇರುತ್ತೀರಿ ಅಷ್ಟೇ.

    ನೀವು ಯೋಚಿಸಬಹುದು, ನಿಮ್ಮ ದೇವರನ್ನು ಕಿತ್ತುಕೊಳ್ಳುತ್ತಿದ್ದೇನೆಂದು! ನಿಮ್ಮ ದೇವರನ್ನು ಕಸಿಯುತ್ತಿಲ್ಲ. ಅದು ಹೀಗೆ, ಒಮ್ಮೆ ಇಬ್ಬರು ಎಳೆಯ, ಅತಿ ಉತ್ಸಾಹದ ಸಹೋದರರಿದ್ದರು. ಹುಡುಗರು ಅತಿ ಉತ್ಸಾಹದಲ್ಲಿ ಇರುವಾಗ ಯಾವಾಗಲೂ ಪೇಚಿಗೆ ಸಿಲುಕಿಕೊಳ್ಳುತ್ತಿದ್ದರು, ಸುತ್ತಮುತ್ತಲಿನವರೆಲ್ಲ ಇವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದರು. ಎಲ್ಲರೂ ತಮ್ಮ ಮಕ್ಕಳ ಬಗೆಗೆ ಆಡಿಕೊಳ್ಳುತ್ತಾರೆಂದು ಹೆತ್ತವರಿಗೆ ಮುಜುಗರವಾಗುತ್ತಿತ್ತು. ಹಾಗಾಗಿ ಅವರು ಅದಕ್ಕೊಂದು ಪರಿಹಾರ ಹುಡುಕಬೇಕು ಎಂದುಕೊಂಡರು. ಮಕ್ಕಳನ್ನು (ಈ ಭೂಮಿಗೆ) ತರುವುದು ಸುಲಭ, ಅದು ಕೇವಲ ಹಡೆಯುವುದು ಅಷ್ಟೆ, ಆದರೆ ಖಂಡಿತವಾಗಿಯೂ ಅವರನ್ನು ಸಂಭಾಳಿಸುವುದು ಹೇಗೆಂದು ನಿಮಗೆ ಗೊತ್ತಿಲ್ಲ, ಅಲ್ಲವೆ? ಯಾರಿಗೂ ಗೊತ್ತಿಲ್ಲದ ಗುಟ್ಟದು. ಆದ್ದರಿಂದ ಆ ತಂದೆ-ತಾಯಿ, ಮಕ್ಕಳನ್ನು ಅಲ್ಲಿಯ ಕ್ರೖೆಸ್ತ ಗುರು(ಪ್ರೀಸ್ಟ್)ವಿನ ಬಳಿ ಕರೆದೊಯ್ಯಲು ತೀರ್ವನಿಸಿದರು. ಅವರು ಮೊದಲು ಚಿಕ್ಕವನನ್ನು ಕರೆದುಕೊಂಡು ಹೋಗುವ ತೀರ್ಮಾನ ಮಾಡಿದರು ಏಕೆಂದರೆ ಇಬ್ಬರೂ ಒಟ್ಟಿಗಿದ್ದರೆ ಅವರು ಬಲು ಗಟ್ಟಿ. ಅವರು ಅವನನ್ನು

    ಪ್ರೀಸ್ಟ್​ರ ಕಚೇರಿಗೆ ಬಿಟ್ಟು ಬಂದರು. ನಿಲುವಂಗಿ ಧರಿಸಿದ ಪ್ರೀಸ್ಟ್ ಒಳಪ್ರವೇಶಮಾಡಿ, ಹುಡುಗನ ಕಡೆ ಒಂದು ನೋಟ ಬೀರಿ, ಮತ್ತೆ ಅವನನ್ನು ನಿರ್ಲಕ್ಷ್ಯ ಮಾಡಿ ಆಚೆ ಈಚೆ ನಾಟಕೀಯವಾಗಿ ನಡೆದಾಡಿದರು.

    ಪ್ರೀಸ್ಟ್ ಉಪಾಯ ಹುಡುಕುವ ಯೋಚನೆಯಲ್ಲಿ ಇದ್ದರು. ಅವರು, ‘ಈ ಹುಡುಗನಿಗೆ ದೇವರು ಅವನೊಳಗೇ ಇದ್ದಾನೆ ಎಂಬುದನ್ನು ನೆನಪು ಮಾಡಿಬಿಟ್ಟರೆ ಅವನ ತುಂಟತನ ದೂರವಾಗುತ್ತದೆ’ ಎಂದು ಯೋಚಿಸಿದರು. ಯಾರು ತಮ್ಮ ಜೀವನದಲ್ಲೇ ಮಕ್ಕಳನ್ನು ಬೆಳೆಸಿರುವುದಿಲ್ಲವೋ ಅವರು ಯಾವಾಗಲೂ ಅದ್ಭುತ ಉಪಾಯಗಳನ್ನು ಇಟ್ಟುಕೊಂಡಿರುತ್ತಾರೆ. ಮಕ್ಕಳನ್ನು ಬೆಳೆಸಿದವರಿಗೆ ಗೊತ್ತಿರುತ್ತದೆ ಯಾವುದೇ ಉಪಾಯವೂ ಕೆಲಸ ಮಾಡುವುದಿಲ್ಲ ಎಂದು. ನಿಮಗೆ ಅಗತ್ಯವಿರುವ ಪ್ರೀತಿ ಮತ್ತು ತಾಳ್ಮೆ ಇದ್ದಲ್ಲಿ, ಭರವಸೆಯ ವಾತಾವರಣ ನಿರ್ವಿುಸಿ ಅವರು ಹಂತ ಹಂತವಾಗಿ ಬೆಳೆಯುವುದಕ್ಕೆ ಕಾಯಿರಿ.

    ಪ್ರೀಸ್ಟ್ ಏರುದನಿಯಲ್ಲಿ ‘ದೇವರು ಎಲ್ಲಿದ್ದಾನೆ’? ಎಂದರು. ಹುಡುಗ ಗಲಿಬಿಲಿಗೊಂಡವನಂತೆ ಕಂಡ. ಅವನು ಎಲ್ಲ ಕಡೆ ನೋಡಿದ-ದೇವರು ಎಲ್ಲಿಯಾದರೂ ಇದ್ದಲ್ಲಿ, ಖಂಡಿತ ಅದು ಪ್ರೀಸ್ಟ್​ರ ಕಚೇರಿಯಲ್ಲಿ ಇರಬೇಕು. ಇದನ್ನು ಗಮನಿಸಿದ ಪ್ರೀಸ್ಟ್, ಹುಡುಗನಿಗೆ ಅರ್ಥ ಆಗುತ್ತಿಲ್ಲ ಎಂದುಕೊಂಡು ಅವನಿಗೆ ಸುಳಿವು ನೀಡಲು ಮುಂದಾಗಿ, ಮೇಜಿನ ಮೇಲೆ ಬಾಗಿ ಹುಡುಗನತ್ತ ತಿರುಗಿ ‘ದೇವರು ಅವನಲ್ಲಿದ್ದಾನೆ (ಹುಡುಗನಲ್ಲಿದ್ದಾನೆ)’ ಎಂಬಂತೆ, ಬೆರಳನ್ನು ತೋರಿಸಿ, ಪುನಃ ಕೇಳಿದರು, ‘ದೇವರು ಎಲ್ಲಿದ್ದಾನೆ?’ ಹುಡುಗ ಇನ್ನೂ ಗಲಿಬಿಲಿಗೊಂಡು ಮೇಜಿನ ಕೆಳಗೆ ನೋಡಿದ. ಹುಡುಗನಿಗೆ ಅರ್ಥವೇ ಆಗುತ್ತಿಲ್ಲ ಎಂದು ಪ್ರೀಸ್ಟ್​ಗೆ ಮನವರಿಕೆಯಾಯಿತು. ಅವರು ಮೇಜನ್ನು ಬಳಸಿ ಹುಡುಗನ ಬಳಿ ಬಂದು ಅವನ ಎದೆಯ ಮೇಲೆ ಬೆರಳಿಟ್ಟು ಕೇಳಿದರು, ‘ದೇವರು ಎಲ್ಲಿದ್ದಾನೆ?’

    ಹುಡುಗ ಅಲ್ಲಿಂದ ಎದ್ದವನೇ ಕೋಣೆಯಿಂದ ಹೊರಬಂದು ಅಣ್ಣ ಇದ್ದಲ್ಲಿಗೆ ಓಡಿ ಬಂದು ಅಣ್ಣನಲ್ಲಿ ಹೇಳಿದ, ‘ನಾವು ನಿಜವಾಗಿಯೂ ದೊಡ್ಡ ಗಂಡಾಂತರದಲ್ಲಿ ಸಿಕ್ಕಿಕೊಂಡಿದ್ದೇವೆ’. ಅಣ್ಣ ಕೇಳಿದ, ‘ಏಕೆ?’ ತಮ್ಮ ಹೇಳಿದ, ‘ಅವರ ದೇವರು ಕಾಣೆಯಾಗಿದೆ, ಅದಕ್ಕೆ ನಾವು ಕಾರಣವೆಂದು ಅವರು ಅಂದುಕೊಂಡಿದ್ದಾರೆ’

    ಹಾಗೆ, ನಾನು ನಿಮ್ಮ ದೇವರನ್ನು ದೂರ ಮಾಡುತ್ತಿಲ್ಲ. ಒಂದನ್ನು ತಿಳಿದುಕೊಳ್ಳಿ, ನಾವು ಸಾಕಷ್ಟು ಶ್ರಮ ಹಾಕಿದರೆ ನೀವು ಏನನ್ನು ಬೇಕಾದರೂ ನಂಬುವಂತೆ ಮಾಡಬಹುದು? ತೀರಾ ಹಾಸ್ಯಾಸ್ಪದ ಸಂಗತಿಗಳನ್ನು ಕೂಡ. ನೀವು ಹುಟ್ಟಿದಂದಿನಿಂದ ನಾನು ನನ್ನ ಕಿರುಬೆರಳನ್ನೇ ದೇವರೆಂದು ಹೇಳುತ್ತ ಬಂದು, ನಂತರ ಕಿರುಬೆರಳನ್ನು ಎತ್ತಿದರೆ, ನಿಮ್ಮಲ್ಲಿ ದೈವಿಕ ಭಾವನೆ ತುಂಬಿ ಬರುತ್ತದೆ. ಅಥವಾ ಅದೇ ಕಿರುಬೆರಳು ದೆವ್ವವೆಂದು ಹೇಳುತ್ತ ಬಂದರೆ, ನಿಮ್ಮಲ್ಲಿ ಭಯ ಹುಟ್ಟುತ್ತದೆ.

    ಈಗ ಜಗತ್ತಿನಲ್ಲಿ ಜನರಿಗೆ ಒಂದು ಮಟ್ಟದ ಪ್ರಜ್ಞೆ ಬೆಳೆಸಲು ಬೇಕಾದ ಬುದ್ಧಿವಂತಿಕೆ ಇದೆ, ಅದು ಅವರಿಗೆ ಈ ವಿಷಯ ಮನವರಿಕೆ ಮಾಡಿಕೊಡಬಲ್ಲದು- ಅದೆಂದರೆ ‘ನಮಗೆ ಗೊತ್ತಿರುವುದು ಗೊತ್ತು ಮತ್ತು ಗೊತ್ತಿಲ್ಲದ್ದು ಗೊತ್ತಿಲ್ಲ’. ಇದು ಸರಳವಾಗಿ ಬಾಳುವ ರೀತಿ. ನಿಮಗೆ ಜಗತ್ತಿನಲ್ಲಿ ಯಾರೊಂದಿಗೂ ಪ್ರಾಮಾಣಿಕವಾಗಿ ಇರಲು ಆಗುತ್ತಿಲ್ಲ ಎಂದರೆ ಅದೊಂದು ಸಾಮಾಜಿಕ ಸಮಸ್ಯೆ. ಅದು ನಿಮಗೆ ಬಿಟ್ಟಿದ್ದು. ಆದರೆ ಆಧ್ಯಾತ್ಮಿಕ ಪ್ರಗತಿ ಬಯಸಿದಲ್ಲಿ, ಜೀವನದಲ್ಲಿ ಕೊನೆಪಕ್ಷ ಒಂದು ತೀರ್ಮಾನ ಮಾಡಬೇಕು: ನಿಮ್ಮೊಂದಿಗೆ ನೀವು ನೂರಕ್ಕೆ ನೂರು ಪ್ರಾಮಾಣಿಕವಾಗಿ ಇರಬೇಕು.

    (ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.

    ಡಿಡಿಡಿ.ಜಿಠಜಚ.ಠಚಛಜಜ್ಠr.ಟ್ಟಜ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts