ನಗರದಲ್ಲಿ ಸಜ್ಜೆ ರೊಟ್ಟಿ ಸದ್ದು

ವಿಜಯಪುರ: ಜಿಲ್ಲೆ ಖ್ಯಾತ ಪ್ರತಿಭೆ ಸುನೀಲಕುಮಾರ ಸುಧಾಕರ ರಚಿಸಿದ ಮಟಾಶ್ ಚಿತ್ರ ಸಜ್ಜಿ ರೊಟ್ಟಿ ಚವಳಿಕಾಯಿ ಗೀತೆ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನೆರವೇರಿತು.

ನಗರದ ಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಎಸ್.ಡಿ. ಅರವಿಂದ ಮಾತನಾಡಿ, ವಿಜಯಪುರಿಗರ ಪ್ರೀತ್ಯಾಧಾರಗಳಿಗೆ ನಾವು ಮನ ಸೋತಿದ್ದೇವೆ. ಇಲ್ಲಿರುವ ಚಿತ್ರಪ್ರೇಮಿಗಳು ನಮಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಚಿತ್ರೀಕರಣಕ್ಕೆ ಬಂದಾಗ ಇಲ್ಲಿರುವ ಸ್ಮಾರಕಗಳನ್ನು ನಾವು ಚಿತ್ರದಲ್ಲಿ ಕಥೆಗೆ ತಕ್ಕಂತೆ ಬಳಸಿಕೊಂಡಿದ್ದೇವೆ. ಚಿತ್ರದ ಕಥೆ ನೋಟ್‌ಬ್ಯಾನ್ ಸಂದರ್ಭವನ್ನು ಒಳಗೊಂಡಿದೆ. ಇಂತಹ ಕಥೆಗೆ ಸಂಬಂಧಪಟ್ಟ ಹಾಡನ್ನು ವಿಜಯಪುರದಲ್ಲಿ ಬಿಡುಗಡೆ ಮಾಡಲು ಸಂತೋಷವೆನಿಸುತ್ತದೆ ಎಂದರು.

ಉತ್ತರ ಕರ್ನಾಟಕ ಭಾಷಾ ಸೊಗಡಿನ ಗೀತೆಯನ್ನು ಚಿತ್ರಕ್ಕೆ ಬಳಸಬೇಕು. ಹಾಗೇ ಈ ಗೀತೆಯನ್ನು ಇದೇ ಊರಿನವರ ಕಡೆಯಿಂದ ಬರೆಯಿಸಬೇಕೆಂದು ಆಸೆ ಪಟ್ಟಿದ್ದೆ. ಹಾಗಾಗಿ ನಾವು ಸುನೀಲಕುಮಾರ ಸುಧಾಕರ ಅವರನ್ನು ಕೇಳಿಕೊಂಡಾಗ ಅವರು ಒಂದೇ ದಿನದಲ್ಲಿ ಹಾಡು ಬರೆದು ಕೊಟ್ಟಿದ್ದಾರೆ. ಅವರ ಸಾಹಿತ್ಯಕ್ಕೆ ಪುನೀತ್ ರಾಜಕುಮಾರ್ ಧ್ವನಿಗೂಡಿಸಿದ್ದು, ಈ ಚಿತ್ರದ ಯಶಸ್ವಿಗೆ ತಮ್ಮೆಲ್ಲರ ಸಹಕಾರ ಬೇಕೆಂದರು. ಕಾರ್ಯಕ್ರಮದಲ್ಲಿಯೇ ಚಿತ್ರನಟ ಗೌತಮ್ ಎಚ್.ಸಿ. ಅವರ ಜನ್ಮದಿನ ಆಚರಿಸಲಾಯಿತು. ಸಹ ನಿರ್ದೇಶಕ ಮಲ್ಲಿಕಾರ್ಜುನ, ರುದ್ರಪ್ಪ ಮಣೂರ, ರೂಪಾಂಜಲಿ ಬಡಿಗೇರ, ಶ್ರೀಕಾಂತ ಮಣೂರ, ಉಮೇಶ ಸುರೇಬಾನ್, ಗೀತ ರಚನೆಕಾರ ಸುನೀಲಕುಮಾರ ಸುಧಾಕರ, ನಾಯಕಿ ಐಶ್ವರ್ಯ ಸಿಂಧೋಗಿ, ಸಮರ್ಥ ನರಸಿಂಹರಾಜು, ಗಣೇಶ ರಾಜ್, ರವಿ ಕಿರಣ, ಅಮೋಘ ರಾಹುಲ್, ಸಿದ್ದು ಎರಲಬನ್ನಿಕೊಡು ಇತರರಿದ್ದರು.

ಚಿತ್ರ ತಂಡದಿಂದ ಬೀದಿ ನಾಟಕ: ಸಜ್ಜಿ ರೊಟ್ಟಿ ಚವಳಿಕಾಯಿ ದುಡ್ಡಿಗೆ ಸೇರ್ ಬದನಿಕಾಯಿ’ ಗೀತೆಯನ್ನು ಚಿತ್ರ ತಂಡದ ಸದಸ್ಯರು ಬೀದಿ ನಾಟಕದ ಮೂಲಕ ಹಾಡಿ ಕುಣಿದು ಕುಪ್ಪಳಿಸುವ ಮೂಲಕ ಜನಮನ ಸೆಳೆದರು. ನಗರದ ಪ್ರಮುಖ ವೃತ್ತಗಳಲ್ಲಿ ಹಲಗೆ ಬಾರಿಸುತ್ತ ಸಂಚರಿಸಿದರು. ಐತಿಹಾಸಿಕ ಗೋಳಗುಮ್ಮಟ ಆವರಣದಿಂದ ಹಾಡಿನ ಪ್ರಚಾರ ಆರಂಭಿಸಲಾಯಿತು. ಹಾಡಿಗೆ ಅತ್ಯುತ್ತಮ ಹೆಜ್ಜೆ ಹಾಕಿದವರಿಗೆ ಟಿ ಶರ್ಟ್ ಮತ್ತು ಹೂಗುಚ್ಛ ನೀಡಲಾಯಿತು. ಲಂಬಾಣಿ ಕಲಾವಿದರ ವಿಶೇಷ ನೃತ್ಯ ಗಮನ ಸೆಳೆಯಿತು. ಕಂದಗಲ್ಲ ಹನುಮಂತರಾಯ ರಂಗಮಂದಿರ ಆವರಣ, ಬಿಎಲ್‌ಡಿಇ ರಸ್ತೆ, ಗೋದಾವರಿ ಹೋಟೆಲ್ ಆವರಣ, ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನ ಅಂಗಳದಲ್ಲಿ ಬೀದಿ ನಾಟಕ ಮತ್ತು ನೃತ್ಯ ಪ್ರದರ್ಶನ ನಡೆಯಿತು.