ತಮ್ಮ ಊರಿನಲ್ಲಿ ಶಾಲಾ-ಕಾಲೇಜು ನಿರ್ಮಿಸುವಂತೆ ಸಿಎಂಗೆ ರಕ್ತದಲ್ಲಿ ಪತ್ರ ಬರೆದ ಯುವಕ

ವಿಜಯಪುರ: ತಮ್ಮ ಊರಿನಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜು ಆರಂಭಿಸುವಂತೆ ಯುವಕನೊಬ್ಬ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾನೆ.

ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ವಿಜಯರಂಜನ್​ ಜೋಶಿ ಎಂಬಾತ ಸಿಎಂ ಕುಮಾರಸ್ವಾಮಿ ಸೇರಿದಂತೆ ಶಾಸಕರು, ಜಿಲ್ಲಾಧಿಕಾರಿ, ಪದವಿಪೂರ್ವ ನಿರ್ದೇಶಕರು ಹಾಗೂ ಉಪನಿರ್ದೇಶಕರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ಇದೇ ವಿಚಾರವಾಗಿ ಜೋಶಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದ. ಇದನ್ನು ಪರಿಗಣಿಸಿದ ಪ್ರಧಾನಿ ಕಾರ್ಯಾಲಯ ಪರಿಶೀಲನೆ ನಡೆಸುವಂತೆ ರಾಜ್ಯ‌ ಸರ್ಕಾರಕ್ಕೆ ಪತ್ರ ಬರೆದಿತ್ತು. ಆದರೆ, ಇದುವರೆಗೂ ಯಾವುದೇ ಶಾಲಾ-ಕಾಲೇಜು ಕಟ್ಟಡ ನಿರ್ಮಾಣ ಆಗದಿರುವುದು ಜೋಶಿಗೆ ನೋವುಂಟಾಗಿದೆ.

ಈಗಲಾದರೂ ಹೈಸ್ಕೂಲ್ ಮತ್ತು ಕಾಲೇಜು ನಿರ್ಮಾಣ ಮಾಡಿ ಈ ಭಾಗದಲ್ಲಿರುವ ಅನಕ್ಷರತೆ ಹೋಗಲಾಡಿಸಿ ಎಂದು ಸಿಎಂ ಕುಮಾಸ್ವಾಮಿಗೆ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾನೆ. (ದಿಗ್ವಿಜಯ ನ್ಯೂಸ್​)