More

    ವೇಗ ಕಾಣದ ಫಾಸ್ಟ್ಯಾಗ್​ !

    ಹೀರಾನಾಯ್ಕ ಟಿ.
    ವಿಜಯಪುರ:
    ವಾಹನಗಳಿಗೆ ಕಡ್ಡಾಯವಾಗಿ ಫಾಸ್ಟ್ಯಾಗ್ ​ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶಿಸಿದೆ. ಆದರೆ, ಸಾಕಷ್ಟು ವಾಹನಗಳಿಗೆ ಫಾಸ್ಟ್ಯಾಗ್  ಅಳವಡಿಸದೆ ಇರುವುದರಿಂದ ಕ್ಯಾಷ್‌ಲೆಸ್ ವಹಿವಾಟು ಮಂದಗತಿಯಲ್ಲಿ ಸಾಗಿದೆ. ಸರತಿ ಸಾಲಿನಲ್ಲಿ ನಿಂತು ವಾಹನ ಚಾಲಕರು ನಗದು ಪಾವತಿಸುವ ಪರಿಪಾಠ ಮುಂದುವರಿದಿದೆ.

    ಶೇ.60ರಷ್ಟು ಫಾಸ್ಟ್ಯಾಗ್​ ಅಳವಡಿಕೆ
    ವಿಜಯಪುರ ಜಿಲ್ಲೆಯ ಎರಡು ಕಡೆ ಟೋಲ್ ಗೇಟ್‌ಗಳಿವೆ. ವಿಜಯಪುರ ಹೊರವಲಯ ಹಿಟ್ನಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-50 ಹಾಗೂ ಸಿಂದಗಿ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಟೋಲ್ ಗೇಟ್‌ಗಳಿದ್ದು, ಸುಮಾರು 10 ಸಾವಿರ ವಾಹನಗಳು ಪ್ರತಿ ದಿನ ಓಡಾಡುತ್ತವೆ. 4 ಸಾವಿರ ವಾಹನಗಳಿಗೆ ಇನ್ನೂ ಫಾಸ್ಟ್ಯಾಗ್ ಅಳವಡಿಸಿಲ್ಲ. ಹೀಗಾಗಿ ಟೋಲ್‌ಗಳಲ್ಲಿ ಸರತಿಯಲ್ಲಿ ಗಂಟೆಗಟ್ಟಲೇ ನಿಲ್ಲುವಂತಾಗಿದೆ.
    ಫಾಸ್ಟ್ಯಾಗ್ ​ಅನ್ನು ವಾಹನಗಳ ಮುಂದಿನ ಗಾಜಿನಲ್ಲಿ ಬೇಕಾಬಿಟ್ಟಿಯಾಗಿ ಅಂಟಿಸಲಾಗಿದೆ. ಅದರ ಮೇಲೆ ಧೂಳು ಬಿದ್ದು ರೀಡಿಂಗ್‌ನಲ್ಲಿ ತೊಂದರೆಯಾಗಿ ವಾಹನಗಳು ಸಾಲಾಗಿ ನಿಲ್ಲಬೇಕಾದ ಸ್ಥಿತಿಯೂ ಉಂಟಾಗುತ್ತಿದೆ.

    ಸರ್ಕಾರಿ ಬಸ್‌ಗಳಿಗೆ ಅಳವಡಿಸಿಲ್ಲ..!
    ಸಾರಿಗೆ ಬಸ್‌ಗಳಿಗೆ ಫಾಸ್ಟ್ಯಾಗ್​ ಅಳವಡಿಸಿಲ್ಲ. ದೂರದೂರಿಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. 550ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಪ್ರತಿದಿನ ಓಡಾಡುತ್ತವೆ. ಸರತಿ ಸಾಲಿನಲ್ಲಿ ನಿಂತು ನಗದು ಪಾವತಿಸಿ ಹೋಗಬೇಕಾಗಿದೆ. ಈ ಹಿಂದೆ ಹೋಗಿ ವಾಪಸ್ ಬರಲು ಸಾರಿಗೆ ಬಸ್ ಸಿಬ್ಬಂದಿ 285 ರೂ. ತುಂಬುತ್ತಿದ್ದರು. ಆದರೆ, ಈಗ ಫಾಸ್ಟ್ಯಾಗ್​ ಅಳವಡಿಸಿರುವುದರಿಂದ ಹೋಗುವಾಗ 190, ಬರುವಾಗ 190 ರೂ. ತುಂಬಬೇಕಾಗಿದೆ. 95 ರೂ. ಹೊರೆಯಾಗಿದೆ.

    ದುಪ್ಪಟ್ಟು ಶುಲ್ಕ ನೀಡಲು ಹಿಂದೇಟು
    ಫಾಸ್ಟ್ಯಾಗ್​ ಅಳವಡಿಸದ ವಾಹನಗಳು ಜ.15ರಿಂದ ಫಾಸ್ಟ್ಯಾಗ್​ ಲೇನ್‌ನಲ್ಲಿ ಹೋದರೆ ಚಾಲಕರು ದುಪ್ಪಟ್ಟು ಶುಲ್ಕ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ. ಈ ನಿಯಮ ಜಾರಿಯಾಗಿ ಐದು ದಿನ ಕಳೆದಿದೆ. ಆದರೆ ಈವರೆಗೆ ಒಬ್ಬರು ಮಾತ್ರ ಕಾರು ಚಾಲಕ ಹೆಚ್ಚುವರಿಯಾಗಿ 55 ರೂ. ನೀಡಿರುವ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ. ಪ್ರತಿಯೊಂದು ಟೋಲ್‌ನಲ್ಲಿ 10 ಪಥಗಳನ್ನು ನಿರ್ಮಿಸಲಾಗಿದ್ದು, ಫಾಸ್ಟ್ಯಾಗ್ ​ಇಲ್ಲದವರಿಗೆ ಪ್ರತ್ಯೇಕ ಪಥದಲ್ಲಿ ಅವಕಾಶ ಕಲ್ಪಿಸಲಾಗಿದೆ. ಸ್ಟಿಕ್ಕರ್‌ಗಳ ಬಾರ್‌ಕೋಡ್, ಕ್ಯೂ ಆರ್ ಕೋಡ್ ಸ್ಕಾೃನ್ ತಾಂತ್ರಿಕ ದೋಷ ಕಂಡುಬಂದರೆ ಫಾಸ್ಟ್ಯಾಗ್​ ಅಳವಡಿಸಿಕೊಂಡ ವಾಹನಗಳಿಗೆ ರಿಯಾಯಿತಿ ನೀಡಲಾಗುತ್ತಿದೆ.

    ಸ್ಥಳೀಯರಿಗೆ ರಿಯಾಯಿತಿ
    ಟೋಲ್ ಪ್ಲಾಜಾದಿಂದ 20 ಕಿ.ಮೀ. ಒಳಗಿರುವ ಸ್ಥಳೀಯರಿಗೆ ರಿಯಾಯಿತಿ ನೀಡಲಾಗಿದೆ. ಅವರು ತಿಂಗಳಿಗೆ 265 ರೂ. ಪಾಸ್ ಪಡೆದುಕೊಂಡರೆ ಬೇಕಾದಷ್ಟು ಸಲ ಸಂಚರಿಸಬಹುದು. ಆಧಾರ್ ಕಾರ್ಡ್, ವಾಹನ ಪರವಾನಗಿ ಪತ್ರ, ಒಂದು ಫೋಟೋ ನೀಡಿ ಈ ಪಾಸ್ ಪಡೆದುಕೊಳ್ಳಬಹುದು ಎಂದು ಸಲೀಂ ಹೇಳುತ್ತಾರೆ.

    ಧ್ವನಿ ವರ್ಧಕ ಮೂಲಕ ಪ್ರಚಾರ
    ವಾಹನ ಚಲಾಯಿಸುವವರಿಗೆ ಅರಿವು ಮೂಡಿಸಲು ಟೋಲ್‌ಪ್ಲಾಜಾದಲ್ಲಿ ಧ್ವನಿವರ್ಧಕ ಮೂಲಕ ಫಾಸ್ಟ್ಯಾಗ್​ ಕುರಿತು ಪ್ರಚಾರ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ಬ್ಯಾನರ್‌ಗಳನ್ನು ಕಟ್ಟಲಾಗಿದೆ.

    ಪ್ರತಿದಿನ ಎರಡು ಟೋಲ್‌ಗಳಿಂದ ಅಂದಾಜು 19 ಲಕ್ಷ ರೂ. ಶುಲ್ಕ ಸಂಗ್ರಹವಾಗುತ್ತಿದೆ. 12 ಲಕ್ಷ ರೂ. ಫಾಸ್ಟ್ಯಾಗ್​ನಿಂದ ಸಂಗ್ರಹಗೊಂಡರೆ, ಇನ್ನುಳಿದ 7 ಲಕ್ಷ ರೂ. ನಗದು ರೂಪದಲ್ಲಿ ಪಾವತಿಸಲಾಗುತ್ತಿದೆ. ಈಗಾಗಲೇ ಶೇ.60 ರಷ್ಟು ವಾಹನಗಳಿಗೆ ಫಾಸ್ಟ್ಯಾಗ್​ ಅಳವಡಿಸಲಾಗಿದೆ. ಇನ್ನುಳಿದ ವಾಹನಗಳಿಗೆ ಅಳವಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ.
    ಸಲೀಂ ಒಂಟಿ, ಟೋಲ್ ಪ್ಲಾಜಾದ ವ್ಯವಸ್ಥಾಪಕ, ವಿಜಯಪುರ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts