ಟಿವಿ, ಮೊಬೈಲ್‌ನಿಂದ ಮಕ್ಕಳಿಗೆ ದೂರವಿರಿಸಿ

ವಿಜಯಪುರ: ಇಂದಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಹಾಗೂ ಟಿವಿ ದಾಸರಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಮಾನಸಿಕ ರೋಗ ತಜ್ಞೆ ಪಲ್ಲವಿ ಅಡಿಗ ಹೇಳಿದರು.
ನಗರದ ಶ್ರೀತ್ರಿವಿಕ್ರಮ ದೇವಸ್ಥಾನದಲ್ಲಿ ಶಿಕ್ಷಣ ಚೇತನ ಸಂಸ್ಥೆ ವತಿಯಿಂದ ಈಚೆಗೆ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಮೊಬೈಲ್ ಬಳಸುವುದು ಸರಿಯಲ್ಲ. ಅದರಿಂದ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದ್ದರಿಂದ ಮೊಬೈಲ್, ಟಿವಿಯಿಂದ ಮಕ್ಕಳನ್ನು ದೂರವಿರಿಸುವುದು ಅವಶ್ಯ ಎಂದು ಪಾಲಕರಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಗೋಪಾಲ ನಾಯಕ ಮಾತನಾಡಿ, ಸಂಸ್ಕೃತ ಕಲಿಕೆಗೆ ವಿದ್ಯಾರ್ಥಿಗಳು ಸಾಕಷ್ಟು ಮುಂದೆ ಬರುತ್ತಿದ್ದಾರೆ. ಆದರೆ ಶಿಕ್ಷಕರ ಕೊರತೆ ಎದುರಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಗಮನಹರಿಸಿ ಸಂಸ್ಕೃತ ಶಿಕ್ಷಕರ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
ಹತ್ತು ದಿನಗಳ ಕಾಲ ನಡೆದ ಶಿಬಿರದಲ್ಲಿ ಸಂಸ್ಕೃತ ಸಂಭಾಷಣೆ, ಹಿಂದಿ, ಇಂಗ್ಲಿಷ್, ಕನ್ನಡ ಸಂಭಾಷಣೆ ಹಾಗೂ ವ್ಯಾಕರಣ, ಚಿತ್ರಕಲೆ, ಸಂಗೀತ, ಯೋಗ, ನಾಟಕ, ಅಣಕು, ಸಾಮಾನ್ಯ ಜ್ಞಾನ, ಮನರಂಜನೆ, ರಂಗೋಲಿ ಇನ್ನಿತರ ಬಗ್ಗೆ ಕಲಿಸಲಾಯಿತು.
ನಗರದ ವಿವಿಧ ಬಡಾವಣೆಗಳಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ನ್ಯಾಯವಾದಿ ನೀಲಕಂಠ ವಾಲೀಕಾರ, ಪ್ರೊ.ಅನಂತ ಪಾಟೀಲ, ಪಂಡಿತ ವೇದನಿಧಿ ಆಚಾರ್ಯ, ಪ್ರೊ. ಆರ್.ಜಿ.ಅಂಬಲಿ, ಪ್ರೊ.ಸಂಜೀವ ದೇಶಪಾಂಡೆ, ನಾರಾಯಣ ಬಾಬಾನಗರ, ಶ್ರೀದೇವಿ ದೇಶಪಾಂಡೆ, ಅರ್ಚನಾ ಉಮರ್ಜಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *