ಜಲಶಕ್ತಿ ಅಭಿಯಾನಕ್ಕೆ ಒತ್ತು ನೀಡಿ

ವಿಜಯಪುರ: ಹನಿ ನೀರಿನ ಸದ್ಬಳಕೆ, ಮಳೆ ಕೊಯ್ಲುಗೆ ಪ್ರೋತ್ಸಾಹ ಹೀಗೆ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡು ಜಲಶಕ್ತಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಜಯಪುರ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ಇಂಡಿ ಭಾಗದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲು ಒತ್ತು ನೀಡಲಾಗಿದೆ ಎಂದು ಜಲಶಕ್ತಿ ಅಭಿಯಾನದ ಕೇಂದ್ರ ಸರ್ಕಾರದ ನೋಡೆಲ್ ಅಧಿಕಾರಿ ಅಜಯ್ ಶ್ರೀವಾತ್ಸವ್ ಹೇಳಿದರು.
ಇಲ್ಲಿನ ನೂತನ ಪ್ರವಾಸಿ ಮಂದಿರದಲ್ಲಿ ಜಲಶಕ್ತಿ ಅಭಿಯಾನದ ಕುರಿತು ಬುಧವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹನಿ ನೀರು ಕೂಡ ಪ್ರಮುಖವಾಗಿದ್ದು, ಅದರ ಸದುಪಯೋಗ ಆಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಲಶಕ್ತಿ ಅಭಿಯಾನ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ಮಟ್ಟದ ಅಧಿಕಾರಿ, ನೀರಾವರಿ ವಿಷಯದಲ್ಲಿ ತಾಂತ್ರಿಕ ಪರಿಣಿತಿ ಹೊಂದಿದ ಓರ್ವ ಸದಸ್ಯನನ್ನು ಒಳಗೊಂಡ 250 ಕ್ಕೂ ಹೆಚ್ಚು ತಂಡಗಳನ್ನು ಕೇಂದ್ರ ಸರ್ಕಾರ ಈ ಯೋಜನೆ ಅಧ್ಯಯನ ಕಾರ್ಯಕ್ಕೆ ನಿಯೋಜನೆ ಮಾಡಿದೆ ಎಂದು ತಿಳಿಸಿದರು.
ಹನಿ ನೀರಿನ ಸದ್ಬಳಕೆಗಾಗಿ ಜಲ ಸಾಕ್ಷರತೆ ಅಭಿಯಾನ, ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಣೆ ಮಾಡಿ ಮಳೆ ಕೊಯ್ಲು ಪ್ರೋತ್ಸಾಹ, ವಾಟರ್ ಶೆಡ್ ನಿರ್ಮಾಣಕ್ಕೆ ಆದ್ಯತೆ ನೀಡುವುದು, ಕೊಳವೆಬಾವಿ ಮರುಪೂರಣಕ್ಕೆ ಪ್ರೋತ್ಸಾಹ, ಸಾಂಪ್ರದಾಯಿಕ ಜಲಮೂಲಗಳ ರಕ್ಷಣೆ ಹೀಗೆ ಐದು ಉದ್ದೇಶಗಳನ್ನು ಇರಿಸಿಕೊಂಡು ಈ ಅಭಿಯಾನ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.
ವಿಜಯಪುರ ಜಿಲ್ಲೆಯ ಸ್ಥಿತಿಗತಿ, ಪ್ರಸ್ತುತ ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡ ಶ್ರೀವಾತ್ಸವ್ ಅವರು, ಜಿಲ್ಲೆಯಲ್ಲಿ ಈಗಾಗಲೇ ಕೆಲವೊಂದು ಜಲ ಸಂರಕ್ಷಣೆಗೆ ಕೈಗೊಳ್ಳುವ ಕ್ರಮಗಳು ಜಾರಿಯಲ್ಲಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದರಂತೆ ರಾಜಸ್ತಾನ ಮಾದರಿಯಲ್ಲಿ ನೀರಿನ ಸದ್ಬಳಕೆಯ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಲ ಸಂರಕ್ಷಣೆಗೆ ಕ್ರಮಗಳನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಮಸ್ಯೆ ತೆರೆದಿಟ್ಟ ಜಿಲ್ಲಾಧಿಕಾರಿ: ವಿಜಯಪುರ ಜಿಲ್ಲೆ ಉತ್ಕೃಷ್ಣ ತೋಟಗಾರಿಕೆ ಬೆಳೆಗೆ ಹೆಸರುವಾಸಿಯಾಗಿದ್ದು, ಲಿಂಬೆ, ದ್ರಾಕ್ಷಿ ಬೆಳೆಯಲಾಗುತ್ತಿದೆ. ಹನಿ ನೀರಾವರಿ ಯೋಜನೆಗಳಡಿಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಾಗುತ್ತಿದೆ. ಆದರೆ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಕಳೆದ 12 ವರ್ಷಗಳಲ್ಲಿ 8 ಬರಗಳನ್ನು ಕಂಡಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಮಸ್ಯೆಯನ್ನು ತೆರೆದಿಟ್ಟರು.
ಇಂಡಿ ತಾಲೂಕಿನಲ್ಲಿ ಅತ್ಯಂತ ಭೀಕರ ಪರಿಸ್ಥಿತಿ ವಿದ್ದು, ನೀರಿನ ಸಮಸ್ಯೆ ತೀವ್ರವಾಗಿದೆ. ಅಲ್ಲಿ ಕೇವಲ 22 ಮಿ.ಮೀ ಮಳೆಯಾಗಿದೆ. ಭೀಮಾನದಿಗೂ ನೀರಿನ ಹರಿವಿಲ್ಲ . ಬಹುಹಳ್ಳಿ ಕುಡಿಯುವ ನೀರು ಯೋಜನೆಗೂ ಭೀಮಾನದಿಯಿಂದ ನೀರು ಲಭಿಸುತ್ತಿಲ್ಲ, ಅಲ್ಲದೆ ಆ ಭಾಗದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಕೆರೆ ತುಂಬುವ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ. ಅದರಿಂದ ರೈತರು ಕೊಂಚ ನೆಮ್ಮದಿ ಕಂಡಿದ್ದಾರೆ. ಅದರಿಂದಾಗಿ ತಿಕೋಟಾ, ಬಬಲೇಶ್ವರ ತಾಲೂಕಿನ ಗ್ರಾಮಗಳಿಗೆ ವರದಾನವಾಗಿದೆ ಎಂದು ವಿವರಿಸಿದರು.
ಇಂಡಿ ತಾಲೂಕಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಕೃಷಿ ಹೊಂಡ, ಹನಿ ನೀರಾವರಿಗೆ ಆದ್ಯತೆ ನೀಡಲಾಗಿದೆ. ಜಲಾನಯನ ಚಟುವಟಿಕೆಗೆ ಪ್ರಾತಿನಿದ್ಯತೆ ನೀಡಲಾಗಿದೆ. ಇಂಡಿ ತಾಲೂಕಿನಲ್ಲಿ 783 ಬೃಹತ್ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. 2019ರಲ್ಲಿ 310 ಕೃಷಿಹೊಂಡ ನಿರ್ಮಾಣಕ್ಕೆ ಬೇಡಿಕೆ ಇದೆ ಎಂದು ತಿಳಿಸಿದರು.
ಜಲಶಕ್ತಿ ಅಭಿಯಾನದ ಕೇಂದ್ರ ಸರ್ಕಾರದ ತಾಂತ್ರಿಕ ಸಲಹೆಗಾರ ರಾಕೇಶ್ ಶರ್ಮಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಶಿವಕುಮಾರ, ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ, ಪಾಲಿಕೆ ಆಯುಕ್ತ ಡಾ.ಔದ್ರಾಮ ಮೊದಲಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *