ಉತ್ತಮ ಬದುಕು ರೂಪಿಸಿಕೊಳ್ಳಿ

ವಿಜಯಪುರ: ಇಂದಿನ ಯುವ ಸಮುದಾಯವು ಸ್ವಚ್ಛತೆಗೆ ವಿಶೇಷ ಗಮನವನ್ನು ನೀಡುವ ಮೂಲಕ ಸ್ವಚ್ಛ ಬದುಕು ರೂಪಿಸಿಕೊಳ್ಳಲು ಮುಂದಾಗುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ವತಿಯಿಂದ ಸ್ವಚ್ಛಭಾರತ ಮಿಷನ್ ಯೋಜನೆಯಡಿಯಲ್ಲಿ ಸ್ವಚ್ಛಮೇವ ಜಯತೆ ಆಂದೋಲನದ ಅಂಗವಾಗಿ ಸ್ವಚ್ಛತೆ, ಜಲಸಂರಕ್ಷಣೆ, ಪರಿಸರ ಸಂರಕ್ಷಣೆ ಕುರಿತ ಶಾಲಾ-ಕಾಲೇಜು ಮಕ್ಕಳಿಗಾಗಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ವಚ್ಛತೆ ಕುರಿತ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸತ್ಯಮೇವ ಜಯತೆ ಘೋಷವಾಕ್ಯದಂತೆ ಸ್ವಚ್ಛ ಮೇವ ಜಯತೆಯ ಪರಿಕಲ್ಪನೆಯೊಂದಿಗೆ ಸ್ವಚ್ಛತೆಗೆ ವಿಶೇಷ ಗಮನ ನೀಡುವಂತೆ ಯುವ ಜನಾಂಗಕ್ಕೆ ಸಲಹೆ ನೀಡಿದ ಅವರು, ದೇಶ ಕಟ್ಟುವಲ್ಲಿ ಯುವ ಜನಾಂಗದ ಪಾತ್ರ ಮುಖ್ಯವಾಗಿದೆ. ವಿದ್ಯಾರ್ಥಿ ಜೀವನದ ಹಂತದ ಮನಸ್ಸುಗಳು ಸ್ವಚ್ಛವಾಗಿದ್ದರೆ ಅವರ ಬಾಹ್ಯ ಚಿಂತನೆಗಳು ಕಾರ್ಯಾತ್ಮಕ ಚಟುವಟಿಕೆಗಳು ಸ್ವಚ್ಛವಾಗಿರುತ್ತವೆ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಸ್ವಚ್ಛಭಾರತ ಮಿಷನ್ ಯೋಜನೆಯಡಿಯಲ್ಲಿ ಹಮ್ಮಿಕೊಂಡಿರುವ ಮೂಲ ಉದ್ದೇಶ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವುದಾಗಿದೆ. ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ದೈನಂದಿನ ಚಟುವಟಿಕೆಯಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಂಡು ಹೋಗುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಆದ್ದರಿಂದ ಇಂತಹ ಉತ್ತಮ ಕಾರ್ಯಕ್ರಮಗಳಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿ ಅದರ ಉದ್ದೇಶ ತಿಳಿದು ಸದೃಢ, ಸ್ವಚ್ಛ ದೇಶ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಪದವಿಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪೂಜಾರಿ, ಬೆಂಗಳೂರಿನಿಂದ ಆಗಮಿಸಿದ ಪ್ರೊಗ್ರಾಮರ್ ಅನಗಾ ಶ್ರೀಧರ, ಜಿಲ್ಲಾ ನೆರವು ಘಟಕದ ಅಧಿಕಾರಿ ಆಲಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಿಲ್ಲೆಯ ಎಲ್ಲ ಶಾಲೆ-ಕಾಲೇಜುಗಳಿಂದ ಒಟ್ಟು 700 ವಿದ್ಯಾರ್ಥಿಗಳು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದ ಸೆಂಟ್ ಜೋಸ್ೆ ಸ್ಕೂಲ್ 10 ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ದರಬಾರ ಪಿಯು ಕಾಲೇಜು 7 ಸಾವಿರ ರೂ. ಹಾಗೂ ತೃತೀಯ ಸ್ಥಾನ ಪಡೆದ ಶ್ರೀ ಸಾಯಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ನಗದು ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *