ಮತಪೆಟ್ಟಿಗೆ ಸೇರಿದ ಭವಿಷ್ಯ

ವಿಜಯಪುರ: ಕಳೆದೊಂದು ತಿಂಗಳಿನಿಂದ ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಗೆ ತೆರೆ ಬಿದ್ದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರದ ಪೈಕಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ರಾಜೀನಾಮೆಯಿಂದ ತೆರವಾದ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಸ್ಥಾನಕ್ಕೆ ಗುರುವಾರ ಮತದಾನ ನಡೆಯಿತು. ಬೆಳಗ್ಗೆ 8 ಕ್ಕೆ ಆರಂಭಗೊಂಡ ಮತದಾನ ಪ್ರಕ್ರಿಯೆ ಸಂಜೆ 4 ರವರೆಗೆ ಶಾಂತಿಯುತವಾಗಿ ನೆರವೇರಿತು.

ಜನರಿಂದ ಆಯ್ಕೆಯಾದ ಸ್ಥಳೀಯ ಸಂಸ್ಥೆಗಳ ಪ್ರಜ್ಞಾವಂತ ಮತದಾರರು ಮೇಲ್ಮನೆಗೆ ತಮ್ಮ ಪ್ರತಿನಿಧಿ ಯಾರು ಎಂಬುದನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಮತ ಪತ್ರ ಹಾಕುವ ಮೂಲಕ ಗೌಪ್ಯತೆ ಕಾಯ್ದುಕೊಂಡರು. ಹೀಗಾಗಿ ಕಣದಲ್ಲಿರುವ ಏಳು ಅಭ್ಯರ್ಥಿಗಳ ಪೈಕಿ ಮೇಲ್ಮನೆ ಪ್ರವೇಶಿಸುವ ನಾಯಕ ಯಾರು? ಎಂಬ ಕುತೂಹಲ ಹೆಚ್ಚಿಸಿದರು. ಮತದಾರರ ಮರ್ಮ ಅರಿಯಲು ಅವಳಿ ಜಿಲ್ಲೆ ನಾಯಕರು ಸೆ. 11 ರವರೆಗೆ ಕಾಯುವುದು ಅನಿವಾರ್ಯವಾಗಿದೆ. ಸಂಜೆ ಮತಪೆಟ್ಟಿಗೆಗಳೆಲ್ಲ ಡಿ- ಮಸ್ಟರಿಂಗ್ ಕೇಂದ್ರದತ್ತ ಸಾಗುತ್ತಿದ್ದಂತೆ ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ತಲ್ಲೀನರಾದರು.

ಚುರುಕಿನ ಮತದಾನ

ಅವಳಿ ಜಿಲ್ಲೆಯಲ್ಲಿ ನಗರ ಮತ್ತು ಹೋಬಳಿಗೊಂದರಂತೆ ಒಟ್ಟು 38 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬೆಳಗ್ಗೆ 8 ರಿಂದ ಆರಂಭಗೊಂಡ ಮತದಾನ ಸಂಜೆ 4 ರವರೆಗೆ ಸಾಂಗವಾಗಿ ನೆರವೇರಿತು. ಬೆಳಗ್ಗೆ 10.30ರವರೆಗೆ ಕೇವಲ ಶೇ. 9.36ರಷ್ಟಿದ್ದ ಮತದಾನ ಪ್ರಮಾಣ ಮಧ್ಯಾಹ್ನ 12 ರಷ್ಟೊತ್ತಿಗೆ ಶೇ. 55.40ರಷ್ಟಾಗಿತ್ತು. ಇದು ಮತದಾರರ ಉತ್ಸಾಹ ಎತ್ತಿ ತೋರಿಸಿತು. ಮಧ್ಯಾಹ್ನ 2ಕ್ಕೆ ಪ್ರತಿಶತಃ 90.84ರಷ್ಟು ಮತದಾರರು ಹಕ್ಕು ಚಲಾಯಿಸಿದ್ದರು. ಆ ಪೈಕಿ 3598 ಪುರುಷ ಹಾಗೂ 3839 ಮಹಿಳೆ ಮತದಾರರು ಹಕ್ಕು ಚಲಾಯಿಸಿದ್ದರು. ಸಂಜೆ 4 ರಷ್ಟೊತ್ತಿಗೆ ಶೇ. 99.07ರಷ್ಟು ಮತದಾನವಾಗುವ ಮೂಲಕ ಮತದಾನ ಪ್ರಕ್ರಿಯೆಗೆ ತೆರೆ ಎಳೆಯಲಾಯಿತು. ಪುರುಷ ಮತದಾರರ ಪೈಕಿ 59ಪುರುಷರು ಹಾಗೂ ಮಹಿಳಾ ಮತದಾರರ ಪೈಕಿ ಕೇವಲ 17 ಜನ ಮಾತ್ರ ಮತದಾನದಿಂದ ದೂರವುಳಿದರು. ಅವಳಿ ಜಿಲ್ಲೆಯ ಶಾಸಕರ ಪೈಕಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಶಿವಾನಂದ ಪಾಟೀಲ ಹಾಗೂ ಸಚಿವ ಎಂ.ಸಿ. ಮನಗೂಳಿ ಮತದಾನದಿಂದ ದೂರವುಳಿದರು.

ಬಿಗಿ ಭದ್ರತೆ

ಮತಗಟ್ಟೆ ಸುತ್ತ ಮುಂಜಾಗ್ರತೆ ಕ್ರಮವಾಗಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಗುರುತಿನ ಚೀಟಿ ಪರಿಶೀಲಿಸಿ ಭದ್ರತಾ ಸಿಬ್ಬಂದಿ ಕೇಂದ್ರದೊಳಗೆ ಹೋಗಲು ಅನುಮತಿ ನೀಡುತ್ತಿರುವುದು ಕಂಡು ಬಂತು. ಗ್ರಾಮೀಣ ಭಾಗದಿಂದ ಮತದಾರರನ್ನು ಕರೆತರಲು ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಹಿಳಾ ಮತದಾರರು ಕ್ರೂಸರ್​ಗಳಲ್ಲಿ ಹುರುಪಿನಿಂದ ಆಗಮಿಸಿ ಹಕ್ಕು ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಗೂಳಪ್ಪ ಶಟಗಾರ ಬೆಳಗ್ಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ವಿಜಯಪುರ ಜಿಪಂ ಆವರಣದಲ್ಲಿ ಬೆಂಬಲಿಗರೊಡನೆ ಮಾತುಕತೆಯಲ್ಲಿ ತಲ್ಲೀನರಾದರು. ಕಾಂಗ್ರೆಸ್ ಅಭ್ಯರ್ಥಿ ತರಾತುರಿಯಲ್ಲಿ ಭೇಟಿ ನೀಡಿ ಮುಂದಿನ ಕೇಂದ್ರಕ್ಕೆ ದೌಡಾಯಿಸಿದರು.

ಶೇ. 99.07ರಷ್ಟು ಮತದಾನ

ಅವಳಿ ಜಿಲ್ಲೆಯಲ್ಲಿ ಎಷ್ಟು ಮತದಾರರಿದ್ದಾರೆ ಎಂಬ ಮಾಹಿತಿ ಕೊನೇ ಕ್ಷಣದವರೆಗೂ ಗೊಂದಲ ಸೃಷ್ಟಿಸಿತು. ಚುನಾವಣೆಗೆ ಹಿಂದಿನ ದಿನದವರೆಗೂ 8237 ಮತದಾರರಿದ್ದಾರೆಂದಿದ್ದ ಚುನಾವಣೆ ಅಧಿಕಾರಿಗಳು ಮತದಾನದ ದಿನ ಆ ಸಂಖ್ಯೆಯನ್ನು 8187ಕ್ಕಿಳಿಸಿದರು. ಹೀಗಾಗಿ ಅಧಿಕಾರಿಗಳು ಮಾಹಿತಿ ಕಲೆ ಹಾಕುವಲ್ಲಿ ಎಡವಿದರೆ ಎಂಬ ಪ್ರಶ್ನೆ ಎದುರಾಯಿತು.

ಅವಳಿ ಜಿಲ್ಲೆಯಲ್ಲಿ 3999 ಪುರುಷ ಹಾಗೂ 4188 ಮಹಿಳೆ ಸೇರಿ ಒಟ್ಟು 8187 ಮತದಾರರಿದ್ದು ಆ ಪೈಕಿ 8111 ಜನ ತಮ್ಮ ಹಕ್ಕು ಚಲಾಯಿಸಿದರು. 3940 ಪುರುಷ ಮತ್ತು 4171ಮಹಿಳಾ ಮತದಾರರು ಹಕ್ಕು ಚಲಾಯಿಸಿದ್ದು, ಶೇ.99.07ರಷ್ಟು ಮತದಾನವಾಗಿದೆ.