More

    ವಿಜಯವಾಣಿ, ದಿಗ್ವಿಜಯ 2×47 ನ್ಯೂಸ್ ಸಾರಥ್ಯದಲ್ಲಿ ಮಡಿವಾಳದಲ್ಲಿಂದು ಜನತಾದರ್ಶನ: ವಾರ್ಡ್ 172ರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

    ಬೆಂಗಳೂರು: ನಗರದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಆಯೋಜಿಸಿರುವ ‘ಜನತಾದರ್ಶನ’ ಕಾರ್ಯಕ್ರಮ ಶುಕ್ರವಾರ (ಜ.10) ಮಡಿವಾಳದಲ್ಲಿ (ವಾರ್ಡ್ ನಂ.172 ) ನಡೆಯಲಿದೆ.

    ವಿಜಯವಾಣಿ, ದಿಗ್ವಿಜಯ 2x47 ನ್ಯೂಸ್ ಸಾರಥ್ಯದಲ್ಲಿ ಮಡಿವಾಳದಲ್ಲಿಂದು ಜನತಾದರ್ಶನ: ವಾರ್ಡ್ 172ರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಬಿಟಿಎಂ ವಿಧಾನಸಭಾ ಕ್ಷೇತ್ರ ಎಂದೊಡನೆ ಥಟ್ಟನೆ ಅಲ್ಲಿನ ಮಾಲ್​ಗಳು, ಬಹುರಾಷ್ಟ್ರೀಯ ಐಟಿ- ಬಿಟಿ ಕಚೇರಿಗಳು, ಸುಸಜ್ಜಿತ ಬಡಾವಣೆಗಳ ಜತೆಗೆ ಸರ್ಕಾರಿ ಸಮುಚ್ಚಯಗಳು ಕಣ್ಮುಂದೆ ಬರುತ್ತವೆ. ‘ಆಧುನಿಕ ಬೆಂಗಳೂರು’ ಎಂಬ ಹೆಗ್ಗಳಿಕೆಗೆ ಅಪಾರ ಕಾಣಿಕೆ ನೀಡಿರುವ ಈ ಕ್ಷೇತ್ರದ ವ್ಯಾಪ್ತಿಗೆ ಬಿಬಿಎಂಪಿಯ ಮಡಿವಾಳ ವಾರ್ಡ್ ಸೇರುತ್ತದೆ.

    1996ರಲ್ಲಿ ಮಡಿವಾಳ ವಾರ್ಡ್ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಬೆಂಗಳೂರು ಮಹಾನಗರ ಪಾಲಿಕೆಯು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಬದಲಾದ ಬಳಿಕ ಅದು ಬಿಟಿಎಂ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿತು.

    ಶೇ.80 ಸಮಸ್ಯೆ ಪರಿಹಾರ: ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮಡಿವಾಳ ವಾರ್ಡ್ ಸೇರ್ಪಡೆಗೊಂಡ ನಂತರ ವಾರ್ಡ್​ನಲ್ಲಿ ಕಗ್ಗಂಟಾಗಿದ್ದ ಹಲವು ಸಮಸ್ಯೆಗಳು, ಕುಂದುಕೊರತೆಗಳನ್ನು ಶಾಸಕ ರಾಮಲಿಂಗಾರೆಡ್ಡಿ ಪರಿಹರಿಸಿದ್ದಾರೆ.

    ಮಾಜಿ ಮೇಯರ್, ವಾರ್ಡ್​ನ ಕಾಪೋರೇಟರ್ ಬಿ.ಎನ್. ಮಂಜುನಾಥ ರೆಡ್ಡಿ ಅವರ ಬದ್ಧತೆಯ ಫಲವಾಗಿ ವಾರ್ಡ್ ಶೇ.80 ಸಮಸ್ಯೆ ಮುಕ್ತವಾಗಿದೆ. ಇರುವ ಶೇ.20 ಸಮಸ್ಯೆ ಪರಿಹರಿಸಲು ಶಾಸಕ ರಾಮಲಿಂಗಾರೆಡ್ಡಿ ಪ್ರಯತ್ನಿಸುತ್ತಿದ್ದಾರೆ.

    ವಾರ್ಡ್​ನ ನಿವಾಸಿಗಳ ಜತೆ ನಿರಂತರ ಸಂಪರ್ಕ ಹೊಂದುವ ಮೂಲಕ ವಸತಿ ಬಡಾವಣೆಗಳಲ್ಲಿ ವಾಣಿಜ್ಯ ಚಟುವಟಿಕೆಗಳ ಹೆಚ್ಚಳ, ಅನಧಿಕೃತ ಪಿಜಿ ಕೇಂದ್ರಗಳು, ವಾಹನದಟ್ಟಣೆಯಂಥ ಹಲವು ಸಮಸ್ಯೆಗಳನ್ನು ಪರಿಹರಿಸಲು ಶಾಸಕರಿಗೆ ಮಂಜುನಾಥ್ ರೆಡ್ಡಿ ಸಾಥ್ ಕೊಡುತ್ತಿದ್ದಾರೆ.

    ಮೆಟ್ರೋಪಾಲಿಟನ್ ಸ್ಪರ್ಶ: ಮಡಿವಾಳ ವಾರ್ಡ್​ನಲ್ಲಿ ಶೇ.70 ರೆವೆನ್ಯೂ ಹಾಗೂ ಶೇ.30 ಬಿಡಿಎ ವಸತಿ ಸಮುಚ್ಚಯಗಳಿವೆ. ಈ ವಾರ್ಡ್​ನಲ್ಲಿರುವ ಐಟಿ-ಬಿಟಿ ಕಂಪನಿಗಳಲ್ಲಿ ದೇಶದ ವಿವಿಧ ಭಾಗಗಳ, ವಿವಿಧ ಜಾತಿ, ಮತ, ಪಂಥದ ಜನರು ಉದ್ಯೋಗ ಕಂಡುಕೊಂಡು, ಇಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ ವಾರ್ಡ್​ಗೆ ಮೆಟ್ರೋಪಾಲಿಟನ್ ಸಂಸ್ಕೃತಿಯ ಸ್ಪರ್ಶ ಲಭಿಸಿದೆ.

    ವಾರ್ಡ್​ನಲ್ಲಿ ಕಂಡ ಪ್ರಮುಖ ಸಮಸ್ಯೆಗಳು

    • ಸಾಲು ಸಾಲು ಪಿಜಿಗಳಿಂದ ವಾಹನದಟ್ಟಣೆ
    • ಜಯದೇವ ಆಸ್ಪತ್ರೆಯಿಂದ ಸಿಲ್ಕ್ ಬೋರ್ಡ್​ವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿಯಿಂದ ವಾಹನ ಸವಾರರು ಹೈರಾಣು
    • ವಾರ್ಡ್​ನ ವಿವಿಧೆಡೆ ಬೀದಿನಾಯಿಗಳ ಕಾಟ
    • ಹಳೇ ಹೊಸೂರು
    • ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿಯಿಂದ ಕಿರಿಕಿರಿ
    • ಫುಟ್​ಪಾತ್ ಒತ್ತುವರಿ

    ಪಾಲಿಕೆ ಸದಸ್ಯರ ಕನಸೇನು?

    • ಪರಿಸರ ರಕ್ಷಣೆಗೆ ಆದ್ಯತೆ
    • ಎಲ್​ಇಡಿ ಲೈಟ್, ಎಸ್​ಟಿಪಿ ಅಳವಡಿಕೆ
    • ಕಸಮುಕ್ತ ವಾರ್ಡ್
    • ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
    • ವಾರ್ಡ್​ನ ಎಲ್ಲ ಭಾಗಗಳಲ್ಲಿ ಗಿಡ ನೆಟ್ಟು ಹಸಿರುಗೊಳಿಸುವುದು
    • ವಾಹನದಟ್ಟಣೆ ಸಮಸ್ಯೆ ನಿವಾರಣೆ, ರಸ್ತೆಗಳ ವಿಸ್ತರಣೆ
    • ಅಪರಾಧಗಳನ್ನು ತಡೆಯಲು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ
    • ಮಹಿಳೆಯರಿಗೆ ಕೌಶಲಾಭಿವೃದ್ಧಿ ತರಬೇತಿ, ಉಚಿತ ಆರೋಗ್ಯ ತಪಾಸಣೆಗೆ ವ್ಯವಸ್ಥೆ
    • ಅಂಗವಿಕಲರಿಗೆ ವಾಹನ ವಿತರಣೆ, ಸ್ವಉದ್ಯೋಗಕ್ಕೆ ನೆರವು

    ವಾರ್ಡ್ ವ್ಯಾಪ್ತಿ ಬಡಾವಣೆಗಳು

    ಮಾರುತಿ ನಗರ, ಜೈಭೀಮ್ಗರ, ತಾವರೆಕೆರೆ ಮುಖ್ಯ ರಸ್ತೆ, ಹಳೇ ಮಡಿವಾಳ, ಡಾಲರ್ ಸ್ಕೀಂ ಕಾಲನಿ, ಐಕೊಬೋ ನಗರ, ಮಡಿವಾಳ, ತಾವರೆಕೆರೆ, ವೆಂಕಟೇಶ್ವರ ಬಡಾವಣೆ

    ವಿದ್ಯಾರ್ಥಿ ಸಂಘಟನೆಯಿಂದ ಮುನ್ನೆಲೆಗೆ

    ಪದವೀಧರರಾಗಿರುವ ಬಿ.ಎನ್. ಮಂಜುನಾಥ್ ರೆಡ್ಡಿ ಎನ್​ಎಸ್​ಯುುಐ ಸಂಘಟನೆ ಮೂಲಕ ರಾಜಕೀಯ ಮುನ್ನೆಲೆಗೆ ಬಂದವರು. ಶಾಸಕ ರಾಮಲಿಂಗಾರೆಡ್ಡಿ ಆಶೀರ್ವಾದದೊಂದಿಗೆ 1996ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಬಿಬಿಎಂಪಿ ಚುನಾವಣೆಯಲ್ಲಿ ಮಡಿವಾಳ ವಾರ್ಡ್​ನಿಂದ ಆಯ್ಕೆಯಾದರು. ಮೂರು ಬಾರಿ ಮಡಿವಾಳ ವಾರ್ಡ್ ಪ್ರತಿನಿಧಿಸಿದ್ದು, 2016ರಲ್ಲಿ ಮೇಯರ್ ಹುದ್ದೆ ಅಲಂಕರಿಸಿದ್ದರು. ಮೇಯರ್ ಆಗಿದ್ದಾಗ ಹಿಂದೆ ಇದ್ದ ವಿಶೇಷ ಎಲ್​ಒಸಿ ಪದ್ಧತಿ ರದ್ದುಗೊಳಿಸಿ, ಆನ್​ಲೈನ್​ನಲ್ಲಿ ನೇರವಾಗಿ ಗುತ್ತಿಗೆದಾರರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಗೊಳಿಸುವ ಪದ್ಧತಿ ಜಾರಿಗೆ ತಂದರು. ಗರ್ಭಿಣಿಯರಿಗೆ ಪ್ರತಿ ತಿಂಗಳು ತಪಾಸಣೆ ಮಾಡುವ ಜನನಿ ಎಂಬ ಜನಪ್ರಿಯ ಯೋಜನೆ ಜಾರಿಗೊಳಿಸಿದರು. ಭೂಮಿ ಯೋಜನೆಯಡಿ ನಗರದಲ್ಲಿರುವ ಬಿಬಿಎಂಪಿ ಆಸ್ತಿಗಳಿಗೆ ಪಿಐಡಿ ಸಂಖ್ಯೆ ನೀಡಿದರು. ಭೋಗ್ಯಕ್ಕೆ ನೀಡಿದ್ದ ಪಾಲಿಕೆ ಆಸ್ತಿಗಳನ್ನು ಭೂಗಳ್ಳರಿಂದ ರಕ್ಷಿಸಿದರು.

    ಶೇ.90 ಕುಡಿಯುವ ನೀರಿನ ಸಮಸ್ಯೆ ಪರಿಹಾರ: ವಾರ್ಡ್​ನ ಅಭಿವೃದ್ಧಿಗೆ ಹೆಚ್ಚು ಅನುದಾನ ತಂದು 25 ವರ್ಷಗಳ ಹಿಂದೆ ಅಳವಡಿಸಿದ್ದ 4 ಮತ್ತು 6 ಅಂಗುಲದ ಹಳೇ ಕುಡಿಯುವ ನೀರಿನ ಕೊಳವೆಗಳನ್ನು ಬದಲಿಸಿ 8 ಅಂಗುಲದ ಕೊಳವೆಗಳನ್ನು ಅಳವಡಿಸಿದರು. ತನ್ಮೂಲಕ ಕುಡಿವ ನೀರಿನ ಸಮಸ್ಯೆಯನ್ನು ಶೇ.90 ಪರಿಹರಿಸಿದ್ದಾರೆ.

    800 ವರ್ಷ ಹಳೆಯ ಸೋಮೇಶ್ವರ ದೇವಾಲಯ ಜೀಣೋದ್ಧಾರ, ಗರಡಿಮನೆ ಸ್ಥಾಪನೆ, 20 ಒಳರೋಗಿ ದಾಖಲು ಸಾಮರ್ಥ್ಯದ ಹೆರಿಗೆ ಆಸ್ಪತ್ರೆ, 16 ರೋಗಿ ದಾಖಲು ಸಾಮರ್ಥ್ಯದ ಡಯಾಲಿಸಿಸ್ ಕೇಂದ್ರ, ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಉದ್ಯಾನ, ಬಡವರಿಗಾಗಿ ಎರಡು ವಿವಿಧೋದ್ದೇಶದ ಹಾಲ್ ನಿರ್ವಿುಸಿದ್ದಾರೆ. ಡೇರಿ ಸರ್ಕಲ್​ನಿಂದ ಮಡಿವಾಳವರೆಗೆ ರಾಜಕಾಲುವೆ ಅಭಿವೃದ್ಧಿಪಡಿಸಿದ್ದಾರೆ.

    ಶಾಸಕರ ಪರಿಚಯ

    ಶಾಸಕ ರಾಮಲಿಂಗಾರೆಡ್ಡಿ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಬಿಎಸ್​ಸಿ, ಎಲ್.ಎಲ್.ಬಿ ಪದವಿ ಗಳಿಸಿದ್ದಾರೆ. ಕಾಲೇಜು ದಿನಗಳಲ್ಲೇ ನಾಯಕತ್ವದ ಗುಣ ಬೆಳೆಸಿಕೊಂಡವರು. 1983ರಲ್ಲಿ ರಾಜಕೀಯ ರಂಗ ಪ್ರವೇಶಿಸಿ, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾದರು. ಕಾಂಗ್ರೆಸ್​ನ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ನಗರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಜಯನಗರ ಕ್ಷೇತ್ರದಿಂದ 1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಅವರು ನಂತರದಲ್ಲಿ ಬಿಟಿಎಂ ಕ್ಷೇತ್ರದಿಂದ ಸತತ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಗೃಹ ಮತ್ತು ಸಾರಿಗೆಯಂಥ ಪ್ರಮುಖ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

    ಹಲವು ಯೋಜನೆಗಳ ಅನುಷ್ಠಾನ: ಈಜೀಪುರ ದಿಂದ ಕೋರಮಂಗಲದ ಕೇಂದ್ರೀಯ ಸದನದವರೆಗೆ 225 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ವಿುಸಿಕೊಟ್ಟಿದ್ದಾರೆ. ಜಯದೇವ ಆಸ್ಪತ್ರೆ ಯಿಂದ ಸಿಲ್ಕ್​ಬೊರ್ಡ್​ವರೆಗೆ ಮೆಟ್ರೋ ಮತ್ತು ಮೇಲ್ಸೇತುವೆ ಕಾಮಗಾರಿ ಚಾಲನೆಯಲ್ಲಿದೆ. ಕ್ಷೇತ್ರದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಬಿಟಿಎಂ ಲೇಔಟ್​ನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಗ್ರಂಥಾಲಯ ನಿರ್ವಿುಸಲಾಗುತ್ತಿದೆ. 65 ಕೋಟಿ ರೂ. ವೆಚ್ಚದಲ್ಲಿ ಬಿಎಂಟಿಸಿ ಟರ್ವಿುನಲ್ ಕಾಮಗಾರಿ ನಡೆಯು ತ್ತಿದೆ. 28 ಎಕರೆ ವಿಸ್ತೀರ್ಣದ ಮಡಿವಾಳ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಮಡಿವಾಳ ಮಾರ್ಕೆಟ್ ಅನ್ನು 44 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ 450 ನೂತನ ಮಳಿಗೆಗಳನ್ನು ನಿರ್ವಿುಸಲಾಗುತ್ತಿದೆ.

    ನಿರಂತರ ಫಾಲೋಅಪ್

    ವಾರ್ಡ್ ಮಟ್ಟದಲ್ಲಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವುದು ಜನತಾದರ್ಶನದ ಮುಖ್ಯ ಉದ್ದೇಶ. ಇದಕ್ಕೆ ಪೂರಕವಾಗಿ ಕಾರ್ಯಕ್ರಮದಲ್ಲಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಸ್ಥಳದಲ್ಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುತ್ತಾರೆ. ಕಾರ್ಯಕ್ರಮ ಮುಗಿದ ಬಳಿಕ ಸಭೆಯಲ್ಲಿ ಪ್ರಸ್ತಾಪವಾದ ಸಮಸ್ಯೆಗಳು ಪರಿಹಾರವಾಗಿರುವುದನ್ನು ಖಚಿತಪಡಿಸಿಕೊಳ್ಳಲು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವಾಹಿನಿ ತಂಡ ನಿರಂತರ ಫಾಲೋಅಪ್ ಮಾಡಲಿವೆ. ತನ್ಮೂಲಕ ಸಮಸ್ಯೆ ಪರಿಹಾರಗೊಳ್ಳುವಂತೆ ನೋಡಿಕೊಳ್ಳಲಿವೆ.

    ನೀವು ಕೇಳಬೇಕಾದ್ದು ಏನು?

    · ಸಮಸ್ಯೆಗಳನ್ನು ನೇರವಾಗಿ ಹೇಳಿಕೊಳ್ಳಿ

    · ಎಲ್ಲಿ, ಎಂದಿನಿಂದ ಸಮಸ್ಯೆ ಇದೆ ಎಂದು ಹೇಳಿ

    · ದೂರು ಕೊಟ್ಟರೂ ಪರಿಹರಿವಾಗದಿದ್ದರೆ ಅದನ್ನು ತಿಳಿಸಿ

    · ಎಷ್ಟು ದಿನದಲ್ಲಿ ಅದು ಪರಿಹಾರವಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts