ಆತಂಕಕಾರಿ ಪ್ರವೃತ್ತಿ

ಲೈಂಗಿಕ ಶೋಷಣೆಯ ವಿರುದ್ಧ ಪ್ರತಿಭಟಿಸುವ ಮಹಿಳಾ ದನಿಯಾಗಿ ಬಾಲಿವುಡ್ ಅಂಗಳದಿಂದ ಆರಂಭವಾದ ‘ಮೀಟೂ’ (ನಾನು ಕೂಡ) ಅಭಿಯಾನ ರಾಜಕೀಯ, ಮಾಧ್ಯಮ ಸೇರಿದಂತೆ ಹಲವು ಕ್ಷೇತ್ರಗಳ ಪ್ರತಿಷ್ಠಿತರಲ್ಲಿ ನಡುಕ ಹುಟ್ಟಿಸಿದೆ. ಹಲವು ಮಹಿಳೆಯರು ಧೈರ್ಯವಾಗಿ ಲೈಂಗಿಕ ಶೋಷಣೆ ವಿರುದ್ಧ ಮಾತನಾಡುತ್ತಿರುವುದು ಸಂಚಲನಾತ್ಮಕ ಬೆಳವಣಿಗೆಯೇ ಸರಿ. ಈಗ ಲೈಂಗಿಕ ಶೋಷಣೆ ವಿರುದ್ಧ ಮಾತನಾಡಿದವರು ಪೊಲೀಸ್ ದೂರು ಸಲ್ಲಿಸಿ ಕಾನೂನು ಕ್ರಮಕ್ಕೆ ಆಗ್ರಹಿಸುತ್ತಾರಾ, ಆರೋಪಿತರ ವಿಚಾರಣೆ ನಡೆಯುತ್ತಾ ಎಂಬೆಲ್ಲ ಅಂಶಗಳು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬಹುದು. ಮತ್ತೊಂದೆಡೆ, ಹನಿಟ್ರಾ್ಯಪ್ ಜಾಲಕ್ಕೆ ಸಿಲುಕಿ ಡಿಆರ್​ಡಿಒ ವಿಜ್ಞಾನಿ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ್ದಾರೆ ಎಂಬ ಶಂಕೆ ಆತಂಕವನ್ನುಂಟು ಮಾಡಿದೆ.

ಪಾಕಿಸ್ತಾನ ಹಾಗೂ ಕೆನಡಾದ ನಕಲಿ ಫೇಸ್​ಬುಕ್ ಖಾತೆಗಳ ಮೂಲಕ ನಿಶಾಂತ್ ಅಗರ್ವಾಲ್ ಎಂಬ ಡಿಆರ್​ಡಿಒ ವಿಜ್ಞಾನಿಯನ್ನು ಸಂರ್ಪಸಲಾಗಿತ್ತು. ಹುಡುಗಿಯರ ನಕಲಿ ಖಾತೆ ಜತೆಗೆ ನಿರಂತರ ಚಾಟ್ ಮಾಡುತ್ತಿದ್ದ ನಿಶಾಂತ್​ಗೆ ಕೆನಡಾದ ಸಾಫ್ಟ್​ವೇರ್ ಕಂಪನಿಯೊಂದರಲ್ಲಿ ತಿಂಗಳಿಗೆ 22 ಲಕ್ಷ ರೂ. ಸಂಬಳ ನೀಡುವ ಆಮಿಷ ಒಡ್ಡಲಾಗಿದೆ. ಭಾರತ ಹಾಗೂ ರಷ್ಯಾ ಸಹಯೋಗದಲ್ಲಿ ನಿರ್ವಣವಾಗುತ್ತಿರುವ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿಯ ರಹಸ್ಯ ಮಾಹಿತಿಯನ್ನು ಈತ ಪಾಕ್​ಗೆ ರವಾನಿಸಿರುವ ಶಂಕೆ ವ್ಯಕ್ತವಾಗಿದೆ, ಪೊಲೀಸ್ ವಿಚಾರಣೆ ಪೂರ್ಣಗೊಂಡ ಬಳಿಕ ಹಲವು ಅನುಮಾನಗಳು ಪರಿಹಾರಗೊಳ್ಳಲಿವೆ.

ಅದೇನೇ ಇದ್ದರೂ, ಇದು ತುಂಬ ಸೂಕ್ಷ್ಮ ಮತ್ತು ವಿಲಕ್ಷಣ ಪ್ರಕರಣ. ಏಕೆಂದರೆ, ಯಾವುದೇ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಗೆ ತನ್ನ ಸ್ಥಾನಮಾನದ ಅರಿವು ಇರಬೇಕು. ಒಂಚೂರು ಎಡವಿದರೂ ಅದರಿಂದ ಭಾರಿ ಅವಾಂತರವನ್ನೇ ಆಹ್ವಾನಿಸಿದಂತಾಗುತ್ತದೆ ಎಂಬುದನ್ನು ಮರೆಯಬಾರದು. ಅದರಲ್ಲೂ, ರಕ್ಷಣೆ, ಭದ್ರತೆಯಂಥ ಸೂಕ್ಷ್ಮ ಕ್ಷೇತ್ರಗಳಲ್ಲಿರುವವರು ಮೈಯೆಲ್ಲ ಕಣ್ಣಾಗಿದ್ದರೂ ಕಡಿಮೆಯೇ. ಹೀಗಿರುವಾಗ, ಯಾರೋ ಹುಡುಗಿಯರು ಸ್ನೇಹದ ಮಾತಾಡಿದರು ಎಂಬ ಕಾರಣಕ್ಕೆ ದೇಶದ ಹಿತಕ್ಕೆ, ಭದ್ರತೆಗೆ ಸಂಬಂಧಿಸಿದ ಮಾಹಿತಿಗಳನ್ನೇ ಶತ್ರುರಾಷ್ಟ್ರದೊಡನೆ ಹಂಚಿಕೊಳ್ಳುವ ಪ್ರವೃತ್ತಿ ತೀರಾ ಅಪಾಯಕಾರಿ. ಬ್ರಹ್ಮೋಸ್ ಕ್ಷಿಪಣಿಗೆ ಮತ್ತು ಭದ್ರತೆಗೆ ಸಂಬಂಧಿಸಿದ ಮಾಹಿತಿಗಳು ಐಎಸ್​ಐ ಕೈ ಸೇರಿದ್ದರೆ, ಅದು ದೊಡ್ಡ ಭದ್ರತಾ ಗಂಡಾಂತರವಾಗಿ ಪರಿಣಮಿಸಬಹುದು. ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಬಳಕೆ ವ್ಯಾಪಕ ಮತ್ತು ಸಾಮಾನ್ಯವಾಗಿದೆ ಎಂಬುದೇನೋ ನಿಜ. ಆದರೆ, ವೈಯಕ್ತಿಕ ದೌರ್ಬಲ್ಯಗಳು ಯಾವುದೇ ಸಂಸ್ಥೆ ಅಥವಾ ರಾಷ್ಟ್ರದ ಹಿತಕ್ಕೆ ಮಾರಕವಾಗಿ ಪರಿಣಮಿಸಬಾರದು. ಡಿಆರ್​ಡಿಒ ವಿಜ್ಞಾನಿ ಪ್ರಕರಣ ಅವಲೋಕಿಸಿದರೆ ಇಂಥ ಕ್ಷೇತ್ರದಲ್ಲಿ ಇರುವವರಿಗೆ ಇನ್ನೂ ಹೆಚ್ಚಿನ ತರಬೇತಿ ಮತ್ತು ಅರಿವು ತುಂಬುವ ಕೆಲಸ ಜರೂರಾಗಿ ಆಗಬೇಕಾಗಿದೆ ಎಂಬುದು ಸ್ಪಷ್ಟ. ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಬಳಕೆಗೆ ಸೂಕ್ತ ನಿಯಮಗಳನ್ನು ರೂಪಿಸಿ, ಅಪಸವ್ಯಗಳನ್ನು ತಡೆಯಲು ಇದು ಸಕಾಲ. ದೇಶದ ಪ್ರಮುಖ ಯೋಜನೆಗಳ ರಹಸ್ಯ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆ ಆಗಿಬಿಟ್ಟರೆ ಗತಿ ಏನು? ಈಗಾಗಲೇ ದೇಶ ಹಲವು ಅಪಾಯಗಳನ್ನು ಎದುರಿಸುತ್ತಿದ್ದು, ಈ ಹೊಸಬಗೆಯ ಅಪಾಯವನ್ನು ಆರಂಭಿಕ ಹಂತದಲ್ಲೇ ಚಿವುಟಿ ಹಾಕಲು ಮತ್ತು ಭವಿಷ್ಯದಲ್ಲಿ ಇಂಥ ಪ್ರಕರಣಗಳು ಸಂಭವಿಸದಂತೆ ಸೂಕ್ತ ನಿಯಮಗಳನ್ನು ತರಲು ಸಂಬಂಧಪಟ್ಟವರು ಮುಂದಾಗಲಿ.

Leave a Reply

Your email address will not be published. Required fields are marked *