More

  ಹಿರಿಯರ ಅನಾದರ ಅಪರಾಧ

  ಎಪ್ಪತ್ತು ವರ್ಷ ವಯಸ್ಸಿನ ರಾಮದಾಸ್ ಖಾಸಗಿ ಬ್ಯಾಂಕೊಂದರ ಉದ್ಯೋಗಿಯಾಗಿ ನಿವೃತ್ತಿ ಹೊಂದಿದ್ದು ಸಕ್ಕರೆ ಕಾಯಿಲೆ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ರೋಗದಿಂದ ನರಳುತ್ತಿದ್ದರು. 62 ವಯಸ್ಸಿನ ಅವರ ಪತ್ನಿ ವತ್ಸಲಾ ಸ್ವಲ್ಪಮಟ್ಟಿಗೆ ಮನೆಕೆಲಸಗಳನ್ನು ನಿಭಾಯಿಸುತ್ತಿದ್ದರೂ ಇತ್ತೀಚೆಗೆ ಅವರಿಗೆ ಅತಿಯಾದ ಮಂಡಿನೋವು ಬಾಧಿಸುತ್ತಿತ್ತು. ಇವರ ಏಕಮಾತ್ರ ಪುತ್ರ ಭಾಸ್ಕರ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸದೆ ಪದವಿ ಪಡೆದ ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಣ್ಣ ಉದ್ಯೋಗದಲ್ಲಿದ್ದ. ಅವನ ಪತ್ನಿ ಅಲಕಾ ಕಚೇರಿಯೊಂದರಲ್ಲಿ ಟೈಪಿಸ್ಟ್ ಆಗಿದ್ದಳು. ಅವರ ಮಕ್ಕಳು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದರು. ಎಲ್ಲರೂ ಒಂದೇ ಮನೆಯಲ್ಲಿದ್ದರು. ಒಂದು ದಿನ ಭಾಸ್ಕರ್ ತಂದೆಯನ್ನುದ್ದೇಶಿಸಿ, ‘ಅಪ್ಪಾ, ನಿಮಗೆ ಈ ಮನೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯೇ?’ ಎಂದು ಕೇಳಿದ.

  ‘ಇದೇನು ಹೀಗೆ ಕೇಳುವೆ? ನಾನೇ ಉಳಿಸಿದ ಹಣದಿಂದ ಸೈಟನ್ನು ಖರೀದಿಸಿ ಬ್ಯಾಂಕಿನಿಂದ ಸಾಲ ಪಡೆದು ಮನೆಯನ್ನು ಕಟ್ಟಿಸಿದ್ದು ನಿನಗೆ ತಿಳಿದಿಲ್ಲವೇ?’ ಎಂದರು ರಾಮದಾಸ್.

  ‘ಅಪ್ಪಾ, ನನಗೆ ತೀರಾ ಹಣದ ಅಡಚಣೆಯಾಗಿದೆ. ನಮ್ಮಿಬ್ಬರಿಗೂ ಬರುವ ಸಂಬಳ ಮಕ್ಕಳ ವಿದ್ಯಾಭ್ಯಾಸಕ್ಕೇ ಸಾಲುತ್ತಿಲ್ಲ. ನೀವೇ ದಿನಸಿ ಹಾಗೂ ಇತರ ವಸ್ತುಗಳಿಗಾಗಿ ಹಣ ಕೊಡುತ್ತಿದ್ದರೂ ನನಗೆ ಆರ್ಥಿಕ ತೊಂದರೆ ತೀವ್ರವಾಗುತ್ತಿದೆ. ನಾವು ಈ ಮನೆಯನ್ನು ಮಾರಿ ಅದರಿಂದ ಬಂದ ಹಣದಿಂದ ಒಂದು ಫ್ಲಾಟನ್ನು ಖರೀದಿಸಿದರೆ 20-30 ಲಕ್ಷ ರೂಗಳು ಉಳಿಯುತ್ತದೆ. ಅದನ್ನು ನನಗೆ ಕೊಟ್ಟರೆ ತೊಂದರೆಯಿಂದ ಬಚಾವಾಗುತ್ತೇನೆ’ ಎಂದ.

  ‘ಭಾಸ್ಕರ, ಈ ಮನೆಯೊಂದೇ ನಮಗಿರುವ ಸ್ಥಿರಾಸ್ತಿ. ನನಗೆ ಪೆನ್ಷನ್ ಬರುವುದಿಲ್ಲ. ನಿವೃತ್ತಿಯ ನಂತರ ಬಂದ ಹಣವನ್ನು ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣದಿಂದಲೇ ನಾವು ಜೀವನ ಸಾಗಿಸುತ್ತಿದ್ದೇವೆ. ಈ ಮನೆಯನ್ನು ಮಾರಿ ನಾವು ಈ ವಯಸ್ಸಿನಲ್ಲಿ ನಿರ್ಗತಿಕರಾಗುವುದು ನನಗೆ ಇಷ್ಟವಿಲ್ಲ. ನೀನು ಬೇರೆ ಯಾವುದಾದರೂ ಮೂಲದಿಂದ ಸಾಲ ತೆಗೆದುಕೋ’ ಎಂದರು ರಾಮದಾಸ್. ಈ ಮಾತು ಭಾಸ್ಕರ ಮತ್ತು ಅಲಕಾ ಇಬ್ಬರಿಗೂ ಸ್ವಲ್ಪವೂ ಇಷ್ಟವಾಗದಿದ್ದುದು ವಿದಿತವಾಗುತ್ತಿತ್ತು.

  ನಂತರ ಮಗ ಸೊಸೆ ಹಿರಿಯರೊಡನೆ ಮಾತನಾಡುವುದನ್ನೇ ಬಿಟ್ಟರು. ಒಂದು ತಿಂಗಳ ನಂತರ ಭಾಸ್ಕರ ತಂದೆಯ ಬಳಿಗೆ ಬಂದು, ‘ನಿಮಗೆ ಹೇಗಿದ್ದರೂ ನಾನು ಒಬ್ಬನೇ ಮಗ. ನೀವು ದೈವಾಧೀನರಾದ ನಂತರ ಮನೆ ನನ್ನ ಹೆಸರಿಗೇ ಬರಬೇಕಲ್ಲವೇ. ಮನೆಯನ್ನು ಈಗಲೇ ನನ್ನ ಹೆಸರಿಗೆ ಮಾಡಿ, ನಾನು ಮನೆಯನ್ನು ಭದ್ರತೆಯಾಗಿ ಕೊಟ್ಟು ಸಾಲ ತೆಗೆದುಕೊಳ್ಳುವೆ. ನಾನು- ಹೆಂಡತಿ ಸೇರಿ ಸಾಲವನ್ನು ತೀರಿಸುತ್ತೇವೆ’ ಎಂದ. ‘ನಾನಂತೂ ಹೃದಯರೋಗಿ. ನಾನು ಸತ್ತ ನಂತರ ನಿಮ್ಮಮ್ಮ ಒಬ್ಬಂಟಿಗಳಾಗುತ್ತಾಳೆ. ಆಕೆಗೆ ಇರುವುದು ಈ ಮನೆಯೊಂದೇ ಆಧಾರ. ಇದನ್ನು ನಿನ್ನ ಹೆಸರಿಗೆ ಮಾಡಿದರೆ ಅವಳನ್ನು ನೋಡಿಕೊಳ್ಳುವವರು ಯಾರು?’ಎಂದರು ರಾಮದಾಸ್.

  ‘ನಾವು ಅಮ್ಮನನ್ನು ನಿರ್ಗತಿಕಳಾಗಿ ಮಾಡುತ್ತೇವೆ ಎಂಬರ್ಥದಲ್ಲಿ ಮಾತನಾಡಿ ಏಕೆ ಅವಮಾನ ಮಾಡುತ್ತಿದ್ದೀರಿ?’ ಎಂದು ಕೋಪದಿಂದ ಗದರಿದ ಭಾಸ್ಕರ.

  ‘ನಿನ್ನ ಮನ ನೋಯಿಸಬೇಕೆಂಬ ಉದ್ದೇಶ ನನಗಿಲ್ಲ. ಆದರೆ ನನಗೆ ಇಂದಿನ ಪರಿಸ್ಥಿತಿಯ ಅರಿವಿದೆ. ಎಷ್ಟೋ ಜನರು ಮಾತಾಪಿತರನ್ನು ಮನೆಯಿಂದ ಹೊರಗಟ್ಟಿ ವೃದ್ಧಾಶ್ರಮಕ್ಕೆ ಸೇರಿಸಿಲ್ಲವೇ? ನಾನು ಸತ್ತ ನಂತರ ನಿನ್ನ ಅಮ್ಮನ ಹೆಸರಿಗೆ ಈ ಮನೆ ಹೋಗಬೇಕು, ಅವಳ ನಂತರ ಅದು ನಿನಗೆ ಬರಬೇಕೆಂದು ನಾನು ಈಗಾಗಲೇ ವಿಲ್ ಬರೆದಿದ್ದೇನೆ’ ಎಂದರು. ಅಲಕಾ, ‘ಏನು ಮಾವ, ನಾವೇಕೆ ಅಮ್ಮನನ್ನು ಬೀದಿಪಾಲು ಮಾಡುತ್ತೇವೆ? ನಿಮ್ಮನ್ನೆಲ್ಲಾ ಸರಿಯಾಗಿ ನೋಡಿಕೊಳ್ಳುತ್ತಿಲ್ಲವೇ?’ ಎಂದಳು.

  ‘ನೋಡಮ್ಮ, ನೀವು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದು ನಾನು ದೂಷಿಸುತ್ತಿಲ್ಲ. ನಿಮ್ಮ ಬಗ್ಗೆ ನನಗೆ ಯಾವುದೇ ದೂರಿಲ್ಲ. ನನಗಿರುವುದು ಇದೊಂದೇ ಆಸ್ತಿ. ಇದನ್ನು ಮಾರಿದರೆ ಅಥವಾ ಭದ್ರತೆಯಾಗಿ ಕೊಟ್ಟರೆ ನಮ್ಮ ಮುಂದಿನ ಗತಿಯೇನು ಎಂದು ಯೋಚಿಸಬೇಕಲ್ಲವೇ? ಹೀಗಾಗಿ ಈ ಮನೆಯನ್ನು ಸದ್ಯಕ್ಕೆ ಯಾರ ಹೆಸರಿಗೂ ಮಾಡುವುದಿಲ್ಲ’ ಎಂದರು ರಾಮದಾಸ್ ಖಡಾಖಂಡಿತಾಗಿ. ಬಳಿಕ ಮಗ ಮತ್ತು ಸೊಸೆಯ ವರ್ತನೆ ಇನ್ನೂ ಬದಲಾಯಿತು. ಸಣ್ಣ ಸಣ್ಣ ವಿಷಯಗಳಿಗೆ ರಾಮದಾಸ್ ಮತ್ತು ವತ್ಸಲಾರ ಮೇಲೆ ಸಿಡುಕುವುದು, ಅಗೌರವ ತೋರಿಸತೊಡಗಿದರು. ವೃದ್ಧ ದಂಪತಿ ತಮ್ಮ ಕೋಣೆಯಿಂದ ಹೊರಗೆ ಬರಬಾರದೆಂದು ಕಟ್ಟುನಿಟ್ಟು ಮಾಡಿದರು. ಸಕಾಲಕ್ಕೆ ಊಟ ಉಪಾಹಾರ ಕೊಡುವುದನ್ನು ನಿಲ್ಲಿಸಿದರು. ಬೇಕೆಂತಲೇ ಅವರಿಗೆ ಕೊಡುವ ಊಟಕ್ಕೆ ಹೆಚ್ಚು ಉಪ್ಪನ್ನು ಬೆರೆಸುತ್ತಿದ್ದಳು. ಹೆಚ್ಚಿಗೆ ಅನ್ನ ಬಡಿಸಲು ಕೇಳಿದರೆ, ‘ನಿಮಗೆ ವಯಸ್ಸಾಗಿದೆ, ಹೆಚ್ಚು ಊಟ ಮಾಡಿದರೆ ಜೀರ್ಣವಾಗುವುದಿಲ್ಲ’ ಎಂದು ಅಲಕಾ ಹೇಳುತ್ತಿದ್ದಳು. ಔಷಧಗಳನ್ನು ತರಿಸಿಕೊಡುತ್ತಿರಲಿಲ್ಲ.

  ಕಾಲಕ್ರಮೇಣ ವೃದ್ಧ ದಂಪತಿ ಎರಡು ಹೊತ್ತು ಊಟವನ್ನು ಬಿಟ್ಟು ಒಪ್ಪತ್ತು ಊಟಕ್ಕೆ ಬಂದರು. ಟಿ.ವಿ ನೋಡಬಾರದೆಂದು ನಿರ್ಬಂಧಿಸಿದರು. ಪೇಪರ್ ಓದಲು ಕೊಡುತ್ತಿರಲಿಲ್ಲ. ಅವರು ತಮ್ಮ ರೂಮಿನಲ್ಲಿ ಅಕ್ಷರಶಃ ಬಂದಿಗಳಾಗಿದ್ದರು. ಅವರನ್ನು ನೋಡಲು ಬಂದವರಿಗೆ ಅವರು ಮಲಗಿದ್ದಾರೆಂದು ಅಲಕಾ ಸಾಗಹಾಕುತ್ತಿದ್ದಳು. ಸರಿಯಾಗಿ ಊಟ ಮಾಡದೇ, ಕಾಲಕಾಲಕ್ಕೆ ವಾಯುವಿಹಾರ ಮಾಡದೇ, ಸ್ನೇಹಿತರ ಸಂಪರ್ಕ ಮಾಡದೇ ಕಾಲಕ್ರಮೇಣ ವೃದ್ಧ ದಂಪತಿ ಆರೋಗ್ಯ ಕ್ಷೀಣಿಸುತ್ತ ಬಂದಿತು. ಮಗನಂತೂ ಮಾತನಾಡಿಸುವುದನ್ನೇ ಬಿಟ್ಟಿದ್ದ. ಮೊಮ್ಮಕ್ಕಳೂ ಅವರಿಬ್ಬರಿಂದ ದೂರವೇ ಇದ್ದರು. ಮೊಬೈಲ್ ಫೋನ್ ಹೊರತಾಗಿ ಅವರಿಗೆ ಹೊರಜಗತ್ತಿನ ಸಂಪರ್ಕವೇ ಇರಲಿಲ್ಲ. ಒಂದು ಸಂಜೆ ಭಾಸ್ಕರ ಅವರ ಕೋಣೆಗೆ ನುಗ್ಗಿ ‘ನೀವು ಮನೆಯನ್ನು ನನ್ನ ಹೆಸರಿಗೆ ಮಾಡುತ್ತೀರೊ ಇಲ್ಲವೋ’ ಎಂದು ಗದರಿದ, ಆಗ ವತ್ಸಲಾ, ‘ಇದು ಎಂದಿಗಾದರೂ ನಿನ್ನ ಮನೆಯೇ ಅಲ್ಲವೇ?’ ಎಂದರು. ‘ನಿಮಗೆ ನನ್ನ ಮೇಲೆ ಪ್ರೀತಿ ಇದ್ದಿದ್ದರೆ ಮನೆಯನ್ನು ನನ್ನ ಹೆಸರಿಗೆ ಬರೆದು ನನ್ನನ್ನು ತೊಂದರೆಯಿಂದ ಪಾರುಮಾಡುತ್ತಿದ್ದಿರಿ. ನೀವು ಈ ಮನೆಯನ್ನು ಅನಾಥಾಶ್ರಮಕ್ಕೆ ಬರೆದುಬಿಡಿ’ ಎಂದಾಗ ವತ್ಸಲಾ, ‘ಭಾಸ್ಕರಾ, ಹುಚ್ಚುಹುಚ್ಚಾಗಿ ಮಾತನಾಡಬೇಡ’ ಎಂದರು. ಒಮ್ಮೆಲೇ ಕೋಪಗೊಂಡ ಭಾಸ್ಕರ ತಾಯಿಯ ಕೆನ್ನೆಗೆ ಎರಡೇಟು ಕೊಟ್ಟ. ಆಘಾತದಿಂದ ವತ್ಸಲಾ ಕುಸಿದು ಬಿದ್ದರು. ರಾಮದಾಸ್ ಮಧ್ಯಪ್ರವೇಶಿಸಿದಾಗ ಅವರನ್ನೂ ನೂಕಿ ಮುಖಕ್ಕೆ ಗುದ್ದಿದ. ಇಬ್ಬರಿಗೂ ದೈಹಿಕ ಪೆಟ್ಟಿಗಿಂತ ಮಾನಸಿಕ ಪೆಟ್ಟು ತೀವ್ರವಾಗಿತ್ತು. ನಮ್ಮ ಮಗನೇ ನಮ್ಮನ್ನು ಕಾಲಕಸಕ್ಕಿಂತ ಕೀಳಾಗಿ ಮಾಡಿದ ಎಂದು ನೊಂದರು.

  ಅಷ್ಟರಲ್ಲಿ, ವೃದ್ಧ ತಂದೆ ತಾಯಿಗಳನ್ನು ಮಕ್ಕಳು ಸರಿಯಾಗಿ ಆರೈಕೆ ಮಾಡದಿದ್ದರೆ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಓದಿದ್ದು ರಾಮದಾಸ್​ಗೆ ನೆನಪಾಯಿತು. ಅವರು ತಮ್ಮ ಮೊಬೈಲ್ ಫೋನ್​ನಲ್ಲಿ ಒಂದು ನಿಮಿಷದ ವಿಡಿಯೋ ಮಾಡಿ ಅದರಲ್ಲಿ ತಮಗಾಗುತ್ತಿರುವ ತೊಂದರೆಯನ್ನು ತೋಡಿಕೊಂಡು ಆ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದರು. ಇದಾದ ಎರಡೇ ದಿನಗಳಲ್ಲಿ ಅವರ ಮನೆಗೆ ಪೊಲೀಸರು ಬಂದು ರಾಮದಾಸ್​ರನ್ನು ವಿಡಿಯೋ ಬಗ್ಗೆ ವಿಚಾರಿಸಿ ಅವರಿಗೆ ಕಿರುಕುಳವಾಗುತ್ತಿರುವ ಬಗ್ಗೆ ಅರಿತು ಭಾಸ್ಕರ ಮತ್ತು ಅಲಕಾರ ಮೇಲೆ ದಂಡ ಸಂಹಿತೆಯ ಅಕ್ರಮ ಬಂಧನದ ಕಲಂ ಅನ್ವಯ ಪ್ರಕರಣ ದಾಖಲಿಸಿದರು. ವತ್ಸಲಾ ಬೇರೆ ದೂರನ್ನಿತ್ತು ಕೌಟುಂಬಿಕ ಹಿಂಸೆ ತಡೆ ಕಾಯ್ದೆಯ ಅಡಿಯಲ್ಲಿಯೂ ಪ್ರಕರಣ ದಾಖಲಿಸಬಹುದಾಗಿದೆ ಎಂದು ಪೊಲೀಸರು ಸೂಚಿಸಿದರೂ ವತ್ಸಲಾ ಬೇರೆ ದೂರನ್ನು ನೀಡಲಿಲ್ಲ. ಭಾಸ್ಕರ-ಅಲಕಾಗೆ ನ್ಯಾಯಾಲಯ ತಲಾ 1000ರೂಗಳ ಜುಲ್ಮಾನೆ ಹಾಕಿತು. ಇದಾದ ನಂತರ ಭಾಸ್ಕರ ತಂದೆ ತನಗೆ ಆಸ್ತಿಯಲ್ಲಿ ಪಾಲು ಕೊಡುತ್ತಿಲ್ಲ ಎಂದು ಸಿವಿಲ್ ಪ್ರಕರಣ ದಾಖಲಿಸಿದ. ಇದೇ ಅವನಿಗೆ ಮುಳುವಾಗಿ ಆತ ತನ್ನ ಹೆಂಡತಿ ಮಕ್ಕಳ ಸಮೇತ ರಾಮದಾಸ್​ಗೆ ಸೇರಿದ ಮನೆಯನ್ನು ಖಾಲಿ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತು.

  ನಮ್ಮ ದೇಶದಲ್ಲಿ ಹಿರಿಯರ ಮೇಲೆ ಪ್ರತಿದಿನವೂ ಅವರ ಕುಟುಂಬದ ಸದಸ್ಯರಿಂದ ದೈಹಿಕ ಹಾಗೂ ಮಾನಸಿಕ ಹಿಂಸೆಯ ಹಲವಾರು ಪ್ರಕರಣಗಳು ನಡೆಯುತ್ತವೆ. ಮಾತಾಪಿತರ ಕೊಲೆಗೈದು ಗುಪ್ತವಾಗಿ ಶವಸಂಸ್ಕಾರ ಮಾಡಿದವರೂ ಇದ್ದಾರೆ. ಹಿರಿಯರನ್ನು ಬಲವಂತವಾಗಿ ವೃದ್ಧಾಶ್ರಮಗಳಿಗೆ ಸೇರಿಸುವುದಲ್ಲದೆ ಮನೆಯಿಂದ ಹೊರದಬ್ಬಿರುವುದೂ ಉಂಟು.

  ಮಾತಾಪಿತರು ಹಾಗೂ ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ 2007ರಿಂದ ಜಾರಿಯಲ್ಲಿದೆ. ಈ ಕಾನೂನಿನನ್ವಯ, ಹಿರಿಯ ನಾಗರಿಕರನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಹೊಂದಿರುವವರು ಅವರನ್ನು ತೊರೆದರೆ ಆರೋಪಿಗಳಿಗೆ ಮೂರು ತಿಂಗಳ ಕಾರಾಗೃಹವಾಸ ಹಾಗೂ 5000 ರೂ ಜುಲ್ಮಾನೆ ವಿಧಿಸಬಹುದಾಗಿದೆ. ಒಂದು ವೇಳೆ ಹಿರಿಯರು ಮಕ್ಕಳ ಹೆಸರಿಗೆ ತಮ್ಮ ಆಸ್ತಿಯನ್ನು ಬರೆದಿದ್ದು ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದಲ್ಲಿ ಆ ವಿಲ್ಲನ್ನು ಅಮಾನ್ಯ ಮಾಡಬಹುದಾಗಿದೆ. ಆಸ್ತಿ ಅಥವಾ ಹಣವಿಲ್ಲದ ಹಿರಿಯ ನಾಗರಿಕರು ಜೀವನ ನಿರ್ವಹಣೆಗಾಗಿ ತಮ್ಮ ಮಕ್ಕಳು ಅಥವಾ ಇತರರಿಂದ ಮಾಸಾಶನ ಕೊಡಿಸಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದು. ಗರಿಷ್ಠ ಮಾಸಾಶನ 10000 ರೂಗಳಾಗಿದೆ.

  ‘ನಮ್ಮನ್ನು ಸಲಹಿದವರನ್ನು ನಾವು ಸಲಹುವುದು ಅತಿ ದೊಡ್ಡ ಗೌರವ’ ಎನ್ನುತ್ತಾಳೆ ಲೇಖಕಿ ಟಿಯಾ ವಾಕರ್. ತಂದೆತಾಯಿಯರನ್ನು ದೇವರೆಂದೇ ತಿಳಿ ಎಂದು ಶಾಸ್ತ್ರಗಳು ಹೇಳುವಾಗ ಹಿರಿಯರ ಆರೈಕೆ ಮಾಡದಿರುವುದು ಹೀನಾಯವೇ ಸರಿ.

  (ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts