ಶತ್ರುವಾದ ಪತ್ನಿ

ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ 30 ವರ್ಷ ವಯಸ್ಸಿನ ಸುಭಾಷ್ ಎಂಬ ರೈತ ವಾಸವಾಗಿದ್ದ. ನೆರೆಯ ಮಹಾರಾಷ್ಟ್ರ ರಾಜ್ಯದ ಲಕ್ಷ್ಮಿ ಎನ್ನುವವಳನ್ನು ವಿವಾಹವಾದ ನಂತರ ಆತ ತಂದೆಯ ಮನೆಯಿಂದ ಬೇರೆಯಾಗಿ ಪಿತ್ರಾರ್ಜಿತ ಆಸ್ತಿಯಾಗಿ ತನ್ನ ಪಾಲಿಗೆ ಬಂದಿದ್ದ ಐದು ಎಕರೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡಿದ್ದ. ಜಮೀನಿನ ಬಳಿಯೇ ಸಣ್ಣದೊಂದು ಮನೆ ಕಟ್ಟಿಸಿಕೊಂಡಿದ್ದ. ಲಗ್ನವಾದ ವರ್ಷದ ಬಳಿಕ ಸುಭಾಷನಿಗೆ ಆಶಾ ಎನ್ನುವ ಹೆಣ್ಣುಮಗು ಜನಿಸಿತು.

ಸುಭಾಷ್​ನ ಮಾತಾಪಿತರು ಆತ ವಾಸವಾಗಿದ್ದ ಪಕ್ಕದ ಗ್ರಾಮದಲ್ಲಿಯೇ ಇದ್ದ ಕಾರಣ ಆಗೀಗ ಅವನ ಮನೆಗೆ ಬಂದು ಹೋಗುತ್ತಿದ್ದರು. ಸುಭಾಷ್​ಗೆ ಶ್ರೀಕಾಂತ ಎನ್ನುವ ಆತ್ಮೀಯ ಬಾಲ್ಯಸ್ನೇಹಿತನಿದ್ದ. ಚಿಕ್ಕಂದಿನಿಂದಲೂ ಒಟ್ಟಾಗಿ ಬೆಳೆದಿದ್ದ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ಸುಭಾಷ್​ನ ಬೇಸಾಯ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದ ಶ್ರೀಕಾಂತನಿಗೆ ಇನ್ನೂ ಲಗ್ನವಾಗಿರಲಿಲ್ಲ. ಹೀಗಾಗಿ ಆತ ಬಹುಪಾಲು ಸಮಯವನ್ನು ಸುಭಾಷ್​ನ ಜತೆಯೇ ಕಳೆಯುತ್ತಿದ್ದ. ಇದರ ಪರಿಣಾಮವಾಗಿ ಆತನಿಗೂ ಲಕ್ಷ್ಮಿಗೂ ಸಲುಗೆ ಬೆಳೆಯಿತು. ಕ್ರಮೇಣ ಅದು ಅನೈತಿಕ ಸಂಬಂಧಕ್ಕೆ ತಿರುಗಿತು.

ಆಪ್ತಮಿತ್ರನ ಅವ್ಯವಹಾರದ ಬಗ್ಗೆ ಗುಮಾನಿ ಬರಲು ಸುಭಾಷ್​ಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಆದರೂ ಪ್ರತ್ಯಕ್ಷವಾಗಿ ನೋಡದೇ ಈ ಬಗ್ಗೆ ಮಾತಾಡದಿರಲು ನಿರ್ಧರಿಸಿ ಸುಮ್ಮನಿದ್ದ. ಒಮ್ಮೆ ಪರಸ್ಥಳಕ್ಕೆ ಹೋಗಿದ್ದ ಸುಭಾಷ್ ಒಂದು ಸಂಜೆ ಆಕಸ್ಮಿಕವಾಗಿ ಮನೆಗೆ ವಾಪಸಾದಾಗ ಶ್ರೀಕಾಂತ ಮತ್ತು ಲಕ್ಷ್ಮಿ ಒಂದೇ ಹಾಸಿಗೆಯಲ್ಲಿ ಮಲಗಿದ್ದುದನ್ನು ನೋಡಿ ಘಾಸಿಗೊಂಡ. ಪ್ರಾಣಸ್ನೇಹಿತನ ಕುಕೃತ್ಯವನ್ನು ಮಾಫಿ ಮಾಡುವ ಔದಾರ್ಯ ತೋರಿಸಿದ ಆತ ಇನ್ನು ಮುಂದೆ ತನ್ನ ಮನೆಗೆ ಕಾಲಿಡಬೇಡವೆಂದು ಶ್ರೀಕಾಂತನಿಗೆ ಬುದ್ಧಿ ಹೇಳಿ ಪ್ರಕರಣಕ್ಕೆ ತೆರೆ ಎಳೆದ. ತನ್ನ ಹೆಂಡತಿಗೂ ಎಚ್ಚರಿಕೆ ನೀಡಿದ.

ಮುಂದಿನ ಕೆಲವು ತಿಂಗಳುಗಳ ಕಾಲ ಶ್ರೀಕಾಂತ ಸುಭಾಷ್​ನ ಮನೆಯ ಬಳಿ ಸುಳಿಯಲಿಲ್ಲ. ಆದರೆ ಲಕ್ಷ್ಮಿಗೆ ಶ್ರೀಕಾಂತನ ಸಖ್ಯ ಬೇಕಾಗಿತ್ತು. ಸಂತೆಗೆ ಹೋಗುವ ನೆಪದಿಂದ ಆತನನ್ನು ಗುಟ್ಟಾಗಿ ಭೇಟಿಯಾದ ಲಕ್ಷ್ಮಿ ‘ನೀನಿಲ್ಲದೆ ನನಗೆ ಜೀವನವೇ ಬರಿದಾಗಿದೆ. ನಾವು ನನ್ನ ಗಂಡನಿಗೆ ತಿಳಿಯದಂತೆ ಮತ್ತೆ ಕೂಡೋಣ’ ಎಂದಳು. ಮೊದಲಿಗೆ ಶ್ರೀಕಾಂತ ಒಪ್ಪದಿದ್ದರೂ ಲಕ್ಷ್ಮಿಯ ಬಲವಂತಕ್ಕೆ ಮಣಿದ. ಅವರಿಬ್ಬರ ಅನೈತಿಕ ಸಂಬಂಧ ಪುನರಾರಂಭವಾಯಿತು. ಇಂತಹ ವಿಷಯಗಳು ಬಹುಕಾಲ ಗುಟ್ಟಾಗಿ ಉಳಿಯದೇ ಇರುವುದರಿಂದ ಸುಭಾಷ್​ನಿಗೆ ವಿಷಯ ತಿಳಿಯಿತು. ತನ್ನ ಒಳ್ಳೆಯ ಮಾತುಗಳಿಗೆ ಬಗ್ಗದ ಶ್ರೀಕಾಂತನನ್ನು ಮುಗಿಸಿಬಿಡಬೇಕು ಎಂದು ಆತ ತೀರ್ವನಿಸಿದ. ತನ್ನ ಹೆಂಡತಿಯ ಸಖ್ಯದಲ್ಲಿ ಆತ ಕಂಡರೆ ಅವನನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಒಂದು ಕಬ್ಬಿಣದ ಹಾರೆಯನ್ನು ಖರೀದಿಸಿ ತಂದು ಮನೆಯ ಮೂಲೆಯಲ್ಲಿ ಬಚ್ಚಿಟ್ಟ ಸುಭಾಷ್.

ಒಂದು ದಿನ ಆ ಹಾರೆ ಲಕ್ಷ್ಮಿಯ ಕಣ್ಣಿಗೆ ಬಿತ್ತು. ಚುರುಕುಮತಿಯಾದ ಆಕೆಗೆ ತನ್ನ ಗಂಡ ಹಾರೆಯನ್ನು ಯಾವ ಕಾರಣಕ್ಕಾಗಿ ತಂದಿರಬಹುದೆಂದು ಊಹಿಸಲು ಕಷ್ಟವಾಗಲಿಲ್ಲ. ಅದೇ ದಿನ ಆಕೆ ಶ್ರೀಕಾಂತನನ್ನು ಸಂಧಿಸಿ ‘ನನ್ನ ಗಂಡ ನಿನ್ನನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದಾನೆ, ನೀನು ಬಚಾವಾಗಬೇಕಾದರೆ ಸುಭಾಷ್​ನನ್ನೇ ಕೊಲ್ಲದೆ ಬೇರೆ ದಾರಿಯಿಲ್ಲ, ಅವನನ್ನು ಕೊಂದು ನಮ್ಮ ಹಾದಿಯನ್ನು ಸುಗಮಮಾಡಿಕೊಳ್ಳೋಣ’ ಎಂದಳು. ಶ್ರೀಕಾಂತ ಒಪ್ಪಲಿಲ್ಲ. ಆದರೆ ಮನೆಯಲ್ಲಿ ಬಚ್ಚಿಟ್ಟಿದ್ದ ಹಾರೆಯನ್ನು ಆಕೆ ತೋರಿಸಿದಾಗ ಆತ ಕೊಲೆಮಾಡಲು ಒಪ್ಪಿದ. ಸುಭಾಷನಿಗೆ ನಿದ್ರೆಮಾತ್ರೆ ಕೊಟ್ಟು ಅವನು ನಿದ್ರಾವಶನಾದಾಗ ಕೊಲೆ ಮಾಡಬೇಕೆಂದು ಸ್ಕೆಚ್ ಹಾಕಿದರು.

ಮಾರನೆಯ ಸಂಜೆ ಸುಭಾಷ್ ಮನೆಯಲ್ಲಿ ಎಂದಿನಂತೆ ಮದ್ಯಪಾನ ಮಾಡಲು ಕುಳಿತಾಗ ಲಕ್ಷ್ಮಿ ನಿದ್ರಾಗುಳಿಗೆಗಳನ್ನು ಗ್ಲಾಸ್​ನಲ್ಲಿ ಹಾಕಿದಳು. ಊಟವಾದ ನಂತರ ಬಹಿರ್ದೆಸೆಗೆ ಹೋಗುತ್ತೇನೆಂದು ಮನೆಯ ಹೊರಗಡೆ ಹೋದ ಸುಭಾಷ್ ನಿದ್ರಾಗುಳಿಗೆಯ ಪ್ರಭಾವದಿಂದ ಮುಂದಕ್ಕೆ ಹೋಗಲಾರದೇ ಮನೆಯ ಮುಂದೆ ಇದ್ದ ಕಲ್ಲುಬೆಂಚಿನ ಮೇಲೆಯೇ ಮಲಗಿಬಿಟ್ಟ. ಪೂರ್ವನಿಯೋಜಿತ ಯೋಜನೆಯಂತೆ ಆ ಮಧ್ಯರಾತ್ರಿ ಶ್ರೀಕಾಂತ ಬಂದ. ಗಾಢನಿದ್ರೆಯಲ್ಲಿದ್ದ ಸುಭಾಷ್​ನತ್ತ ಬೊಟ್ಟುಮಾಡಿದ ಲಕ್ಷ್ಮಿ ಹಾರೆಯನ್ನು ತಂದುಕೊಟ್ಟಳು. ಬೆಂಚಿನ ಮೇಲೆ ಮಲಗಿದ್ದ ಸುಭಾಷ್​ನ ತಲೆಗೆ ಶ್ರೀಕಾಂತ ಜೋರಾಗಿ ಹೊಡೆದಾಗ ಆತ ಅಯ್ಯೋ ಎಂದು ಚೀರುತ್ತ ಕೆಳಗೆ ಬಿದ್ದ. ಆತ ಸತ್ತಿದ್ದನ್ನು ಖಾತ್ರಿಪಡಿಸಲು ಲಕ್ಷಿಯೂ ಹಾರೆಯಿಂದ ಎರಡು ಏಟನ್ನು ಹಾಕಿದಳು. ನಂತರ ತಾನು ತಂದಿದ್ದ ಗಾಡಿಯೊಂದರಲ್ಲಿ ಶವವನ್ನು ಹಾಕಿಕೊಂಡು ಹೊರಟ ಶ್ರೀಕಾಂತ ತನ್ನ ಹಳ್ಳಿಯ ಹೊರಗಡೆ ಇದ್ದ ಕಸದಗುಂಡಿಯಲ್ಲಿ ಅದನ್ನು ಎಸೆದ.

ಗಂಡ ಕಾರ್ಯನಿಮಿತ್ತ ಬೇರೆ ಊರಿಗೆ ಹೋಗಿದ್ದು ಒಂದು ತಿಂಗಳ ನಂತರವೇ ವಾಪಸಾಗುವುದು ಎಂದು ಲಕ್ಷ್ಮಿ ಮಾರನೆಯ ದಿನ ಗ್ರಾಮಸ್ಥರಿಗೆ ತಿಳಿಸಿದಳು. ಎರಡು ತಿಂಗಳ ನಂತರ ಸುಭಾಷ್​ನ ತಂದೆ ರಾಮಪ್ಪ ಮಗನನ್ನು ನೋಡಲು ಅವನ ಮನೆಗೆ ಹೋದಾಗ, ‘ನಿಮ್ಮ ಮಗ ಗೆಳೆಯನ ಜತೆ ಬಿಸಿನೆಸ್ ಮಾಡಲು ಗೋವಾಗೆ ಹೋಗಿದ್ದಾನೆ, ಇನ್ನೂ ಬಂದಿಲ್ಲ’ ಎಂದಳು ಲಕ್ಷ್ಮಿ. ರಾಮಪ್ಪ ಒಂದು ತಿಂಗಳ ತರುವಾಯ ಮತ್ತೆ ಹೋದಾಗಲೂ ಸೊಸೆಯಿಂದ ಅದೇ ಉತ್ತರ ಬಂದಿತು. ಅನುಮಾನಗೊಂಡ ಆತ ತನ್ನ ಮಗ ಎರಡು ತಿಂಗಳಿಂದ ಕಾಣೆಯಾಗಿದ್ದಾನೆ ಎಂದು ಪೊಲೀಸ್ ದೂರು ನೀಡಿದ.

ಪೊಲೀಸರು ಹೋಗಿ ಲಕ್ಷ್ಮಿಯನ್ನು ವಿಚಾರಿಸಿದಾಗ ಅವರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಸಮರ್ಪಕವಾಗಿಯೇ ಉತ್ತರ ನೀಡಿ ಸುಭಾಷ್ ಗೋವಾದಿಂದ ಏಕೆ ವಾಪಸಾಗಿಲ್ಲ ಎಂದು ತನಗೂ ತಿಳಿದಿಲ್ಲ ಎಂದಳು. ಊರ ಜನರನ್ನು ವಿಚಾರಿಸಿದಾಗ ತಮಗೇನೂ ಗೊತ್ತಿಲ್ಲವೆಂದು ತಿಳಿಸಿ, ಆತನ ಖಾಸಾ ಗೆಳೆಯನಾದ ಶ್ರೀಕಾಂತನನ್ನು ವಿಚಾರಿಸಿ ಎಂದರು. ಶ್ರೀಕಾಂತನನ್ನು ಠಾಣೆಗೆ ಕರೆತರಲು ಕಾನ್ಸ್​ಟೇಬಲ್​ನನ್ನು ಕಳುಹಿಸಿದಾಗ, ಆತ ಅದೇ ದಿನ ಬೆಳಗ್ಗೆ ಊರಿಗೆ ಹೋಗುತ್ತೇನೆಂದು ಮನೆಯಿಂದ ಹೊರಟು ಹೋಗಿದ್ದ ಎಂದು ಗೊತ್ತಾಯಿತು.

ಒಂದು ವಾರದವರೆಗೆ ಶ್ರೀಕಾಂತನ ಸುಳಿವು ಸಿಗಲಿಲ್ಲ. ಪೊಲೀಸರು ಮತ್ತೊಮ್ಮೆ ಸುಭಾಷ್​ನ ಮನೆಗೆ ವಿಚಾರಣೆಗಾಗಿ ಹೋದಾಗ ಮನೆಯಲ್ಲಿ ಲಕ್ಷ್ಮಿ ಇರಲಿಲ್ಲ. ಮನೆಯ ಹೊರಗಡೆ ಆಕೆಯ ಮಗಳು ಆಶಾ ಆಟವಾಡುತ್ತಿದ್ದಳು. ಪಿಎಸ್​ಐ ಅವಳ ಕೈಗೆ ಚಾಕೋಲೇಟ್ ಕೊಟ್ಟು ‘ನಿಮ್ಮ ಅಪ್ಪ ಎಲ್ಲಿಗೆ ಹೋಗಿದ್ದಾನೆ’ ಎಂದು ಕೇಳಿದ. ಆಗ ಆಶಾ ವಿಚಿತ್ರವಾಗಿ ಮುಖ ಮಾಡಿ ಅಳಲು ಪ್ರಾರಂಭಿಸಿದಳು. ಆಕೆಯನ್ನು ಪುಸಲಾಯಿಸಿ ಮತ್ತೆ ಮತ್ತೆ ಕೇಳಿದಾಗ ಆಕೆ ಏನೂ ಮಾತನಾಡದೇ ಮನೆಯ ಮುಂದಿದ್ದ ಕಲ್ಲುಬೆಂಚನ್ನು ತೋರಿಸಿ ‘ಅಮ್ಮ ಅಪ್ಪನ ತಲೆಗೆ ಹೊಡೆದಳು’ ಎಂದಳು. ತನಿಖಾಧಿಕಾರಿ ಆ ಬೆಂಚನ್ನು ಗಮನಿಸಿದಾಗ ಅದರ ಮೇಲೆ ಮಾಸಿದ ರಕ್ತದ ಕಲೆಗಳು ಕಂಡವು.

ಲಕ್ಷ್ಮಿಯನ್ನು ಠಾಣೆಗೆ ಕರೆಸಿ ತೀವ್ರ ವಿಚಾರಣೆ ಮಾಡಿದಾಗ ತಾನೇ ಶ್ರೀಕಾಂತನ ಜತೆಗೂಡಿ ಗಂಡನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಳು. ಅಂದು ತಲೆಗೆ ಬಿದ್ದ ಪೆಟ್ಟಿನ ನೋವಿನಿಂದ ಸುಭಾಷ್ ಕಿರುಚಿದಾಗ ನಿದ್ದೆಯಿಂದ ಎದ್ದು ಮನೆಯ ಬಾಗಿಲ ಬಳಿ ಬಂದು ನಿಂತಿದ್ದ ಆಶಾ ಕೊಲೆಗೆ ಪ್ರತ್ಯಕ್ಷದರ್ಶಿಯಾದಳು. ಅಂದು ತಾನು ಗಾಬರಿಗೊಂಡು ಈ ಬಗ್ಗೆ ಯಾರೊಡನೆಯಾದರೂ ಮಾತನಾಡಿದರೆ ಅಪ್ಪನನ್ನು ಹೊಡೆದಂತೆ ನಿನಗೂ ಹೊಡೆಯುತ್ತೇನೆ ಎಂದು ಆಶಾಗೆ ಬೆದರಿಕೆ ಹಾಕಿದ್ದಾಗಿಯೂ, ಕೊಲೆಯನ್ನು ಕಂಡು ಮಾನಸಿಕವಾಗಿ ತೀವ್ರ ಆಘಾತಗೊಂಡಿದ್ದ ಆಶಾ ಮಾರನೆಯ ದಿನದಿಂದಲೇ ವಿಚಿತ್ರ ರೀತಿಯಲ್ಲಿ ವರ್ತಿಸತೊಡಗಿ ನಿದ್ರೆಯಲ್ಲಿ ಅಪ್ಪ ಅಪ್ಪ ಎಂದು ಪದೇಪದೆ ಕನವರಿಸುತ್ತಾಳೆಂದೂ ಲಕ್ಷ್ಮಿ ತಿಳಿಸಿದಳು.

ಆನಂತರ ಶ್ರೀಕಾಂತನನ್ನು ಬಂಧಿಸಿದಾಗ ಆತ ಸುಭಾಷನ ಶವವನ್ನು ತಮ್ಮ ಹಳ್ಳಿಯ ಹೊರಗಿರುವ ಕಸದ ತಿಪ್ಪೆಯಲ್ಲಿ ಎಸೆದಿರುವುದಾಗಿಯೂ, ಕೊಲೆಗೆ ಬಳಸಿದ ಹಾರೆಯನ್ನೂ ಅದೇ ತಿಪ್ಪೆಗೆ ಹಾಕಿದ್ದಾಗಿಯೂ ಹೇಳಿದ. ಆ ತಿಪ್ಪೆಗುಂಡಿಯನ್ನು ಶೋಧಿಸಿದಾಗ ಅಸ್ಥಿಪಂಜರವೊಂದು ಕಂಡುಬಂತು. ಆ ಅಸ್ಥಿಪಂಜರದ ಕೈಬೆರಳಿನಲ್ಲಿ ಬಂಗಾರದ ಉಂಗುರವೊಂದಿತ್ತು. ಆ ಉಂಗುರ ಸುಭಾಷ್​ನದ್ದೇ ಎಂದು ರಾಮಪ್ಪ ಗುರ್ತಿಸಿದ. ಅಸ್ಥಿಪಂಜರವನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ತಲೆಬುರುಡೆಗೆ ಫ್ರಾಕ್ಚರ್ ಆಗಿದ್ದನ್ನು ದೃಢೀಕರಿಸಲಾಯಿತು. ಸೂಪರ್​ಇಂಪೋಜಿಷನ್ ತಂತ್ರಜ್ಞಾನದಿಂದ ಅಸ್ಥಿಪಂಜರವು ಸುಭಾಷನದೇ ಎಂದು ಸಾಬೀತು ಮಾಡಲಾಯಿತು. ಮೂರು ವರ್ಷದ ಬಾಲಕಿ ಆಶಾಳ ಹೇಳಿಕೆಯ ಮೇರೆಗೆ ಶ್ರೀಕಾಂತ ಹಾಗೂ ಲಕ್ಷ್ಮಿಗೆ ಜೀವಾವಧಿ ಶಿಕ್ಷೆಯಾಯಿತು.

ದೇಹದ ಹಂಬಲಕ್ಕೆ ಮನ ಕಡಿವಾಣ ಹಾಕದಿದ್ದರೆ ಇಂತಹ ಪ್ರಕರಣಗಳಾಗುತ್ತವೆ. ವಿವಾಹಿತರ ವಿವಾಹೇತರ ಸಂಗ ಅನೈತಿಕ ಹಾಗೂ ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ. ವಿವಾಹೇತರ ಸಂಬಂಧ ಅನೈತಿಕವಾದರೂ ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟು 2018ರ ತೀರ್ಪಿನಲ್ಲಿ ಹೇಳಿದ್ದು ಇಲ್ಲಿ ಉಲ್ಲೇಖನೀಯ.

ಪತ್ನಿಯರು ಪ್ರೇಮಿಯ ಜತೆಗೂಡಿ ಪತಿಯನ್ನು ಕೊಲೆಮಾಡಿರುವ ನಿದರ್ಶನಗಳು ಸಾಕಷ್ಟಿವೆ. ಗ್ರೀಕ್ ವೀರ ಅಗಮೆಮ್ನಾನ್​ನನ್ನು ಆತನ ಪತ್ನಿ ಮತ್ತು ಪ್ರಿಯಕರ ಕೊಲೆಮಾಡಿದ ಕಥೆ ಹೆಸರುವಾಸಿ. ಆದರೆ ಪವಿತ್ರ ವಿವಾಹ ಬಂಧನದ ಕಟ್ಟುಪಾಡುಗಳನ್ನು ಪಾಲಿಸಲಾಗದವರು ದಾಂಪತ್ಯವನ್ನು ಕಾನೂನಿನನ್ವಯ ಅಂತ್ಯಗೊಳಿಸುವುದರ ಬದಲು ಜೀವನಸಂಗಾತಿಯ ಜೀವವನ್ನೇ ಬಲಿಪಡೆಯುವುದು ಶಿಕ್ಷಾರ್ಹ ಅಪರಾಧ.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)