ಹೊಸಬರ ಹುಡುಕಾಟ ಮೇಟಿಗೆ ಸಂಕಟ

ಪರಶುರಾಮ ಭಾಸಗಿ

ವಿಜಯಪುರ: ಜಿಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ತೆರೆಮರೆ ಸಿದ್ಧತೆ ಭರದಿಂದ ಸಾಗಿದ್ದು, ಅಧ್ಯಕ್ಷೆ ನೀಲಮ್ಮ ಮೇಟಿ ಸ್ಥಾನಕ್ಕೆ ಸಂಕಟ ಎದುರಾಗಿದೆ. ಇದರಿಂದಾಗಿ ಮತ್ತೊಮ್ಮೆ ಅಧಿಕಾರ ಹಿಡಿಯಲು ಹೊಸಬರ ಆಯ್ಕೆಗೆ ಪಕ್ಷದಲ್ಲಿ ಹುಡುಕಾಟ, ಲಾಬಿ ಜೋರಾಗಿ ನಡೆಯುತ್ತಿದೆ.

ನ. 30ರಂದು ಜಿ.ಪಂ. ಸಾಮಾನ್ಯ ಸಭೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಹಾಲಿ ಅಧ್ಯಕ್ಷೆ ನೀಲಮ್ಮ ಮೇಟಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ನೇತೃತ್ವದಲ್ಲಿ ಹಲವು ಮುಖಂಡರ ನಿಯೋಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ತೆರಳಿ, ಎರಡನೇ ಅವಧಿಗೆ ಬೇರೊಬ್ಬರ ಆಯ್ಕೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದು, ಅದಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಅದಕ್ಕೆ ಮಾಜಿ ಸಚಿವ, ಹಾಲಿ ಶಾಸಕ ಎಂ.ಬಿ. ಪಾಟೀಲ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಒಪ್ಪಂದದನ್ವಯ ಅಧಿಕಾರ ತ್ಯಜಿಸಬೇಕಿರುವ ಅಧ್ಯಕ್ಷೆ ನೀಲಮ್ಮ ಮೇಟಿ ಅಂಥ ಯಾವುದೇ ಒಪ್ಪಂದವಾಗಿಲ್ಲ, ಹೈಕಮಾಂಡ್ ಹೇಳಿದರೆ ಅಧಿಕಾರ ತ್ಯಜಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಶಾಸಕ ಯಶವಂತರಾಯಗೌಡ ಪಾಟೀಲರೇ ಒಡಂಬಡಿಕೆ ಗುಟ್ಟು ರಟ್ಟಾಗಿಸಿದ್ದು ಅಂದುಕೊಂಡಂತೆ ಮೇಟಿ ಅಧಿಕಾರ ಬಿಟ್ಟುಕೊಡುವರೇ? ಇಲ್ಲ ಅವಿಶ್ವಾಸಕ್ಕೆ ಅವಕಾಶ ಕಲ್ಪಿಸುವರಾ ಎಂಬ ಕುತೂಹಲ ಹೆಚ್ಚಿದೆ.

ದೋಸ್ತಿ ಆಡಳಿತ ಅಸ್ತಿತ್ವಕ್ಕೆ

ಇನ್ನು ಉಪಾಧ್ಯಕ್ಷ ಗಾದಿಗಾಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹಾಗೂ ಬಸನಗೌಡ ಪಾಟೀಲ ಯತ್ನಾಳರ ತೆರೆಮರೆಯ ಕಸರತ್ತು ನಡೆದು ಯತ್ನಾಳರು ತಮ್ಮ ಬೆಂಬಲಿಗನನ್ನು ಉಪಾಧ್ಯಕ್ಷ ಸ್ಥಾನಕ್ಕೆ ತರುವಲ್ಲಿ ಸಫಲರಾಗಿದ್ದರು. ಹೊಂದಾಣಿಕೆ ಸೂತ್ರದಡಿ ಉಪಾಧ್ಯಕ್ಷ ಸ್ಥಾನ ಜೆಡಿಎಸ್​ಗೆ ಬಿಟ್ಟು ಕೊಡುವ ಒಪ್ಪಂದ ವಾಗಿದ್ದರೂ ಅಂತಿಮ ಘಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೈಕೊಟ್ಟ ಪರಿಣಾಮ ಬಿಜೆಪಿ- ಜೆಡಿಎಸ್ ಸಮಬಲ ಸಾಧಿಸಿ ಚೀಟಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಪರಿಣಾಮ ದೇಸಾಯಿ ಉಪಾಧ್ಯಕ್ಷ ಗಾದಿ ಅಲಂಕರಿಸಿದ್ದು ರೋಚಕ ಕಥೆ. ಇದೀಗ ಆ ಸ್ಥಾನವೂ ಬದಲಿಸಬೇಕೆಂದು ಕೆಲ ಸದಸ್ಯರು ಕಾದು ಕುಳಿತಿದ್ದು, ರಾಜ್ಯ ಮಾದರಿಯಲ್ಲಿ ದೋಸ್ತಿ ಆಡಳಿತ ಅಸ್ತಿತ್ವಕ್ಕೆ ಬರುವುದೇ? ಕಾದು ನೋಡಬೇಕು. ಹಾಗಾದಲ್ಲಿ ಜೆಡಿಎಸ್​ನಿಂದ ಮತ್ತೆ ಬಸನಗೌಡ ಮಲ್ಲನಗೌಡ ವಣಕ್ಯಾಳ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.

ಏನಿದು ಒಡಂಬಡಿಕೆ

ನೂತನ ಪ್ರವಾಸಿ ಮಂದಿರದಲ್ಲಿ 2016 ಮೇ 6 ರಂದು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಅಂದಿನ ಸಚಿವ ಎಂ.ಬಿ. ಪಾಟೀಲ, ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್. ನಾಡಗೌಡ, ಶಾಸಕ ಯಶವಂತರಾಯಗೌಡ ಪಾಟೀಲರ ಮಧ್ಯೆ ಮಾತುಕತೆ ನಡೆದಿತ್ತು. ನಾಡಗೌಡ ಮತ್ತು ಯಶವಂತರಾಯಗೌಡರ ಮಧ್ಯೆ ಅಭ್ಯರ್ಥಿ ಆಯ್ಕೆ ಜಟಾಪಟಿ ನಡೆದಿತ್ತು. ವೀಕ್ಷಕರಾಗಿ ಬಂದಿದ್ದ ಎನ್.ಎಸ್. ಭೋಸರಾಜು ಸಂಧಾನಕ್ಕೆ ಯತ್ನಿಸಿದ್ದರು. ಸಮಸ್ಯೆ ರಾಜಧಾನಿ ತಲುಪಿ ಸಿದ್ದರಾಮಯ್ಯ ಅವರ ಅಣತಿಯಂತೆ ಮೊದಲ ಅವಧಿಗೆ ನೀಲಮ್ಮ ಮೇಟಿ ಅವರನ್ನು ಆಯ್ಕೆ ಮಾಡುವುದು ಮತ್ತು ಎರಡನೇ ಅವಧಿಗೆ ಇಂಡಿ ಶಾಸಕರ ಆದ್ಯತಾನುಸಾರ ಅಭ್ಯರ್ಥಿ ಆಯ್ಕೆ ಮಾಡುವ ಒಪ್ಪಂದವಾಗಿತ್ತು.

ತೆರೆ ಮರೆಯಲ್ಲಿ ಸಿದ್ಧತೆ

ಆ ಪ್ರಕಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಗೆ ತೆರೆಮರೆ ಸಿದ್ಧತೆ ಆರಂಭಗೊಂಡಿದೆ. ಕಳೆದ ಸೆ. 19ರಂದು ನಡೆದ ಸಾಮಾನ್ಯ ಸಭೆಯೇ ಹಾಲಿಗಳ ಅಂತಿಮ ಸಭೆ ಎನ್ನಲಾಗಿದೆ. ಸದರಿ ಸಭೆಯಲ್ಲಿ ಅಧ್ಯಕ್ಷೆ ಮೇಲೆ ಪಕ್ಷಾತೀತವಾಗಿ ಹರಿಹಾಯುವ ಮೂಲಕ ಸದಸ್ಯರೆಲ್ಲ ಅಧ್ಯಕ್ಷ ಸ್ಥಾನ ತ್ಯಜಿಸಲು ಪರೋಕ್ಷ ಸಂದೇಶ ರವಾನಿಸಿದ್ದಾರೆ. ಉಪಾಧ್ಯಕ್ಷ ದೇಸಾಯಿ ಸಹ ಅಧ್ಯಕ್ಷರ ಮೇಲೆ ಅಸಮಾಧಾನ ಹೊರಹಾಕುವ ಮೂಲಕ ಅಧ್ಯಕ್ಷರ ಕಾರ್ಯವೈಖರಿ ಖಂಡಿಸಿದ್ದಾರೆ. ಅಲ್ಲಿಂದಲೇ ನೂತನ ಆಯ್ಕೆ ಪ್ರಕ್ರಿಯೆಗೆ ತೆರೆಮರೆ ಸಿದ್ಧತೆ ಆರಂಭಗೊಂಡಿದ್ದು, ಇಂಡಿ ಕ್ಷೇತ್ರದ ಅರ್ಹ ಸದಸ್ಯರು ವೇದಿಕೆ ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ. ಇಂಡಿ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಕಾರ್ಯಕರ್ತರ ಸಭೆ ನಡೆಸಿದ್ದಾರೆ. ತಾಪಂ, ಎಪಿಎಂಸಿ ಹಾಗೂ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಆ ಪ್ರಕಾರ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಸಾಲೋಟಗಿ ಕ್ಷೇತ್ರದ ಶಿವಯೋಗಪ್ಪ ನೇದಲಗಿ ಹೆಸರು ಅಂತಿಮಗೊಳಿಸಿರುವುದಾಗಿ ಸಭೆಯಲ್ಲಿದ್ದ ಸದಸ್ಯರೊಬ್ಬರು ತಿಳಿಸಿದ್ದಾರೆ.