ಅಂಕೆ ಮೀರಿದ ಅಕ್ರಮ ಮರಳು ದಂಧೆ

ಬರಿದಾಗುತ್ತಿದೆ ಕೃಷ್ಣೆ-ಭೀಮಾತೀರ

ವಿಜಯಪುರ: ಉತ್ತರ ಕರ್ನಾಟಕದ ಜೀವನದಿ ಕೃಷ್ಣೆ-ಭೀಮಾ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿದ್ದು ಅಕ್ರಮ ತಡೆಯಲು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿದೆ.

ಹೌದು, ಒಂದೇ ದಿನದಲ್ಲಿ ಐದು ಪ್ರತ್ಯೇಕ ಪ್ರಕರಣಗಳು ದಾಖಲುಗೊಂಡಿದ್ದು ನೋಡಿದರೆ ಐತಿಹಾಸಿಕ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ವ್ಯಾಪಕವಾಗಿದೆ ಎಂಬುದನ್ನು ಸಾಬೀತು ಪಡಿಸಿದೆ.

ಪ್ರಮುಖವಾಗಿ ಇಂಡಿ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ಭೀಮಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ ಎಂಬ ಕೂಗು ಬಹುದಿನಗಳಿಂದ ಪ್ರತಿಧ್ವನಿಸುತ್ತಲೇ ಇದೆ. ಇಲ್ಲಿನ ಮಾಜಿ ಶಾಸಕರೊಬ್ಬರು ಹಸಿರು ಪೀಠಕ್ಕೆ ದಾವೆ ಹೂಡಿದ್ದ ಪರಿಣಾಮ ಜಿಲ್ಲಾಡಳಿತ ಮರಳು ಬ್ಲಾಕ್​ಗಳನ್ನು ಬಂದ್ ಮಾಡಿದೆ. ಪರಿಣಾಮ ಮರಳು ದಂಧೆಕೋರರು ರಾತ್ರೋರಾತ್ರಿ ಅಪಾರ ಮರಳು ಸಾಗಾಟ ಮಾಡುತ್ತಿದ್ದಾರೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.

ಇಂಡಿ ಹೊರವಲಯದಲ್ಲಿ ರಾತ್ರಿ ಮರಳು ಸಾಗಿಸುತ್ತಿದ್ದ ಎರಡು ಟ್ರ್ಯಾಕ್ಟರ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಟ್ರ್ಯಾಕ್ಟರ್ ಚಾಲಕರು ಪರಾರಿಯಾಗಿದ್ದಾರೆಂದು ಪಿಎಸ್​ಐ ಝುಡ್. ಎನ್, ಮೋಕಾಶಿ ದೂರಿನಲ್ಲಿ ತಿಳಿಸಿದ್ದಾರೆ. ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಶಪಡಿಸಿಕೊಂಡ ಮರಳಿನ ಪ್ರಮಾಣ ಹಾಗೂ ಮೌಲ್ಯ ದಾಖಲಿಸಿಲ್ಲ.

ಇನ್ನೊಂದು ಪ್ರಕರಣದಲ್ಲಿ ನಾಗಠಾಣ ಕೆರೆಯಿಂದ ಟ್ರ್ಯಾಕ್ಟರ್ ಮೂಲಕ ಮರಳು ಸಾಗಿಸುತ್ತಿದ್ದ ಆರು ಟ್ರ್ಯಾಕ್ಟರ್ ವಶಪಡಿಸಿಕೊಂಡ ಪೊಲೀಸರು ಸುಮಾರು ಎಂಟು ಆರೋಪಿತರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಲ್ಲಿಕಾರ್ಜುನ ಶಿವಯೋಗಿ ಸಾಲೋಟಗಿ (25) ಶ್ರೀಶೈಲ ಶಿವಾನಂದ ಬಬಲಾದಿ (24), ಪರಶುರಾಮ ಸಿದ್ದಪ್ಪ ಹೊಸಟ್ಟಿ (25) ಎಂಬುವರ ಮೇಲೆ ಪ್ರಕರಣ ದಾಖಲಾಗಿದ್ದು, ಇನ್ನುಳಿದವರ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ. ಪಿಎಸ್​ಐ ಸುರೇಶ ಗಡ್ಡಿ ನೇತೃತ್ವದಲ್ಲಿ ದಾಳಿ ನಡೆದಿದೆ.

ಇಂಥದ್ದೇ ಪ್ರಕರಣ ಮುದ್ದೇಬಿಹಾಳ ದಾಲೂಕಿನ ಹೊರವಲಯದಲ್ಲಿ ನಡೆದಿದ್ದು, ಮರಳು ತುಂಬಿದ ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರನ್ನು ನೋಡುತ್ತಿದ್ದಂತೆ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಮುದ್ದೇಬಿಹಾಳ ಪಿಎಸ್​ಐ ಜಿ.ಎಸ್. ಪಾಟೀಲ ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ಒಟ್ಟಿನಲ್ಲಿ ಮರಳು ದಂಧೆ ಅವ್ಯಾಹತವಾಗಿದ್ದು ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ದಾಳಿ ನಡೆಸುತ್ತಲೇ ಇದ್ದಾರೆ. ಆದರೆ, ಜಿಲ್ಲಾಡಳಿತ ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯ.

Leave a Reply

Your email address will not be published. Required fields are marked *