ಮಗು ಮಂಕಾಗಿದ್ದೇಕೆ?

 ‘ಅಂತೂ ನಮ್ಮ ಕಮಲಾಗೆ (ಹೆಸರು ಬದಲಾಯಿಸಿದೆ) ಪ್ರತಿಷ್ಠಿತ ಸ್ಕೂಲ್​ನಲ್ಲಿ ಒಂದನೇ ತರಗತಿಗೆ ಸೀಟ್ ದೊರಕಿತು’ ಎಂದು ಸಂತೋಷ್ ಖುಷಿಯಿಂದ ಹೆಂಡತಿ ಮೀನಾಳಿಗೆ ಸಿಹಿ ತಿನ್ನಿಸಿದಾಗ, ‘ಏಕಿಷ್ಟು ಖುಷಿಪಡುತ್ತೀರಿ, ಭಾರಿ ಮೊತ್ತದ ಡೊನೇಷನ್ ಕೊಡಲಿಲ್ಲವೇ?’ ಎಂದಳು. ‘ಉತ್ತಮ ಶಾಲೆಯಲ್ಲಿ ಸೀಟ್ ಸಿಗುವುದು ಚುನಾವಣೆಯಲ್ಲಿ ಗೆಲ್ಲುವಷ್ಟೇ ಕಠಿಣ. ನಾನು ಈ ಸೀಟ್​ಗಾಗಿ ಪಟ್ಟ ಕಷ್ಟ ನಿನಗೇನು ಗೊತ್ತು?’ ಆತ.

ಸಂತೋಷ್ ಮಹಾನಗರವೊಂದರಲ್ಲಿದ್ದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ. ಕಮಲಾ ಅವನ ಏಕೈಕ ಪುತ್ರಿ. ಮನೆ ಬಳಿಯಲ್ಲಿದ್ದ ಮಾಂಟೆಸ್ಸರಿ ಶಾಲೆಯಲ್ಲಿ ಮೂರು ವರ್ಷ ಓದಿದ ನಂತರ ಅವಳು ಆ ಊರಿನ ಪ್ರತಿಷ್ಠಿತ ಶಾಲೆಯಲ್ಲಿ ಮೊದಲನೆಯ ತರಗತಿಗೆ ಪ್ರವೇಶ ಪಡೆದಳು. ಶಾಲೆಗೆ ಮಗುವನ್ನು ಸೇರಿಸಬೇಕಾದ ದಿನ ಸಂತೋಷ್ ಹಾಗೂ ಮೀನಾ ಮನೆಯಿಂದ ಮೂರು ಕಿ.ಮೀ. ದೂರದಲ್ಲಿದ್ದ ಶಾಲೆಗೆ ಮಗಳೊಡನೆ ಹೋದರು. ಶಾಲೆಯವರು ಪಠ್ಯಪುಸ್ತಕ, ಯೂನಿಫಾರಂ ಮತ್ತು ಬಸ್​ಸೌಲಭ್ಯಕ್ಕಾಗಿಯೂ ಭಾರಿ ಶುಲ್ಕ ಕಟ್ಟಿಸಿಕೊಂಡರು.

ಮೊದಲ ಕೆಲವು ದಿನಗಳು ಕಮಲಾ ಶಾಲೆಗೆ ಹೋಗುವುದೇ ಇಲ್ಲ ಎಂದು ಹಠಮಾಡಿದಳು. ಎಲ್ಲ ಮಕ್ಕಳಂತೆಯೇ ಹೊಸ ಶಾಲೆಗೆ ಹೊಂದಿಕೊಳ್ಳಲು ಸಮಯವಾಗುತ್ತದೆ ಎಂದು ಭಾವಿಸಿದ ಮೀನಾ, ‘ಇದು ಈ ಊರಿನ ಪ್ರತಿಷ್ಠಿತ ಶಾಲೆ. ಅಲ್ಲಿ ಓದಿರುವ ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿ ತುಂಬ ಮುಂದೆ ಬಂದಿದ್ದಾರೆ. ನಿನಗೆ ಹೊಸ ಸ್ನೇಹಿತರು ಸಿಗುತ್ತಾರೆ’ ಎಂದು ಮಗಳಿಗೆ ಪುಸಲಾಯಿಸಿ ಶಾಲೆಗೆ ಕಳಿಸತೊಡಗಿದಳು.

ಮೂರು ತಿಂಗಳ ನಂತರ ಶಾಲೆಯಿಂದ ಮನೆಗೆ ಬಂದ ಮಗಳು ತೀರಾ ಮಂಕಾಗಿದ್ದನ್ನು ಕಂಡ ಮೀನಾ, ‘ಏಕೆ ಹೀಗಿರುವೆ, ಜ್ವರ ಬಂದಿದೆಯೇ?’ ಎಂದು ಕೇಳಿದಳು. ಕಮಲಾ ಮೌನವಾಗಿಯೇ ತನ್ನ ಕೋಣೆಗೆ ಹೋಗಿ ಸಮವಸ್ತ್ರವನ್ನು ಬದಲಾಯಿಸಿ ಮುಸಿಮುಸಿ ಅಳುತ್ತಿದ್ದಳು. ಗಾಬರಿಗೊಂಡ ಮೀನಾ ಮಗಳ ಹಣೆಮುಟ್ಟಿ ನೋಡಿದಳು. ಜ್ವರವಿರಲಿಲ್ಲ. ‘ಏನಾಯಿತು’ ಎಂದು ಕೇಳಿದಾಗ ಉತ್ತರ ಬರಲಿಲ್ಲ. ಹೊಸ ಪರಿಸರ ಹಾಗೂ ಶಾಲೆಯ ಶಿಸ್ತು ಮಗಳಿಗೆ ಇನ್ನೂ ಹೊಂದಿಲ್ಲ ಎಂದು ಭಾವಿಸಿ ಮೀನಾ ಗೆಳತಿಯರೊಡನೆ ಹೊರಗಡೆ ಹೋಗಬೇಕಾದ ಕಾರಣ ಮನೆಯಲ್ಲಿದ್ದ ಸೇವಕಿಗೆ ಕಮಲಾಳನ್ನು ಸಮಾಧಾನ ಮಾಡಲು ಹೇಳಿ ಹೊರಟುಹೋದಳು.

ನಂತರವೂ ಮಗಳು ಯಾರೊಡನೆಯೂ ಬೆರೆಯದೆ ಸದಾಕಾಲ ಮಂಪರಿನಲ್ಲಿರುವಂತಿದ್ದುದನ್ನು ಗಮನಿಸಿದ ಸಂತೋಷ್ ಪರಿಚಯವಿದ್ದ ವ್ಯೆದ್ಯರಿಗೆ ಸಮಸ್ಯೆ ತಿಳಿಸಿದ. ‘ಕಮಲಾಳ ಮನಸ್ಸಿನ ಮೇಲೆ ಯಾವುದೋ ಘಟನೆ ಪರಿಣಾಮ ಬೀರಿದೆ. ಮಕ್ಕಳ ಮನಶ್ಶಾಸ್ತ್ರಜ್ಞರಿಗೆ ತೋರಿಸಿ’ ಎಂದರವರು.

ಒಂದು ದಿನ ಕಮಲಾ ಶಾಲೆಯಿಂದ ಅಳುತ್ತ ಬಂದು ಕುಂಟುತ್ತ ಬಾತ್​ರೂಂಗೆ ಹೋದಳು. ಮೀನಾ ಮಗಳನ್ನು ಹಿಂಬಾಲಿಸಿದಾಗ ಮಗಳ ಯೂನಿಫಾರಂ ಫ್ರಾಕ್​ಗೆ ಅಲ್ಲಲ್ಲಿ ರಕ್ತ ಹತ್ತಿದ್ದನ್ನು ನೋಡಿ ಗಾಬರಿಗೊಂಡಳು. ಮಗಳನ್ನು ಪರೀಕ್ಷಿಸಿದಾಗ ಅವಳ ಕಾಲು, ತೊಡೆ ಮತ್ತಿತರ ಕಡೆಗಳಲ್ಲಿ ಗಾಯಗಳಾಗಿದ್ದುದನ್ನು ಕಂಡು ಏನೂ ಮಾಡಲು ತೋಚದೆ ಗಂಡನಿಗೆ ಫೋನ್ ಮಾಡಿದಳು. ಮಗಳನ್ನು ಕೂಡಲೇ ದವಾಖಾನೆಗೆ ಕರೆದುಕೊಂಡು ಹೋಗಲು ಸಂತೋಷ್ ಸೂಚಿಸಿದ.

ಕಮಲಾಳನ್ನು ಹತ್ತಿರದಲ್ಲಿದ್ದ ನರ್ಸಿಂಗ್​ಹೋಮ್ೆ ಕರೆದುಕೊಂಡು ಹೋದಾಗ ಅವಳನ್ನು ಪರೀಕ್ಷಿಸಿದ ವೈದ್ಯರು, ‘ನಿಮ್ಮ ಮಗಳ ಮೇಲೆ ಅತ್ಯಾಚಾರವಾದಂತೆ ಕಾಣುತ್ತದೆ. ಮರ್ವಂಗದ ಮೇಲೆ ಗಾಯಗಳಾಗಿವೆ. ಇದು ಮೆಡಿಕೋ ಲೀಗಲ್ ಕೇಸ್, ಕೂಡಲೇ ಪೊಲೀಸರಿಗೆ ತಿಳಿಸಬೇಕು’ ಎಂದು ನೇರವಾಗಿ ಪೊಲೀಸ್ ಠಾಣೆಗೆ ಕರೆ ಮಾಡಲು ಹೊರಟರು. ‘ಡಾಕ್ಟರೇ, ಏಕೆ ಪೊಲೀಸರಿಗೆ ಹೇಳುವಿರಿ, ನನ್ನ ಗಂಡನನ್ನು ಕರೆಸುತ್ತೇನೆ, ಅವರೊಡನೆ ಮಾತನಾಡಿ’ ಎಂದಳು ಮೀನಾ. ‘ಇಲ್ಲ ಮೇಡಂ, ಇದು ಪೊಕ್ಸೋ ಕಾಯ್ದೆಯ ಪ್ರಕರಣ, ಪೊಲೀಸರಿಗೆ ತಿಳಿಸದಿದ್ದರೆ ನಾನೂ ಜೈಲಿಗೆ ಹೋಗಬೇಕಾಗುತ್ತೆ’ ಎಂದ ವೈದ್ಯರು ಪೊಲೀಸ್ ಠಾಣೆಗೆ ಸುದ್ದಿಮುಟ್ಟಿಸಿ ಮಗುವಿಗೆ ಚಿಕಿತ್ಸೆ ನೀಡಿದರು.

ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅದೇ ಸಂಜೆ ಮೀನಾಳ ಮನೆಗೆ ಬಂದು ಮಗುವಿನ ಹೇಳಿಕೆ ಪಡೆದರು. ಕಮಲಾ ಅಳುತ್ತಾ ಹೀಗೆಂದಳು-‘ಅಮ್ಮಾ, ಕೆಲವು ವಾರಗಳಿಂದ ನಮ್ಮ ಪಿ.ಟಿ. ಟೀಚರ್ ನನ್ನ ಮೈ ಮುಟ್ಟುತ್ತಿದ್ದರು. ನನ್ನನ್ನಪ್ಪಿ ಮುತ್ತು ಕೊಡುತ್ತಿದ್ದರು. ಇಂದು ಪಿ.ಟಿ. ನಡೆಯುವ ಸಮಯದಲ್ಲಿ ಟೀಚರ್ ನನ್ನನ್ನು ಬಾತ್​ರೂಂ ಒಳಗೆ ಕರೆದುಕೊಂಡು ಹೋಗಿ ನನ್ನ ಒಳಉಡುಪನ್ನು ಬಿಚ್ಚಿ ನನ್ನ ಮೈಮೇಲೆ ಬಿದ್ದರು. ಯಾರಿಗಾದರೂ ಹೇಳಿದರೆ ನಿನಗೆ ತೊಂದರೆಯಾಗುತ್ತದೆ ಎಂದು ಗದರಿಸಿದ ಕಾರಣ ನಾನು ಹೆದರಿಕೆಯಿಂದ ಯಾರಿಗೂ ಹೇಳದೆ ಬಸ್ಸಿನಲ್ಲಿ ಮನೆಗೆ ವಾಪಸ್ಸಾದೆ’.

ಮಾರನೆಯ ದಿನ ಸಂತೋಷ ಹಾಗೂ ಮೀನಾ ಮಗಳನ್ನು ಕರೆದುಕೊಂಡು ಶಾಲೆಗೆ ಹೋಗಿ ಮುಖ್ಯಶಿಕ್ಷಕಿಯನ್ನು ಭೇಟಿಯಾಗಿ ನಡೆದ ಘಟನೆ ವಿವರಿಸಿದಾಗ ಅವರು ಈ ರೀತಿಯ ಘಟನೆ ನಮ್ಮ ಶಾಲೆಯಲ್ಲಿ ನಡೆಯಲು ಸಾಧ್ಯವೇ ಇಲ್ಲ ಎನ್ನುತ್ತ ಪಾಲಕರನ್ನು ಸಾಗಹಾಕಲು ಹೊರಟರು. ‘ಮೇಡಂ, ನಾವು ಸುಳ್ಳು ಆರೋಪ ಮಾಡಲು ಬಂದಿಲ್ಲ. ನಡೆದ ಘಟನೆಯನ್ನು ಅಲ್ಲಗಳೆಯಬೇಡಿ, ಈಗಾಗಲೇ ಪೊಲೀಸರಿಗೆ ದೂರು ಹೋಗಿದೆ’ ಎಂದು ಸಂತೋಷ್ ಹೇಳುವಷ್ಟರಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ತನಿಖೆಗಾಗಿ ಶಾಲೆಗೆ ಬಂದರು.

ಮುಖ್ಯಶಿಕ್ಷಕಿ ಸಮ್ಮುಖದಲ್ಲಿ ಕಮಲಾಗೆ ಹಿಂದಿನ ದಿನ ನಡೆದ ಘಟನೆಯನ್ನು ವಿವರಿಸಲು ಕೋರಿದಾಗ ಆ ಬಾಲಕಿ ಪಿ.ಟಿ. ಟೀಚರ್ ರೂಪಕ್ ತನ್ನ ಮೇಲೆ ಬಲಾತ್ಕಾರ ಮಾಡಿದ ಬಗ್ಗೆ ತಿಳಿಸಿದಳು. ಆ ದಿನ ರೂಪಕ್ ಶಾಲೆಗೆ ಬಂದಿರಲಿಲ್ಲ. ಅವನ ವಿವರಗಳನ್ನು ಪಡೆದ ಪೊಲೀಸರು ಕೆಲವೇ ಗಂಟೆಗಳಲ್ಲಿ ಅವನನ್ನು ಪತ್ತೆಮಾಡಿ ವಿಚಾರಣೆ ನಡೆಸಿದರು. 30 ವರ್ಷ ವಯಸ್ಸಿನ ರೂಪಕ್ ಆರಂಭದಲ್ಲಿ ಆರೋಪವನ್ನು ಅಲ್ಲಗಳೆದನಾದರೂ, ಪೊಲೀಸರ ತೀಕ್ಷ್ಣ ವಿಚಾರಣೆ ಎದುರಿಸಲಾಗದೆ ತಪ್ಪನ್ನು ಒಪ್ಪಿಕೊಂಡ.

ಉತ್ತರ ಭಾರತದ ರಾಜ್ಯವೊಂದರ ನಿವಾಸಿಯಾಗಿದ್ದ ರೂಪಕ್ ದೈಹಿಕ ಶಿಕ್ಷಣ ಪದವಿ ಪಡೆದ ನಂತರ ಈ ಶಾಲೆಯಲ್ಲಿ ಖಾಲಿ ಇದ್ದ ದೈಹಿಕ ಶಿಕ್ಷಕನ ಸ್ಥಾನಕ್ಕೆ ಅರ್ಜಿ ಹಾಕಿ ಆಯ್ಕೆಗೊಂಡಿದ್ದ. ಆತ ಶಾಲೆಗೆ ಕೇವಲ ಮೂರು ತಿಂಗಳ ಹಿಂದೆಯಷ್ಟೇ ಸೇರಿದ್ದ. ಆತ ವಾಸಿಸುತ್ತಿದ್ದ ರೂಮನ್ನು ಶೋಧಿಸಿದಾಗ ಲ್ಯಾಪ್​ಟಾಪ್​ನಲ್ಲಿ ಹಲವಾರು ಅಶ್ಲೀಲ ವಿಡಿಯೋಗಳ ಜತೆ ಪುಟ್ಟ ಬಾಲಕ- ಬಾಲಕಿಯರ ನಗ್ನಚಿತ್ರಗಳೂ ಇದ್ದವು. ಅವನ ಮೊಬೈಲ್ ಫೋನಿನಲ್ಲಿಯೂ ಹಲವಾರು ಅಶ್ಲೀಲ ಚಿತ್ರಗಳಿದ್ದವು. ‘ನನಗೆ ಇನ್ನೂ ಮದುವೆಯಾಗಿಲ್ಲ. ನಾನು ಈ ರೀತಿ ದೃಶ್ಯಗಳನ್ನು ನೋಡುವುದರಲ್ಲಿ ತಪ್ಪೇನಿದೆ’ ಎಂದು ಕೇಳಿದ ಆ ಶಿಕ್ಷಕ. ‘ಅಪ್ರಾಪ್ತ ಮಕ್ಕಳಿಗೆ ಸಂಬಂಧಿಸಿದ ಇಂಥ ದೃಶ್ಯಗಳನ್ನು ಮೊಬೈಲ್ ಹಾಗೂ ಕಂಪ್ಯೂಟರ್​ಗಳಲ್ಲಿ ಇಟ್ಟುಕೊಂಡರೆ, ಇಲ್ಲವೆ ಇನ್ನೊಬ್ಬರಿಗೆ ರವಾನಿಸಿದರೆ ಜೈಲು ಶಿಕ್ಷೆ ಆಗುತ್ತದೆ’ ಎಂದು ಹೇಳಿದ ಪೊಲೀಸರು ಅವನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತನಿಖೆಗೆ ಬೇಕಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅವನ ವಿರುದ್ಧ ಆರೋಪಪಟ್ಟಿ ಸಲ್ಲಿಸಿದರು.

ಬಾಲಕ-ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ಪೋಕ್ಸೋ (ಪ್ರಿವೆನ್ಷನ್ ಆಫ್ ಸೆಕ್ಷುಯಲ್ ಕ್ರೖೆಮ್ ಆನ್ ಚಿಲ್ಡ್​ರನ್) ಎಂಬ ಕಾನೂನು ರೂಪಿತವಾಗಿದೆ. ಅತ್ಯಾಚಾರ, ಮಕ್ಕಳ ಗುಪ್ತಾಂಗಗಳನ್ನು ರ್ಸ³ಸುವುದು, ಮಕ್ಕಳಿಗೆ ತಮ್ಮ ಗುಪ್ತಾಂಗಗಳನ್ನು ತೋರಿಸುವುದು, ಮಕ್ಕಳಿಗೆ ಅಶ್ಲೀಲ ಚಿತ್ರಗಳು, ವೀಡಿಯೋ ತೋರಿಸುವುದು ಮುಂತಾದುವು ಅಪರಾಧಗಳೆಂದು ಪರಿಗಣಿಸಲ್ಪಟ್ಟಿವೆ. ಈ ಅಪರಾಧಗಳಿಗೆ ಮರಣದಂಡನೆಯೂ ಸೇರಿದಂತೆ ಕಠಿಣ ಶಿಕ್ಷೆಗಳನ್ನು ನಮೂದಿಸಲಾಗಿದೆ. ಯಾವುದಾದರೂ ಬಾಲಕ-ಬಾಲಕಿ ಮೇಲೆ ದೌರ್ಜನ್ಯ ನಡೆದಿದೆ ಎಂಬ ಮಾಹಿತಿ ಯಾರಿಗಾದರೂ ಬಂದರೆ ಅದನ್ನು ಪೊಲೀಸರಿಗೆ ತಿಳಿಸದಿರುವುದೂ ಈ ಕಾನೂನಿನನ್ವಯ ಅಪರಾಧವಾಗುತ್ತದೆ.

ಸಣ್ಣ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಶಾಲೆಗಳಲ್ಲಿನ ಶಿಕ್ಷಕರಲ್ಲದೆ, ಅಲ್ಲಿ ಕೆಲಸ ಮಾಡುವ ಆಯಾಗಳು, ಬಸ್​ಡ್ರೖೆವರ್​ಗಳು, ಕಂಡಕ್ಟರ್​ಗಳು ಹಾಗೂ ಶಾಲೆಯಲ್ಲಿಯೇ ಓದುತ್ತಿರುವ ಹಿರಿಯ ವಿದ್ಯಾರ್ಥಿಗಳು ಬಾಲಕ-ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆಸುತ್ತಿರುವುದು ವರದಿಯಾಗುತ್ತಿದೆ.

ಮಕ್ಕಳ ಮೈ, ಗುಪ್ತಾಂಗಗಳನ್ನು ಮುಟ್ಟುವುದು, ಅಪ್ಪಿಕೊಳ್ಳುವುದು, ಮುತ್ತು ಕೊಡುವುದು ಮುಂತಾದ ಹಲವಾರು ಕೃತ್ಯಗಳನ್ನು ವಿಕೃತಕಾಮಿಗಳು ಮಾಡುತ್ತಾರೆ. ಮಾತಾಪಿತರು ಮಕ್ಕಳಿಗೆ ಒಳ್ಳೆಯ ಸ್ಪರ್ಶ ಹಾಗೂ ದುರುದ್ದೇಶದ ಸ್ಪರ್ಶಗಳ ಬಗ್ಗೆ ತಿಳಿಸಿಕೊಡಬೇಕು. ಯಾರಾದರೂ ಇಂತಹ ಕೃತ್ಯ ಮಾಡಿದರೆ ಹೆದರದೆ ಕೂಡಲೇ ತಿಳಿಸಲು ಹೇಳಬೇಕು. ಮಕ್ಕಳು ಮನೆಯಿಂದ ಹೊರಗೆ ಹೋಗಿ ಬಂದ ನಂತರ ಮಂಕಾಗಿದ್ದರೆ ಕೂಡಲೇ ಗಮನಹರಿಸಬೇಕು.

ಅಪರಾಧ ನಡೆದ ನಂತರ ಮರುಗುವುದಕ್ಕಿಂತ ಅಪರಾಧವಾಗದಂತೆ ನೋಡಿಕೊಳ್ಳುವುದು ಪಾಲಕರ ಕರ್ತವ್ಯವಾಗಿದ್ದು, ಮಕ್ಕಳ ಚಟುವಟಿಕೆ, ವರ್ತನೆಯ ಮೇಲೆ ನಿಗಾ ಇಡುವುದು ಸೂಕ್ತ.

‘ಒಂದು ಸಮಾಜ ಮಕ್ಕಳ ಜತೆ ಹೇಗೆ ವರ್ತಿಸುತ್ತದೆ ಎನ್ನುವದೇ ಆ ಸಮಾಜದ ಆತ್ಮದ ಕುರುಹು’ ಎಂದರು ನೆಲ್ಸನ್ ಮಂಡೇಲಾ. ದೇಶದ ಅಮೂಲ್ಯ ಆಸ್ತಿಯಾದ ಮಕ್ಕಳ ದೇಹ ಹಾಗೂ ಮನಸ್ಸನ್ನು ವಿಕೃತಕಾಮಿಗಳಿಂದ ರಕ್ಷಿಸಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಲ್ಲವೇ?

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

Leave a Reply

Your email address will not be published. Required fields are marked *