ಬ್ರಿಟಿಷರ ದರ್ಪ ಅಡಗಿಸಿದವರು ಆಜಾದ್

ವಿಜಯಪುರ: ಚಿಕ್ಕ ವಯಸ್ಸಿನಲ್ಲೇ ದೇಶದ ಸ್ವಾತಂತ್ರೃ ಭಾಗವಹಿಸಿ ಕಾಂತ್ರಿಯ ಕಹಳೆ ಮೊಳಗಿಸಿ ಬ್ರಿಟಿಷರ ದರ್ಪ ಅಡಗಿಸಿದ ಚಂದ್ರಶೇಖರ ಆಜಾದ್ ನಮ್ಮೆಲ್ಲರಿಗೂ ಪ್ರೇರಣೆ ಅಗಬೇಕು ಎಂದು ಎಬಿವಿಪಿಯ ವಿಭಾಗ ಸಂಚಾಲಕ ಸಚಿನ ಕುಳಗೇರಿ ಹೇಳಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಚಂದ್ರಶೇಖರ ಆಜಾದ್ ಅವರ ಜಯಂತಿ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಆಜಾದ್‌ರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅವರು ಮಾತನಾಡಿದರು.
ಸ್ವಾತಂತ್ರೃಕ್ಕಾಗಿ ಹೋರಾಡಿದ ಮಹನೀಯರಲ್ಲಿ ಚಂದ್ರಶೇಖರ ಅವರ ಪಾತ್ರ ಅತೀ ಪ್ರಮುಖ. ಆಂಗ್ಲ ಸರ್ಕಾರಕ್ಕೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ ಚಂದ್ರಶೇಖರ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಮಹಾನ್ ಕ್ರಾಂತಿಕಾರಿ. ಇವರ ಚಾಣಾಕ್ಷತೆ, ಸಾಮರ್ಥ್ಯಕ್ಕೆ ಸರಿಸಾಟಿಯಾಗುವ ವ್ಯಕ್ತಿ ಇರಲಿಲ್ಲ ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಯುವಕರು ಚಲನಚಿತ್ರದ ನಟರ ಬದಲು ಸ್ವಾತಂತ್ರೃ ಹೋರಾಟಗಾರರನ್ನು ನಮ್ಮ ಹೀರೊಗಳನ್ನಾಗಿ ಮಾಡಿಕೊಳ್ಳಬೇಕೆಂದರು.
ಛಡಿ ಏಟಿನ ಸನ್ನಿವೇಶ: ಅಸಹಕಾರ ಚಳವಳಿಯ ಸಂದರ್ಭದಲ್ಲಿ ಕಾಶಿಯಲ್ಲಿ ಒಂದು ದಿನ ಮೆರವಣೆಗೆ ನಡೆಯುತ್ತಿತ್ತು. ಚಂದ್ರಶೇಖರ ಅವರೂ ಚಳವಳಿಯಲ್ಲಿ ಭಾಗವಹಿಸಬೇಕೆಂದು ನಿರ್ಧರಿಸಿ ಹೋರಾಟ ಮಾಡುತ್ತಿದ್ದ ಸ್ಥಳದ ಹತ್ತಿರ ನಿಂತು ನೋಡುತ್ತಿದ್ದರು. ಆದರೆ ಪೊಲೀಸರು ದೇಶಭಕ್ತ ಹೋರಾಟಗಾರರ ಮೇಲೆ ಲಾಟಿ ಚಾರ್ಜ್ ಮಾಡಿದರು. ಇದನ್ನು ಕಂಡ ಚಂದ್ರಶೇಖರ ಸಿಟ್ಟಿಗೆದ್ದು ಒಬ್ಬ ಬ್ರಿಟಿಷ ಪೊಲೀಸನಿಗೆ ಕಲ್ಲಿನಿಂದ ಹೊಡೆದರು. ಆಗ ಪೊಲೀಸರು ಚಂದ್ರಶೇಖರ ಅವರನ್ನು ಬಂಧಿಸಿ ಮರುದಿನ ಬ್ರಿಟಿಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶ ‘ನಿನ್ನ ಹೆಸರೇನು?’ ಅಂದ. ಆಗ ಚಂದ್ರಶೇಖರ ಅವರು ಸಿಟ್ಟಿನಿಂದ ನನ್ನ ಹೆಸರು ‘ಆಜಾದ್’ ಎಂದರು. ಸಿಟ್ಟಿಗೆದ್ದ ನ್ಯಾಯಧೀಶ ಹನ್ನೆರಡು ಛಡಿ ಏಟಿನ ಶಿಕ್ಷೆ ವಿಧಿಸಿದ. ಅಂದಿನಿಂದ ಆತನ ಹೆಸರು ಚಂದ್ರಶೇಖರ ಆಜಾದ್ ಎಂದು ಕರೆಯಲು ಪ್ರಾರಂಭ ಆಯಿತು ಎಂದು ಕುಳಗೇರಿ ಆಜಾದ್ ಅವರ ಸಾಧನೆ ಕುರಿತು ಹೇಳಿದರು.
ಜಿಲ್ಲಾ ಸಂಚಾಲಕ ಬಸವರಾಜ ಪೂಜಾರಿ. ರಾಜ್ಯ ಕಾರ್ಯಕಾರಣಿ ಸದಸ್ಯ ಪಾಂಡು ಮೋರೆ, ಚೇತನ ಮಠ, ಐಶ್ವರ್ಯ ಕುಲಕರ್ಣಿ, ವಿನೋದ ಮಣ್ಣೋಡ್ಡರ, ಸಿದ್ದು ಉಪ್ಪಾರ, ಪ್ರವೀಣ ಬಿರಾದಾರ, ಅಕ್ಷಯ ಯಾದವಾಡ, ಸಿದ್ದು ಪತ್ತಾರ, ಮಂಜು ದಾಶ್ಯಾಳ, ಸುದೀಪ ಯಮ್ದೆ ಇತರರು ಇದ್ದರು.

 

Leave a Reply

Your email address will not be published. Required fields are marked *