More

    ಜಯದೇವ ಶ್ರೀಗಳ ತೃತೀಯ ಪುಣ್ಯಸ್ಮರಣೆ

    ವಿಜಯಪುರ: ವನಶ್ರೀ ಸಂಸ್ಥಾನಮಠದ ಜಯದೇವ ಜಗದ್ಗುರುಗಳು ಕಾಯಕ ಜೀವಿಗಳಾಗಿದ್ದರು. ಅವರ ದೂರದೃಷ್ಟಿಯಿಂದ ಈ ಆಶ್ರಮ ಸ್ಥಾಪಿಸಲು ಸಾಧ್ಯವಾಯಿತು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದರು.
    ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಇರುವ ವನಶ್ರೀ ಸಂಸ್ಥಾನ ಮಠದಲ್ಲಿ ಜಯದೇವ ಜಗದ್ಗುರುಗಳ ತೃತೀಯ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
    ಜಯದೇವ ಜಗದ್ಗುರುಗಳದ್ದು ಕೊಡುವ ಸ್ವಭಾವವಾಗಿತ್ತೇ ವಿನಃ ಬೇಡುವ ಸ್ವಭಾವವಾಗಿರಲಿಲ್ಲ. ಅವರ ಸಂಕಲ್ಪದಂತೆ ಈ ಆಶ್ರಮದಲ್ಲಿ ವಸತಿಶಾಲೆ, ಗ್ರಂಥಾಲಯ, ಉದ್ಯೋಗಪರ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪಿಸಬೇಕೆಂದು ಅವರು ಹೇಳಿದರು.
    ಬುರಣಾಪುರದ ಯೋಗೇಶ್ವರಿ ಮಾತಾಜಿ ಮಾತನಾಡಿ, ಶ್ರೀಗಳು ಇಲ್ಲಿ ನೆಲೆ ನಿಂತು ಈ ಮಠ ಅಭಿವೃದ್ಧಿ ಪಡಿಸಿ, ಸಾರ್ಥಕ ಸೇವೆ ಮಾಡಿ ಉಳಿದವರಿಗೆ ಮಾದರಿಯಾಗಿದ್ದಾರೆ ಎಂದರು.
    ಸುಗಲಾದೇವಿಯವರು ಮಾತನಾಡಿ, ವನಶ್ರೀ ಸಂಸ್ಥಾನ ಮಠದ ಶ್ರೀಗಳಲ್ಲಿ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ, ಸರಳತೆ ಹಾಗೂ ಸಮಾಜವನ್ನು ಅಪ್ಪಿಕೊಳ್ಳುವ ಗುಣವಿತ್ತು ಎಂದು ಹೇಳಿದರು.
    ಡಾ.ಮಲ್ಲಿಕಾರ್ಜುನ ಮೇತ್ರಿ ಉಪನ್ಯಾಸ ನೀಡಿ, ಜಯದೇವ ಜಗದ್ಗುರುಗಳು ಕಾಯಾ-ವಾಚಾ-ಮನಸಾ ಶುದ್ಧಗುಣಿಯಾಗಿದ್ದರು ಎಂದು ಹೇಳಿದರು.
    ಡಾ.ವಿ.ಟಿ. ಐಹೊಳ್ಳಿ ಮಾತನಾಡಿ, ಶ್ರೀಗಳು ಐಷಾರಾಮಿ ಜೀವನ ಬಯಸದೇ ಎಲ್ಲರೊಂದಿಗೂ ಒಂದಾಗಿ ಶರಣರ ನುಡಿಗಳನ್ನು ಅನುಷ್ಠಾನಕ್ಕೆ ತಂದ ಅಪರೂಪದ ಸ್ವಾಮಿಗಳಾಗಿದ್ದರು ಎಂದು ಹೇಳಿದರು.
    ನಂದಿಕುರಳಿಯ ವೀರಭದ್ರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ನರೇಶಾನಂದಜೀ, ಸಂಗಯ್ಯ ಸ್ವಾಮಿಗಳು ಹಾಗೂ ಎನ್.ಎಸ್. ಲೋಣಿ, ಸಮಾಜದ ಮುಖಂಡರು, ಯುವಕರು ಹಾಗೂ ಮಹಿಳೆಯರು ಉಪಸ್ಥತರಿದ್ದರು.
    ಶಂಭು ಕಕ್ಕಳಮೇಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ಎಸ್.ಬಿ. ಪುಟ್ಟಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts