ಭರ್ಜರಿಯಾಗಿ ನಡೆದಿದೆ ವ್ಯಾಪಾರ ವಹಿವಾಟು

26 ತಳಿ ಅಶ್ವಗಳು ಭಾಗಿ >>

ಉಮದಿ(ಮಹಾರಾಷ್ಟ್ರ): ಸೊಲ್ಲಾಪುರ ಜಿಲ್ಲೆಯ ಅಕಲೂಜದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಆಯೋಜಿಸಿರುವ ಕುದುರೆ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ದೇಶದ ವಿವಿಧೆಡೆಯಿಂದ 26ಕ್ಕೂ ಅಧಿಕ ತಳಿಯ ಕುದುರೆಗಳು ಆಗಮಿಸಿವೆ.

ಪ್ರದರ್ಶನಕ್ಕೆ ಚಾಲನೆ ನೀಡುವ ಮುನ್ನವೇ 176 ಕುದುರೆಗಳು ಮಾರಾಟವಾಗಿ 2 ಕೋಟಿ ರೂ. ಅಧಿಕ ವಹಿವಾಟು ನಡೆದಿದೆ. ನ.9 ರಂದು ಆರಂಭವಾಗಿರುವ ಮೇಳ ಒಂದು ತಿಂಗಳು ನಡೆಯಲಿದೆ.

ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ರಾಜ್ಯಗಳಿಂದ ಕುದುರೆಗಳು ಆಗಮಿಸಿವೆ. ಕುದುರೆ ಖರೀದಿಸಲು ಅಧಿಕ ಸಂಖ್ಯೆಯಲ್ಲಿ ವ್ಯಾಪಾರಿಗಳು ಆಗಮಿಸುತ್ತಿದ್ದಾರೆ. ಈ ಬಾರಿ ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಕುದುರೆಗಳು ಬಂದಿದ್ದರಿಂದ ಕುದುರೆ ಪ್ರದರ್ಶನಕ್ಕೆ ನಿಗದಿಪಡಿಸಿರುವ ಸ್ಥಳ ಕಿಕ್ಕಿರಿದು ತುಂಬಿದೆ.

50 ಸಾವಿರದಿಂದ 50 ಲಕ್ಷದವರೆಗೆ ಕುದುರೆಗಳ ಬೆಲೆ ನಿಗದಿ ಮಾಡಲಾಗಿದೆ. ತಳಿ, ವಯಸ್ಸು, ಬಣ್ಣ, ಎತ್ತರ ಸೇರಿ ಹಲವು ಗುಣಗಳ ಅನುಸಾರವಾಗಿ ಬೆಲೆ ನಿಗದಿ ಪಡಿಸಲಾಗುತ್ತದೆ. ಕಾಟೆವಾಡಿ, ಪಂಚಕಲ್ಯಾಣಿ, ಪಂಜಾಬ್, ಮಾರವಾಡಿ, ಸಿಂಧಿ, ರಾಜಸ್ಥಾನಿ, ಗುಜರಾತಿ ಸೇರಿದಂತೆ ಹಲವು ತಳಿಯ ಕುದುರೆಗಳು ಮೇಳದಲ್ಲಿವೆ.

ರುದ್ರ ಕುದುರೆಗೆ 51 ಲಕ್ಷ ರೂ. : ಉತ್ತರಪ್ರದೇಶದ ಬರೇಲಿಯ ರುದ್ರ ಎಂಬ ಹೆಸರಿನ 26 ತಿಂಗಳಿನ ಕುದುರೆ ಪ್ರದರ್ಶನದಲ್ಲಿ ಭಾಗವಹಿಸಿದ್ದು, ಅದಕ್ಕೆ 51 ಲಕ್ಷ ರೂ. ಅಧಿಕ ಬೆಲೆ ನಿಗದಿ ಮಾಡಲಾಗಿದೆ. ಮಾರವಾಡಿ ಹಾಗೂ ಪಂಚಕಲ್ಯಾಣಿ ತಳಿಯ ಕುದುರೆೆಗಳನ್ನು 50 ಲಕ್ಷ ದವರೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರಾಜೇಂದ್ರ ಕಾಕಡೆ ಹೇಳಿದರು.