ಮಧುಮೇಹದ ಬಗ್ಗೆ ನಿರ್ಲಕ್ಷ್ಯ ಸಲ್ಲ

ವಿಜಯಪುರ: ಮಧುಮೇಹದ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಆರೋಗ್ಯದಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಾಪ್ಸೆ ಹೇಳಿದರು.
ನಗರದ ಶ್ರೀ ತುಳಸಿ ಗಿರೀಶ ಮಧುಮೇಹ ಆಸ್ಪತ್ರೆಯಲ್ಲಿ ವಿಜಯವಾಣಿ- ದಿಗ್ವಿಜಯ ಸಹಯೋಗದಲ್ಲಿ ವಿಶ್ವ ವೈದ್ಯರ ದಿನಾಚರಣೆ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಮಧುಮೇಹ- ಹೃದಯರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರೋಗಿಗಳು ಮಧುಮೇಹದ ಬಗ್ಗೆ ತಾತ್ಸಾರದಿಂದ ಕಾಣದೇ ಅದನ್ನು ಸೂಕ್ತ, ನುರಿತ ವೈದ್ಯ ತಜ್ಞರ ಬಳಿ ತೋರಿಸಿಕೊಳ್ಳಬೇಕು. ಇಲ್ಲದಿದ್ದರೆ ಕಿಡ್ನಿ, ಕಣ್ಣು, ಹೃದಯ ಇನ್ನಿತರ ಅಂಗಗಳ ಮೇಲೆ ಹಾನಿ ಉಂಟು ಮಾಡುವುದಲ್ಲದೇ ಜೀವಹಾನಿಗೂ ಕಾರಣವಾಗಲಿದೆ ಎಂದು ಸಲಹೆ ನೀಡಿದರು.
ಕಳೆದ ಬಾರಿ ವಿಜಯವಾಣಿ-ದಿಗ್ವಿಜಯ ಸಹಯೋಗದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಅದಕ್ಕೆ ಸಾಕಷ್ಟು ಸ್ಪಂದನೆ ಸಿಕ್ಕಿತ್ತು. ಅದರಂತೆ ಈ ವರ್ಷವೂ ಆರೋಗ್ಯ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಎಲ್ಲ ವರ್ಗದ ಜನರಿಗೂ ವೈದ್ಯಕೀಯ ಸೇವೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ತುಳಸಿ ಗಿರೀಶ ಮಧುಮೇಹ ಆಸ್ಪತ್ರೆ ವೈದ್ಯ ಡಾ. ಬಾಬು ರಾಜೇಂದ್ರ ನಾಯಿಕ ಮಾತನಾಡಿ, ಇಂದಿನ ದಿನಗಳಲ್ಲಿ ಮಧುಮೇಹ ಜಾಗತಿಕ ರೋಗವಾಗಿ ಹರಡುತ್ತಿದೆ. ದೇಶದಲ್ಲಿ ಶೇ.20 ರಷ್ಟು ಜನರು ಮಧುಮೇಹಿಗಳಾಗಿದ್ದಾರೆ. ಆರೋಗ್ಯದಲ್ಲಿನ ಏರುಪೇರು, ಬದಲಾದ ಆಹಾರ ಪದ್ಧತಿ ಅದಕ್ಕೆ ಪ್ರಮುಖ ಕಾರಣವಾಗಿದೆ. ವಿಶ್ವದಲ್ಲಿಯೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಮೊದಲ ಸ್ಥಾನದಲ್ಲಿ ನಮ್ಮ ದೇಶವಿರುವುದು ವಿಷಾದದ ಸಂಗತಿ ಎಂದರು.
ಮಧುಮೇಹ ನಿಯಂತ್ರಣಕ್ಕೆ ಔಷಧ, ಚಿಕಿತ್ಸೆ ಇದೆ. ಆದರೆ ಅದನ್ನು ಸಂಪೂರ್ಣ ನಿವಾರಣೆಗೆ ಇನ್ನು ಚಿಕಿತ್ಸೆಗಳು ಬಂದಿಲ್ಲ. ಅದಕ್ಕಾಗಿ ಅನೇಕ ಸಂಶೋಧನೆಗಳು ನಡೆಯುತ್ತಿದೆ. ದೇಶದ ಸಂಪತ್ತಿನ ಶೇ.20 ರಷ್ಟು ವೆಚ್ಚವನ್ನು ಆರೋಗ್ಯಕ್ಕಾಗಿ ವ್ಯಯಿಸಲಾಗುತ್ತಿದೆ. ರೋಗ ರುಜಿನ ಬರುವ ಮುನ್ನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ರೋಗಿಗಳ ದೇಶ ಎನಿಸಿಕೊಳ್ಳದೇ ಸದೃಢ, ಸಮರ್ಥ, ಬಲಾಢ್ಯ ರಾಷ್ಟ್ರವಾಗಬೇಕಾದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕಾಗುತ್ತದೆ ಅಭಿಪ್ರಾಯ ವ್ಯಕ್ತಪಡಿಸಿದರು.
‘ವಿಜಯವಾಣಿ’ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ್ ಪ್ರಾಸ್ತಾವಿಕ ಮಾತನಾಡಿ, ಯೋಗ, ಆರೋಗ್ಯ, ಪರಿಸರ ಹೀಗೆ ಅನೇಕ ಸಾಮಾಜಿಕ ಕಳಕಳಿ ಬಗ್ಗೆ ಪತ್ರಿಕೆ ಮೂಲಕ ಓದುಗರನ್ನು ಗಮನ ಸೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ನುರಿತ ವೈದ್ಯ ತಜ್ಞರು ಇದ್ದರೂ ಮಹಾರಾಷ್ಟ್ರದ ಮೀರಜ್, ಸೋಲಾಪುರ ಇನ್ನಿತರ ಕಡೆಗಳಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಹೋಗುತ್ತಿದ್ದಾರೆ. ಅಲ್ಲಿ ಹೋಗದೆ ಸ್ಥಳೀಯವಾಗಿಯೇ ಗುಣಮಟ್ಟದ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ರೋಗಿಗಳು ನಿರ್ಧರಿಸಬೇಕು ಎಂದು ತಿಳಿಸಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಸಂಪತ್ ಗುಣಾರಿ, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಈರಣ್ಣ ಧಾರವಾಡಕರ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕಡೆಗಳಿಂದ ರೋಗಿಗಳು ಆಗಮಿಸಿ, ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

Leave a Reply

Your email address will not be published. Required fields are marked *