ಬಸ್ ನಿಲುಗಡೆ ಆಗ್ರಹಿಸಿ ಪ್ರತಿಭಟನೆ

<< ಅಂಜುಮನ್ ಸಂಸ್ಥೆ ಬಳಿ ನಿಲ್ಲಿಸಲು ಒತ್ತಾಯ > ಬಸ್ ಸಂಚಾರ ತಡೆದು ಆಕ್ರೋಶ >>

ತಾಳಿಕೋಟೆ: ಪಟ್ಟಣದ ಅಂಜುಮನ್ ಶಿಕ್ಷಣ ಸಂಸ್ಥೆ, ಸೆಕ್ರೇಟ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಳಿ ಸಾರಿಗೆ ಇಲಾಖೆ ಬಸ್‌ಗಳನ್ನು ನಿಲುಗಡೆ ಮಾಡದಿರುವ ಕ್ರಮ ಖಂಡಿಸಿ ವಿದ್ಯಾರ್ಥಿಗಳು, ಪಾಲಕರು ಮತ್ತು ಶಿಕ್ಷಣ ಸಂಸ್ಥೆ ಮುಖಂಡರು ಕೆಲ ಕಾಲ ಬಸ್‌ಗಳನ್ನು ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹುಣಸಗಿ ರಸ್ತೆಯಲ್ಲಿರುವ ಅಂಜುಮನ್ ಶಿಕ್ಷಣ ಸಂಸ್ಥೆಯಡಿ ಹಲವು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಕೆಲವು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬರುತ್ತಾರೆ. ಅವರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಕೋರಿಕೆ ಮೇರೆಗೆ ಬಸ್ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಕೆಲ ಬಸ್‌ಗಳು ಶಿಕ್ಷಣ ಸಂಸ್ಥೆ ಬಳಿ ನಿಲುಗಡೆ ಮಾಡದೆ ಅಂಬೇಡ್ಕರ್ ವೃತ್ತದಲ್ಲಿ ನಿಲ್ಲಿಸುತ್ತಾರೆ. ಅಲ್ಲಿಂದ ಶಿಕ್ಷಣ ಸಂಸ್ಥೆಗೆ 3 ಕಿ.ಮೀ. ದೂರವಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಯಚೂರು ಜಿಲ್ಲೆಯ ಮಸ್ಕಿ ಘಟಕದ ಬಸ್ ವಿದ್ಯಾರ್ಥಿಗಳು ನಿಲುಗಡೆಗೆ ಕೋರಿದರೂ ನಿಲ್ಲಿಸದಿರುವುದನ್ನು ಖಂಡಿಸಿ ಬಸ್ ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಿರ್ವಾಹಕ ಸಮರ್ಪಕವಾಗಿ ಉತ್ತರಿಸದಿದ್ದಾಗ ಬಸ್ ಮುಂದೆ ಪ್ರತಿಭಟನೆ ನಡೆಸಲಾಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ್ ಪೊಲೀಸರು ಮತ್ತು ಸಾರಿಗೆ ಘಟಕದ ಟ್ರಾಫಿಕ್ ಕಂಟ್ರೋಲರ್, ಇನ್ನು ಮುಂದೆ ಈ ರೀತಿ ಪುನಾರವರ್ತನೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈಬಿಡಲಾಯಿತು.

ಅಂಜುಮನ್ ಶಿಕ್ಷಣ ಸಂಸ್ಥೆ ಅಬ್ದಲರಜಾಕ ಮನಗೂಳಿ, ಮುಖಂಡರಾದ ಶಫೀಕ್ ಮುರಾಳ, ಶಫೀಕ್ ಇನಾಮದಾರ, ಖಾಲಿದ ಲಾಹೋರಿ, ಸಮೀವುಲ್ಲಾ ಅರಬ, ಮಹೇಶ ಚಲವಾದಿ, ಅಜೀಜ್ ಮುಲ್ಲಾ ಸೇರಿ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *