ಅತ್ಯಾಚಾರ, ಕೊಲೆ ಆರೋಪಿ ಬಂಧನ

ವಿಜಯಪುರ: ಕಳೆದೊಂದು ವಾರದ ಹಿಂದೆ ನಿಡಗುಂದಿ ಠಾಣೆ ವ್ಯಾಪ್ತಿಯ ಜಮೀನೊಂದರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಿಮ್ಮಲಗಿ ತಾಂಡಾದ ಶಿವಾನಂದ ಚಂದು ಲಮಾಣಿ (35) ಎಂಬಾತ ಬಂಧಿತ ಆರೋಪಿ. ಪೊಲೀಸ್ ವಿಚಾರಣೆ ಸಂದರ್ಭ ಶಿವಾನಂದ ತಪ್ಪೊಪ್ಪಿಕೊಂಡಿದ್ದು, ಕೂಡಲೇ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏನಿದು ಘಟನೆ: ಬಸವನಬಾಗೇವಾಡಿ ತಾಲೂಕಿನ ನಿಡಗುಂದಿ ಠಾಣೆ ವ್ಯಾಪ್ತಿಯಲ್ಲಿ ಸೆ. 30 ರಂದು ಅಪ್ರಾಪ್ತೆ ಬಾಲಕಿ ಶವ ಪತ್ತೆಯಾಗಿತ್ತು. ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಾಗಿತ್ತು. ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಮಾರ್ಗದರ್ಶನಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಅ. 7 ರಂದು ಹಿರಿಯ ಅಧಿಕಾರಿ ಮಹೇಶ್ವರಗೌಡ ಎಸ್.ಯು, ಬಸವನ ಬಾಗೇವಾಡಿ ಡಿಎಸ್​ಪಿ ಎಂ.ಎನ್. ಶಿರಹಟ್ಟಿ, ಸಿಪಿಐ ಬಿ.ಬಿ. ಬಿಸನಕೊಪ್ಪ, ಪಿಎಸ್​ಐ ಸಿ.ಬಿ. ಬಾಗೇವಾಡಿ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದೆ. ತಂಡದಲ್ಲಿ ಕೊಲ್ಹಾರ ಪಿಎಸ್​ಐ ವಸಂತ ಬಂಡಗಾರ, ಪಿಎಸ್​ಐ ಗುರುಶಾಂತ ದಾಶ್ಯಾಳ, ಸಿಬ್ಬಂದಿ ಎಸ್.ಸಿ. ರಡ್ಡಿ, ವಿ.ಎಸ್. ಪತ್ರಿ, ವಿ.ಎಸ್. ಹಿರೇಮಠ, ಎಸ್.ಕೆ. ಮಾದಾರ, ಎಂ.ಎಲ್. ಹತ್ತರಕಿಹಾಳ, ಐ.ಎಂ.ಪೆಂಡಾರಿ, ಎಸ್.ಎನ್. ಪಾಟೀಲ, ಮುತ್ತು ಬೆಲಾಳ, ಐ.ಎಸ್.ಗೋಕಾವಿ, ನರಸಯ್ಯ ಪೂಜಾರಿ ಇತರರು ಇದ್ದರು.