ಆಫೀಸರ್ಸ್‌ ಜಿಮಖಾನಾ ಕ್ಲಬ್ ಆರಂಭ

ವಿಜಯಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಗೋದಾವರಿ ಹೋಟೆಲ್ ಪಕ್ಕದ ನಿರ್ಮಿತಿ ಬಜಾರ್‌ದಲ್ಲಿ ‘ಆಫೀಸರ್ಸ್‌ ಜಿಮಖಾನಾ ಕ್ಲಬ್’ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.
ನಗರದ ನಿರ್ಮಿತಿ ಬಜಾರನಲ್ಲಿ ನಡೆದ ಜಿಮಖಾನಾ ಕ್ಲಬ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಐತಿಹಾಸಿಕ ನಗರದಲ್ಲಿ ಜಿಮಖಾನಾ ಕ್ಲಬ್ ಕೂಡ ಐತಿಹಾಸಿಕ ಹಿನ್ನಲೆ ಹೊಂದಿದೆ. ಅಧಿಕಾರಿಗಳು ಹಾಗೂ ಅವರ ಕುಟುಂಬ ಸದಸ್ಯರ ಒತ್ತಡ ನಿವಾರಣೆ, ವಿವಿಧ ಮನರಂಜನಾ ಚಟುವಟಿಕೆಗಳಿಗೆ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅವರಿಗೆ ವಿಶೇಷ ಸಮಯಾವಕಾಶ ಈ ಕ್ಲಬ್‌ದಲ್ಲಿ ದೊರೆಯುವಂತಾಗಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು ಮಾದರಿ: ಬೆಂಗಳೂರಿನಲ್ಲಿ ಸ್ಥಾಪಿಸಲಾದ ಆಫೀಸರ್ಸ್‌ ಕ್ಲಬ್ ಅತ್ಯಂತ ಹೆಸರುವಾಸಿಯಾಗಿದೆ. ಕ್ಲಬ್‌ನ ಸದಸ್ಯರಾಗುವುದು ಗೌರವದ ವಿಷಯವಾಗಿದೆ. ಈ ದಿಸೆಯಲ್ಲಿ ವಿಜಯಪುರದಲ್ಲೂ ಅಂಥದ್ದೇ ಸುಸಜ್ಜಿತ ಕ್ಲಬ್‌ನ್ನು ಸ್ಥಾಪಿಸುವ ಮೂಲಕ ಅಧಿಕಾರಿಗಳಿಗೆ ಅಮೂಲ್ಯವಾದ ಸಮಯಾವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು.
ವಿಚಾರ-ವಿನಿಮಯ, ಮಕ್ಕಳಿಗೆ ವಿವಿಧ ಕ್ರೀಡಾಕೂಟ ಮತ್ತು ಪರಸ್ಪರ ಪರಿಚಯ ಮತ್ತು ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಇದು ಉತ್ತಮ ವೇದಿಕೆಯಾಗಲಿದೆ. ಹಂತ ಹಂತವಾಗಿ ಈ ಕ್ಲಬ್‌ನ್ನು ಅಭಿವೃದ್ಧಿಗೊಳಿಸುವ ಉದ್ದೇಶ ಹೊಂದಿದ್ದು ಸದ್ಯ ತಾತ್ಕಾಲಿಕವಾಗಿ ಕಾರ್ಯಕಾರಿ ಮಂಡಳಿ ರಚಿಸಲಾಗಿದೆ ಎಂದು ಹೇಳಿದರು.
ಉತ್ತಮ ವೇದಿಕೆ: ಜಿಪಂ ಸಿಇಒ ವಿಕಾಸ ಕಿಶೋರ ಸುರಳಕರ ಮಾತನಾಡಿ, ಆಫಿಸರ್ಸ್‌ ಕ್ಲಬ್ ಸ್ಥಾಪನೆಯಿಂದ ಸಾಂಸ್ಕೃತಿಕ ಹಾಗೂ ಇದಕ್ಕೆ ಪೂರಕವಾಗಿರುವ ಚಟುವಟಿಕೆಗಳಿಗೆ ಉತ್ತಮ ವೇದಿಕೆಯಾಗಲಿದೆ. ಕ್ಲಬ್ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಹಾಗೂ ವಿಶೇಷವಾಗಿ ತಕ್ಷಣಕ್ಕೆ ರೆಸ್ಟೋರೆಂಟ್ ತೆರೆಯುವುದು ತುರ್ತು ಅವಶ್ಯಕತೆಯಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸೂಕ್ತ ಸಲಹೆ-ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.
1.5 ಎಕರೆ ಪ್ರದೇಶವು ಸ್ಥಿರಾಸ್ತಿ: ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಮ್ ಮಾತನಾಡಿ, ನಗರದಲ್ಲಿ ಬ್ರಿಟಿಷ್ ಕಾಲದಿಂದಲೂ ಆಫೀಸರ್ಸ್‌ ಕ್ಲಬ್ ಇದ್ದು, ಸದ್ಯಕ್ಕೆ 1.5 ಎಕರೆ ಪ್ರದೇಶವು ಸ್ಥಿರಾಸ್ತಿಯಾಗಿದೆ. ಸ್ವಾತಂತ್ರೃ ದಿನಾಚರಣೆ, ಹೊಸ ವರ್ಷಾಚರಣೆ ಸೇರಿದಂತೆ ಮಹತ್ವದ ದಿನಗಳಂದು ಅಧಿಕಾರಿಗಳ ಕುಟುಂಬಸ್ಥರು ಅಮೂಲ್ಯ ಸಮಯ ಕಳೆಯಲು ಅವಕಾಶ ಲಭ್ಯವಾಗಲಿದೆ. ಅದರಂತೆ ವಿವಿಧ ಜಿಲ್ಲೆಗಳ ಅಧಿಕಾರಿಗಳ ಕ್ಲಬ್‌ಗಳ ಸಹಯೋಗದೊಂದಿಗೆ ಇಲ್ಲಿನ ಚಟುವಟಿಕೆಗಳನ್ನು ಮುಂದುವರೆಸಲು ಸಲಹೆ ನೀಡಿ, ವಿವಿಧ ಸ್ಪರ್ಧೆಗಳಿಗೂ ಅವಕಾಶ ಕಲ್ಪಿಸುವಂತಾಗಲಿ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರು ನಗರದ ಜಿಮಖಾನಾ ಕ್ಲಬ್ ಐತಿಹಾಸಿಕ ಹಿನ್ನಲೆ ಹೊಂದಿದೆ. ಈ ಹಿಂದೆ ಆನಂದ ಮಹಲ್‌ನಲ್ಲಿ ಕ್ಲಬ್‌ನ ಕಚೇರಿ ಹೊಂದಿದ್ದು ಈಗ 1.5 ಎಕರೆ ಜಮೀನಿನಲ್ಲಿ ನಿರ್ಮಿತಿ ಬಜಾರದಲ್ಲಿ ಈ ಕ್ಲಬ್ ಆರಂಭಿಸಲಾಗಿದ್ದು, ಗ್ರೂಪ್-ಎ, ಗ್ರೂಪ್-ಬಿ ಮತ್ತು ನಿವೃತ್ತ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಕ್ಲಬ್‌ನ ಸದಸ್ಯರಾಗಲು ಅವಕಾಶವಿದೆ ಎಂದು ಹೇಳಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ನೇಮೆಗೌಡ, ಜಿಪಂಉಪಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾತ್ಕಾಲಿಕ ಮಂಡಳಿ: ಕ್ಲಬ್‌ನ 2019-20ನೇ ಸಾಲಿನ ತಾತ್ಕಾಲಿಕ ಕಾರ್ಯಕಾರಿ ಮಂಡಳಿ ರಚಿಸಲಾಗಿದ್ದು, ಜಿಲ್ಲಾಧಿಕಾರಿಗಳು ಈ ಕ್ಲಬ್‌ನ ಶಾಶ್ವತ ಅಧ್ಯಕ್ಷರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಾಶ್ವತ ಉಪಾಧ್ಯಕ್ಷರಾಗಿರುತ್ತಾರೆ. ಜಿಪಂ ಸಿಇಒ ಸಹ ಅಧ್ಯಕ್ಷರಿರಲಿದ್ದಾರೆ. ಅದರಂತೆ 9ಜನ ತಾತ್ಕಾಲಿಕ ಕಾರ್ಯಕಾರಿ ಮಂಡಳಿ ಸದಸ್ಯರನ್ನು ನೇಮಕ ಮಾಡಲಾಗಿದ್ದು, ಅಪರ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಜಿಪಂ ಉಪ ಕಾರ್ಯದರ್ಶಿ, ಉಪವಿಭಾಗಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು, ಅಬಕಾರಿ ಆಯುಕ್ತರು, ಉಪನಿಬಂಧಕರು ಸಹಕಾರ ಇಲಾಖೆ ಹಾಗೂ ಆರೋಗ್ಯ ಅಧಿಕಾರಿಗಳೋರ್ವರು ಸೇರಿದಂತೆ ಒಟ್ಟು 9 ಜನ ಸದಸ್ಯರನ್ನು ಜಿಲ್ಲಾಧಿಕಾರಿಗಳು ನಿಯೋಜಿಸಿದ್ದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *