ಇಂದು ಅಭ್ಯರ್ಥಿಗಳ ಭವಿಷ್ಯ ಬಯಲು

ಪರಶುರಾಮ ಭಾಸಗಿ

ವಿಜಯಪುರ: ಕಳೆದೊಂದು ತಿಂಗಳಿಂದ ತೀವ್ರ ಕುತೂಹಲ ಹೆಚ್ಚಿಸಿದ್ದ ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲು ಕೆಲವೇ ಗಂಟೆಗಳು ಬಾಕಿ ಇದ್ದು, ವಿಜಯಲಕ್ಷ್ಮಿಯನ್ನು ಒಲಿಸಿಕೊಳ್ಳುವ ಅಭ್ಯರ್ಥಿ ಯಾರೆಂಬ ಕೌತುಕ ಮತದಾರರಲ್ಲಿ ಮನೆ ಮಾಡಿದೆ.
ಏಪ್ರಿಲ್ 23ರಂದು 12 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದ ಜಿಲ್ಲೆ ಮತದಾರ ಪ್ರಭುಗಳು ಇದೀಗ ಫಲಿತಾಂಶಕ್ಕಾಗಿ ಕಾತರರಾಗಿದ್ದಾರೆ. ತಾವು ಮತ ಹಾಕಿದ ಅಭ್ಯರ್ಥಿಯ ಸೋಲು-ಗೆಲುವಿನ ನೈಜತೆ ಅರಿಯಲು ಕುತೂಹಲ ಭರಿತರಾಗಿದ್ದಾರೆ. ಎಲ್ಲರ ಚಿತ್ತ ಈಗ ಸೈನಿಕ ಶಾಲೆಯತ್ತ ನೆಟ್ಟಿದೆ.

ಅಭ್ಯರ್ಥಿಗಳ ಎದೆಯಲ್ಲಿ ಢವಢವ: ಗರಿಷ್ಠ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲೂ ಬಿರು ಬಿಸಿಲು ಲೆಕ್ಕಿಸದೆ ಭರ್ಜರಿ ಪ್ರಚಾರ ನಡೆಸಿದ್ದ ಅಭ್ಯರ್ಥಿಗಳ ಎದೆಯಲ್ಲೀಗ ಢವಢವ ಶುರುವಾಗಿದೆ. ಹಲವು ಸ್ಟಾರ್ ಪ್ರಚಾರಕರನ್ನು ಕರೆಯಿಸಿ ಮತದಾರರನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಲಾಗಿತ್ತು. ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿನಿತಾರೆಯರಾದ ತಾರಾ ಅನುರಾಧಾ, ಉಪೇಂದ್ರ ಮುಂತಾದ ಘಟಾನುಘಟಿಗಳು ಬಿರುಸಿನ ಪ್ರಚಾರ ನಡೆಸಿದ್ದರು. ಮತದಾನದ ಹಿಂದಿನ ದಿನದವರೆಗೂ ಅಭ್ಯರ್ಥಿಗಳು ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ್ದರು. ಇದೀಗ ಆ ಶ್ರಮ ಎಷ್ಟರ ಮಟ್ಟಿಗೆ ಫಲಿಸಲಿದೆ ಎಂಬ ತಳಮಳ ಶುರುವಾಗಿದೆ.
ಕ್ಷೇತ್ರಾದ್ಯಂತ ಕಂಡಕಂಡವರಿಗೆಲ್ಲ ಕೈ ಮುಗಿದು ಮತ ಕೇಳುತ್ತ ಹಮ್ಮಿಕೊಳ್ಳುತ್ತಿದ್ದ ಪ್ರವಾಸ, ಆರೋಪ-ಪ್ರತ್ಯಾರೋಪ, ಕಾರ್ಯಕರ್ತರನ್ನು ಸಂಬಾಳಿಸಬೇಕೆಂಬ ಜಂಜಾಟ, ಖರ್ಚುವೆಚ್ಚದ ತಲೆ ಬಿಸಿ, ಚುನಾವಣೆ ನೀತಿ ಸಂಹಿತೆಯ ಕಟ್ಟುಪಾಡುಗಳಿಲ್ಲದೆ ನಿರುಮ್ಮಳವಾಗಿದ್ದ ಅಭ್ಯರ್ಥಿಗಳು ಈಗ ಮತ್ತೆ ಕಣದಲ್ಲಿ ಕಾಣಿಸಿಕೊಂಡಿದ್ದಾರೆ.
ಮಧ್ಯಾಹ್ನದ ಹೊತ್ತಿಗೆ ಕುತೂಹಲಕ್ಕೆ ತೆರೆ: ಬೆಳಗ್ಗೆ 8 ಕ್ಕೆ ಮತ ಎಣಿಕೆ ಕಾರ್ಯ ಆರಂಭಿಸಲಾಗುತ್ತಿದ್ದು, ಮಧ್ಯಾಹ್ನ ಇಲ್ಲವೆ ಸಂಜೆಯೊಳಗೆ ಫಲಿತಾಂಶ ಪ್ರಕಟಗೊಳ್ಳಲಿದೆ. ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 17 ಸುತ್ತು, ದೇವರಹಿಪ್ಪರಗಿ 18, ಬಸವನಬಾಗೇವಾಡಿ 17, ಬಬಲೇಶ್ವರ 18, ವಿಜಯಪುರ ನಗರ 19 ಸುತ್ತು, ನಾಗಠಾಣ 22, ಇಂಡಿ 20 ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರದ ಇವಿಎಂಗಳ ಮತ ಎಣಿಕೆ 19 ಸುತ್ತಿನಲ್ಲಿ ನಡೆಯಲಿದೆ. ಅದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಪೂರ್ಣಗೊಳಿಸಿದೆ.
ಫಲಿತಾಂಶ ಹೊರಬೀಳುತ್ತಿದ್ದಂತೆ ಅಭ್ಯರ್ಥಿಗಳು ಭರ್ಜರಿ ವಿಜಯೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದಾರಾದರೂ ನಿಷೇಧಾಜ್ಞೆ ಅಡ್ಡಿಯಾಗುವ ಸಾಧ್ಯತೆ ಇದೆ. ಏನೇ ಆಗಲಿ ಈ ಸಲ ಗುಲಾಲು ಹಾರಿಸೋದು ನಾವೇ….ಎಂದು ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.


ನನ್ನ ಗೆಲುವು ನಿಶ್ಚಿತ. ಯಾವುದೇ ರೀತಿ ಲೆಕ್ಕಾಚಾರ ಹಾಕಿದರೂ ಗೆಲುವು ಕಟ್ಟಿಟ್ಟ ಬುತ್ತಿ. ಅಂದಾಜು 10 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಮತದಾರರ ಆಶೀರ್ವಾದ ನಮ್ಮ ಮೇಲಿರುವುದು ಪಕ್ಕಾ.
ಡಾ.ಸುನೀತಾ ಚವಾಣ್, ಮೈತ್ರಿ ಅಭ್ಯರ್ಥಿ


ಮತದಾನೋತ್ತರ ಸಮೀಕ್ಷೆ ಪ್ರಕಾರ ದೇಶದಲ್ಲಿ 300ಕ್ಕೂ ಅಧಿಕ ಸ್ಥಾನಗಳು ಬಿಜೆಪಿಗೆ ಲಭ್ಯವಾಗಲಿವೆ. ವಿಜಯಪುರ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಕಟ್ಟಿಟ್ಟ ಬುತ್ತಿ. ಜೆಡಿಎಸ್‌ಗೆ ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲ. ಹೀಗಾಗಿ ಜಿಲ್ಲೆ ಜನ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಆಶೀರ್ವದಿಸಿದ್ದಾರೆ.
ರಮೇಶ ಜಿಗಜಿಣಗಿ, ಬಿಜೆಪಿ ಅಭ್ಯರ್ಥಿ

Leave a Reply

Your email address will not be published. Required fields are marked *