ಸಾಮೂಹಿಕ ಸ್ವಯಂ ನಿವೃತ್ತಿಗೆ ನಿರ್ಧಾರ

ವಿಜಯಪುರ: ಕೃಷಿ ಇಲಾಖೆ ಮೇಲಧಿಕಾರಿಗಳ ವಿಪರೀತ ಕೆಲಸದ ಒತ್ತಡದಿಂದಾಗಿ ಜಿಲ್ಲೆಯ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳು ಸಾಮೂಹಿಕವಾಗಿ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ.

ಇಲ್ಲಿನ ಸರ್ಕಾರಿ ನೌಕರರ ಭವನ ಶುಕ್ರವಾರ ಸಭೆ ಸೇರಿದ ನಂತರ ಕೃಷಿ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಅಧಿಕಾರಿಗಳು, 30 ರಿಂದ 38 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತ ಬಂದಿದ್ದೇವೆ. ಕಾರ್ಯ ಒತ್ತಡದಿಂದಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂಥಹ ಆರೋಗ್ಯ ಸಮಸ್ಯೆಗಳು ಅಧಿಕಾರಿಗಳಿಗೆ ಕಾಡುತ್ತಿದೆ ಎಂದು ಅಧಿಕಾರಿಗಳು ದೂರಿದರು.

ಪ್ರಸ್ತುತ ಪ್ರತಿಯೊಬ್ಬ ಅಧಿಕಾರಿ 1 ರಿಂದ 6 ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ರೈತರಿಗೆ ತಾಂತ್ರಿಕತೆ ಬಗ್ಗೆ ಮಾಹಿತಿ ತಿಳಿಸುವುದು. ಕೃಷಿ ಉಪಕರಣ, ಬೀಜ ಕೀಟನಾಶಕ ವಿತರಣೆ, ಬೆಳೆ ಸಮೀಕ್ಷೆ, ಮಣ್ಣು ಪರೀಕ್ಷೆ ಅಲ್ಲದೇ ಬೇರೆ ಬೇರೆ ಇಲಾಖೆಗಳ ಕೆಲಸಗಳನ್ನು ಮಾಡಬೇಕಾಗಿದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಳೆದ 1987ರಿಂದ ಕ್ಷೇತ್ರ ಮಟ್ಟದ ಅಧಿಕಾರಿಗಳ ನೇಮಕ ಮಾಡಿಕೊಂಡಿಲ್ಲ. ಇದರಿಂದ ಕೆಲಸದ ಒತ್ತಡ ಹೆಚ್ಚಾಗುತ್ತಿದ್ದು, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಎ.ಬಿ. ಹೂಗಾರ, ಎ.ಸಿ. ಚಲವಾದಿ, ಎಸ್.ಸಿ. ಕಮತಗಿ, ಎಂ.ಆರ್. ರುಕುಂಪುರ, ಆರ್.ಬಿ. ಕುಲಕರ್ಣಿ, ಎ.ಬಿ. ಪಾಟೀಲ, ಎಸ್.ಡಿ. ಜತ್ತಿ, ಸಿ.ಕೆ. ಗುಂದವಾನ, ವೈ.ಡಿ. ಗಂವಾರಿ, ಬಿ.ಟಿ. ವಾಗ್ಮೋರೆ, ಸಿ.ಟಿ. ಪವಾರ, ಡಿ.ಎಸ್. ಶಿವಶರಣ, ಎಸ್.ಡಿ. ತೊರವಿ, ಸಿ.ಸಿ.ಘಂಟೆಪ್ಪಗೋಳ ಮುಂತಾದವರು ಇದ್ದರು.