ಮಹಿಳೆಯರಿಗೆ ಕೌಟುಂಬಿಕ ಬೆಂಬಲ ಅವಶ್ಯ

ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷೆ ಸುಮನ್ ಕೋಲಾರ್ ಅಭಿಮತ >>

ವಿಜಯಪುರ: ಯಾವುದೇ ಕ್ಷೇತ್ರದಲ್ಲಿ ಮಹಿಳೆ ಮುಂದುವರೆಯಲು ಕುಟುಂಬದ ಬೆಂಬಲ ಅಗತ್ಯವಾಗಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷೆ ಸುಮನ್ ಕೋಲಾರ್ ಅಭಿಪ್ರಾಯಪಟ್ಟರು.

ಇಲ್ಲಿನ ಮಹಿಳಾ ವಿವಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಚುನಾವಣೆ: ಒಳ ಹೊರಗೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಚುನಾವಣೆ: ಮಹಿಳಾ ಅನುಭವ ವಿಷಯ ಕುರಿತು ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಆಸಕ್ತಿ ತೋರಬೇಕು. ಆ ಮೂಲಕ ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಮುಂದಾಗಬೇಕು ಎಂದರು.

ಎಸ್‌ಯುಸಿಐನ ಜಿಲ್ಲಾ ಸಮಿತಿ ಸದಸ್ಯ ಎಚ್.ಟಿ. ಭರತ್‌ಕುಮಾರ ಮಹಿಳಾ ಪ್ರಾತಿನಿಧ್ಯ: ಸವಾಲು-ಸಾಧ್ಯತೆ ವಿಷಯ ಕುರಿತು ಮಾತನಾಡಿ, ರಾಜಕೀಯದಲ್ಲಿ ಮಹಿಳೆಯ ಭಾಗವಹಿಸುವಿಕೆಯ ಕೊರತೆಯಿದೆ. ಪುರುಷ ಪ್ರಧಾನ ಧೋರಣೆಯು ಇದಕ್ಕೆ ಕಾರಣವಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿರುವ ಲಿಂಗಬೇಧವು ಬದಲಾಗಬೇಕಿದೆ. ಕುಟುಂಬಕ್ಕೆ ಅವಲಂಬಿತವಾಗದೇ ಅವರ ಬೆಂಬಲವಿಲ್ಲದೇ ಸಾಧಿಸುವ ಛಲ ಮಹಿಳೆಯರಲ್ಲಿ ಬೆಳೆಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ವಿವಿ ಉಪ ಕುಲಪತಿ ಪ್ರೊ.ಸಬಿಹಾ ಅಧ್ಯಕ್ಷತೆ ವಹಿಸಿದ್ದರು. ಸಬಲಾ ಸಂಸ್ಥೆ ಮುಖ್ಯಸ್ಥೆ ಡಾ.ಮಲ್ಲಮ್ಮ ಯಾಳವಾರ, ನ್ಯಾಯವಾದಿ ಲಕ್ಷ್ಮಿ ದೇಸಾಯಿ, ಜಿಪಂ ಮಾಜಿ ಅಧ್ಯಕ್ಷೆ ಅಪ್ಸರಾ ಬೇಗಂ ಚಪ್ಪರಬಂದ, ಜಿಪಂ ಾಜಿ ಸದಸ್ಯೆ ಅನಸೂಯಾ ಜಾಧವ, ಪ್ರೇಮಾ ಕನ್ಕಾಲ್, ಗೌರಮ್ಮ ರೆಡ್ಡಿ, ಪ್ರತಿಭಾ ಪಾಟೀಲ್, ವಿ. ನಾಗಮ್ಮ, ಭಾಗೀರಥಿ ತೇಲಿ, ಪ್ರಭಾವತಿ ನಾಟೀಕಾರ, ಶಾಂತಾ ಮಮದಾಪುರ, ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಹಾಗೂ ಮತ್ತಿತರರು ಭಾಗವಹಿಸಿದ್ದರು.