More

    ಪೊಲೀಸರೇ ದರೋಡೆ ಮಾಡಿದರೇ?

    2013ರ ಫೆಬ್ರವರಿಯ ಒಂದು ರಾತ್ರಿ ಬೆಳಗಾವಿಯಿಂದ ಮುಂಬೈಗೆ ಹೋಗುತ್ತಿದ್ದ ಸ್ಲೀಪರ್ ಬಸ್ ಸತಾರಾ ನಗರವನ್ನು ದಾಟಿ ಸುಮಾರು 30 ಕಿ.ಮೀ ದೂರ ಕ್ರಮಿಸಿತ್ತು. ಆಗ ಪೊಲೀಸ್ ವಾಹನವೊಂದು ಅದನ್ನು ಹಿಂದೆಹಾಕಿತು. ಅದರಲ್ಲಿದ್ದ ಅಧಿಕಾರಿ ಬಸ್ಸನ್ನು ನಿಲ್ಲಿಸಲು ಸೂಚಿಸಿ, ಅದನ್ನೇರಿದರು. ಆ ವಾಹನದಲ್ಲಿ ಕಳ್ಳತನದ ಪೊಲೀಸರೇ ದರೋಡೆ ಮಾಡಿದರೇ?ಮಾಲು ಸಾಗಾಣಿಕೆಯಾಗುತ್ತಿರುವ ಮಾಹಿತಿ ಬಂದಿರುವುದರಿಂದ ತಪಾಸಣೆ ಮಾಡಲು ಬಸ್ಸನ್ನು ಠಾಣೆಗೆ ತೆಗೆದುಕೊಂಡು ಬರಲು ಚಾಲಕನಿಗೆ ಹೇಳಿದರು. ಹೆದ್ದಾರಿಯಲ್ಲಿಯೇ ಇದ್ದ ಪೊಲೀಸ್ ಠಾಣೆಯೊಂದರ ಮುಂದೆ ಬಸ್ ನಿಂತಾಗ ಗಂಟೆ ಎರಡಾಗಿತ್ತು. ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ ಪೊಲೀಸರು ಬಸ್ಸನ್ನು ಕೂಲಂಕಷವಾಗಿ ತಪಾಸಣೆ ಮಾಡಬೇಕಾಗಿದೆಯೆಂದು ಹೇಳಿ ಪಕ್ಕದ ರಸ್ತೆಯೊಂದಕ್ಕೆ ತೆಗೆದುಕೊಂಡು ಹೋದರು.

    ಸುಮಾರು ಒಂದು ಗಂಟೆಯ ನಂತರ ಪ್ರಯಾಣಿಕರ ಬಳಿ ಬಂದ ಪೊಲೀಸ್ ಅಧಿಕಾರಿ ಬಸ್ಸಿನಲ್ಲಿ ಲೆಕ್ಕಕೊಡದ 15 ಲಕ್ಷ ರೂಪಾಯಿಗಳ ನೋಟುಗಳು ಸಿಕ್ಕಿದ್ದು ಅವು ಕಳವು ಮಾಲಾಗಿರಬಹುದು ಎಂಬ ಸಂಶಯದಿಂದ ಬಸ್ಸನ್ನು ಜಪ್ತಿ ಮಾಡುತ್ತಿರುವುದಾಗಿ ತಿಳಿಸಿದರು. ಗಾಬರಿಗೊಂಡ ಪ್ರಯಾಣಿಕರು ತಾವು ಮುಂದೇನು ಮಾಡಬೇಕು ಎಂದು ಗಲಾಟೆ ಮಾಡಲಾರಂಭಿಸಿದಾಗ ಅವರನ್ನು ಬೇರೆ ಬೇರೆ ಬಸ್​ಗಳಲ್ಲಿ ಮುಂಬೈಗೆ ಕಳುಹಿಸುವ ವ್ಯವಸ್ಥೆಯನ್ನು ಪೊಲೀಸರೇ ಮಾಡಿದರು. ಬಸ್ಸಿನ ಚಾಲಕ ಮತ್ತು ಕ್ಲೀನರ್ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.

    ತನ್ನ ವಾಹನ ಜಪ್ತಿಯಾಗಿದ್ದನ್ನು ಕೇಳಿ ಗಾಬರಿಗೊಂಡ ಬಸ್ಸಿನ ಮಾಲೀಕ ಮುಂಬೈನಿಂದ ಸತಾರಾಗೆ ಧಾವಿಸಿ ಬಸ್ಸಿನ ಕ್ಲೀನರ್ ಮತ್ತು ಚಾಲಕನಿಗೆ ಜಾಮೀನು ಕೊಡಿಸಿದ. ಆನಂತರ ಆತ ಮಾಣಿಕ್ ಎನ್ನುವವನ ಜತೆ ಜಿಲ್ಲೆಯ ಎಸ್​ಪಿಯನ್ನು ಭೇಟಿ ಮಾಡಿದ. ‘ನಾನು ಮುಂಬೈನ ದೊಡ್ಡ ಜವಾಹಿರಿ ವ್ಯಾಪಾರಿಯಾಗಿದ್ದು ದುಬೈನಿಂದ ಚಿನ್ನದ ಬಿಸ್ಕತ್ತುಗಳನ್ನು ಆಮದು ಮಾಡಿಕೊಂಡು ಅವನ್ನು ಬೆಳಗಾವಿಯಲ್ಲಿರುವ ವ್ಯಾಪಾರಿಗಳಿಗೆ ಕೊಟ್ಟು ಆಭರಣಗಳನ್ನು ಮಾಡಿಸಿ ಮುಂಬೈನಲ್ಲಿ ಮಾರಾಟ ಮಾಡುತ್ತೇನೆ. ಕೆಲವೊಮ್ಮೆ ವ್ಯಾಪಾರಿಗಳಿಗೆ ಚಿನ್ನವನ್ನೂ ಮಾರಿ ಅವರಿಂದ ನಗದು ಹಣ ಪಡೆಯುತ್ತೇನೆ. ಹಲವು ವರ್ಷಗಳಿಂದ ನನ್ನ ನಂಬಿಕಸ್ಥ ಸೇವಕರು ಚಿನ್ನದ ಬಿಸ್ಕತ್ತುಗಳನ್ನು, ಆಭರಣಗಳನ್ನು ಮತ್ತು ನಗದು ಹಣವನ್ನು ರಾತ್ರಿಯ ಬಸ್ಸುಗಳ ಮೂಲಕವೇ ಸಾಗಾಟ ಮಾಡುತ್ತಿದ್ದು ಇಲ್ಲಿಯವರೆಗೆ ಯಾವುದೇ ಸಮಸ್ಯೆಯಿರಲಿಲ್ಲ. ಕೆಲ ದಿನಗಳ ಹಿಂದೆ ನಾನು ಬೆಳಗಾವಿಯ ವ್ಯಾಪಾರಿಯೊಬ್ಬರಿಗೆ ಐದು ಕಿಲೋ ಬಂಗಾರದ ಗಟ್ಟಿಗಳನ್ನು ಮಾರಿದ್ದೆ. ಅದರ ಬಾಬ್ತು ಒಂದೂವರೆ ಕೋಟಿ ರೂಪಾಯಿಗಳನ್ನು ಅವರು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳಿದ್ದ ಹತ್ತು ಕಂತೆಗಳನ್ನಾಗಿ ಮಾಡಿ ಮೊನ್ನೆ ರಾತ್ರಿ ನನ್ನ ಸೇವಕ ಗುರುನಾಥನಿಗೆ ಕೊಟ್ಟರು. ಆತ ಬಸ್ಸಿನಲ್ಲಿ ಬರುವಾಗ ಈ ಹಣದ ಕಂತೆಗಳನ್ನು ರಕ್ಷಣೆಗೆಂದು ಬಸ್ಸಿನ ಕೆಳಗೆ ಸ್ಟೆಪ್ನಿ ಹಾಗೂ ಟೂಲ್ ಕಿಟ್ ಇಡುವ ಜಾಗದಲ್ಲಿ ಅಡಗಿಸಿಟ್ಟಿದ್ದ. ಈ ಮಾಹಿತಿ ಬಸ್ಸಿನ ಚಾಲಕ, ಮಾಲೀಕ ಮತ್ತು ನನಗೆ ಮಾತ್ರ ತಿಳಿದಿತ್ತು. ರಾತ್ರಿ ವಾಹನವನ್ನು ತಪಾಸಣೆ ಮಾಡಿದ ಪೊಲೀಸರು ಹತ್ತೂ ಕಂತೆಗಳನ್ನು ಜಪ್ತುಮಾಡಿ ಒಂದು ಕಂತೆಯಲ್ಲಿದ್ದ 15 ಲಕ್ಷ ರೂಗಳನ್ನು ಮಾತ್ರ ಜಪ್ತಿ ಮಾಡಿದ್ದೇವೆಂದು ತೋರಿಸಿದ್ದಾರೆ. ಇನ್ನುಳಿದ ಒಂಬತ್ತು ಕಂತೆಗಳಲ್ಲಿದ್ದ 1.35 ಕೋಟಿ ರೂ.ಗಳನ್ನು ಅವರಿಂದ ನಮಗೆ ಮರಳಿಸಿ’ ಎಂದು ಮಾಣಿಕ್ ಹೇಳಿದ. ಈ ಗಂಭೀರ ಆರೋಪ ಕೇಳಿ ಹೌಹಾರಿದ ಎಸ್​ಪಿ ವಿಚಾರಣೆ ನಡೆಸಲು ಜಾಧವ್ ಎನ್ನುವ ಡಿಎಸ್​ಪಿಯನ್ನು ನೇಮಿಸಿದರು.

    ದೂರುದಾರನನ್ನು ಠಾಣೆಗೆ ಕರೆದೊಯ್ದ ಜಾಧವ್ ಅವನ ಎದುರಿನಲ್ಲೇ ಜಪ್ತಿಯಾದ ಬಸ್ಸನ್ನು ಪರೀಕ್ಷೆ ಮಾಡಿದರು. ಹಣವನ್ನು ಅಡಗಿಸಲಾಗಿತ್ತು ಎನ್ನುವ ಜಾಗದಲ್ಲಿ ಯಾವುದೇ ಹಣದ ಪ್ಯಾಕೆಟ್ ಇರಲಿಲ್ಲ. ಆದರೆ ಬಸ್ಸಿನ ಚಾಲಕ ಆ ಜಾಗದಲ್ಲಿ ತಾನೇ ಟೇಪಿನಲ್ಲಿ ಭದ್ರವಾಗಿ ಪ್ಯಾಕ್ ಮಾಡಿದ್ದ ಹತ್ತು ಕಾಗದದ ಪ್ಯಾಕೆಟ್​ಗಳನ್ನು ಇಟ್ಟಿದ್ದೆ ಎಂದು ಹೇಳಿ ಪೊಲೀಸರು ಗಾಡಿಯನ್ನು ಶೋಧಿಸುವಾಗ ತನ್ನನ್ನು ಹತ್ತಿರಕ್ಕೇ ಸೇರಿಸಲಿಲ್ಲ ಎಂದ. ರಾತ್ರಿಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳನ್ನು ವಿಚಾರಿಸಿದಾಗ ಅವರೆಲ್ಲರೂ ಟೂಲ್ ಬಾಕ್ಸಿನಲ್ಲಿ ಇದ್ದದ್ದು ಒಂದೇ ಪ್ಯಾಕೆಟ್ ಹಣ ಎಂದು ವಾದಿಸಿದರು. ಬೆಳಗಾವಿಯಲ್ಲಿ ಹಣದ ಪ್ಯಾಕೆಟ್​ಗಳನ್ನು ವಾಡಿಕೆಯಂತೆ ಚಾಲಕನಿಗೆ ಕೊಟ್ಟಿದ್ದಾಗಿ ತಿಳಿಸಿದ ಗುರುನಾಥ್, ತಾನು ಬಸ್ಸನ್ನೇರುವ ಮೊದಲು ಹಣವನ್ನು ಟೂಲ್ ಬಾಕ್ಸ್ ಬಳಿಯಿಟ್ಟದ್ದನ್ನು ಖುದ್ದಾಗಿ ಕಂಡಿರುವೆ ಎಂದ. ಹಣ ಮಾರ್ಗಮಧ್ಯೆ ಕಳವಾಗಿರಬಹುಲ್ಲಾ ಎಂದು ಕೇಳಿದಾಗ ಬಸ್ಸು ಹಾದಿಯಲ್ಲಿ ಎಲ್ಲೂ ನಿಲ್ಲಲಿಲ್ಲ ಎಂದ ಚಾಲಕ. ಹಣ ಪಡೆದ ಬಗ್ಗೆ ಸೂಕ್ತ ದಾಖಲೆಗಳನ್ನು ತೆಗೆದುಕೊಂಡು ಬರಲು ಜಾಧವ್ ಮಾಣಿಕ್​ಗೆ ಸೂಚಿಸಿದರು.

    ವಾರದ ನಂತರ ಮಾಣಿಕ್ ಅಮಿತ್ ಎನ್ನುವ ವ್ಯಕ್ತಿಯನ್ನು ಕರೆದುಕೊಂಡು ಬಂದು ಡಿಎಸ್​ಪಿ ಜಾಧವ್ ಮುಂದೆ ಹಾಜರಾದ. ತಾನು ಬೆಳಗಾವಿಯ ಆಭರಣ ಅಂಗಡಿ ಮಾಲೀಕನೆಂದು ಹೇಳಿದ ಅಮಿತ್ ತಾನು ಗುರುನಾಥನಿಗೆ ಒಂದೂವರೆ ಕೋಟಿ ರೂ ನಗದನ್ನು ನೀಡಿದ್ದಾಗಿ ಹೇಳಿ ಆ ಹಣವು ಕಪ್ಪುಹಣವಾದ್ದರಿಂದ ಯಾವುದೇ ದಾಖಲೆಗಳಿಲ್ಲ ಎಂದ. ಮುಂಬೈನಲ್ಲಿ ಕಸ್ಟಮ್್ಸ ಅಧಿಕಾರಿಗಳ ಮೂಲಕ ತಾನು ಬಂಗಾರ ಕೊಂಡ ಅಧಿಕೃತ ದಾಖಲೆಗಳನ್ನು ಮಾಣಿಕ್ ತೋರಿಸಿದ. ಗುರುನಾಥನೇ ಹಣವನ್ನು ದುರುಪಯೋಗ ಮಾಡಿರಬಹುದಲ್ಲವೇ ಎಂದು ಜಾಧವ್ ಸಂಶಯಪಟ್ಟಾಗ, ಐದಾರು ವರ್ಷಗಳಿಂದ ಪ್ರತಿ ವಾರವೂ ಗುರುನಾಥನೇ ಮುಂಬೈನಿಂದ ಬೆಳಗಾವಿಗೆ ಹಣ ಮತ್ತು ಚಿನ್ನವನ್ನು ಸಾಗಿಸುತ್ತಿದ್ದಾನೆ. ಆತನ ಮೇಲೆ ಅಪನಂಬಿಕೆ ಪಡುವ ಹಾಗಿಲ್ಲ ಎಂದ ಮಾಣಿಕ್. ಒಂದು ವಾರದ ಕಾಲ ವಿಚಾರಣೆ ನಡೆಸಿದ ಜಾಧವ್, ಮಾಣಿಕ್ ದೂರು ಸುಳ್ಳೆಂದು ತೀರ್ವನಿಸಿ ಎಸ್​ಪಿಗೆ ವರದಿ ನೀಡಿದರು.

    ನಂತರ ಮಾಣಿಕ್ ರಾಜ್ಯದ ಗೃಹ ಸಚಿವರನ್ನೇ ಭೇಟಿ ಮಾಡಿ ತನ್ನ ಗೋಳನ್ನು ತೋಡಿಕೊಂಡ. ಸಚಿವರು ಸಿಐಡಿ ತನಿಖೆಗೆ ಆದೇಶಿಸಿದರು. ಸಿಐಡಿ ಪೊಲೀಸರು ಆ ರಾತ್ರಿ ಬಸ್ಸಿನ ಮೇಲೆ ದಾಳಿ ನಡೆಸಿದ್ದ ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಹಾಗೂ ಒಟ್ಟಾರೆ ವಿಚಾರಣೆ ಮಾಡಿದಾಗ ಈ ಒಳಸಂಚಿನ ಪರದೆ ಕಳಚಿತು.

    ಜಿಲ್ಲೆಯಲ್ಲಿನ ಅಪರಾಧ ಮತ್ತು ಅಪರಾಧಿಗಳ ಬಗ್ಗೆ ಗುಪ್ತ ಮಾಹಿತಿಯನ್ನು ತೆಗೆಯಲು ‘ಕ್ರೖೆಮ್ ಸ್ಕಾ್ವಡ್’ ತಂಡವನ್ನು ಸತಾರಾ ಎಸ್​ಪಿ ಸ್ಥಾಪಿಸಿದ್ದರು. ತುಕಾರಾಂ ಎನ್ನುವ ಇನ್ಸ್​ಪೆಕ್ಟರ್​ರನ್ನು ಈ ತಂಡದ ನಾಯಕನನ್ನಾಗಿ ಮಾಡಿ ಎಂಟು ಜನ ಪೊಲೀಸ್ ಸಿಬ್ಬಂದಿಯನ್ನು ನೀಡಿದ್ದರು. ಇವರೆಲ್ಲ ಸಮವಸ್ತ್ರ ಧರಿಸದೇ ಜಿಲ್ಲೆಯ ತುಂಬಾ ಓಡಾಡಿ ವ್ಯವಸ್ಥಿತ ಅಪರಾಧಗಳ ಬಗ್ಗೆ ಮಾಹಿತಿ ಕಲೆಹಾಕಿ ದಾಳಿಗಳನ್ನು ನಡೆಸುತ್ತಿದ್ದರು. ಈ ತಂಡದಲ್ಲಿದ್ದ ಮುಖೇಶ್ ಎನ್ನುವ ಬೆಳಗಾವಿ ಮೂಲದ ಕಾನ್​ಸ್ಟೆಬಲ್​ಗೆ ಪ್ರತಿ ವಾರವೂ ಎರಡರಿಂದ ಮೂರು ಬಾರಿ ಮುಂಬೈ ಮತ್ತು ಬೆಳಗಾವಿ ನಡುವೆ ಚಿನ್ನ ಹಾಗೂ ನಗದು ಹಣ ಸಾಗಣೆಯಾಗುತ್ತದೆ ಎಂಬ ಮಾಹಿತಿ ಬಂದಿತ್ತು. ಆತ ಇದನ್ನು ತಿಳಿಸಿದಾಗ ಮೂಲ ಮಾಹಿತಿದಾರರನ್ನು ಕರೆದುಕೊಂಡು ಬರಲು ತುಕಾರಾಂ ಆದೇಶಿಸಿದರು. ಬೆಳಗಾವಿ ಜಿಲ್ಲೆಯ ಪೂರ್ವ ಅಪರಾಧಿ ಖುರೇಷಿ ಎನ್ನುವವನನ್ನು ಮುಖೇಶ್ ಕರೆತಂದ. ಅವನಿಂದ ಚಿನ್ನ ಸಾಗಾಟದ ವಿವರಗಳನ್ನು ಪಡೆದ ಅಧಿಕಾರಿಗಳು ಬಸ್ಸಿನಲ್ಲಿ ನಗದು ಹಣ ಬರುವಾಗ ದಾಳಿ ಮಾಡಬೇಕೆಂಬ ಸಂಚನ್ನು ರೂಪಿಸಿದರು. ಬಸ್ಸಿನಲ್ಲಿ ಹಣ ಸಾಗಾಣಿಕೆಯಾಗುವ ರಾತ್ರಿ ತಮ್ಮನ್ನು ಸಂರ್ಪಸಬೇಕೆಂದು ಖುರೇಷಿಗೆ ತುಕಾರಾಂ ಸೂಚಿಸಿದರು. ಗುರುನಾಥ್ ಹಣವನ್ನು ಒಯ್ಯುತ್ತಿದ್ದಾನೆ ಎಂದು ಖುರೇಷಿಗೆ ತಿಳಿದ ಕೂಡಲೇ ಆತ ಮುಖೇಶ್​ಗೆ ಫೋನ್ ಮಾಡಿ ತಾನೂ ಅದೇ ಬಸ್ಸಿನಲ್ಲಿಯೇ ಕುಳಿತು ಬಸ್ಸಿನ ಲೊಕೇಷನ್ ಬಗ್ಗೆ ಮುಖೇಶ್​ಗೆ ಮಾಹಿತಿ ನೀಡುತ್ತಿದ್ದ.

    ಬಸ್ಸಿನಲ್ಲಿ ಸಿಕ್ಕ ಹತ್ತು ಹಣದ ಪ್ಯಾಕೆಟ್​ಗಳಲ್ಲಿ ಒಂದನ್ನೇ ವಶಪಡಿಸಿಕೊಂಡಂತೆ ತೋರಿಸಿದ ತುಕಾರಾಂ ಮೂರು ಪ್ಯಾಕೆಟ್ ಹಣದಲ್ಲಿ ತನ್ನ ಪಾಲನ್ನು ಇಟ್ಟುಕೊಂಡು ಉಳಿದದ್ದನ್ನು ತನ್ನ ತಂಡದವರಿಗೆ ಮತ್ತು ಖುರೇಷಿಗೆ ಹಂಚಿದರು. ಉಳಿದ ಆರು ಪ್ಯಾಕೆಟ್ಟುಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದು ಸಿಐಡಿ ತನಿಖೆಗೆ ಸರ್ಕಾರ ಆದೇಶಿಸಿದ ದಿನದಂದೇ ಅವನ್ನು ದೂರುದಾರ ಮಾಣಿಕ್​ಗೆ ವಾಪಸ್ ಮಾಡಿ ದೂರನ್ನು ಹಿಂತೆಗೆದುಕೊಳ್ಳಲು ತುಕಾರಾಂ ವಿನಂತಿಸಿದ ಮಾಹಿತಿಯನ್ನು ಸಿಐಡಿ ಕಲೆಹಾಕಿತು. ದಾಳಿ ನಡೆದ ಕಾಲಕ್ಕೆ ಹೆದ್ದಾರಿಯ ಪೊಲೀಸ್ ಠಾಣೆಯ ಅಧಿಕಾರಿಗಳೂ ಸಹಕಾರ ನೀಡಿದ್ದು ಸಾಬೀತಾಯಿತು. ತನಿಖಾಧಿಕಾರಿ ಸಂಬಂಧಪಟ್ಟ ಪೊಲೀಸರ ಮನೆಗಳಿಗೆ ದಾಳಿ ಮಾಡಿ ಒಟ್ಟಾರೆಯಾಗಿ ಸುಮಾರು 12 ಲಕ್ಷ ರೂ.ಗಳನ್ನು ವಶಪಡಿಸಿಕೊಂಡರು. ಆರೋಪಿಗಳು ಸ್ವಲ್ಪ ನಗದನ್ನು ಉಪಯೋಗಿಸಿದ್ದರು.

    ಇನ್​ಸ್ಪೆಕ್ಟರ್ ತುಕಾರಾಂ ಮತ್ತು ಎಂಟು ಸಿಬ್ಬಂದಿ ಹಾಗೂ ಖುರೇಷಿ ಹಾಗೂ ಮತ್ತೊಬ್ಬನ ವಿರುದ್ಧ ಒಳಸಂಚು, ದರೋಡೆ, ಮತ್ತಿತರ ಆರೋಪಗಳಿದ್ದ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ನಗದು ಹಣ ಪಡೆದ ಬಗ್ಗೆ ಸೂಕ್ತ ರೀತಿಯಲ್ಲಿ ಸಾಬೀತುಪಡಿಸಲಾಗದ ಕಾರಣದಿಂದಲೂ, ಸಾಕ್ಷಿಗಳ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದರಿಂದಲೂ, ಪ್ರಕರಣ ಖುಲಾಸೆಗೊಂಡು ಎಲ್ಲ ಆರೋಪಿಗಳೂ ಬಿಡುಗಡೆಯಾದರು.

    ‘ನಾವು ಪಶ್ಚಾತ್ತಾಪ ಪಡಲಿ, ಪಡದಿರಲಿ ನಮ್ಮ ಹೀನಕೃತ್ಯಗಳ ಆತ್ಮಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ’ ಎಂದಿದ್ದಾನೆ, ಕೆನಡಿಯನ್ ಕಾದಂಬರಿಕಾರ ಗಿಲ್ಬರ್ಟ್ ಪಾರ್ಕರ್. ಹಾಗೆ, ಈ ಪ್ರಕರಣದಿಂದ ಬಿಡುಗಡೆಯಾದರೂ ಆರೋಪಿಗಳನ್ನು ಪಾಪಪ್ರಜ್ಞೆ ಕಾಡುತ್ತಿರಬಹುದೇನೋ.

    (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts