ಇಬ್ಬರು ಕಾರಂತರ ಜಂಟಿ ಸಾಹಸ!

| ಗಣೇಶ್ ಕಾಸರಗೋಡು

ಹಾಗೆಲ್ಲ ಸುಖಾ ಸುಮ್ಮನೇ ತಮ್ಮ ಕೃತಿಯ ಹಕ್ಕನ್ನು ಬಿಟ್ಟು ಕೊಡುವವರಲ್ಲ ಈ ಕಡಲ ತೀರದ ಭಾರ್ಗವ! ಕೃತಿಸ್ವಾಮ್ಯ ಬೇಕೆಂದು ಜೇಬು ತುಂಬ ದುಡ್ಡು ಇಟ್ಟುಕೊಂಡು ಬರುವವರ ಯೋಗ್ಯತೆಯನ್ನು ಅಳೆದೂ ಸುರಿದೂ ನಂತರವಷ್ಟೇ ದೊಡ್ಡ ಮನುಸ್ಸು ಮಾಡುತ್ತಿದ್ದರು ಶಿವರಾಮ ಕಾರಂತರು! ದುಡ್ಡನ್ನು ಪಕ್ಕಕ್ಕಿಟ್ಟು ಪ್ರತಿಭೆಗೆ ಒರೆ ಹಚ್ಚುತ್ತಿದ್ದರು ಈ ಸಕಲಕಲಾವಲ್ಲಭರು. ಅಂಥ ಅವರ ಮಹತ್ವದ ಕೃತಿ ‘ಚೋಮನ ದುಡಿ’ಯನ್ನು ಸಿನಿಮಾ ಮಾಡುತ್ತೇನೆಂದು ಆಗಲೇ ಹೆಸರು ಮಾಡಿದ್ದ ರಂಗತಜ್ಞ ಬಿ.ವಿ. ಕಾರಂತರು ಬಂದಾಗಲೂ ಶಿವರಾಮ ಕಾರಂತರು ತಕ್ಷಣಕ್ಕೆ ಒಪ್ಪಿಕೊಳ್ಳಲಿಲ್ಲ. ಆ ಕಾರಂತರ ವೃತ್ತಿ ಬದುಕಿನ ಎಲ್ಲ ಅಂಶಗಳನ್ನು ಪರಿಶೀಲಿಸಿ ಒರೆಗೆ ಹಚ್ಚಿದ ನಂತರವಷ್ಟೇ ಈ ಕಾರಂತರು ‘ಚೋಮನ ದುಡಿ’ಯ ಹಕ್ಕನ್ನು ಕೊಡಲು ಒಪ್ಪಿಕೊಂಡದ್ದು!

‘ಚೋಮನ ದುಡಿ’ ಕೃತಿಯನ್ನು ಸಿನಿಮಾ ಮಾಡುವುದು ಅಬಕಾರಿ ಉದ್ಯಮಿ ಮುದ್ದುಸುವರ್ಣ ಅವರ ಕನಸಾಗಿತ್ತು. ಆ ಕನಸು ನನಸಾದದ್ದು ಬಿ.ವಿ.ಕಾರಂತರ ಮೂಲಕ. ಸಾಹಿತ್ಯ ಪ್ರಿಯರಾಗಿದ್ದ ಮುದ್ದುಸುವರ್ಣ ಅವರು ಒಂದು ಸಾರಿ ಕಾಪು ಕ್ಷೇತ್ರದ ಶಾಸಕರಾಗಿದ್ದವರು. ಸಾಂಸ್ಕೃತಿಕ ರಾಯಭಾರಿಯೂ, ನಿಷ್ಠಾವಂತ ರಾಜಕಾರಣಿಯೂ ಆಗಿದ್ದ ಮುದ್ದುಸುವರ್ಣ ಅವರು ‘ಚೋಮನ ದುಡಿ’ ಚಿತ್ರಕ್ಕಾಗಿ ಹೆಚ್ಚೇನೂ ಖರ್ಚು ಮಾಡಬೇಕಾಗಿರಲಿಲ್ಲ. ತಮಗೆ ದೊರೆತ ಮೊಟ್ಟ ಮೊದಲ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಬಿ.ವಿ.ಕಾರಂತರು ಕನಿಷ್ಠ ಬಜೆಟ್​ನಲ್ಲಿ ಈ ಚಿತ್ರವನ್ನು ಸಿದ್ಧಗೊಳಿಸಿದ್ದರು! ಆದರೆ, ಪಡೆದ ಪ್ರಶಸ್ತಿ ಪುರಸ್ಕಾರಗಳು ಗರಿಷ್ಠವಾಗಿದ್ದವು. ಪತ್ರಿಕೆಗಳ ಮತ್ತು ಆ ಕಾಲದ ಬುದ್ಧಿಜೀವಿಗಳ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾದ ‘ಚೋಮನ ದುಡಿ’ ಚಿತ್ರ ಕೇಂದ್ರ ಸರ್ಕಾರದಿಂದ ಸುವರ್ಣ ಪದಕವನ್ನೂ ಪಡೆಯಿತು. ಹೌದು, ಇದು ಮುದ್ದುಸುವರ್ಣ ಅವರಿಗೆ ಸಿಕ್ಕ ಸುವರ್ಣಾವಕಾಶದ ಸುವರ್ಣ ಪದಕ. ಆದರೆ ಇವರು ‘ಚೋಮನ ದುಡಿ’ ಚಿತ್ರವನ್ನು ನಿರ್ವಿುಸಿದ್ದು ತಮ್ಮ ಮಗ ಅಶೋಕ್ ಕುಮಾರ್ ಕಟಪಾಡಿ ಅವರ ಹೆಸರಿನಲ್ಲಿ!

1975ರಲ್ಲಿ ತೆರೆಕಂಡ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಕನ್ನಡ ಚಿತ್ರರಂಗಕ್ಕೆ ಹೊಸ ಭಾಷ್ಯ ಬರೆದ ಗಿರೀಶ್ ಕಾಸರವಳ್ಳಿ ಮತ್ತು ಟಿ.ಎಸ್. ನಾಗಾಭರಣ ಅವರು ಬಿ.ವಿ.ಕಾರಂತರಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದು. ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಸ್ವತಃ ಶಿವರಾಮ ಕಾರಂತರೇ ವಹಿಸಿಕೊಂಡಿದ್ದರು. ಕಲಾತ್ಮಕ ಛಾಯಾಗ್ರಹಣಕ್ಕೆ ಹೆಸರಾಗಿದ್ದ ಎಸ್. ರಾಮಚಂದ್ರ ಅವರು ಈ ಚಿತ್ರಕ್ಕೆ ಕ್ಯಾಮರಾ ಕೆಲಸ ಮಾಡಿದ್ದಾರೆ. ವೈದ್ಯನಾಥನ್ (ಸಿ. ಅಶ್ವತ್ಥ್ ಜತೆಗಿದ್ದ ವೈದಿ) ಅವರ ಸಮರ್ಥ ಸಹಕಾರದೊಂದಿಗೆ ಸಾಕ್ಷಾತ್ ಬಿ.ವಿ.ಕಾರಂತರೇ ಸಂಗೀತ ನಿರ್ದೇಶನ ಮಾಡಿದರು. ಈ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಮುಖ್ಯವಾಗಿ ಬಳಸಿಕೊಂಡಿದ್ದು ಹಿರಿಯಣ್ಣ ಮತ್ತು ಮುರುಗೇಶನ್ ಎನ್ನುವವರ ದುಡಿ ವಾದನವನ್ನು. ಏಕೆಂದರೆ, ‘ಚೋಮನ ದುಡಿ’ ಟೈಟಲ್ಲೇ ಹೇಳುವಂತೆ ಇದು ‘ದುಡಿ’ ಪ್ರಧಾನ ಚಿತ್ರ. ಜತೆಗೆ ಬಿ.ಕೆ.ಸುಮಿತ್ರಾ ಮತ್ತು ಜಿ.ಕೆ. ವೆಂಕಟೇಶ್ ಅವರು ಹಿನ್ನೆಲೆಯಲ್ಲಿ ‘ಲೇಲೇಲೇಲೇ..’ ದನಿ ಸೇರಿಸಿದ್ದೊಂದು ಈ ಚಿತ್ರದ ವೈಶಿಷ್ಟ್ಯ.

ತುಂಡು ಭೂಮಿಗಾಗಿ ಜೀವಮಾನವಿಡೀ ಹಂಬಲಿಸುವ ‘ಚೋಮ’ ಎಂಬ ಹೆಸರಿನ ಜೀತದಾಳಿನ ಕಥೆ ಹೊಂದಿರುವ ಈ ಚಿತ್ರದ ಚಿತ್ರಕಥೆಯ ಚಿತ್ರಿಕೆ ನಿರೂಪಣೆಯಲ್ಲಿ ಬಿ.ವಿ.ಕಾರಂತರು ಹೆಚ್ಚೇನೂ ಬದಲಾವಣೆ ಮಾಡಿಕೊಳ್ಳಲಿಲ್ಲ. ಶಿವರಾಮ ಕಾರಂತರ ಆಶಯಕ್ಕೆ ಎಲ್ಲಿ ಅಪಚಾರವಾಗಿ ಬಿಡುತ್ತದೋ ಎನ್ನುವ ಸದಾಶಯದಿಂದಾಗಿ ಮೂಲಕೃತಿಗೆ ನಿಷ್ಠರಾಗಿಯೇ ಈ ಚಿತ್ರವನ್ನು ಸಿದ್ಧಪಡಿಸಿದ್ದರು.

ತುಂಡು ಭೂಮಿ ನೀಡುವ ಆಸೆಯನ್ನು ತೋರುತ್ತ ಚೋಮ ಹಾಗೂ ಅವನ ಇಡೀ ಸಂಸಾರವನ್ನು ಶೋಷಿಸುವ ಜಮೀನ್ದಾರರು ಕೊನೆಗೂ ಕೈ ಕೊಡುತ್ತಾರೆ. ನಂಬಿಕೆಯ ಬದುಕಿನಲ್ಲಿ ಸೋತು ಹೋದ ಚೋಮ ಕೊನೆಯವರೆಗೆ ದುಡಿ ಬಡಿಯುತ್ತಲೇ ಉಸಿರು ಚೆಲ್ಲುತ್ತಾನೆ… ಇದು ‘ಚೋಮನ ದುಡಿ’ ಚಿತ್ರದ ಒನ್ ಲೈನ್ ಸ್ಟೋರಿ. ಈ ಕಥೆಗೊಬ್ಬ ಹೀರೋ ಬೇಕಾಗಿದ್ದ. ಬಿ.ವಿ.ಕಾರಂತರ ಕಣ್ಣಿಗೆ ಬಿದ್ದದ್ದು ಗುಬ್ಬಿ ಕಂಪನಿಯಲ್ಲಿದ್ದ ಎಂ.ವಿ. ವಾಸುದೇವರಾವ್. ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ ಇವರು ‘ಬೇಬಿ’ ಎಂದೇ ಪ್ರಸಿದ್ದರು. ಬಿ.ವಿ. ಕಾರಂತರ ಆಯ್ಕೆ ಮತ್ತು ನಿರೀಕ್ಷೆ ಸುಳ್ಳಾಗಲಿಲ್ಲ. ವಾಸುದೇವರಾವ್ ಅವರು ಸಾಕ್ಷಾತ್ ಚೋಮನಾಗಿಯೇ ಅಭಿನಯಿಸಿದರು! ಈ ಪಾತ್ರಕ್ಕಾಗಿ ವಾಸುದೇವರಾವ್ ಅವರು ರಾಜ್ಯಸರ್ಕಾರದಿಂದ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡದ್ದಲ್ಲದೆ, ಕೇಂದ್ರ ಸರ್ಕಾರ ಅವರಿಗೆ ರಜತ ಕಮಲ ಪ್ರಶಸ್ತಿ ನೀಡಿ ಗೌರವಿಸಿತು. ‘ದುಡಿ’ಯಂತೆಯೇ ಚೋಮನ ಗುಡಿಸಲು ಕೂಡ ಈ ಚಿತ್ರದ ಒಂದು ಪಾತ್ರದಂತಿರುವುದರಿಂದ ರಂಗತಜ್ಞ ಬನ್ಸಿಕೌಲ್ ಅವರನ್ನು ಕರೆಸಿಕೊಂಡ ಬಿ.ವಿ.ಕಾರಂತರು ಅದ್ಭುತವಾದ ನೈಜ ಸೆಟ್ ಹಾಕಿಸಿದರು! ಆದರೆ ಆ ಸೆಟ್​ನೊಳಗೆ ಚಿತ್ರೀಕರಿಸುವ ಸವಾಲು ಛಾಯಾಗ್ರಾಹಕ ರಾಮಚಂದ್ರ ಅವರಿಗಿತ್ತು. ಈ ಸವಾಲನ್ನು ಸ್ವೀಕರಿಸಿದರೂ ಇದರೊಳಗೆ ಕ್ಯಾಮರಾ ಮೂವ್​ವೆುಂಟ್ ಕಷ್ಟಸಾಧ್ಯವಾದುದರಿಂದ ಛಾಯಾಗ್ರಾಹಕರು ಫಜೀತಿ ಪಟ್ಟುಕೊಂಡು ಕೆಲವು ದೃಶ್ಯಗಳನ್ನು ಸೆರೆ ಹಿಡಿಯಬೇಕಾಯಿತೇನೋ?

ಇಬ್ಬರು ಕಾರಂತರ ‘ಚೋಮನ ದುಡಿ’ ಎಂಬ ಸಾರ್ಥಕ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೂಡ ಸೆಲ್ಯೂಟ್ ಹೊಡೆಯಿತು! ಇದೊಂದು ‘ಉತ್ತಮ ಕಥಾಚಿತ್ರ’ವೆಂದು ಗುರುತಿಸಿದ ಕೇಂದ್ರ ಸರ್ಕಾರ ‘ಸ್ವರ್ಣಕಮಲ’ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿತು. ಶ್ರೇಷ್ಠ ನಟರಾಗಿ ವಾಸುದೇವರಾವ್ ಅವರನ್ನು ಆಯ್ಕೆ ಮಾಡಲಾಯಿತು. ಜತೆಗೆ ಶ್ರೇಷ್ಠನಟ ರಾಜ್ಯ ಪ್ರಶಸ್ತಿಯೂ ಲಭ್ಯವಾಯಿತು. ಪ್ರಥಮ ಅತ್ಯುತ್ತಮ ಚಿತ್ರವೆಂದು ರಾಜ್ಯಪ್ರಶಸ್ತಿ ಪಡೆದ ‘ಚೋಮನ ದುಡಿ’ ಚಿತ್ರದಲ್ಲಿ ನಟಿಸಿದ ಪದ್ಮಾ ಕುಮಟಾ ಅವರಿಗೆ ಶ್ರೇಷ್ಠ ಪೋಷಕನಟಿ ಪ್ರಶಸ್ತಿ ನೀಡಲಾಯಿತು. ಶ್ರೇಷ್ಠ ಕಥೆ ಮತ್ತು ಚಿತ್ರಕಥೆಗಾಗಿ ಶಿವರಾಮ ಕಾರಂತರು ಪ್ರಶಸ್ತಿ ಪಡೆದರೆ, ಶ್ರೇಷ್ಠ ಧ್ವನಿಗ್ರಾಹಕರಾಗಿ ಕೃಷ್ಣಮೂರ್ತಿ ಪ್ರಶಸ್ತಿ ಪಡೆದರು.