ಪ್ರೀತಿಸುವಂತೆ ಪೀಡನೆ: ಮನನೊಂದ ಬಾಲಕಿ ಬೆಂಕಿಗಾಹುತಿ

ವಿಜಯಪುರ: ಯುವಕರಿಬ್ಬರು ಪ್ರೀತಿಸುವಂತೆ ಪೀಡಿಸಿದ್ದಕ್ಕೆ ಅಪ್ರಾಪ್ತೆ ಮೈಸುಟ್ಟುಕೊಂಡು ಅಸುನೀಗಿದ್ದು, ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಬಲಭೀಮ ನರಳೆ ಎಂಬುವರ 13 ವರ್ಷದ ಬಾಲಕಿ ಪ್ರಾಜಕ್ತಾ ಮೃತ ದುರ್ದೈವಿ. ಕೊಲೆಗೆ ಪೂರಕ ಸಾಕ್ಷ್ಯ ಲಭ್ಯವಾಗಿಲ್ಲದ ಕಾರಣ ಐಪಿಸಿ ಕಲಂ 306 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳಾದ ಶಂಕರ ಹಿಪ್ಪರಕರ (24) ಹಾಗೂ ಮೋಹನ ಯಡವೆ (19) ಎಂಬುವರನ್ನು ವಶಕ್ಕೆ ಪಡೆಯಲಾಗಿದೆ.

ಏನಿದು ಘಟನೆ?

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಪ್ರಾಜಕ್ತಾಳಿಗೆ ಶಂಕರ ಮತ್ತು ಮೋಹನ್ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದರೆನ್ನಲಾಗಿದೆ. ಕಳೆದ ಶುಕ್ರವಾರ ತನ್ನ ತಾಯಿಗೆ ಪ್ರಾಜಕ್ತಾ ಈ ವಿಷಯ ತಿಳಿಸಿದ್ದಾಳೆ. ಶಾಲೆ ಬಿಟ್ಟು ಮನೆಯಲ್ಲಿಯೇ ಇರುವಂತೆ ತಾಯಿ ಬಾಲಕಿಗೆ ತಿಳಿಸಿದ್ದಾಳೆ. ಭಾನುವಾರ ಸಂಜೆ ತೋಟದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರಾಜಕ್ತಾ ಬೆಂಕಿಗಾಹುತಿಯಾಗಿದ್ದಾಳೆ.

ಆದರೆ, ಪ್ರಾಜಕ್ತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳಾ, ಇಲ್ಲವೆ ಆರೋಪಿಗಳು ಸೇರಿ ಕೊಲೆ ಮಾಡಿದ್ದಾರಾ? ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತಿಕೋಟಾ ಠಾಣೆ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ತನಿಖೆ ಮುಂದುವರಿಸಿದ್ದಾರೆ.