ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನ ರಕ್ಷಣೆ

ವಿಜಯಪುರ: ಜಿಲ್ಲಾದ್ಯಂತ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದು ಹಳ್ಳಕೊಳ್ಳಗಳು ಹರಿಯುತ್ತಿವೆ. ತಾಲೂಕಿನ ದ್ಯಾಬೇರಿ-ಜಂಬಗಿ ಬಳಿಯ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕ್ ಸವಾರನನ್ನು ಯುವಕರು ರಕ್ಷಿಸಿದ್ದಾರೆ.
ದ್ಯಾಬೇರಿಯಿಂದ ದನವಾಡಹಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿಯ ಹಳ್ಳಕ್ಕೆ ನಿರ್ಮಿಸಿರುವ ಸೇತುವೆ ಮೇಲೆ ಭಾರಿ ನೀರು ಹರಿಯುತ್ತಿರುವುದನ್ನು ಲೆಕ್ಕಿಸದೆ ದನವಾಡಹಟ್ಟಿ ಗ್ರಾಮದ ಸವಾರ ಪಿರಾಜೀ ದನವಡೆ (32) ಬೈಕ್ ಚಲಾಯಿಸಿದ್ದರಿಂದ ಸ್ವಲ್ಪ ದೂರದವರೆಗೆ ಕೊಚ್ಚಿಕೊಂಡು ಹೋಗಿದ್ದರು. ಸ್ಥಳೀಯ ಯುವಕರು ಗಮನಿಸಿ ಅವರನ್ನು ರಕ್ಷಣೆ ಮಾಡಿದ್ದಾರೆ. ಬೈಕ್ ಮಾತ್ರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಹಳ್ಳದಲ್ಲಿ ಗಿಡಗಂಟಿಗಳಲ್ಲಿ ಸಿಲುಕಿದ್ದ ಪಿರಾಜೀ ದನವಡೆ ಅವರ ಮೈ ಮೇಲೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಲ್ಲದೆ, ಬಸವನಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದ ಕೆಲವು ಮನೆಗಳಲ್ಲಿ ನೀರು ನುಗ್ಗಿ ದವಸ ಧಾನ್ಯ, ಇನ್ನಿತರ ಸಾಮಗ್ರಿಗಳು ನಾಶಗೊಂಡಿವೆ. ಕೆಲವು ಭಾಗಗಳಲ್ಲಿ ಹೊಲಗಳಿಗೆ ಅಪಾರ ನೀರು ನುಗ್ಗಿ ತೊಗರಿ ಸೇರಿ ಇನ್ನಿತರ ಬೆಳೆಗಳು ಹಾನಿಯಾಗಿವೆ. ಗೊಳಸಂಗಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳು, ನಿವೇಶನಗಳಲ್ಲಿ ನೀರು ನುಗ್ಗಿದೆ. ವರುಣನ ಆರ್ಭಟ ಮುಂದುವರಿದರೆ ಮನೆಗಳು ಕುಸಿಯುವ ಭೀತಿ ಎದುರಾಗಿದೆ.

Leave a Reply

Your email address will not be published. Required fields are marked *