Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಆರ್ಥಿಕ ಶಿಸ್ತು ಹಳಿ ತಪ್ಪದಿರಲಿ

Monday, 19.02.2018, 3:02 AM       No Comments

ಅಧಿಕಾರಕ್ಕೆ ಬರುತ್ತಿದ್ದಂತೆಯೇ ‘ಭಾಗ್ಯ’ ಸರಣಿಯ ಹಲವು ಯೋಜನೆಗಳನ್ನು ಘೋಷಿಸಿ ಜನಪ್ರಿಯ ಸರ್ಕಾರವೆಂಬ ಹಣೆಪಟ್ಟಿ ದಕ್ಕಿಸಿಕೊಳ್ಳಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇತ್ತೀಚೆಗಷ್ಟೇ ಮಂಡಿಸಿದ ರಾಜ್ಯ ಆಯವ್ಯಯದಲ್ಲೂ ಅಂಥದೇ ಹೆಜ್ಜೆಗಳನ್ನು ಇಟ್ಟಿರುವುದು ಸುಸ್ಪಷ್ಟ. ಹೇಳಿಕೇಳಿ ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದ ಯಾವುದೇ ರಾಜಕೀಯ ಪಕ್ಷ/ನಾಯಕ ಇಡುವ ಸಹಜಹೆಜ್ಜೆಯಿದು ಅಂದುಕೊಂಡರೂ, ಆರ್ಥಿಕ ಶಿಸ್ತನ್ನು ಕಾಯ್ದುಕೊಂಡು ಸಾಮಾಜಿಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಆಶಯವಿಲ್ಲಿ ಮೇಲ್ನೋಟಕ್ಕೆ ಗೋಚರಿಸಿದ್ದರೂ, ‘ಇದು ಕಾರ್ಯಸಾಧುವೇ? ಕಾರ್ಯಸಾಧ್ಯವೇ?’ ಎಂಬ ಪ್ರಶ್ನೆ ಸ್ಪುರಿಸುವುದು ದಿಟ.

ಇಂಥದೊಂದು ಅಭಿಪ್ರಾಯಕ್ಕೆ ಕಾರಣಗಳು ಇಲ್ಲದಿಲ್ಲ. ಸಾಲದ ಪ್ರಮಾಣ ಏರುತ್ತಲೇ ಇರುವುದು, ಮಾನವ ಸಂಪನ್ಮೂಲದಲ್ಲಿ ಹೆಚ್ಚಳವಾಗಿರುವುದು, ತೆರಿಗೆಯೇತರ ಆದಾಯದಲ್ಲಿ ಪರಿಷ್ಕರಣೆ ಆಗದಿರುವುದು ಈ ಎಲ್ಲ ಅಂಶಗಳನ್ನು ಗಮನಿಸಿದರೆ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದು, ವಿತ್ತೀಯ ಚೌಕಟ್ಟನ್ನು ಮೀರದಂತೆ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸುವುದು ಕಟ್ಟಿಟ್ಟ ಬುತ್ತಿ ಎಂಬುದು ಕ್ಷೇತ್ರತಜ್ಞರ ಅಭಿಮತ.

ಜನಪ್ರಿಯತೆಯ ಹುಕಿಗೆ ಬಿದ್ದೋ ಅಥವಾ ಶ್ರೀಸಾಮಾನ್ಯರಿಗೆ ಕೆಲವೊಂದು ಪ್ರಯೋಜನಗಳು ಉಚಿತವಾಗಿ ದೊರಕುವಂತಾದರೆ ಅದರಿಂದ ರಾಜಕೀಯ ಪ್ರಯೋಜನಗಳಿವೆ ಎಂಬ ಲೆಕ್ಕಾಚಾರದಿಂದಲೋ ಬೊಕ್ಕಸಕ್ಕೆ ಹೊರೆಯಾಗಿ ಪರಿಣಮಿಸುವ ಯೋಜನೆಗಳನ್ನು ಘೋಷಿಸುತ್ತ ಹೋದಲ್ಲಿ ಅಥವಾ ಆದ್ಯತಾ ವಲಯಗಳಿಗೆ ಮುಡಿಪಾಗಿಡಬೇಕಾದ ಹಣವನ್ನು ಅನುತ್ಪಾದಕ ಬಾಬತ್ತುಗಳಿಗೆ ಹಂಚುತ್ತ ಹೋದಲ್ಲಿ, ವಿವಿಧ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಕುಂಠಿತವಾಗುವುದಿಲ್ಲವೇ ಎಂಬುದಿಲ್ಲಿ ಪ್ರಶ್ನೆ. ಹಾಗಂತ ಜನಕಲ್ಯಾಣದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲೇಬಾರದು ಎಂಬುದು ಈ ಮಾತಿನರ್ಥವಲ್ಲ; ಆದರೆ ಅದಕ್ಕೊಂದು ಪೂರ್ವನಿರ್ಧಾರಿತ ಮಿತಿಹಾಕಿಕೊಳ್ಳಬೇಕಾದ್ದು ಅಪೇಕ್ಷಣೀಯ.

ಯಾವುದೇ ವಸ್ತು/ಸೇವೆ ಉಚಿತವಾಗಿ ದಕ್ಕುತ್ತದೆ ಎಂದಾದಲ್ಲಿ, ಅದರ ಫಲಾನುಭವಿಗಳಲ್ಲಿ ಕಾರ್ಯಬದ್ಧತೆ, ಉತ್ತರದಾಯಿತ್ವಗಳು ಮಾಯವಾಗಿ ಸೋಮಾರಿತನ ಹೆಚ್ಚುವುದರಲ್ಲಿ ಸಂದೇಹವಿಲ್ಲ. ‘ಹಸಿದವರಿಗೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸುವುದು ಲೇಸು’ ಎಂಬುದೊಂದು ಜಾಣನುಡಿಯಿದೆ. ಇದು ಎಲ್ಲ ಕ್ಷೇತ್ರಕ್ಕೂ ಒಗ್ಗುವಂಥ ಮಾತು. ಹಸಿದ ಹೊಟ್ಟೆಗೆ ಅನ್ನ ನೀಡಿದಾಕ್ಷಣ, ಅದು ಆ ಕ್ಷಣದ ಹಸಿವನ್ನು/ಅಗತ್ಯವನ್ನು ನೀಗೀತು; ಆದರೆ ನಿರಂತರ ಅನ್ನ ಸಂಪಾದನೆಗೊಂದು ಮಾಗೋಪಾಯ ರೂಪಿಸಿಕೊಟ್ಟರೆ, ಜನ ಪ್ರತಿಯೊಂದಕ್ಕೂ ಸರ್ಕಾರದೆದುರು ಕೈಚಾಚುವ ಪರಿಪಾಠವೇ ಇಲ್ಲವಾಗುತ್ತದೆ. ಆದ್ದರಿಂದ, ಜನಕಲ್ಯಾಣದ ಹೆಸರಲ್ಲಿ ಬೊಕ್ಕಸವನ್ನು ಬರಿದುಮಾಡುವ ಬದಲು, ರಾಜ್ಯದ ಅಭಿವೃದ್ಧಿಯ ನಿಟ್ಟಿನಲ್ಲಿ ಜನರನ್ನೂ ಉತ್ತರದಾಯಿಗಳನ್ನಾಗಿಸುವಂಥ ಉಪಕ್ರಮಗಳಿಗೆ ಆಳುಗರು ಮುಂದಾಗಬೇಕೆಂಬುದು ಪ್ರಜ್ಞಾವಂತರ ನಿರೀಕ್ಷೆ. ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆ ಮೇಲೂ 44 ಸಾವಿರ ರೂಪಾಯಿಗೂ ಹೆಚ್ಚು ಸಾಲದ ಹೊರೆಯಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಆರ್ಥಿಕ ಶಿಸ್ತು ಕಾಯ್ದುಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮೂಲಸೌಕರ್ಯ ರೂಪಣೆ, ಬಂಡವಾಳ ಹೂಡಿಕೆ, ಕೈಗಾರಿಕೆಗಳ ಸ್ಥಾಪನೆ, ಉದ್ಯೋಗ ಸೃಷ್ಟಿ ಇವೇ ಮೊದಲಾದ ಆಶಯಗಳು ಕಡತಗಳಲ್ಲಿ ಮಾತ್ರವೇ ಉಳಿಯದೆ ಅಕ್ಷರಶಃ ಸಾಕಾರಗೊಂಡಲ್ಲಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯಾಗುವುದರ ಜತೆಗೆ ಬೊಕ್ಕಸಕ್ಕೆ ಆದಾಯದ ಹರಿವೂ ಹೆಚ್ಚುತ್ತದೆ, ಸಾಮಾಜಿಕ ಅಸಮತೋಲನವೂ ತಗ್ಗುತ್ತದೆ, ಹಸಿದ ಹೊಟ್ಟೆಗಳೂ ತಣಿಯುತ್ತವೆ ಎಂಬುದು ಗೋಡೆಯ ಮೇಲಿನ ಬರಹದಷ್ಟೇ ಸತ್ಯ. ಇದು ಪರಿಪೂರ್ಣವಾಗಿ ನೆರವೇರಬೇಕೆಂದರೆ ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳಲೇಬೇಕು. ಅನಗತ್ಯವಾದ ಸಹಾಯಧನ ಯೋಜನೆಗಳ ಕಡಿತ, ಸಾಧ್ಯವಿರುವೆಡೆ ಖಾಸಗಿ ಸಹಭಾಗಿತ್ವಕ್ಕೆ ಮುಂದಾಗುವುದು, ಕೇಂದ್ರದ ಅನುದಾನಗಳ ಸಮರ್ಪಕ ಬಳಕೆ, ಸಂಪನ್ಮೂಲ ಸೋರಿಕೆಗೆ ತಡೆ ಸೇರಿದಂತೆ ವಿವಿಧ ಕ್ರಮಗಳಿಗೆ ಸರ್ಕಾರ ಮುಂದಾದಲ್ಲಿ ಇಂಥದೊಂದು ಶಿಸ್ತನ್ನು ಕಾಪಾಡಿಕೊಳ್ಳುವುದು ಕಷ್ಟವೇನೂ ಆಗಲಾರದು.

Leave a Reply

Your email address will not be published. Required fields are marked *

Back To Top