ಅತ್ಯಾಚಾರ ಎಸಗಿ ಕೊಲೆ

ತಾಳಿಕೋಟೆ: ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವ 28 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ.

ಮನೆಯಲ್ಲಿ 5 ವರ್ಷದ ಮಗನೊಂದಿಗೆ ಮಲಗಿದ್ದ ಮಹಿಳೆ ರಾತ್ರಿ ಬಹಿರ್ದೆಸೆಗೆಂದು ಬಾಗಿಲು ತೆಗೆದಾಗ ಆಕೆಯನ್ನು ಎಳೆದು ಅತ್ಯಾಚಾರ ಎಸಗಿದ್ದು, ಗ್ರಾಮಸ್ಥರಿಗೆ ಈ ವಿಷಯ ತಿಳಿಸುವ ಭಯದಲ್ಲಿ ಕಾಮುಕರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಗ್ರಾಮದ ಮಾಳಪ್ಪ ಮಲ್ಲಪ್ಪ ಗುಡಿಮನಿ ಹಾಗೂ ಶಿವಪ್ಪ ಉರ್ಫ್ ಶಿವು ಹಣಮಂತ ಚಲವಾದಿ ಎಂಬುವರನ್ನು ಸಂಶಯದ ಮೇಲೆ ಬಂಧಿಸಿ ಪೊಲೀಸರು ತನಿಖೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮೃತ ಮಹಿಳೆ ಗಂಡ ಹೊನ್ನಳ್ಳಿ ಗ್ರಾಮದ ಜಾತ್ರೆಗೆ ಹೋದಾಗ ಮನೆಯಲ್ಲಿ ಮಹಿಳೆಯೊಬ್ಬಳೆ ಇರುವುದನ್ನು ಖಚಿತಪಡಿಸಿಕೊಂಡು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ವಿಷಯ ತಿಳಿದು ತಾಳಿಕೋಟೆ ಪೊಲೀಸರು ತನಿಖೆ ಆರಂಭಿಸಿ ಘಟನೆ ನಡೆದ ಎರಡು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೇವಲ ಎರಡು ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿ ಸಂಜಯಕುಮಾರ ಜಾಧವ, ಎಂ.ಎಲ್. ಪಟ್ಟೇದ ಅವರ ಕಾರ್ಯಕ್ಕೆ ಎಸ್‌ಪಿ ಪ್ರಶಂಸೆ ವ್ಯಕ್ತಪಡಿಸಿ ಎರಡು ಸಾವಿರ ರೂ. ಬಹುಮಾನ ನೀಡಿದ್ದಾರೆ. ಡಿವೈಎಸ್ಪಿ ಮಹೇಶಗೌಡ ಮಾರ್ಗದರ್ಶನದಲ್ಲಿ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‌ಐ. ಜಿ.ಎಸ್.ಬಿರಾದಾರ ನೇತೃತ್ವದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *