‘ವಿಜಯ’ಪುರ ಪಾರುಪತ್ಯ

ಹುಬ್ಬಳ್ಳಿ: ಇಲ್ಲಿಯ ಇಲ್ಲಿಯ ಬಿಡ್ನಾಳ-ಗಬ್ಬೂರ ಬಳಿ ಆಯೋಜಿಸಿರುವ 11ನೇ ರಾಜ್ಯಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್​ಶಿಪ್​ನ ಬಹುತೇಕ ವಿಭಾಗದಲ್ಲಿ ವಿಜಯಪುರದ ಸೈಕ್ಲಿಸ್ಟ್​ಗಳು ಪ್ರಥಮ ಸ್ಥಾನಗಳಿಸುವ ಮೂಲಕ ಪಾರುಪತ್ಯ ಮೆರೆದಿದ್ದಾರೆ.

ಕರ್ನಾಟಕ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್, ಧಾರವಾಡ ಜಿಲ್ಲಾ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಸೈಕ್ಲಿಂಗ್ ಚಾಂಪಿಯನ್​ಶಿಪ್ ನೋಡುಗರ ಹುಬ್ಬೇರಿಸಿತು.

1ನೇ ದಿನ ನಡೆದ ಟ್ರಯಲ್ ಚಾಂಪಿಯನ್​ಶಿಪ್​ನ ಬಾಲಕರ 14 ವರ್ಷದೊಳಗಿನ ವಿಭಾಗದಲ್ಲಿ ವಿಜಯಪುರದ ಪ್ರತಾಪ ಪಡಚಿ 9.20.29 ಸೆಕೆಂಡ್​ಗಳಲ್ಲಿ 7 ಕಿಮೀ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ವಿಜಯಪುರದ ಮಲ್ಲಿಕಾರ್ಜುನ ಯಾದವಾಡ ಹಾಗೂ ಸಂಪತ್ ಪ್ರಾಸಮೇಲ ಕ್ರಮವಾಗಿ ನಂತರದ ಎರಡು ಸ್ಥಾನ ಗಳಿಸಿದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿಜಯಪುರದ ಅಂಕಿತಾ ರಾಠೋಡ 7.40.02 ಸೆಕೆಂಡ್​ಗಳಲ್ಲಿ 5 ಕಿಮೀ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು. ಅಕ್ಷತಾ ಭೂತನಾಳ, ಫಾಯಲ್ ಚವ್ಹಾಣ ಕ್ರಮವಾಗಿ ನಂತರದ 2 ಸ್ಥಾನ ಗಳಿಸಿದರು.

ಬಾಲಕರ 16 ವರ್ಷದೊಳಗಿನ 10 ಕಿಮೀ ವಿಭಾಗದಲ್ಲಿ ವಿಜಯಪುರದ ಅಭಿಷೇಕ ಮರನೂರ 13.10.94 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಪ್ರಥಮ ಹಾಗೂ ಚಂದರಗಿಯ ಲಾಯಪ್ಪ ಮುಧೋಳ ದ್ವಿತೀಯ, ವಿಜಯಪುರದ ನಾಗರಾಜ ಸಮಗೊಂಡ ತೃತೀಯ ಸ್ಥಾನ ಪಡೆದರು. ಇದೇ ವಯೋಮಾನದ ಬಾಲಕಿಯರ ವಿಭಾಗದಲ್ಲಿ ವಿಜಯಪುರದ ಅಂಕಿತಾ ರಾಠೋಡ 16.30.70 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಪ್ರಥಮ, ಪಾಯಲ್ ಚವ್ಹಾಣ ದ್ವಿತೀಯ, ಅಕ್ಷತಾ ಭೂತನಾಳ ತೃತೀಯ ಸ್ಥಾನ ಪಡೆದರು.

18 ವರ್ಷದೊಳಗಿನ 20 ಕಿಮೀ ಬಾಲಕರ ವಿಭಾಗದಲ್ಲಿ ವಿಜಯಪುರದ ವಿಶ್ವನಾಥ ಗಡದ 27.36.92 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಪ್ರಥಮ, ಅಭಿಷೇಕ ಮರನೂರ ದ್ವಿತೀಯ, ಮೈಸೂರನ ವೈಶಾಖ ಕೆ.ವಿ. ತೃತೀಯ ಸ್ಥಾನ ಪಡೆದರು. ಇದೇ ವಯೋಮಾನದ ಬಾಲಕಿಯರ 15 ಕಿಮೀ ವಿಭಾಗದಲ್ಲಿ ವಿಜಯಪುರ ಸಾವಿತ್ರಿ ಹೆಬ್ಬಾಳಟ್ಟಿ 24.48 ಸೆಕೆಂಡ್​ಗಳಲ್ಲಿ ಗುರಿ ತಲುಪಿ ಪ್ರಥಮ, ಸೌಮ್ಯ ಅಂತಾಪುರ ದ್ವಿತೀಯ, ಕಾವೇರಿ ಮುರನಾಳ ತೃತೀಯ ಸ್ಥಾನ ಪಡೆದಿದ್ದಾರೆ.

ಚಾಲನೆ…: ಚಾಂಪಿಯನ್​ಶಿಪ್ ಸ್ವಾಗತ ಸಮಿತಿ ಉಪಾಧ್ಯಕ್ಷ ಮೋಹನ ಅಸುಂಡಿ ಚಾಲನೆ ನೀಡಿದರು. ಕಾರ್ಯದರ್ಶಿ ಯಮನೂರ ಜಾಧವ, ವಿಜನಗೌಡ ಪಾಟೀಲ, ದಿನೇಶ ಜೈನ್, ಹಿರಿಯ ಸೈಕ್ಲಿಸ್ಟ್ ಎಂ.ಎಚ್. ಕುರಿಯರ, ಸೈಕ್ಲಿಂಗ್ ಸಂಸ್ಥೆ ಕಾರ್ಯದರ್ಶಿ ಎಸ್.ಎಂ. ಕುರಣಿ ಹಾಗೂ ನೂರಾರು ಸೈಕ್ಲಿಂಗ್ ಪ್ರೀಯರು ಪಾಲ್ಗೊಂಡಿದ್ದರು. ವಿವಿಧ ಜಿಲ್ಲೆಯ 150 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಅ. 13ರಂದು ಬೆಳಗ್ಗೆ 7 ಗಂಟೆಯಿಂದ ಗುಂಪು ಸೈಕ್ಲಿಂಗ್ ಚಾಂಪಿಯನ್​ಶಿಪ್ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ.

ಸೌಲಭ್ಯ ಕಲ್ಪಿಸಿ…: ಸೈಕ್ಲಿಂಗ್ ಚಾಂಪಿಯನ್​ಶಿಪ್ ಆಯೋಜಿಸಿದ ಸ್ಥಳದಲ್ಲಿ ಸೈಕ್ಲಿಸ್ಟ್​ಗಳ ವಿಶ್ರಾಂತಿಗಾಗಿ ಯಾವುದೇ ವ್ಯವಸ್ಥೆ ಮಾಡದ ಕಾರಣ ಬಿಸಿಲಿನಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಡ್ರೆಸ್ಸಿಂಗ್ ರೂಮ್ ವ್ಯವಸ್ಥೆ ಇರಲಿಲ್ಲವಾದ್ದರಿಂದ ಮಹಿಳಾ ಸೈಕ್ಲಿಸ್ಟ್​ಗಳು ಅಕ್ಕಪಕ್ಕದ ಜಮೀನುಗಳಿಗೆ ಹೋಗಿ ಟ್ರ್ಯಾಕ್​ಸೂಟ್ ಬದಲಾಯಿಸಿಕೊಂಡು ಬಂದರು. ಆಯೋಜಕರು ಬಟ್ಟೆ ಬದಲಾಯಿಸಲು ಸೂಕ್ತ ಸ್ಥಳಾವಕಾಶ ಮಾಡಿದ್ದರೆ ಅನುಕೂಲವಾಗುತ್ತಿತ್ತು ಎಂಬ ಅಭಿಪ್ರಾಯ ಸೈಕ್ಲಿಸ್ಟ್​ಗಳಿಂದ ಕೇಳಿ ಬಂದಿತು.